Saturday, 30th November 2024

ಕುಸಿಯುವ ಸೇತುವೆಗಳೂ, ಮುರಿದು ಬೀಳುವ ಚಾವಣಿಗಳೂ !

ಸಂಗತ

ಡಾ.ವಿಜಯ ದರಡಾ

ಬಹಳ ಹಿಂದೊಂದು ಸಣ್ಣ ಕತೆ ಓದಿದ್ದೆ. ಎಂಜಿನಿಯರ್ ಒಬ್ಬನಿಗೆ ತನ್ನ ಮಗನಿಗೆ ಕಾರು ಕೊಡಿಸಬೇಕಾಗಿರುತ್ತದೆ. ಆದರೆ ಕೈಯಲ್ಲಿ ಹಣವಿರುವುದಿಲ್ಲ. ಏನು ಮಾಡುವುದು ಎಂದು ಯೋಚಿಸುತ್ತಾನೆ. ಎಷ್ಟು ಯೋಚಿಸಿದರೂ ಹಣ ಕಲೆಹಾಕುವ ಮಾರ್ಗ ಹೊಳೆಯುವುದಿಲ್ಲ. ಅಷ್ಟರಲ್ಲಿ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿ ರಸ್ತೆಗಳೂ, ಸೇತುವೆಗಳೂ ಕೊಚ್ಚಿಕೊಂಡು ಹೋಗುತ್ತಿರುವ ಸುದ್ದಿ ಬರುತ್ತದೆ. ತಕ್ಷಣ ಅವನು ತನ್ನ ಜೊತೆಗೆ ಯಾವಾಗಲೂ ಕೆಲಸ ಮಾಡುವ ಗುತ್ತಿಗೆದಾರನಿಗೆ ಫೋನ್ ಮಾಡುತ್ತಾನೆ. ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ರಸ್ತೆ ಮತ್ತು ಸೇತುವೆಗಳು ಎಂಜಿನಿಯರ್‌ನ ಮಗನಿಗೆ
ಹೊಸ ಕಾರು ಕೊಡಿಸುತ್ತವೆ!

ಈಗ ಬಿಹಾರದಲ್ಲಿ ದಿನಕ್ಕೊಂದು ಸೇತುವೆ ಕುಸಿಯುತ್ತಿರುವ ಸುದ್ದಿಗಳು ಬರುತ್ತಿವೆ. ಇನ್ನೊಂದೆಡೆ, ವಿಮಾನ ನಿಲ್ದಾಣಗಳಲ್ಲಿ ಕಳಪೆ ಕಾಮಗಾರಿಗಳ ಪರಿಣಾಮವಾಗಿ ಚಾವಣಿಗಳು ಕುಸಿಯುತ್ತಿವೆ. ಇದನ್ನೆಲ್ಲ ನೋಡಿದಾಗ ನನಗೆ ಎಂಜಿನಿಯರ್ ಮಗನ ಕಾರಿನ ಕತೆ ನೆನಪಾಯಿತು. ಇದಕ್ಕೆಲ್ಲ ಏನೆಂದು
ಹೇಳೋಣ! ನಿಜಕ್ಕೂ ನಾಚಿಕೆಗೇಡು. ನಮ್ಮ ದೇಶದ ಹೋಪ್ ಲೆಸ್, ಶೇಮ್‌ಲೆಸ್ ಮತ್ತು ಭ್ರಷ್ಟ ವ್ಯವಸ್ಥೆಯನ್ನಲ್ಲದೆ ಮತ್ತಾವುದನ್ನೂ ಈ ಎಲ್ಲ ಉಪದ್ವ್ಯಾಪ ಗಳಿಗಾಗಿ ದೂರಲು ಸಾಧ್ಯವಿಲ್ಲ. ಭ್ರಷ್ಟಾಚಾರ ಇಲ್ಲಿ ಬಹಿರಂಗ ರಹಸ್ಯವಷ್ಟೆ. ಬಿಹಾರದಲ್ಲಿ ಕೇವಲ ೧೮ ದಿನಗಳಲ್ಲಿ ೧೨ ಸೇತುವೆಗಳು
ಕುಸಿದುಬಿದ್ದಿವೆ. ದೆಹಲಿ, ಜಬಲ್ಪುರ ಮತ್ತು ರಾಜಕೋಟ್ ವಿಮಾನ ನಿಲ್ದಾಣಗಳಲ್ಲಿ ಚಾವಣಿಗಳು ಕಿತ್ತುಬಿದ್ದಿವೆ. ಆದರೂ ಇವುಗಳ ಬಗ್ಗೆ ದೇಶದಲ್ಲೊಂದು ಅಸೀಮ ಮೌನ ಮನೆಮಾಡಿದೆ. ಇವುಗಳ ಬಗ್ಗೆ ಜಾಣ ಕುರುಡು ಹಾಗೂ ಜಾಣ ಮೌನಗಳು ಕಾಣಿಸುತ್ತಿವೆ. ಏನೂ ಆಗಿಯೇ ಇಲ್ಲವೇನೋ ಎಂಬಂತೆ ಎಲ್ಲರೂ ಓಡಾಡಿಕೊಂಡಿದ್ದಾರೆ!

