ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ ?
ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ ?
Vishwavani News
January 5, 2022
ಪ್ರೀತಿ ಎಂದರೇನು? ಅದು ಎಲ್ಲಿ ಸಿಗುತ್ತದೆ? ಪ್ರೀತಿಯ ಶಕ್ತಿ ಎಷ್ಟು? ಪ್ರಾಣ ಹೋದರೂ ಪರವಾಗಿಲ್ಲ, ಪ್ರೀತಿಸಿದವರನ್ನು ಬಿಡಲಾರೆ ಎನ್ನುವ
ಮನಸ್ಥಿತಿಯ ರಹಸ್ಯವೇನು?
ಯು.ಎನ್. ಸಂಗನಾಳಮಠ
ಪ್ರೀತಿಸುವ ಪ್ರವೃತ್ತಿ ಮಾನವರಿಗೆ ಸಹಜ ಸ್ವಾಭಾವಿಕವಾದದ್ದು. ಪ್ರೀತಿ ಮನದ ತನಿಯಾದ ಭಾವನೆ. ಇದು ಕಾಲ ದೇಶಾತೀತ. ಪ್ರೀತಿ ಇರುವುದರಿಂದ ಮರ್ತ್ಯದ ಬದುಕು ಚೈತನ್ಯದ ಚಿಲುಮೆ ಆಗಿರುತ್ತದೆ. ಪ್ರೀತಿಗೆ ವಯೋಭೇದ, ಲಿಂಗ, ಜಾತಿ, ಮತ, ಧರ್ಮ, ಪಂಥ, ವರ್ಣ, ವರ್ಗಭೇದ ಇರದು. ಪ್ರೀತಿ ನಮ್ಮ ಮಾತಿನಲ್ಲಿ, ನೋಟದಲ್ಲಿ, ಕೊಡುವಲ್ಲಿ, ತೆಗೆದುಕೊಳ್ಳುವುದರಲ್ಲಿ ವ್ಯಕ್ತವಾದಾಗ ಎಲ್ಲ ವ್ಯವಹಾರಗಳು ಸುಲಭವಾಗುತ್ತವೆ.
ನಾವು ಪ್ರೀತಿಯನ್ನು ತೋರಿ ಪ್ರೀತಿಯಿಂದ ಎಲ್ಲವನ್ನು ಪಡೆಯಬಹುದು. ವ್ಯಕ್ತಿಗಳು ಪರಸ್ಪರ ಪ್ರೀತಿಸಿದಾಗ (ಭಾವನೆಗಳಿಂದ) ಸಂಬಂಧಗಳು, ಸಹವಾಸ ಗಳು ವೃದ್ಧಿಯಾಗುತ್ತವೆ. ಪ್ರೀತಿ ಪರಸ್ಪರರಲ್ಲಿ ಸಮ್ಮುಖವಾದಾಗ ಅಕ್ಷಯವಾಗುತ್ತದೆ. ಅಂದರೆ ಒಬ್ಬರ ಸಹವಾಸ ಇನ್ನೊಬ್ಬರಿಗೆ ಆನಂದ; ಒಬ್ಬರ ಸ್ನೇಹ ಇನ್ನೊಬ್ಬರಿಗೆ ಅವಶ್ಯ ಎನಿಸಿದಾಗ ಪ್ರೀತಿಯ ಸಾರ್ಥಕತೆ ಕಂಡುಬರುತ್ತದೆ.
