ಮಣ್ಣುಹೊನ್ನು
ಬಸವರಾಜ ಶಿವಪ್ಪ ಗಿರಗಾಂವಿ
ಭಾರತದ ಸಂಸ್ಕೃತಿಯಲ್ಲಿ ಹಸು ಮಾತೆಯಾಗಿರುವುದರಿಂದ ಇದರ ಸಗಣಿ ಮತ್ತು ಗಂಜಲು ಪೂಜ್ಯನೀಯವಾಗಿದೆ. ಗ್ರಾಮೀಣ ಭಾಗದಲ್ಲಿ ಇಂದಿಗೂ ಹಸುವಿನ ಸಗಣಿಯಿಂದ ಪಾಂಡವರು, ಕೊಂತೆವ್ವ ಮತ್ತು ಬಾಗಿಲು ಭರಮಪ್ಪನನ್ನು ಮಾಡಿ ಪೂಜಿಸಲಾಗುತ್ತದೆ. ಹಸುವಿನ ಗಂಜಲನ್ನು ಮನೆತುಂಬ ಭಕ್ತಿಯಿಂದ ಸಿಂಪಡಿಸಿದರೆ ದುಷ್ಟಶಕ್ತಿಗಳು ನಾಶವಾಗುತ್ತವೆಂಬ ನಂಬುಗೆಯಿದೆ. ಹಿಂದೆ ಸಗಣಿಯಿಂದ ಮನೆಯನ್ನು ಸಾರಣೆ ಮಾಡುವ ಮೂಲಕ ನೆಲದೊಂದಿಗೆ ಮನುಕುಲವು ನೇರವಾಗಿ ನೈಸರ್ಗಿಕ ಸಂಪರ್ಕವನ್ನು ಅನುಭವಿಸುತ್ತಿದ್ದ ಪರಿಣಾಮ ಆರೋಗ್ಯಕರ ಬದುಕನ್ನು ಕಟ್ಟಿಕೊಂಡಿತ್ತು.
ಇಂದು ಮನೆಯಲ್ಲಿ ನೈಸರ್ಗಿಕ ವಸ್ತುಗಳು ಕಡಿಮೆಯಾಗಿ ಕೃತಕ ವಸ್ತುಗಳು ಹೆಚ್ಚಾಗುತ್ತಿರುವ ಪ್ರಯುಕ್ತ ಮನುಕುಲದ ಆರೋಗ್ಯವು ಹದಗೆಡುತ್ತಿರುವುದು ಸುಳ್ಳೇನಲ್ಲ. ನೂತನ ಗೃಹಪ್ರವೇಶದ ಸಂದರ್ಭದಲ್ಲಿ ಪ್ರಥಮವಾಗಿ ಹಸುವಿಗೆ ಪ್ರವೇಶ ಹಾಗೂ ಆ ಸಂದರ್ಭದಲ್ಲಿ ಹಸುವು ಸಗಣಿ ಮತ್ತು ಗಂಜಲು ಮಾಡಿದರೆ ಆ ಮನೆಯಲ್ಲಿ ಶುಭ ಮತ್ತು ಸುಖ-ಶಾಂತಿಯು ನೆಲೆಸುತ್ತದೆ ಎಂಬ ಪ್ರತೀತಿಯಿದೆ. ಇಷ್ಟೊಂದು ಪವಿತ್ರ ಸ್ಥಾನವನ್ನು ಹಸು ಮತ್ತು ಹಸುವಿನ ಸಗಣಿ ಹಾಗೂ ಗಂಜಲು ಹೊಂದಿದೆ.