ಎಂದಿನಂತೆ ಈ ಸೇತುವೆ ಕುಸಿತಗಳು ಹಾಗೂ ಏರ್ ಪೋರ್ಟುಗಳ ಚಾವಣಿ ಕುಸಿತದ ಘಟನೆಗಳ ಬಗ್ಗೆ ತನಿಖೆ ನಡೆಸಲು ಸಮಿತಿಗಳನ್ನು ರಚಿಸಲಾಗಿದೆ. ಅವು ಯಾವಾಗ ವರದಿ ಕೊಡುತ್ತವೆ, ಯಾರಿಗೆ ಕೊಡುತ್ತವೆ, ಅದನ್ನು ಯಾರು ಬಹಿರಂಗ ಮಾಡುತ್ತಾರೆ ಮತ್ತು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನೆಲ್ಲ ಕೇಳಬೇಡಿ. ಇಷ್ಟಕ್ಕೂ ನಮ್ಮ ದೇಶದಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಭ್ರಷ್ಟಾಚಾರದ ಜಾಲವು ಈ ಘಟನೆಗಳಿಗೆ ನಿಜವಾದ ಕಾರಣ ಪತ್ತೆಯಾಗುವುದಕ್ಕೇ ಬಿಡುವುದಿಲ್ಲ. ನಿಜವಾಗಿಯೂ ಇದು ‘ಅಭಿವೃದ್ಧಿ ಹೊಂದಿದ ಭಾರತದ ಚಿತ್ರಣವೇ? ನಿಜವಾಗಿಯೂ ನಾವು ಇದೇ
ದಾರಿಯಲ್ಲಿ ಹೋದರೆ ಜಗತ್ತಿನ ಮೂರನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮುತ್ತೇವೆಯೇ?’ ನಿಮಗೊಂದು ಕುತೂಹಲಕರ ಸಂಗತಿ ಹೇಳಬೇಕು.

ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ೨೫೦ಕ್ಕೂ ಹೆಚ್ಚು ಸೇತುವೆಗಳು ಹೀಗೆ ಕುಸಿದು ಬಿದ್ದಿವೆ. ಕಳೆದ ನಲವತ್ತು ವರ್ಷಗಳಲ್ಲಿ ೨೦೦೦ಕ್ಕೂ ಹೆಚ್ಚು ಸೇತುವೆಗಳು ಕುಸಿದಿವೆ. ಇದು ಕೇಂದ್ರ ಸರಕಾರದ ಅಧಿಕೃತ ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ’ ನೀಡಿರುವ ಅಂಕಿಅಂಶ. ಈ ಪಟ್ಟಿಯಲ್ಲಿ ಸಣ್ಣಪುಟ್ಟ ಸೇತುವೆಗಳು, ಫೂಟ್ ಬ್ರಿಜ್‌ಗಳು ಹಾಗೂ ನಾಲೆಗಳು ಸೇರಿಲ್ಲ. ಹೀಗಾಗಿ ಪ್ರಶ್ನೆಯಿರುವುದು ಕೇವಲ ಬಿಹಾರದ ಸೇತುವೆಗಳು ಕುಸಿಯುತ್ತಿರುವ ಬಗ್ಗೆ ಮಾತ್ರ ಅಲ್ಲ. ಮೂಲಭೂತ ಪ್ರಶ್ನೆ ಇರುವುದು ಏಕೆ ನಮ್ಮ ದೇಶದಲ್ಲಿ ಹೀಗೆ ಬ್ರಿಜ್‌ಗಳು ಕುಸಿಯುತ್ತವೆ? ಏಕೆ ಅವು ತಮ್ಮ ಉದ್ದೇಶಿತ ಅವಧಿಯಷ್ಟು ಬಾಳಿಕೆ ಬರುವುದಿಲ್ಲ? ಕುಸಿದಿರುವ ಕೆಲವು ಸೇತುವೆಗಳು ಬಹಳ ಹಳೆಯ ಸೇತುವೆಗಳೇ ಇರಬಹುದು.