ಸಂಸಾರದಲ್ಲಿ ಪ್ರೀತಿ ರೂಪಾಂತರವಾಗುತ್ತದೆ. ಬಾಲ್ಯದಲ್ಲಿ ತಂದೆ-ತಾಯಿಯ ಮೇಲೆ; ವಿವಾಹದ ನಂತರ ಪತಿ/ಪತ್ನಿಯ ಮೇಲೆ; ನಂತರ ಮಕ್ಕಳ ಮೇಲೆ; ವೃದ್ಧಾಪ್ಯದಲ್ಲಿ ಮೊಮ್ಮಕ್ಕಳ ಮೇಲೆ ಹೀಗೆ ರೂಪಾಂತರ ಹೊಂದು ತ್ತದೆ. ಎಲ್ಲರಲ್ಲೂ ಸಮಾನ ಪ್ರೀತಿಯನ್ನು ಉಳಿಸಿಕೊಂಡು ಸಮಚಿತ್ತದಿಂದ ಜೀವನ ಸಾಗಿಸುವವರು ಕಡಿಮೆ. ನಮ್ಮನ್ನು ತೋರಿಕೆಗಾಗಿ ಪ್ರೀತಿಸಿ, ಲೋಪದೋಷಗಳನ್ನು ಇತರರ ಎದುರಿನಲ್ಲಿ ಹೇಳಿ, ನಮ್ಮ ವ್ಯಕ್ತಿತ್ವವನ್ನು ಕುಂದಿಸಿ, ತಮ್ಮ ತನವನ್ನು ಎತ್ತರಿಸಿಕೊಳ್ಳುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಧುರಚೆನ್ನರು ಒಂದೆಡೆ ‘ಯಾವುದೇನೇ ಇರಲಿ ಪ್ರೀತಿಯಂಥ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು’ ಎಂದಿದ್ದಾರೆ. ದ್ವೇಷವನ್ನು ಸಹ ಪ್ರೀತಿಯಿಂದ ಗೆಲ್ಲಬಹುದು.
ಈಗ ನಾಗರಿಕತೆಯ ಗಾಳಿ ಹಳ್ಳಿಗಳಿಗೆ ಹೊಕ್ಕು ಅಲ್ಲಿಯ ವಾತಾವರಣ ಸಹ ಕಲುಷಿತವಾಗಿದೆ. ನಾಗರಿಕತೆ ಪರಿಣಾಮವಾಗಿ ಮಾನವೀಯ ಸಂಬಂಧಗಳು ಕಡಿಮೆ ಆಗುತ್ತಾ ಎಲ್ಲವೂ ವ್ಯಾವಹಾರಿಕ ದೃಷ್ಟಿಯಿಂದ ನಡೆಯುತ್ತಲಿದೆ. ‘ಕೊಟ್ಟವ ಕೋಡಂಗಿ ಆದ, ಇಸಕೊಂಡವ ಈರಭದ್ರನಾದ’. ಇದರಿಂದ ಸೌಹಾರ್ದತೆ, ಸಹಕಾರ, ಪ್ರೀತಿಗಳ ಸ್ಥಾನದಲ್ಲಿ ವಿರಸ, ದ್ವೇಷ, ಅಸೂಯೆಗಳು ಹೆಡೆಯಾಡುತ್ತಲಿವೆ. ಆದರ್ಶ ಗುಣಗಳು ಗಾಳೀಪಟವಾಗಿವೆ. ಪ್ರೀತಿ ಎಂಬು ದು ತುಟಿ ಮಾತು ಆಗಿ ಹೃದಯಾಂತರಾಳದ ಭಾವನೆಗೆ ಆಸ್ಪದ ಇಲ್ಲದಂತಾಗಿದೆ.
ತಾಯಿ ತನ್ನ ಮಗುವನ್ನು ಪ್ರೀತಿಸುವುದು ನಿರ್ಮಲ ಪ್ರೀತಿ. ಇಂಥ ತಾಯಿ ಪ್ರೀತಿ ಸೌಹಾರ್ದತೆಗೆ ಬೆಸುಗೆಯಾಗುತ್ತದೆ. ಅದು ಕಾರಣ ‘ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ? ಕವನ ಹುಟ್ಟೀತು ಹೇಗೆ? ಮಾತು ಹೊರಟೀತು ಹೇಗೆ?’ ಎಂದು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕೇಳುತ್ತಾರೆ.
‘ಪ್ರೀತಿ ಎಂಬುದು ಗಂಡು-ಹೆಣ್ಣಿನ ಯೌವನದ ಸಹಜ ಬಯಕೆ’. ಅದು ಪ್ರೇಮವಾಗುವುದು ಪ್ರಿಯ-ಪ್ರಿಯೆಯರ ಪ್ರೀತಿಯ ಸ್ವಾರ್ಥವನ್ನು ಮೀರಿ ಪ್ರೇಮಾ ರಾಧಕರಾದಾಗ. ಪ್ರಿಯವಾದ ವಸ್ತುಗಳಿಂದ, ವ್ಯಕ್ತಿಗಳಿಂದ ದೊರಕುವ ಆನಂದದ -ಲಶ್ರುತಿ ಪ್ರೇಮ. ಪ್ರೇಮದಲ್ಲಿ ಆಕಾಂಕ್ಷೆ ಮೊದಲ ಹೆಜ್ಜೆ. ನಂತರ
ಬಯಕೆ. ಒಂದು ವೇಳೆ ಬಯಸಿದ್ದು ಸಿಗದೇ ಇದ್ದಾಗ ಅಗಲಿಕೆ, ವಿರಹದ ತಾಪ.
