Friday, 18th October 2024

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಮೊಹಮ್ಮದ್ ಹಫೀಜ್ ದಿಢೀರ್ ವಿದಾಯ

ಲಾಹೋರ್‌: ಪಾಕಿಸ್ತಾನ ಕ್ರಿಕೆಟ್ ತಂಡದ ಮೊಹಮ್ಮದ್ ಹಫೀಜ್ ಎಲ್ಲ ಮಾದರಿಯ ಅಂತರ ರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ವಿದಾಯ ಹೇಳಿದ್ದಾರೆ.
2018 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ನೀಡಿದ್ದರು. ಇದೀಗ ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.

ಈ ಮೂಲಕ ತಮ್ಮ 18 ವರ್ಷಗಳ ಕ್ರಿಕೆಟ್ ಬದುಕಿಗೆ ಅಂತ್ಯ ಹಾಡಿದ್ದಾರೆ. ಆಲ್ರೌಂಡರ್ ಆಗಿರುವ ಹಫೀಜ್ ಪಾಕಿಸ್ತಾನ ಪರ 392 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 12,789 ರನ್ ಬಾರಿಸಿದ್ದು 253 ವಿಕೆಟ್ ಕಬಳಿಸಿದ್ದಾರೆ. ಒಟ್ಟು 55 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 218 ಏಕದಿನ ಮತ್ತು 117 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

ಪಾಕ್ ಪರ ಮೂರು ಐಸಿಸಿ ಏಕದಿನ ವಿಶ್ವಕಪ್ ಮತ್ತು ಆರು ಟಿ20 ವಿಶ್ವಕಪ್​ ಅನ್ನು ಪ್ರತಿನಿಧಿಸಿದ್ದರು. ಹಫೀಜ್ 2003ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಗೈದಿದ್ದರು. ಕಳೆದ ಟಿ20 ವಿಶ್ವಕಪ್​ನ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯ ಹಫೀಜ್ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ.

ಪಿಎಸ್​​ಎಲ್​ನ ಲಾಹೋರ್ ಖಲಂದರ್ ತಂಡದಲ್ಲಿ ಮುಂದಿನ ಲೀಗ್ ಆಡಲಿದ್ದಾರೆ. 32 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಪಾಕ್ ಪರ ಇವರು ನಾಲ್ಕನೇ ಸ್ಥಾನದಲ್ಲಿದ್ದಾರೆ.