ಇನ್ನು ಕೃಷಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಗಣಿ ಮತ್ತು ವಿಶೇಷವಾಗಿ ಗಂಜಲಿನಲ್ಲಿ ಬೆಳೆಗಳನ್ನು ಪೋಷಿಸುವ ಅಖಂಡ ಶಕ್ತಿಯು ಅಡಗಿದೆ. ಎಪ್ಪತ್ತರ ದಶಕಗಳಾಚೆ ಅಂದರೆ ರಾಸಾಯನಿಕಗಳು ಕೃಷಿಯಲ್ಲಿ ಪರಿಚಯವಾಗುವ ಪೂರ್ವದಲ್ಲಿ ಬೆಳೆಗಳಿಗೆ ಕೇವಲ ದನಗಳ ಸಗಣಿ ಮತ್ತು ಗಂಜಲನ್ನು ಬಳಸಲಾಗುತ್ತಿತ್ತು. ಇದರಿಂದ ಅಂದಿನ ದಿನಮಾನಗಳಲ್ಲಿ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿತ್ತಲ್ಲದೆ ಆ ಮಣ್ಣಿನಲ್ಲಿ ಬೆಳೆದ ಆಹಾರಧಾನ್ಯ ಗಳನ್ನು ತಿನ್ನುತ್ತಿದ್ದ ಮನುಕುಲವು ಸಹ ಅತ್ಯಂತ ಆರೋಗ್ಯಭರಿತವಾಗಿತ್ತು. ಆದರೆ ಕೃಷಿಯಲ್ಲಿ ರಾಸಾಯನಿಕಗಳ ಪರಿಚಯದ ನಂತರ ಕೆಲವು ದಿನಗಳವರೆಗೆ ಕೃಷಿ ಇಳುವರಿಯು ಹೆಚ್ಚಾಯಿತು.
ಇದರಿಂದಾಗಿ ದಿನದಿಂದ ದಿನಕ್ಕೆ ದನಕರುಗಳ ಪಾಲನೆ ಪೋಷಣೆ ಕಡಿಮೆಯಾಗಿ ಕೃಷಿಯಲ್ಲಿ ಸಗಣಿ ಮತ್ತು ಗಂಜಲಿನ ಬಳಕೆಯು ಕಡಿಮೆಯಾಗಿ ರಾಸಾಯನಿಕಗಳ ಅವೈಜ್ಞಾನಿಕ ಬಳಕೆ ಹೆಚ್ಚಾಗಿದೆ. ಇವೆಲ್ಲ ಬೆಳವಣಿಗೆಗಳಿಂದ ಇಂದು ಮಣ್ಣಿನ ಫಲವತ್ತತೆಯು ಕಡಿಮೆಯಾಗಿರುವುದಲ್ಲದೆ ಇಳುವರಿಯೂ ಗಣನೀಯವಾಗಿ ಕಡಿಮೆಯಾಗುತ್ತಿದೆ. ಮಣ್ಣಿನಲ್ಲಿ ಪ್ರಧಾನ ಮತ್ತು ಸೂಕ್ಷ್ಮ ಪೋಷಕಾಂಶಗಳು ಹೆಚ್ಚಾಗಲು ಹಾಗೂ ಬೆಳೆಯನ್ನು ಸಂರಕ್ಷಿಸಲು ಮತ್ತು ರೈತನ ಮಿತ್ರ ಎರೆಹುಳು ಸೇರಿದಂತೆ ಮಣ್ಣಿನಲ್ಲಿ ಪರಿಸರಸ್ನೇಹಿ ಜೀವಿಗಳು ಬದುಕಲು ಸಗಣಿ ಮತ್ತು ಗಂಜಲು ಸಂಪೂರ್ಣ ಕಾರಣವಾಗಿದೆ. ಭಾರತವು ವಿಶ್ವಕ್ಕೆ ಪರಿಚಯಿಸಿದ ಸಾವಯವ ಕೃಷಿಯ ಮೂಲವೆ ಸಗಣಿ ಮತ್ತು ಗಂಜಲು ಎಂದರೆ ತಪ್ಪಾಗಲಿಕ್ಕಿಲ್ಲ.
ಪೋಷಕಾಂಶಗಳ ವಿಚಾರದಲ್ಲಿ ದೇಶೀಯ ಹಸುಗಳಾದ ಗೀರ್ ತಳಿಯ ಹಸುವು ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಆದರೆ ಹೈಬ್ರೀಡ್
ಹಸುಗಳಲ್ಲಿ ಹೆಚ್ಚು ಪೋಷಕಾಂಶಗಳಿವೆ ಎಂಬುದು ಮೇಲ್ನೊಟಕ್ಕೆ ಸಾಭೀತಾಗಿದೆ. ಸಗಣಿ ಮತ್ತು ಗಂಜಲಿನಿಂದ ಜೀವಾಮೃತ, ಗೋಕೃಪಾಮೃತ ಜಲ,
ದಶಪರ್ಣಿ, ಸಾವಯವ ದ್ರವ, ಘನರೂಪದ ಗೊಬ್ಬರ ಮತ್ತು ಕೀಟನಾಶಕಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಬೆಳೆಗೆ ಸಿಂಪರಣೆ ಮಾಡುವು ದರಿಂದ ರೋಗಗಳ ನಿಯಂತ್ರಣ ಸಾಧ್ಯವಾಗುತ್ತದೆ.