ವಾರಿನೋಟ ಹಾರುತ್ತಿತ್ತು!
ಪ್ರೇಮದ ಮೊದಲ ಹಂತವೇ ಆಕರ್ಷಣೆ. ಈ ಆಕರ್ಷಣೆ ಯೌವನದ ಗಂಡು-ಹೆಣ್ಣುಗಳಲ್ಲಿ ಆಗಿ ಪರಸ್ಪರ ನೋಡಬೇಕು, ಮಾತನಾಡಬೇಕು, ಕೊಡಬೇಕು ಎಂದು ಆಶಿಸುತ್ತಾರೆ. ವರಕವಿ ಬೇಂದ್ರೆಯ ವರು ಈ ಪ್ರಕೃತಿ ಸಹಜ ಆಕರ್ಷಣೆಯನ್ನು ವಾರಿನೋಟ ಕವನದಲ್ಲಿ ಈ ರೀತಿ ಹೇಳುತ್ತಾರೆ.
ವಾರಿನೋಟ ಹಾರುತ್ತಿತ್ತೋ ಹೊಳಿಮ್ಯಾಗ ಹೊಸಾಹರೆ ಈಸುತ್ತಿತೋ ಹೊಳಿಯಾಗ ಜವ್ವನದ ಹೆಣ್ಣು ತನ್ನೆಲ್ಲಾ ಬೆಡಗು ಬಿನ್ನಾಣದಿಂದ ಹೋಗುವಾಗ ನೆಲದ ಮೇಲೆ ನಡೆದಂತೆ ಇರುವುದಿಲ್ಲ. ಹೊಳೆಯ ದಂಡೆಯ ಮೇಲೆ ಹಾರಿದಂತಿರುತ್ತದೆ. ಈ ಕವನವನ್ನು ಜಿ.ಟಿ. ನಾರಾಯಣರಾಯರು ವೈಜ್ಞಾನಿಕವಾಗಿ ವಿಶ್ಲೇಷಿಸಿ ‘ಬೆಂಕಿ-ಶಾಖ, ದ್ರವ್ಯರಾಶಿ-ಗುರುತ್ವಾಕರ್ಷಣೆ, ಅಯಸ್ಕಾಂತ-ಕಾಂತತ್ವ ಹೇಗೆ ನಿಸರ್ಗದಲ್ಲಿ ಅವಿನಾಸಂಬಂಧಿಗಳಾದಂತೆ ಯೌವನದ ಈ ಗಂಡು-ಹೆಣ್ಣು’ ಎಂದಿದ್ದಾರೆ. ಸೂಜಿಗಲ್ಲು ತಿರುಗುತ್ತಿತ್ತೋ ಹೊಳಿಮ್ಯಾಗ ಹೊಸಹಕ್ಕಿ ಈಸುತ್ತಿತೋ ಹೊಳಿಯಾಗ ಈ ಕವನದಲ್ಲಿ ತರುಣಿಯ ಬಳ್ಳಿ ಯಂತಹ ದೇಹ ಅದನ್ನು ತಬ್ಬಲು ಆಶಿಸುವ ತರುಣ ಗಾಳಿ.
