ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಮಗುವಿಗಾಗಿ ಕಂದಕ ಹಾರಿದ ಧೀರ ತಾಯಿ ಹೀರಾ

ಕೋಟೆಯಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. ಹೀರಾ ಎಂಬ ಹೆಣ್ಣುಮಗಳು, ಮೇಲ್ಭಾಗದ ಕೋಟೆಗೆ ಹಾಲು ಮಾರಲು ಬಂದವಳು, ಜಾತ್ರೆ ನೋಡಿ ಮನೆಗೆ ಹೋಗುವ ಷ್ಟೊತ್ತಿಗೆ ಸಂಜೆ ಮೀರಿತ್ತು, ಅಂದು ಹುಣ್ಣಿಮೆ ಕೂಡ, ರಾಜಾeಯಂತೆ ಸಂಜೆಯಾದ ಮೇಲೆ ಮೇಲಿನ ಕೋಟೆ ಯಿಂದ ಕೆಳಗೆ ಹೋಗುವಂತಿಲ್ಲ

ಮಗುವಿಗಾಗಿ ಕಂದಕ ಹಾರಿದ ಧೀರ ತಾಯಿ ಹೀರಾ

ಅದು ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜನ ಆಡಳಿತದ ಕಾಲದಲ್ಲಿ ನಡೆದಿದ್ದು. ಶಿವಾಜಿ ಕಟ್ಟಿಸಿದ ರಾಯ್‌ಗಢ್ ಕೋಟೆ ಸಾಧಾರಣ ಕೋಟೆಯಲ್ಲ. ಬೆಟ್ಟ-ಗುಡ್ಡ-ನದಿ-ತೊರೆ- ಹಳ್ಳ ಎಲ್ಲವೂ ಆ ಕೋಟೆಯೊಳಗೆ ಇತ್ತು. ಅದರ ಮೇಲ್ಭಾಗದಲ್ಲಿ ಅರಮನೆ ಪರಿ ವಾರ, ಆಡಳಿತಾಧಿಕಾರಿಗಳು, ಅವರ ಪರಿವಾರ ಹಾಗೂ ಹಲವಾರು ಕುಟುಂಬಗಳು ವಾಸ ವಾಗಿತ್ತು. ಕೋಟೆಯ ಕೆಳಭಾಗದಲ್ಲಿ ಹಳ್ಳಿಗಳಿದ್ದು ತುಂಬಾ ಕುಟುಂಬಗಳು ವಾಸ ಮಾಡು ತ್ತಿದ್ದವು. ಕೆಳಭಾಗದ ಕೋಟೆಯಲ್ಲಿನ ಜನರು ಹಾಲು, ಮೊಸರು, ಬೆಣ್ಣೆ, ತುಪ್ಪ, ಹಣ್ಣು ,ಹೂವು, ತರಕಾರಿಗಳನ್ನು ಹೊತ್ತುಕೊಂಡು ಮೇಲ್ಭಾಗದ ಕೋಟೆಗೆ ಹೋಗಿ ಜನಗಳಿಗೆ ಮಾರು ತ್ತಿದ್ದರು.

ಕೋಟೆಯಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿತ್ತು. ಹೀರಾ ಎಂಬ ಹೆಣ್ಣುಮಗಳು, ಮೇಲ್ಭಾಗದ ಕೋಟೆಗೆ ಹಾಲು ಮಾರಲು ಬಂದವಳು, ಜಾತ್ರೆ ನೋಡಿ ಮನೆಗೆ ಹೋಗುವ ಷ್ಟೊತ್ತಿಗೆ ಸಂಜೆ ಮೀರಿತ್ತು, ಅಂದು ಹುಣ್ಣಿಮೆ ಕೂಡ, ರಾಜಾಜ್ಞೆಯಂತೆ ಸಂಜೆಯಾದ ಮೇಲೆ ಮೇಲಿನ ಕೋಟೆಯಿಂದ ಕೆಳಗೆ ಹೋಗುವಂತಿಲ್ಲ.