ಆದರೆ, ಬಾಕ್ರಾ ನದಿಗೆ ಬಿಹಾರದ ಅರೇರಿಯಾ ಜಿಲ್ಲೆಯಲ್ಲಿ ಕಟ್ಟಿದ ಸೇತುವೆ ಉದ್ಘಾಟನೆಗೂ ಮೊದಲೇ ಕುಸಿದು ಬೀಳುವುದಕ್ಕೆ ಯಾವ ಸಮರ್ಥನೆಯಿದೆ? ಈ ಸೇತುವೆಯ ಎರಡು ಕಂಬಗಳು ಕುಸಿದು, ಇನ್ನುಳಿದ ಆರು ಕಂಬಗಳಿಗೆ ಹಾನಿಯಾಗಿದೆ! ಕುಸಿದುಬಿದ್ದ ಕಂಬಗಳ ಕೆಳಗಿನ ನೆಲದಲ್ಲಿ ತುಂಬಬೇಕಿದ್ದ ಕಾಂಕ್ರೀಟನ್ನು ಭ್ರಷ್ಟಾಚಾರಿಗಳು ನುಂಗಿಹಾಕಿದ್ದಾರೆ ಎಂಬುದನ್ನು ಪತ್ತೆಹಚ್ಚಲು ನಾವೇನೂ ಸೇತುವೆ ನಿರ್ಮಾಣದಲ್ಲಿ ಎಕ್ಸ್‌ಪರ್ಟ್ ಆಗಿರಬೇಕಿಲ್ಲ. ಈ
ಸೇತುವೆಗಳ ನಿರ್ಮಾಣ ಕಾಮಗಾರಿಯ ಗುಣಮಟ್ಟ ಯಾವ ಲೆಕ್ಕದಲ್ಲೂ ಸಮರ್ಪಕವಾಗಿಲ್ಲ ಎಂದು ಸ್ಥಳೀಯ ಜನರು ಮೊದಲಿನಿಂದಲೇ ದೂರುತ್ತಾ ಬಂದಿದ್ದರು.

ಅದರ ಜೊತೆಗೆ, ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಿಸುವ ಮಾಫಿಯಾವನ್ನು ನಿಲ್ಲಿಸಿ ಎಂದೂ ಕೇಳುತ್ತಾ ಬಂದಿದ್ದರು. ಅವರ ಕೂಗನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಪರಿಣಾಮ ಈಗ ನಮ್ಮ ಮುಂದಿದೆ! ಪ್ರತಿಯೊಂದು ನಿರ್ಮಾಣ ಕಾಮಗಾರಿಯಲ್ಲೂ ಹಲವು ಹಂತಗಳಲ್ಲಿ ಪರಿಶೀಲನೆ ಹಾಗೂ ತಪಾಸಣೆಗಳು ನಡೆಯುತ್ತವೆ. ಕಾಮಗಾರಿಗೆ ಬಳಸಿದ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಅದು ಸರಕಾರಿ ಕಾಮಗಾರಿಯಾದರೂ
ಸರಿ, ಖಾಸಗಿ ಕಾಮಗಾರಿಯಾದರೂ ಸರಿ, ತಜ್ಞರು ಪರಿಶೀಲಿಸಿ ಒಪ್ಪಿಗೆ ನೀಡದೆಯೇ ಕಾಮಗಾರಿ ಮುಂದೆ ಹೋಗುವಂತಿಲ್ಲ.

