ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ರಾಜ್ಯದಿಂದ ಅದೆಷ್ಟು ಜನರನ್ನು ಪಾಕ್‌ಗೆ ವಾಪಸ್‌ ಕಳಿಸಿದ್ದೀರಿ ಉತ್ತರ ಕೊಡಿ: ಪ್ರಲ್ಹಾದ್‌ ಜೋಶಿ

Pralhad Joshi: ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕ್‌ ಪ್ರಜೆಗಳನ್ನು ವಾಪಸ್‌ ಕಳಿಸಲು ಆದೇಶಿಸಿತು. ಎಲ್ಲಾ ರಾಜ್ಯಗಳು ವಾಪಸ್‌ ಕಳಿಸುತ್ತಿವೆ. ಕರ್ನಾಟಕದಿಂದ ಎಷ್ಟು ಜನರನ್ನು ಮರಳಿ ಕಳಿಸಿದ್ದೀರಿ? ಉತ್ತರ ಕೊಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ಎಷ್ಟು ಜನರನ್ನು ಪಾಕ್‌ಗೆ ವಾಪಸ್‌ ಕಳಿಸಿದ್ದೀರಿ ಉತ್ತರ ಕೊಡಿ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 2, 2025 8:28 PM

ಹುಬ್ಬಳ್ಳಿ: ಭಯೋತ್ಪಾದನೆ ವಿಷಯದಲ್ಲಿ ಕೆಲ ಕಾಂಗ್ರೆಸ್‌ ನಾಯಕರು ಪಾಕ್‌ನ ಹೀರೋಗಳಾಗಿದ್ದಾರೆ. ಕಾಶ್ಮೀರದ ಕೃತ್ಯವನ್ನು ʼಹಿಂದೂ ಟೆರರ್‌ʼ ಎಂದು ಮತ್ತು ಮುಂಬೈ ದಾಳಿಯನ್ನು ಆರೆಸ್ಸೆಸ್‌ ಮಾಡಿಸಿದ್ದು ಎನ್ನುತ್ತ, ʼಗಯಾಬ್‌ʼ ಪೋಸ್ಟರ್‌ ಹಾಕುತ್ತ ಪಾಕಿಸ್ತಾನದ ಸಂಭ್ರಮಕ್ಕೆ ಹಾಲೆರೆದಿದ್ದಾರೆ. ಇದು ದೇಶ ದ್ರೋಹ ಅಲ್ಲವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮವನ್ನು ಬೆಂಬಲಿಸುತ್ತೇವೆ ಎನ್ನುತ್ತಾರೆ. ಮತ್ತೊಂದೆಡೆ ಪಾಕಿಸ್ತಾನದ ವರಸೆಯಲ್ಲಿ ಮಾತನಾಡುತ್ತಾರೆ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನೂ ಮೀರಿ ನಡೆದುಕೊಳುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಸರ್ಕಾರದ ಮೂವರು ಮಂತ್ರಿಗಳು ಈಗ ಪಾಕ್‌ ಹೀರೋಗಳಾಗಿ ಬಿಟ್ಟಿದ್ದಾರೆ. ರಾಬರ್ಟ್‌ ವಾದ್ರಾ ಮತ್ತವರ ಹೇಳಿಕೆಗೆ ಪಾಕಿಸ್ತಾನಿಗಳು ಸಂಭ್ರಮಿಸುತ್ತಿದ್ದಾರೆ. ʼಕಾಶ್ಮೀರ ಭಯೋತ್ಪಾದನಾ ದಾಳಿ ತಾನು ಮಾಡಿಲ್ಲʼ ಎನ್ನಲು ಪಾಕ್‌ಗೆ ಆಸ್ಪದ ನೀಡುತ್ತಿದ್ದಾರೆ. ಪಾಕಿಸ್ತಾನ್‌ ಜಿಂದಾಬಾದ್‌ ಎನ್ನಲು ನೂರಾರು ಕಾರಣಗಳಿವೆ ಎನ್ನುತ್ತಾರೆ. ನಾಚಿಕೆ ಆಗುವುದಿಲ್ಲವೇ? ಕಿಂಚಿತ್ತಾದರೂ ದೇಶಾಭಿಮಾನ ಬೇಡವೇ? ಎಂದು ಕಿಡಿಕಾರಿದರು.