ಎಲ್ಲೆಲ್ಲಿ ನೋಡಿದರೂ ಕಾವಲುಗಾರರು, ಅವರ ಕಣ್ತಪ್ಪಿಸಿ ಹೋಗುವುದು ಅಸಾಧ್ಯ. ಎಷ್ಟು ಬೇಡಿಕೊಂಡರೂ ಕಾವಲುಗಾರರು ಅವಳನ್ನು ಹೋಗಲು ಬಿಡಲಿಲ್ಲ. ಹೀರಾಳ ಹೃದಯ ಡವ ಡವ ಹೊಡೆದುಕೊಳ್ಳುತ್ತಿತ್ತು, ಮನಸು ಚಡಪಡಿಸುತ್ತಿತ್ತು. ಮನೆಯಲ್ಲಿ ಅವಳ ಎಳೆ ಕಂದನನ್ನು ತೊಟ್ಟಿಲಲ್ಲಿ ಮಲಗಿಸಿ ಬಂದಿದ್ದಳು. ಅದಕ್ಕೆ ಹಾಲುಣಿಸಬೇಕು, ಹೊತ್ತಾಗಿದೆ. ಹಾಗಾಗಿ ಮಗುವಿನ ಗತಿ ಏನು? ಈಗ ಅವಳಿಗೆ ಒಂದೇ ದಾರಿ, ಬೆಳದಿಂಗಳಿದೆ. ಆ ಬೆಳಕಲ್ಲಿ ಕಾಡಿನ ಇನ್ನೊಂದು ಬಳಸು ದಾರಿಯಲ್ಲಿ ಹೋಗಿ ಕಂದಕಕ್ಕೆ ಹಾರುವುದು, ಕಂದಕದ ಕೆಳಗೆ ಹೀರಾಳ ಮನೆ. ಹಾಗೂ-ಹೀಗೂ ಗಟ್ಟಿ ಮನಸ್ಸು ಮಾಡಿ ಕಾಡಿನ ಬಳಸು ದಾರಿಯಲ್ಲಿ ಹೋದಳು.

ಕಂದಕದ ಮೇಲೆ ನಿಂತಿದ್ದಾಳೆ, ಬಗ್ಗಿ ನೋಡಿದರೆ ಆಳದ ಕಂದಕ. ಆಕೆ ಧೃತಿಗೆಡಲಿಲ್ಲ, ಮಗುವಿಗಾಗಿ ‘ಜೈ ಮಾತಾ ಭವಾನಿ’ ಎಂದು ತಾಯಿಯನ್ನು ನೆನೆಯುತ್ತಾ ಮೇಲಿನಿಂದ ಕಂದಕ ಹಾರಿ ಕೆಳಗೆ ಜಿಗಿದೇ ಬಿಟ್ಟಳು. ಅವಳು ಬಿದ್ದಿದ್ದು ಕಲ್ಲು, ಮುಳ್ಳು, ಪೊದೆಗಳ ಮೇಲೆ. ಅವಳ ಮೈ ಕೈ ಎಲ್ಲಾ ಗಾಯಗಳಾಗಿತ್ತು. ಅದನ್ನು ಗಮನಿಸದೇ ಮನೆಗೆ ಓಡಿದಳು.

ತೊಟ್ಟಿಲಲ್ಲಿ ಮಗು ಅತ್ತೂ ಅತ್ತೂ ಸಾಕಾಗಿ ಮುಖ ಎಲ್ಲಾ ಕೆಂಪಗಾಗಿ ಮಲಗಿತ್ತು. ಹೋದ ವಳೇ ತಕ್ಷಣ ತೊಟ್ಟಿಲಿನಿಂದ ಮಗುವನ್ನು ಎತ್ತಿಕೊಂಡು ಮಗುವಿನ ಮೈ ಕೈಯನ್ನು ಸವರಿ, ತೊಡೆ ಮೇಲೆ ಮಲಗಿಸಿಕೊಂಡು ಎದೆ ಹಾಲು ಕುಡಿಸಿದಳು. ಮಗು ಹಾಲು ಕುಡಿಯು ತ್ತಿದ್ದಂತೆ ತಾಯಿ ಹೃದಯ ಆನಂದದಿಂದ ತುಂಬಿ ಬಂತು.