ಅದರಲ್ಲೂ, ಸರಕಾರಿ ಯೋಜನೆಗಳ ಕಾಮಗಾರಿಗಳಲ್ಲಿ ಈ ಪರಿಶೀಲನಾ ವ್ಯವಸ್ಥೆ ಇನ್ನೂ ಕಟ್ಟುನಿಟ್ಟಾಗಿರುತ್ತದೆ. ಆದರೆ ಅದು ಥಿಯರಿಯಲ್ಲಿ ಮಾತ್ರ! ಪ್ರಾಕ್ಟಿಕಲ್ ಆಗಿ ಈ ತಪಾಸಣೆಗಳು ಹೇಗೆ ನಡೆಯುತ್ತವೆ ಎಂಬುದು ಗುತ್ತಿಗೆದಾರರಿಗೂ, ರಾಜಕಾರಣಿಗಳಿಗೂ, ಸರಕಾರಿ ಅಧಿಕಾರಿಗಳಿಗೂ ಚೆನ್ನಾಗಿ ಗೊತ್ತಿರುತ್ತದೆ. ಜನಸಾಮಾನ್ಯರಿಗೆ ಮಾತ್ರ ತಿಳಿದಿರುವುದಿಲ್ಲ. ಎಂದಿನಂತೆ ಬಿಹಾರದಲ್ಲಿ ಈ ಸೇತುವೆಗಳ ನಿರ್ಮಾಣದ ವೇಳೆ ಗುಣಮಟ್ಟದ ಪರಿಶೀಲನೆ ಯನ್ನು ಕಡೆಗಣಿಸಿರುತ್ತಾರೆ. ಇಲ್ಲದಿದ್ದರೆ ಇನ್ನೂ ಕಾಮಗಾರಿ ಮುಗಿಯುವುದಕ್ಕೂ ಮೊದಲೇ ಸೇತುವೆಗಳು ಕುಸಿಯಲು ಹೇಗೆ ಸಾಧ್ಯ? ಹಾಗಂತ, ಗುತ್ತಿಗೆ ದಾರರಿಗೇನು ಕಡಿಮೆ ಹಣ ನೀಡಿ, ಇಷ್ಟೇ ಹಣದಲ್ಲಿ ಮಜಬೂತಾದ ಸೇತುವೆ ಕಟ್ಟಿಕೊಡಬೇಕೆಂದು ಸರಕಾರ ಕಂಡೀಶನ್ ಹಾಕಿರುತ್ತದೆಯೇ? ಇಲ್ಲ.

ಸರಕಾರಿ ಯೋಜನೆಗಳಿಗೆ ಗುತ್ತಿಗೆ ನೀಡುವಾಗ ಟೆಂಡರ್‌ನ ಮೂಲ ದರವನ್ನು ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳಿಗೆ ಇರುವ ದರ, ಕಾರ್ಮಿಕರ ಕೂಲಿ, ಗುತ್ತಿಗೆದಾರರ ಲಾಭ ಇತ್ಯಾದಿಗಳನ್ನೆಲ್ಲ ಪರಿಗಣಿಸಿಯೇ ನಿಗದಿಪಡಿಸಿರುತ್ತಾರೆ. ಆದರೆ, ನಿಮಗೆ ಆಶ್ಚರ್ಯವಾಗಬಹುದು; ನಮ್ಮ ದೇಶದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಗುತ್ತಿಗೆದಾರರು ಇದಕ್ಕಿಂತ ಕಡಿಮೆ ದರಕ್ಕೆ ಬಿಡ್ ಮಾಡಿ ಪಡೆದುಕೊಳ್ಳುತ್ತಾರೆ. ಕಳಪೆ ಕಾಮಗಾರಿ ನಡೆಸದೆ, ಭ್ರಷ್ಟಾಚಾರ ಎಸಗದೆ, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸೇತುವೆ ಅಥವಾ ಕಟ್ಟಡ ಕಟ್ಟಲು ಹೇಗೆ ಸಾಧ್ಯ? ಇಲ್ಲಿ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಆಗಿಯೇ ಇರುತ್ತದೆ.