ಗಯಾಬ್‌ ಪೋಸ್ಟರ್‌ ಹಾಕಿ ತೆಗೆದದ್ದೇಕೆ?

ಕಾಂಗ್ರೆಸ್‌ ನಾಯಕರೊಬ್ಬರು ಪಹಲ್ಗಾಮ್‌ ದಾಳಿ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ʼಗಯಾಬ್‌ʼ ಪೋಸ್ಟರ್‌ ಹಾಕಿ ಪಾಕ್‌ ಹೀರೋಗಳಾದರು. ನಂತರ ಟ್ವೀಟ್‌ನಿಂದ ಅದನ್ನು ತೆಗೆದರು. ನೀವು ಅಷ್ಟು ಸಾಚಾ ಆಗಿದ್ದಿದ್ದರೆ ಅದನ್ನೇಕೆ ತೆಗೆದಿರಿ? ಇದು ದೇಶದ್ರೋಹ ಅಲ್ಲವೇ? ಎಂದರು.

ಇಂಟೆಲಿಜೆನ್ಸ್‌ ಮಾಹಿತಿ ಇರಲಿಲ್ಲವೇ?

ಪಹಲ್ಗಾಮ್‌ ದಾಳಿ ಬಗ್ಗೆ ಭದ್ರತಾ ವೈಫಲ್ಯ, ಇಂಟೆಲಿಜೆನ್ಸ್‌ ಮಾಹಿತಿ ಇರಲಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ಗಯಾಬ್‌ ಪೋಸ್ಟರ್‌ ವಾರ್‌ ವಿರೋಧಿಸಿ ಐದಾರು ಮಹಿಳೆಯರು ಬೆಳಗಾವಿಯಲ್ಲಿ ಪ್ರತಿಭಟಿಸಲು ಬರುತ್ತಿದ್ದಾರೆ ಎಂಬ ಇಂಟೆಲಿಜೆನ್ಸ್‌ ಮಾಹಿತಿ ನಿಮಗಿತ್ತೇ? ಯುಪಿಎ ಅವಧಿಯಲ್ಲಿ ಮುಂಬೈ ದಾಳಿ ವೇಳೆ ನಿಮಗಿರಲಿಲ್ಲವೇ ಇಂಟೆಲಿಜೆನ್ಸ್‌ ಮಾಹಿತಿ? ಎಂದು ತಿರುಗೇಟು ನೀಡಿದ ಜೋಶಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ, ವಿರೋಧ-ಪ್ರತಿರೋಧಗಳು ಸಾಮಾನ್ಯ. ನಾವು ಸಾರ್ವಜನಿಕ ಜೀವನದಲ್ಲಿರುವಾಗ ಅದನ್ನೆಲ್ಲ ಎದುರಿಸಲು ಸಿದ್ಧರಿರಬೇಕಾಗುತ್ತದೆ ಎಂದು ಚಾಟಿ ಬೀಸಿದರು.