ಸಗಣಿಯ ಲಾಭಗಳು: ಅನಿಲಗಳು, ಖನಿಜಾಂಶಗಳು, ಸಲರ್, ಸಾರಜನಕ, ಅಲ್ಯೂಮಿನಿಯಮ್, ರಂಜಕ, ಅಯೋಡಿನ್, ಪೋಟ್ಯಾಷ್, ಕೋಬಾಲ್ಟ, ಕಬ್ಬಿನ, ಸುಣ್ಣ ಮತ್ತು ಮ್ಯಾಂಗನೀಜ್ ಸೇರಿದಂತೆ ಹಲವು ಪೋಷಕಾಂಶಗಳು ಸಗಣಿಯಲ್ಲಿ ಅಡಗಿವೆ. ಸಗಣಿಯು ಮಣ್ಣಿನ ಕಣಗಳನ್ನು ಬೇರ್ಪಡಿಸುತ್ತದೆ ಯಲ್ಲದೆ ಇಂಧನ ಮತ್ತು ಜೈವಿಕ ಅನಿಲವನ್ನು ಉತ್ಪಾದಿಸಲು ಸಹಕಾರಿಯಾಗುತ್ತದೆ. ಕೃಷಿಯಲ್ಲಿ ಸಗಣಿ ಮತ್ತು ಗಂಜಲನ್ನು ಬಳಸುವುದರಿಂದ ವಿಷಮುಕ್ತ ಆಹಾರವು ಪ್ರಾಪ್ತಿಯಾಗುತ್ತದೆ.
ಆದರೆ ಸಗಣಿ ಮತ್ತು ಗಂಜಲಿನಲ್ಲಿರುವ ಪೋಷಕಾಂಶಗಳು ನಿರ್ಣಯವಾಗುವುದು ದನಕರುಗಳು ದಿನನಿತ್ಯ ತಿನ್ನುವ ಪಶುಆಹಾರದ ಮೇಲೆ ಅವಲಂಭಿತ ವಾಗಿದೆ. ಇಂದಿನ ದನಕರುಗಳು ಮೇವು ಮತ್ತು ಸಸ್ಯಗಳನ್ನು ಹೆಚ್ಚಾಗಿ ತಿನ್ನುವ ಬದಲು ಮಾನವರು ತಿಂದುಳಿದ ಆಹಾರ ಪದಾರ್ಥಗಳನ್ನು ತಿನ್ನುತ್ತಿವೆ. ಇದರಿಂದ ನಿರೀಕ್ಷಿತ ಪೋಷಕಾಂಶಗಳು ದೊರೆಯದಿರಹುದು. ಆದ್ದರಿಂದ ದನಕರುಗಳಿಗೆ ಶಿ-ರಸು ಮಾಡಲಾದ ಪಶು ಆಹಾರ ಮತ್ತು ಮೇವನ್ನು ಮಾತ್ರ ಬಳಸಬೇಕು ಅಂದಾಗ ಮಾತ್ರ ಸಗಣಿ ಮತ್ತು ಗಂಜಲಿನಿಂದ ಉತ್ತಮ ಪೋಷಕಾಂಶಗಳು ನೈಸರ್ಗಿಕವಾಗಿ ಸೃಷ್ಟಿಯಾಗಿ ಕೃಷಿಯಲ್ಲಿ ಆರೋಗ್ಯಕರ ಬದಲಾವಣೆ ಸಾಧ್ಯವಾಗುತ್ತದೆ.
(ಲೇಖಕರು: ಕೃಷಿತಜ್ಞರು ಹಾಗೂ ಕೃಷಿ ಸಹಾಯಕ
ಮಹಾಪ್ರಬಂಧಕರು)