ಅಧಿಕಾರಿಗಳು, ರಾಜಕಾರಣಿಗಳಿಗೆ ಲಂಚ ಕೂಡ ಸಂದಾಯವಾಗಿರುತ್ತದೆ. ವ್ಯವಸ್ಥೆಯೇ ಇಂತಹ ಅಧೋಗತಿಗೆ ತಲುಪಿರುವಾಗ ಗುಣಮಟ್ಟವನ್ನು ನಿರೀಕ್ಷೆ ಮಾಡುವುದಾದರೂ ಹೇಗೆ? ಹೀಗಾಗಿ ಬಿಹಾರದಲ್ಲಿ ನಡೆದಂತಹ ಘಟನೆಗಳು ಇನ್ನೂ ಪುನಃ ಪುನಃ ನಡೆಯುತ್ತವೆ. ದೆಹಲಿ, ಜಬಲ್ಪುರ ಮತ್ತು ರಾಜಕೋಟ್ ವಿಮಾನ ನಿಲ್ದಾಣದಲ್ಲಿ ನಡೆದಂತಹ ಚಾವಣಿ ಕುಸಿತದ ಘಟನೆಗಳು ಮತ್ತೆ ಮತ್ತೆ ನಡೆಯುತ್ತವೆ. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ನಡೆಯುವ
ಕಾಮಗಾರಿಗಳು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿರುತ್ತವೆ ಎಂಬ ನಂಬಿಕೆಯಿತ್ತು. ಆದರೆ, ಈಗ ಅದಕ್ಕೂ ಚ್ಯುತಿ ಬಂದಿದೆ. ಭ್ರಷ್ಟ ಅಽಕಾರಿಗಳು ಎಲ್ಲಾ ಕಡೆ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರೆ.

ಅವರಿಗೆ ಹಗರಣಗಳನ್ನು ನಡೆಸಲು ಮುಕ್ತ ಪರವಾನಗಿಯೇನಾದರೂ ದೊರೆತಿದೆಯೇ? ಬಿಹಾರದ ಖಗಾರಿಯಾದಲ್ಲಿ ನಿರ್ಮಾಣವಾಗುತ್ತಿದ್ದ ೧೭೧೭ ಕೋಟಿ ರುಪಾಯಿ ವೆಚ್ಚದ ಬೃಹತ್ ಸೇತುವೆ ಇನ್ನೂ ಪೂರ್ಣಗೊಳ್ಳುವುದಕ್ಕೂ ಮೊದಲೇ ಕುಸಿದುಬಿದ್ದಿದೆ. ಆ ಪ್ರಕರಣದಲ್ಲಿ ಎಷ್ಟು ಜನರಿಗೆ ಶಿಕ್ಷೆ ಯಾಯಿತು? ಎರಡು ವರ್ಷದ ಹಿಂದೆ ಗುಜರಾತ್‌ನ ಮೋರ್ಬಿಯಲ್ಲಿ ದೊಡ್ಡದೊಂದು ಸೇತುವೆ ಕುಸಿದುಬಿದ್ದು ೧೪೧ ಜನರು ಸಾವನ್ನಪ್ಪಿರುವ ಘಟನೆ ನಿಮಗೆ ನೆನಪಿದೆಯೇ? ನಂತರ ಆ ಪ್ರಕರಣದ ಕತೆ ಏನಾಯಿತು? ಇನ್ನೂ ಒಂದು ಘಟನೆ ನೆನಪಿಸುತ್ತೇನೆ.

ಸುಮಾರು ಎರಡು ವರ್ಷದ ಹಿಂದೆ ಬಿಹಾರದ ರೋಹ್ತಾಸ್‌ನಲ್ಲಿ ದೊಡ್ಡ ಉಕ್ಕಿನ ಸೇತುವೆಯನ್ನೇ ಕಳ್ಳರು ಕತ್ತರಿಸಿ ಕಬ್ಬಿಣವನ್ನು ಕದ್ದೊಯ್ದು ಗುಜರಿಗೆ ಮಾರಿದ್ದರು. ಇದು ವಿಚಿತ್ರ ಪ್ರಕರಣ ಅನ್ನಿಸಿದರೂ ನಡೆದಿದ್ದು ಸತ್ಯ. ಈ ಪ್ರಕರಣದ ತನಿಖೆ ಏನಾಯಿತು? ಇಂತಹ ಎಲ್ಲಾ ಘಟನೆಗಳೂ ನಮ್ಮ ವ್ಯವಸ್ಥೆ ಹೇಗೆ ದಯನೀಯವಾಗಿ ವಿಫಲಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಷ್ಟೆ. ಈಗ ನಮ್ಮ ದೇಶದಲ್ಲಿ ನಿರ್ಮಾಣವಾಗುವ ರಸ್ತೆಗಳ ಗುಣಮಟ್ಟ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ.