ಇಂದಿರಾಗಾಂಧಿ ವಿರುದ್ಧವೇ ಕಪ್ಪು ಬಾವುಟ ಪ್ರದರ್ಶಿಸಿದ್ದರು ಸಿಎಂ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಶಃ ಇತಿಹಾಸ ಮರೆತಿದ್ದಾರೆ. ಇಂದಿರಾಗಾಂಧಿ ವಿರುದ್ಧವೇ ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈಗ ಅವರದ್ದೇ ಪಕ್ಷದಲ್ಲಿ ಸಿಎಂ ಆಗಿ ಅದ್ಯಾವ ಮಟ್ಟ ತಲುಪಿದ್ದೀರಿ ನೋಡಿಕೊಳ್ಳಿ ಎಂದ ಜೋಶಿ, ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್‌ ಅವರೊಂದಿಗಿನ ಆಂತರಿಕ ಕಲಹದಿಂದ ತಾಳ್ಮೆ ಕಳೆದುಕೊಂಡಿದ್ದಾರೆ. ಅದರ ಪರಿಣಾಮವಾಗಿ ಹೋದಲ್ಲಿ ಬಂದಲ್ಲಿ ಅಧಿಕಾರಿಗಳ ಮೇಲೆ ಕೈ ಎತ್ತುವಂತಹ ದರ್ಪ ತೋರುತ್ತಿದ್ದಾರೆ. ದುರಹಂಕಾರದ ಪರಮಾವಧಿ ಮೀರಿದ್ದಾರೆ. ಪತ್ರಕರ್ತರಿಗೂ ಧಮ್ಕಿ ಹಾಕುತ್ತಾರೆ ಎಂದು ದೂರಿದರು.

ಎಷ್ಟು ಜನರನ್ನು ಪಾಕ್‌ಗೆ ಕಳಿಸಿದ್ದೀರಿ?

ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕ್‌ ಪ್ರಜೆಗಳನ್ನು ವಾಪಸ್‌ ಕಳಿಸಲು ಆದೇಶಿಸಿತು. ಎಲ್ಲಾ ರಾಜ್ಯಗಳು ವಾಪಸ್‌ ಕಳಿಸುತ್ತಿವೆ. ಕರ್ನಾಟಕದಿಂದ ಎಷ್ಟು ಜನರನ್ನು ಮರಳಿ ಕಳಿಸಿದ್ದೀರಿ? ಉತ್ತರ ಕೊಡಿ. ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಭಯೋತ್ಪಾದಕರನ್ನು ಹೊಕ್ಕು ಹೊಡೆಯುತ್ತೇವೆ

ಪಹಲ್ಗಾಮ್‌ ಅಷ್ಟೇ ಅಲ್ಲ ದೇಶದಲ್ಲಿ ಎಲ್ಲೇ ಆಗಲಿ ಭಯೋತ್ಪಾದನೆ ಮಾಡುವವರನ್ನು ಮತ್ತು ಅದಕ್ಕೆ ಬೆಂಬಲ ನೀಡುವವರ ಮನೆಗೆ ಹೊಕ್ಕು ಹೊಡೆಯುತ್ತೇವೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಆಗಲೇ ಹೇಳಿದ್ದಾರೆ. ಅದಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ. ಭಯೋತ್ಪಾದಕರು, ಸಂರಕ್ಷಕರನ್ನು ಸುಮ್ಮನೇ ಬಿಡುವ ಮಾತೇ ಇಲ್ಲ. ಎಲ್ಲೇ ಇದ್ದರೂ ಹುಡುಕಿ ಹುಡುಕಿ ಹೊಡೆಯಲಾಗುತ್ತದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದರು.

