ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranya Rao case: ರನ್ಯಾ ರಾವ್‌ ಪ್ರಕರಣ; ಡಿಜಿಪಿ ರಾಮಚಂದ್ರರಾವ್‌ಗೆ ಕಡ್ಡಾಯ ರಜೆ ನೀಡಿದ ಸರ್ಕಾರ

Ranya Rao case: ನಟಿ ರನ್ಯಾ ರಾವ್‌ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾನೂನು ಬಾಹಿರವಾಗಿ ಶಿಷ್ಟಾಚಾರ ಸೌಲಭ್ಯ ಸಿಕ್ಕ ವಿಚಾರ ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸರ್ಕಾರ ರಚಿಸಿತ್ತು. ಇದೀಗ ಡಿಜಿಪಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.

ಡಿಜಿಪಿ ರಾಮಚಂದ್ರರಾವ್‌ಗೆ ಕಡ್ಡಾಯ ರಜೆ ನೀಡಿದ ಸರ್ಕಾರ

Profile Prabhakara R Mar 15, 2025 8:08 PM

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಮಲ ಮಗಳು ರನ್ಯಾ ರಾವ್‌ಗೆ ( Ranya Rao case) ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಕಲ್ಪಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ (DGP Ramachandra Rao) ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಡಿಜಿಪಿ ರಾಮಚಂದ್ರರಾವ್‌ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮೂಲಕ ಸರ್ಕಾರ ನಿರ್ದೇಶನ ನೀಡಿದ್ದು, ಈ ಸೂಚನೆ ಬೆನ್ನಲ್ಲೇ ಮಧ್ಯಾಹ್ನ ಕಚೇರಿಯಿಂದ ಡಿಜಿಪಿ ರಾಮಚಂದ್ರರಾವ್ ತೆರಳಿದ್ದಾರೆ.

ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅವರಿಗೆ ಯಾವುದೇ ಸ್ಥಳ ನಿಯೋಜನೆ ಮಾಡದೇ ರಾಜ್ಯ ಸರ್ಕಾರ ಶನಿವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೆ. ರಾಮಚಂದ್ರರಾವ್ ಅವರು ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಗೃಹ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಹಿರಿಯ ಪೊಲೀಸ್ ಅಧಿಕಾರಿ ಕೆ. ವಿ. ಶರತ್ ಚಂದ್ರ ಅವರನ್ನು ನೇಮಿಸಲಾಗಿದೆ. ಶರತ್ ಚಂದ್ರ ಅವರು ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಡಿಐಜಿಯಾಗಿದ್ದು, ಪೊಲೀಸ್ ಹೌಸಿಂಗ್ ಕಾರ್ಪೊರೇಶನ್ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಗೆ ಕಾನೂನು ಬಾಹಿರವಾಗಿ ಶಿಷ್ಟಾಚಾರ (ಪ್ರೋಟೋಕಾಲ್‌) ಸೌಲಭ್ಯ ಸಿಕ್ಕ ವಿಚಾರ ಬಯಲಾಗಿ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಡಿಜಿಪಿ ರಾಮಚಂದ್ರರಾವ್ ವಿರುದ್ಧ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸರ್ಕಾರ ರಚಿಸಿತ್ತು. ಈ ಮಧ್ಯೆ ಅವರ ಮಲ ಮಗಳ ಮನೆ ಮೇಲೆ ಇ.ಡಿ ಕೂಡ ದಾಳಿ ನಡೆಸಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಜಿಪಿ ಅವರನ್ನು ಸರ್ಕಾರ ರಜೆ ಮೇಲೆ ಕಳುಹಿಸಿದೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿಯನ್ನೂ ಓದಿ | Money doubling scam: ಹಣ ಡಬ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ಕಾರು ಚಾಲಕ ಅರೆಸ್ಟ್