ಇವತ್ತು ಬಂದು ಟಾರು ಹಾಕಿ ಹೋಗಿರುತ್ತಾರೆ, ಇನ್ನೊಂದೇ ವಾರದಲ್ಲಿ ಅದು ಕಿತ್ತು ಬಂದಿರುತ್ತದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದರೆ ಮಳೆಗಾಲ ಬರುವುದಕ್ಕೂ ಮೊದಲೇ ಅದು ಬಿರುಕು ಬಿಟ್ಟಿರುತ್ತದೆ. ಹಳ್ಳಿಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವಂತೂ ಇನ್ನೂ ಕೆಟ್ಟದಾಗಿರುತ್ತದೆ. ನಿಮಗೆ ಆಶ್ಚರ್ಯವಾಗಬಹುದು, ಮುಂಬೈ ಮಹಾನಗರವೊಂದರಲ್ಲೇ ಪ್ರತಿ ವರ್ಷ ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಗಮನಿಸಿ, ಹೊಸ ರಸ್ತೆ ನಿರ್ಮಿಸುವುದಕ್ಕೆ ಅಲ್ಲ, ಕೇವಲ ರಸ್ತೆ ಗುಂಡಿ ಮುಚ್ಚುವುದಕ್ಕೆ – ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ!

ಮುಂಬೈನಲ್ಲಿ ಈ ವರ್ಷ  ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ಈಗಾಗಲೇ ಅದರಲ್ಲಿ ಬಿರುಕು ಬಿಟ್ಟಿದೆ ಎಂಬ ವರದಿಗಳು ಬಂದಿವೆ. ದೇಶದ ಸಂಸದರು ಹಾಗೂ ಶಾಸಕರಿಗೆ ಪ್ರತಿ ವರ್ಷ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಸರಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ಆ ಹಣದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಆಡಿಟ್ ಸರಿಯಾಗಿ ನಡೆಸಿದರೆ, ನನ್ನ ಪ್ರಕಾರ, ಶೇ.೮೦ರಷ್ಟು ಕಾಮಗಾರಿಗಳು ತಿರಸ್ಕೃತಗೊಳ್ಳುತ್ತವೆ.

ತಾವು ನಿರ್ಮಿಸುವ ರಸ್ತೆಗಳನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವತಃ ತಮ್ಮ ಓಡಾಟಕ್ಕೂ ಬಳಸುತ್ತಾರೆ. ಆದರೂ ಅದನ್ನು ನೆಟ್ಟಗೆ ನಿರ್ಮಾಣ ಮಾಡಿರುವುದಿಲ್ಲ. ಎಲ್ಲರೂ ಭ್ರಷ್ಟಾಚಾರ ಮಾಡಿರುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಪ್ರಾಮಾಣಿಕ ಸಂಸದರು ಅಥವಾ ಶಾಸಕರು ಇಂತಹ
ಕಳಪೆ ಕಾಮಗಾರಿ ಅಥವಾ ಭ್ರಷ್ಟ ವ್ಯವಸ್ಥೆಯ ಬಗ್ಗೆ ಸಂಸತ್ತು ಅಥವಾ ವಿಧಾನಸಭೆಯಲ್ಲಿ ಧ್ವನಿಯೆತ್ತಿದರೆ ಯಾರಿಗೂ ಅದು ಕೇಳಿಸುವುದೇ ಇಲ್ಲ. ಇನ್ನುಳಿದವರು ಪ್ರತಿಭಟನೆಯನ್ನೂ ಮಾಡುವುದಿಲ್ಲ, ಉಪವಾಸವನ್ನೂ ಮಾಡುವುದಿಲ್ಲ. ಈ ಮೌನಕ್ಕೆ ಏನು ಕಾರಣ? ಭ್ರಷ್ಟಾಚಾರಕ್ಕೆ ಅವರದೂ
ಬೆಂಬಲವಿದೆ ಎಂದೇ ಅರ್ಥವಲ್ಲವೇ? ಒಂದು ಸಂಗತಿಯನ್ನು ನಾವು ನೆನಪಿಟ್ಟುಕೊಳ್ಳಬೇಕು.