ಅಲೆದಾಡುವ ಸೆರಗಿಗೆ ಆಕರ್ಷಿತವಾಗಿ ನಲಿದಾಡುವ ನೆರಳು ಕೈಗೆ ಸಿಗದೆ ಹಾರಿಹೋಗುವ ಹೆಣ್ಣು ದುಂಬಿ. ಅದನ್ನು ತನ್ನತ್ತ ಸೆಳೆಯಲಾಗದೆ ಪರಿತಪಿಸಿ ತೇಲಾಡಿ ಬಾಯ್ಬಿಡುವ ಗಂಡು ತಾವರೆಯ ಪ್ರತಿಮೆಗಳು ಇರುತ್ತವೆ. ಸೂಜಿಗಲ್ಲು-ಹೆಣ್ಣು. ಸೂಜಿ-ಗಂಡು. ಆಕರ್ಷಣೆಯ ಶಕ್ತಿ ಹೆಣ್ಣಿನಲ್ಲಿ ಚುಂಬಕ ತತ್ವದ
ಕಾರ್ಯ ಮಾಡುತ್ತದೆ. ಶಿವನು ಪ್ರೇಮ ವಿರೋಽಯಲ್ಲ, ಕಾಮ ವಿರೋಧಿ. ಶಿವ ಕಾಮನನ್ನು ಸುಡುತ್ತಾನೆ. ಆದರೆ ಆತ ಪ್ರೀತಿ-ಪ್ರೇಮಗಳಿಗೆ ಹೆಚ್ಚಿನ ಸ್ಥಾನವನ್ನು ಕೊಡುತ್ತಾನೆ. ನಮ್ಮಲ್ಲಿ ಪ್ರೀತಿ-ಪ್ರೇಮಗಳು ದೈವಿಕಗೊಂಡರೆ ಅದು ಭಕ್ತಿ. ಆದರೆ ಪ್ರೀತಿ ಪ್ರೇಮಗಳು ದೈಹಿಕಗೊಂಡದ್ದೇ ಆದರೆ ಕಾಮ.
ಉತ್ತರ ಧ್ರುವದಿಂ..
ಕಲ್ಹಣ ತನ್ನ ರಾಜ ತರಂಗಿಣಿಯಲ್ಲಿ ‘ರಾಗಾಂಧಾನಾಂ ಕುತಃ ತ್ರಪಾ’ ಎಂದಿದ್ದಾನೆ. ಮೋಹಾಂಧರಿಗೆ ಲಜ್ಜೆ ಇನ್ನೆಲ್ಲಿಯದು. ಇದು ಪ್ರಣಯದಾಟ. ಪ್ರಕೃತಿ ಯಲ್ಲಿರುವ ಸಹಜ ಆಕರ್ಷಣೆ. ಪ್ರೇಮದ ಬಂಧ, ಮಿಲನದ ತೀವ್ರತೆಯೇ ಪ್ರಣಯ. ಕವಿ ಬೇಂದ್ರೆಯವರ ‘ನಾದಲೀಲೆ’ಯ ಅನಂತ ಪ್ರಣಯ ಕವಿತೆ ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಪ್ರಸಿದ್ಧ ಗೀತೆ. ಕವಿಯ ಕಲ್ಪನೆಯಲ್ಲಿ ಚಂದ್ರ ಪ್ರಿಯೆಯಾಗಿ, ಸೂರ್ಯ ಪ್ರಿಯಕರನಾಗಿದ್ದಾನೆ. ನಿಸರ್ಗ ಸಹಜ ಗಾಳಿ, ಪ್ರೀತಿಯ ಪ್ರವಾಹದ ಪೂರಕ. ಸೂರ್ಯ-ಚಂದ್ರರ ಮಧ್ಯೆಯ ಭೂಮಿ ಪ್ರೇಮಿ ಗಳ ಭೇಟಿಯ ಸ್ಥಳ ಒಟ್ಟುಗೂಡಿಸುವ ಸ್ಥಳ ಅಭಿಸಾರ. (ಸಂಕೇತ ಸ್ಥಳ) ಪ್ರೇಮಿಗಳ ಹೃದಯವನ್ನು ತಲ್ಲಣಗೊಳಿಸುವ ಚುಂಬಕ ಶಕ್ತಿ ಗಾಳಿಗಿದೆ.