ವಿಚಾರಣೆ ವೇಳೆ ಅಧಿಕಾರಿಗಳಿಂದ ಚಿತ್ರಹಿಂಸೆ: ನಟಿ ರನ್ಯಾ ರಾವ್‌ ದೂರು

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (gold smuggling case) ವಿಚಾರಣೆ ವೇಳೆ ತನಗೆ ಚಿತ್ರಹಿಂಸೆ ನೀಡಲಾಗಿದ್ದು, ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ನಟಿ ರನ್ಯಾ ರಾವ್ (Actress Ranya Rao) ಆರೋಪಿಸಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ (ಎಡಿಜಿ) ರನ್ಯಾ ರಾವ್‌ ದೂರು ನೀಡಿದ್ದು, ಅಷ್ಟಕ್ಕೂ ನನ್ನನ್ನು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಬಂಧಿಸಿಲ್ಲ, ದುಬೈನಿಂದ ಬರುವಾಗ ವಿಮಾನದಲ್ಲೇ ನೇರವಾಗಿ ಬಂಧಿಸಲಾಗಿದೆ ಎಂದು ರನ್ಯಾ ರಾವ್ ಹೇಳಿದ್ದಾರೆ.

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್‌, ಜೈಲು ಮೆಮೋದ ಭಾಗವಾಗಿ ಎಡಿಜಿಗೆ ಸಲ್ಲಿಸಿರುವ ಪತ್ರದಲ್ಲಿ ಅಧಿಕಾರಿಗಳು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ವಿಚಾರಣೆ ವೇಳೆ ಸರಿಯಾಗಿ ಊಟ ಕೊಟ್ಟಿಲ್ಲ, ನಿದ್ದೆ ಮಾಡಲೂ ಬಿಡದೆ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ಖಾಲಿ ಹಾಳೆಗಳ ಮೇಲೆ ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿರುವ ಹೆಚ್ಚು ಪ್ರಭಾವಶಾಲಿ ವ್ಯಕ್ತಿಗಳನ್ನು ರಕ್ಷಿಸಲು ತನ್ನನ್ನು ಸಿಲುಕಿಸಲಾಗಿದೆ. ಅಧಿಕಾರಿಗಳು ನನ್ನ ಮುಖಕ್ಕೆ 10 ರಿಂದ 15 ಬಾರಿ ಹೊಡೆದಿದ್ದಾರೆ. ನನ್ನ ತಂದೆಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಅವರ ಹೆಸರನ್ನು ಬಹಿರಂಗಗೊಳಿಸುವುದಾಗಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ.

ನಾನು ನಿರ್ದೋಷಿಯಾಗಿದ್ದೇನೆ. ನನ್ನ ಮೇಲೆ ಒತ್ತಡ ಹಾಕಿ, ಹಿಂಸೆ ಕೊಟ್ಟಿದ್ದಾರೆ. ಅವರ ಹಿಂಸೆಯಿಂದಾಗಿ ನಾನು ಖಾಲಿ ಹಾಳೆಗಳಿಗೆ ಸಹಿ ಹಾಕಿದ್ದೇನೆ. ನನ್ನನ್ನು ತಪಾಸಣೆ ಮಾಡಿಲ್ಲ. ನನ್ನಿಂದ ಏನೂ ವಶಪಡಿಸಿಕೊಂಡಿಲ್ಲ ಎಂಬುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ವೇಳೆ, ಅಧಿಕಾರಿಗಳು ಹಲ್ಲೆ ನಡೆಸಿದರಾ ಎಂದು ನ್ಯಾಯಾಧೀಶರು ಕೇಳಿದಾಗ, ನಟಿ ಇಲ್ಲ ಎಂದು ಮಾಹಿತಿ ನೀಡಿದ್ದರು. ಆದರೆ, ಇದೀಗ ಅಧಿಕಾರಿಗಳು ಚಿತ್ರಹಿಂಸೆ ನೀಡಿರುವುದಾಗಿ ಆರೋಪಿಸಿದ್ದಾರೆ.