ಜನಪ್ರತಿನಿಧಿಗಳ ಬೆಂಬಲ ಇಲ್ಲದೆಯೇ ಯಾವುದೇ ಅಧಿಕಾರಿಯು ಕಳಪೆ ಕಾಮಗಾರಿಗೆ ಹಣ ಬಿಡುಗಡೆ ಮಾಡುವ ಧೈರ್ಯ ತೋರುವುದಿಲ್ಲ. ಇನ್ನೊಂದು ಉದಾಹರಣೆ ನೋಡಿ. ದೇಶದಲ್ಲಿ ಪ್ರಧಾನ ಮಂತ್ರಿಯಿಂದ ಹಿಡಿದು ರಾಜ್ಯಗಳ ಮುಖ್ಯಮಂತ್ರಿಗಳವರೆಗೆ ಎಲ್ಲರೂ ಆಗಾಗ ಭಾಷಣಗಳಲ್ಲಿ ‘ಪ್ರತಿಯೊ ಬ್ಬರೂ ಒಂದೊಂದು ಗಿಡ ನೆಡಬೇಕು’ ಎಂದು ಸಲಹೆ ನೀಡುತ್ತಾರೆ. ನನ್ನ ಅನುಭವದಲ್ಲಿ ಹೇಳುವುದಾದರೆ, ನೀವೊಂದು ಗಿಡ ನೆಟ್ಟು ಅದಕ್ಕೆ ಕಬ್ಬಿಣದ ಬೇಲಿ ಅಳವಡಿಸಿ ಮನೆಗೆ ಹೋದಿರಿ ಎಂದಿಟ್ಟುಕೊಳ್ಳಿ.

ಎರಡೇ ದಿನದಲ್ಲಿ ಕಬ್ಬಿಣದ ಆಸೆಗೆ ಬೇಲಿಯನ್ನು ಕಳ್ಳರು ಕದ್ದುಕೊಂಡು ಹೋಗಿರುತ್ತಾರೆ. ಅಧಿಕಾರಿಗಳು ಆ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಅಧಿಕಾರದಲ್ಲಿರುವವರು ರಾಜಕಾರಣದಲ್ಲಿ ಯಾವ ಪರಿ ಮುಳುಗಿದ್ದಾರೆಂದರೆ, ಅವರಿಗೆ ಇದನ್ನೆಲ್ಲ ಯೋಚಿಸುವುದಕ್ಕೂ ಟೈಮ್ ಇಲ್ಲ. ಅವರಿಗೆ ಬರೀ
ರಾಜಕೀಯ ಬೇಕು, ಅಧಿಕಾರ ಬೇಕು, ಹಣ ಬೇಕು. ‘ಇದನ್ನೆಲ್ಲ ಸರಿಪಡಿಸಿ ಮೈಲಾರ್ಡ್’ ಎಂದು ಪ್ರತಿಯೊಂದಕ್ಕೂ ನಾವು ನ್ಯಾಯಾಲಯಗಳ ಮೊರೆ ಹೋಗಬೇಕಷ್ಟೆ. ಅದಿಲ್ಲವಾ ದರೆ, ನ್ಯಾಯಾಲಯಗಳೇ ಇಂತಹ ಎಲ್ಲಾ ಅಪಸವ್ಯಗಳನ್ನೂ ಗಮನಿಸಿ ಸ್ವಯಂಪ್ರೇರಿತ ಕೇಸು ದಾಖಲಿಸಿಕೊಂಡು
ಭ್ರಷ್ಟರನ್ನು ಶಿಕ್ಷಿಸಬೇಕು. ಆಗ ಏನಾದರೂ ಸುಧಾರಣೆಯಾದೀತು. ಬೇರೆ ದಾರಿಯೇ ಇಲ್ಲ.

(ಲೇಖಕರು : ರಾಜ್ಯಸಭಾ ಮಾಜಿ ಸದಸ್ಯರು, ಹಿರಿಯ
ಪತ್ರಿಕೋದ್ಯಮಿ)