ಅಮಾವಾಸ್ಯೆಯ ದಿನಗಳಲ್ಲಿ ಮರೆಯಾದ ಚಂದ್ರ ಪ್ರಿಯಕರನೊಡನೆ ಮಿಲನಗೊಂಡಿದ್ದಾಳೆ ಎನಿಸಿ ಬಿದಿಗೆಯ ಬಿಂಬಾಧರದಲಿ ಇಂದಿಗೂ ಮಿಲನದ ಚಿಹ್ನೆಯು ತೋರದಿದೆ ಎನ್ನುತ್ತಾರೆ ಕವಿ. ‘ಅನ್ನ ಪ್ರಾಣಗಳ ಮಿಥುನದಂತೆ ಮೈ ಎರಡು ಕಲೆತು ಬೆರೆತು ಮನದ ಕಾವಿನಲಿ ಕಾಮವಾಗಿ ಮನದಾಚೆ ಗೇನೋ ಅರಿತು ಚಿತ್ತದಲ್ಲಿ ನಿಷ್ಕಾಮರತಿಯ ರಸಪಾಕವಾಗಿ ನಿಂತು ಧಾರೆಗೆಡದೆ ಭಗವಂತನಲ್ಲಿ ಚಿರಭಕ್ತಿಯಾಗಿ ಬಂತು’ ಅಂಬಿಕಾತನಯದತ್ತರು ‘ಕಾಮ ಪ್ರೇಮದ ಔನ್ನತ್ಯವನ್ನು ಪ್ರಿಯರಾದ ಸಖ/ ಸಖಿಯರು ಅರಿತು ಆರಾಽಸಬೇಕು. ಅದುವೇ ಈ ಲೋಕದ ಸಹಜಾನಂದ’ ಎಂದಿದ್ದಾರೆ.
ರಾಜಸ್ತಾನದಲ್ಲಿ ಪ್ರೇಮಿಗಳು
ಗಂಡು-ಹೆಣ್ಣು ಆಕರ್ಷಣೆಗೆ ಒಳಗಾಗಿ ಜೊತೆಗೂಡಿ ಆನಂದವನ್ನು ಹಂಚಿಕೊಂಡ ನಂತರ ಅವರಲ್ಲಿ ಸ್ನೇಹಕ್ಕೆ ಸದಾ ಆಶಿಸುವ ಬಯಕೆ ಮೂಡುತ್ತದೆ.
ಇಂಥ ಸ್ನೇಹ ಅರ್ಪಣಾ ಭಾವದಿಂದ ಅಮರ ಪ್ರೇಮಿಗಳಾಗುತ್ತಾರೆ. ಎಷ್ಟೋ ಪ್ರೇಮಿಗಳಿಗೆ ಲೈಲಾ ಮಜ್ನೂ ಸೂರ್ತಿ. ಪರ್ಷಿಯನ್ ಸಾಹಿತಿ ನಿಜಾಮಿಗುಂಜೆ ಅವರ ರೋಮ್ಯಾಂಟಿಕ್ ಕಾವ್ಯ ಇರಾನ್ ಮತ್ತು ಭಾರತೀಯ ಸಂಸ್ಕೃತಿಗಳ ಸಮ್ಮಿಲನ.
ಲೈಲಾ ಮಜ್ನೂ (ಕ್ವಾಯಸ್) ಶಾಲಾ ಸ್ನೇಹಿತರು. ಸ್ನೇಹ ಪ್ರೀತಿಗೆ ಅಂಕುರವಾಯಿತು. ಆದರೆ ಮಜ್ನುವಿಗೆ ಪ್ರಾಣಿಗಳೆಂದರೆ ಅಪಾರ ಪ್ರೀತಿ. ಅವುಗಳೊಡನೆ ಅವನ ಜೀವನ. ಅದಕ್ಕೆ ಆತನನ್ನು ಹುಚ್ಚ ಎಂದು ಜನರು ಕರೆದರು. ಲೈಲಾ ಅವನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಅವನನ್ನು ಕರೆದುಕೊಂಡು ದೇಶಾಂತರ ಹೋಗಲು ನಿರ್ಧರಿಸಿದಳು. ಆದರೆ ಲೈಲಾ ತಂದೆ ಆ ಹುಚ್ಚನಿಗೆ ಮಗಳನ್ನು ಕೊಡಲಾರೆ ಎಂದನು. ಕೊನೆಗೆ ಲೈಲಾಳನ್ನು ಬೇರೆ ಯುವಕನಿಗೆ ಮದುವೆ ಮಾಡಿದರು. ಇತ್ತ ಮಜ್ನೂ ಖಿನ್ನನಾಗಿ ಅಲೆಯುತ್ತಾನೆ.