ಬೆಳಗಾಗುವ ಹೊತ್ತಿಗೆ ಹೀರಾ ಕೋಟೆಯ ಕಂದಕ ಹಾರಿದ ವಿಷಯ ಕೋಟೆಯ ತುಂಬಾ ಹರಡಿತು. ಹೀರಾ ತಾಯಿ ರಾಜಾಜ್ಞೆಯನ್ನು ಮೀರಿದ್ದಾಳೆ ಎಂದು ಮಾತನಾಡತೊಡಗಿ ದರು. ಶಿವಾಜಿಗೂ ಅದು ಕೇಳಿ ಆಶ್ಚರ್ಯವಾಯಿತು. ಹೀರಾಳನ್ನು ಅರಮನೆಗೆ ಕರೆಸಿದ. ಆಕೆ ಶಿವಾಜಿಯನ್ನು ನೋಡಿ, ನಡೆದದ್ದೆಲ್ಲವನ್ನು ತಿಳಿಸಿ, ‘ನನ್ನಿಂದ ತಪ್ಪಾಗಿದೆ, ರಾಜಾಜ್ಞೆ ಮೀರಿದ್ದೇನೆ ಪ್ರಭು, ನನ್ನನ್ನು ಕ್ಷಮಿಸಿ ಬಿಡಿ’ ಎಂದು ಅಳುತ್ತಾ ತಲೆ ತಗ್ಗಿಸಿದಳು.

ಶಿವಾಜಿ ಹೇಳಿದ, ‘ತಾಯಿ ತಲೆ ಎತ್ತು, ನೀನು ತಲೆ ತಗ್ಗಿಸುವ ಕೆಲಸ ಮಾಡಿಲ್ಲ, ಸಮಾಜ ಹೆಮ್ಮೆಪಡುವಂಥ ಕೆಲಸ ಮಾಡಿರುವೆ. “ತಾಯಿ ಪ್ರೀತಿ, ಸಾಧಾರಣವಲ್ಲ, ದೊಡ್ಡ ಕೋಟೆ ಗಿಂತಲೂ ದೊಡ್ಡದು" ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟಿರುವೆ’ ಎಂದು ಆಕೆಯನ್ನು ಶ್ಲಾಘಿಸಿ, ಆ ತಾಯಿಗೆ ಉಡುಗೊರೆ ಕೊಟ್ಟು ಕಳಿಸಿದನು. ರಾಜ ಅಷ್ಟಕ್ಕೆ ಸುಮ್ಮನಾಗದೆ ಮಮತಾ ಮಯಿ ತಾಯಿ’ಯ ನೆನಪಿಗಾಗಿ ಆಕೆ ಕಂದಕ ಜಿಗಿದ ಜಾಗದಲ್ಲಿ ಒಂದು ಬುರುಜನ್ನು ಕಟ್ಟಿಸಿದ ( ಬುರುಜು ಅಂದರೆ ಕೋಟೆಯ ಪ್ರಕಾರದ ಮೇಲು ಗೋಪುರಗಳ ತುದಿಯಲ್ಲಿ ಕಟ್ಟುವ ವರ್ತುಲಾಕಾರದ ಕಟ್ಟಡ) ಹಾಗೂ ಆ ವರ್ತುಲಾಕಾರದ ಕಟ್ಟಡದಲ್ಲಿ ‘ಹೀರಾಕಣಿ’ ಎಂಬ ಆಕೆಯ ಹೆಸರನ್ನು ಬರೆಸಿದ. ಇಂದಿಗೂ ಸಹ ಕೋಟೆ ನೋಡಲು ಹೋಗುವ ಸಾವಿರಾರು ಜನ ಪ್ರವಾಸಿಗರು ‘ಹೀರಕಣಿ ಬುರುಜ’ನ್ನು ನೋಡಬಹುದು.

ತಾಯಿ ಪ್ರೀತಿಗಿಂತ ಮಿಗಿಲಾದ ಪ್ರೀತಿ, ತಾಯಿ ದೇವರಿಗಿಂತ ಮಿಗಿಲಾದ ದೇವರಿಲ್ಲ ಎನ್ನುವುದು ಇದೇ ಕಾರಣಕ್ಕೆ.