ಭಯೋತ್ಪಾದನೆ ಸಮರ್ಥನೆ ಸರಿಯಲ್ಲ

ದೇಶದಲ್ಲಿ ಯುಪಿಎ ಅವಧಿಯಲ್ಲಿ ಇದ್ದ ಹಾಗೆ ಭಯೋತ್ಪಾದನೆ ಚಟುವಟಿಕೆ ಈಗಿಲ್ಲ. ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲೆಡೆಯೂ ಶೇ.80ರಷ್ಟು ನಿಗ್ರಹವಾಗಿದೆ. ಮುಂಬೈ ದಾಳಿ ನಡೆದಾಗ ಅಡ್ವಾಣಿ ಅವರು ಭಯೋತ್ಪಾದನೆ ಹತ್ತಿಕ್ಕುವ ಕೇಂದ್ರ ಸರ್ಕಾರದ ಯಾವುದೇ ನಿಲುವಿಗೆ ನಾವು ಬದ್ಧ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದರು. ಅದರಂತೆ ನಡೆದುಕೊಂಡರು ಕೂಡ. ಆದರೆ, ಇಂದು ಕಾಂಗ್ರೆಸ್‌ ಹೇಳುವುದೇ ಬೇರೆ, ನಡೆದುಕೊಳ್ಳುವುದೇ ಬೇರೆಯಾಗಿದೆ. ಇದು ದೇಶದ ದುರ್ದೈವ ಎಂದರು.

ಸಿದ್ದರಾಮಯ್ಯ ಶಿಷ್ಯಂದಿರು ತಾವೇ ರಕ್ಷಣಾ ತಜ್ಞರ ರೀತಿ ಬಾಯಿಗೆ ಬಂದಂತೆ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಯಾರ ಅವಧಿಯಲ್ಲೇ ಆಗಲಿ ಯಾರೂ ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುವ ರೀತಿ ವರ್ತಿಸುವುದು ಸರಿಯಲ್ಲ. ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವುದು, ಪಾಕ್‌ ಪರ ನಿಂತವರಂತೆ ಬಿಂಬಿಸಿಕೊಳ್ಳುವುದು ದೇಶದ್ರೋಹ ಎಸಗಿದಂತೆ ಎಂದು ಹೇಳಿದರು.

ಭಾರತ ದುರ್ಬಲ ದೇಶವಲ್ಲ

ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ನಾಶಗೊಳಿಸಬೇಕು, ಟೂರಿಸಂ ನಾಶಪಡಿಸಬೇಕು. ದೇಶದಲ್ಲಿ ಅಭದ್ರತೆ ಸೃಷ್ಟಿಸಬೇಕೆಂದು ಪಾಕ್‌ ಭಯೋತ್ಪಾದಕರು ಮೋಸದಿಂದ ಪಹಲ್ಗಾಮ್‌ ದಾಳಿ ನಡೆಸಿದ್ದಾರೆ. ಆದರೆ, ಭಾರತ ದುರ್ಬಲ ರಾಷ್ಟ್ರವಲ್ಲ. ಆಗಲೇ ಇದರ ವಿರುದ್ಧ ಕ್ರಮಕ್ಕಿಳಿದಿದೆ. ಭಯೋತ್ಪಾದಕರಿಗೆ ಶಿಕ್ಷೆ ಕೊಟ್ಟೇ ಕೊಡುತ್ತದೆ. ಜಾಗತಿಕ ಮಟ್ಟದಲ್ಲೂ ನಾವು ಇದಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಈ ವರ್ಷ ಗೋಧಿ ಖರೀದಿ ಶೇ.24ರಷ್ಟು ಹೆಚ್ಚಳ, ಈವರೆಗೆ 256 ಲಕ್ಷ ಮೆಟ್ರಿಕ್ ಟನ್ ಸಂಗ್ರಹ: ಜೋಶಿ

2026ರೊಳಗೆ ನಕ್ಸಲಿಸಂಗೆ ಮುಕ್ತಿ

ದೇಶಾದ್ಯಂತ ನಕ್ಸಲಿಸಂಗೆ ಅಂತ್ಯ ಕಾಣಿಸಲಾಗುತ್ತಿದೆ. ಎಲ್ಲೋ ಅಲ್ಲಲ್ಲಿ ಶೇ.10ರಷ್ಟು ಇದೆ. 2026ರ ವೇಳೆಗೆ ಅದನ್ನೂ ನಿರ್ಮೂಲನಗೊಳಿಸಿ ಭಾರತವನ್ನು ನಕ್ಸಲಿಸಂ ಫ್ರೀ ದೇಶವನ್ನಾಗಿ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.