ಲೈಲಾಳ ಗಂಡ ಆಕಸ್ಮಿಕವಾಗಿ ಸಾಯುತ್ತಾನೆ. ಲೈಲಾ ಮಜ್ನೂವನ್ನು ಹುಡುಕುತ್ತಿರುವಾಗ ರಾಜಸ್ಥಾನದ ಮರುಭೂಮಿಯಲ್ಲಿ ಸಿಗುವನು. ಇಬ್ಬರೂ ಬಿಕನೇರ ಪ್ರದೇಶಕ್ಕೆ ಬಂದು ವಾಸ ಮಾಡಿ, ಜೀವನದ ಕಷ್ಟ ಕೋಟಲೆಗಳನ್ನು ತಾಳಲಾರದೇ ಇಬ್ಬರೂ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪ್ರೀತಿಸಿ ಒಂದಾಗಿ ಬಾಳುವ ಅವಕಾಶದಿಂದ ವಂಚಿತರಾದ ಲೈಲಾ-ಮಜ್ನು ಸಾವಿನಲ್ಲಿ ಒಂದಾಗುತ್ತಾರೆ, ಅಮರ ಪ್ರೇಮಿಗಳಾಗುತ್ತಾರೆ.
ಜೀವಂತ ಸಮಾಧಿ!
ಸಲೀಂ - ಅನಾರ್ಕಲಿ ಅವರದು ದುರಂತ ಕಥೆ. ಅಕ್ಬರ ಚಕ್ರವರ್ತಿ ಮಗ ಸಲೀಂ (ಮುಂದೆ ಜಹಂಗೀರ್) ಮುಜ್ರಾ ನೃತ್ಯ ನೋಡಲು ಬಂದಾಗ ಪರಿಚಾರಿಕೆಯ ಮಗಳಾದ ಅನಾರ್ಕಲಿ ನೃತ್ಯವನ್ನು ನೋಡಿ ಅವಳನ್ನು ಮದುವೆ ಆಗುವುದಾಗಿ ತಿಳಿಸಿದ. ಆದರೆ ಇದು ರಾಜಧರ್ಮಕ್ಕೆ ವಿರೋಧ ಎಂದು ಅಕ್ಬರ್ ತಿರಸ್ಕರಿಸುತ್ತಾನೆ. ಸಲೀಂ ತನ್ನ ತಂದೆಯ ವಿರುದ್ಧ ಯುದ್ಧ ಮಾಡಿ ಸೋಲನ್ನು ಅನುಭವಿಸಿದಾಗ ಅಕ್ಬರ ಅನಾರ್ಕಲಿಯನ್ನು ಒಪ್ಪಿಸಲು ಹೇಳುತ್ತಾನೆ.
ಆಗ ಸಲೀಂ ಅನಾರ್ಕಲಿಯನ್ನು ಒಪ್ಪಿಸದೇ ಸಾವಿಗೆ ಸಿದ್ಧನಾಗುತ್ತಾನೆ. ಅನಾರ್ಕಲಿ ಅಕ್ಬರನಿಗೆ ಸೆರೆಯಾಳಾಗುತ್ತಾಳೆ, ಆದರೆ ಒಂದು ರಾತ್ರಿ ಸಲೀಂ ಜೊತೆ
ಬೆರೆಯಲು ಅವಕಾಶ ಕೇಳುತ್ತಾಳೆ. ಅಕ್ಬರ ಸಮ್ಮತಿಸಿದ. ಆದರೆ ಸಲೀಂ ಬೆಳಗಿನ ನಿದ್ದೆಯಲ್ಲಿದ್ದಾಗ ಅನಾರ್ಕಲಿಯು ರಾಜಭಟರಿಗೆ ಸೆರೆಯಾಳಾಗುತ್ತಾಳೆ. ರಾಜಭಟರು ಲಾಹೋರ್ ಹೊರ ವಲಯಕ್ಕೆ ಅನಾರ್ಕಲಿಯನ್ನು ತಂದು, ಜೀವಂತ ಸಮಾಧಿ ಮಾಡುತ್ತಾರೆ. ಇತ್ತ ಸಲೀಂ, ಅನಾರ್ಕಲಿಯ ಅಗಲುವಿಕೆ ಯಿಂದ ಮಾನಸಿಕ ಖಿನ್ನತೆ ಹೊಂದುತ್ತಾನೆ. ಅನಾರ್ಕಲಿ ಪ್ರೇಮತ್ಯಾಗದಿಂದ ಅಮರಳಾಗುತ್ತಾಳೆ. ಅವರದು ಮಧುರ ತ್ಯಾಗಪ್ರೇಮ.