ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B S Pranatartiharan Column: ಏತ ನೀರಾವರಿ ಯೋಜನೆ ಮತ್ತು ಭೈರಪ್ಪನವರು

ಭೈರಪ್ಪನವರು ಜಗತ್ತಿನಾದ್ಯಂತ ಬಹುದೊಡ್ಡ ಓದುಗ ಬಳಗವನ್ನು ಹೊಂದಿರುವ ಮಹಾ ಸಾಹಿತಿ, ಕೀರ್ತಿಶಾಲಿಗಳು. ಒಂದು ಒಳ್ಳೆಯ ಸೃಜನಶೀಲ ಕೃತಿಯಲ್ಲಿ ಇರಬೇಕಾದ ಅನೇಕ ಗುಣ ಗಳು ಅವರ ಕಾದಂಬರಿಗಳಲ್ಲಿ ವಿಶಿಷ್ಟ ರೀತಿ ಮತ್ತು ಪ್ರಮಾಣದಲ್ಲಿ ಬೆರೆತು ಅವರು ಜಗತ್ತಿನ ಅತಿ ವಿಶಿಷ್ಟ ಲೇಖಕರಾಗಿದ್ದಾರೆ.

ಏತ ನೀರಾವರಿ ಯೋಜನೆ ಮತ್ತು ಭೈರಪ್ಪನವರು

ಅಂಕಣಕಾರ ಎಸ್‌.ಬಿ.ಪ್ರಣತಾರ್ತಿಹರನ್

Profile Ashok Nayak Mar 15, 2025 6:58 AM

ವಿಶ್ವಕುಟುಂಬಿ

ಬಿ.ಎಸ್.ಪ್ರಣತಾರ್ತಿಹರಣ್

ವಿಶ್ವಸಾಹಿತಿ ಭೈರಪ್ಪನವರ ಸಂಪರ್ಕದಲ್ಲಿರುವ ಎಲ್ಲರಿಗೂ ಅವರು ಏತನೀರಾವರಿ ಬಗೆಗಿನ ಚಿಂತೆ ಮತ್ತು ಚಿಂತನೆಯಲ್ಲಿ ಮುಳುಗಿರುವುದು ತಿಳಿದಿತ್ತು. ಅದೇನೂ ಒಂದೆರಡು ವಾರ, ತಿಂಗಳಿನ ಮಾತಲ್ಲ, ವರ್ಷಗಳ ಸುದೀರ್ಘ ಕಾಲಾವಧಿ. ತಮ್ಮ ಬರವಣಿಗೆಯ ದಿನಗಳಲ್ಲಿ ಹೇಗೆ ಅವರು ಕಾದಂಬರಿಯ ನಿರ್ಮಿತಿಯ ಪ್ರಕ್ರಿಯೆಯಲ್ಲಿ ಗಾಢವಾಗಿ ಧ್ಯಾನಸ್ಥರಾಗಿರು ತ್ತಿದ್ದರೋ ಅಷ್ಟೇ ಗಾಢ ಧ್ಯಾನಸ್ಥಿತಿಯಲ್ಲಿ ಅವರು ಇದ್ದುದು ತಾವು ಹುಟ್ಟಿದ ಹಳ್ಳಿ ಮತ್ತು ಅದರ ಸುತ್ತಣ ಹಳ್ಳಿಗಳಿಗೆ ಕುಡಿಯುವ ನೀರಿನ ಬವಣೆ ತಪ್ಪಬೇಕು ಎಂಬುದರ ವಿಷಯ ದಲ್ಲಿ. ಭೈರಪ್ಪನವರು ಜಗತ್ತಿನಾದ್ಯಂತ ಬಹುದೊಡ್ಡ ಓದುಗ ಬಳಗವನ್ನು ಹೊಂದಿರುವ ಮಹಾ ಸಾಹಿತಿ, ಕೀರ್ತಿಶಾಲಿಗಳು. ಒಂದು ಒಳ್ಳೆಯ ಸೃಜನಶೀಲ ಕೃತಿಯಲ್ಲಿ ಇರಬೇಕಾದ ಅನೇಕ ಗುಣಗಳು ಅವರ ಕಾದಂಬರಿಗಳಲ್ಲಿ ವಿಶಿಷ್ಟ ರೀತಿ ಮತ್ತು ಪ್ರಮಾಣದಲ್ಲಿ ಬೆರೆತು ಅವರು ಜಗತ್ತಿನ ಅತಿ ವಿಶಿಷ್ಟ ಲೇಖಕರಾಗಿದ್ದಾರೆ.

ಇದನ್ನೂ ಓದಿ: Prakash Shesharaghavachar Column: ಸುನಾಮಿಯ ಹಾಗೆ ಹರಿದು ಬಂದ ಹಿಂದೂ ಹೆದ್ದೆರೆ...

ಅವರ ಕಾದಂಬರಿಗಳನ್ನು 20-25 ಬಾರಿ ಓದಿರುವ ಓದುಗರ ಸಂಖ್ಯೆ ಬಹಳ ದೊಡ್ಡದಿದೆ. ‘ಸಾರ್ಥ’ ಮತ್ತು ‘ಧರ್ಮಶ್ರೀ’ ಕಾದಂಬರಿಗಳನ್ನು ಅನುವಾದಿಸುವ ಸಂದರ್ಭದಲ್ಲಿ ಕೇವಲ ಒಂದು ವರ್ಷದ ಅವಧಿಯಲ್ಲಿ 20 ಬಾರಿ ನಾನೇ ಓದಿದ್ದೆ, ಮತ್ತು ಅಷ್ಟು ಕಿರಿದಾದ ಅವಧಿ ಯಲ್ಲಿ ಅಷ್ಟು ಅಧಿಕ ಬಾರಿ ಓದಿದ್ದರೂ ನನ್ನ ಕುತೂಹಲ ಮತ್ತು ಕಾದಂಬರಿಯ ರಸಶಕ್ತಿ ಕಿಂಚಿತ್ತೂ ಊನವಾಗಿರಲಿಲ್ಲ ಎಂಬುದು ನನ್ನ ಅನುಭವದಲ್ಲೇ ಇದೆ.

ಕೆಲವು ರಸಸ್ಥಾನಗಳಲ್ಲಿ ಪ್ರತಿ ಓದೂ ಕಣ್ಣೀರು ತರಿಸಿದ್ದುಂಟು. ಹೀಗೆ ಮತ್ತೆ ಮತ್ತೆ ಓದಿಸಿ ಕೊಳ್ಳುವ ಮತ್ತು ಪ್ರತಿಬಾರಿಯೂ ನಿತ್ಯನೂತನ ಅನುಭವವನ್ನು ಕೊಡುವ ಗುಣ ಇರುವ ಜಗತ್ತಿನ ಕೆಲವೇ ಕೃತಿಗಳಲ್ಲಿ ಭೈರಪ್ಪನವರ ಕೃತಿಗಳೂ ಸೇರಿವೆ. ಅದೇ ಕಾರಣಕ್ಕೆ ಅವರ ಕೃತಿಗಳು ಸಹಸ್ರಾರು ವರ್ಷಗಳ ನಂತರವೂ ಹೊಸತನದಿಂದ ಉಳಿದುಕೊಳ್ಳಬಲ್ಲ ಶಕ್ತಿ ಯನ್ನು ಹೊಂದಿವೆ.

ಅದು ಸಾಹಿತ್ಯ ಪ್ರಪಂಚ. ಆದರೆ ಇದೀಗ ಭೈರಪ್ಪನವರ ತುಡಿತ ಇದ್ದುದು ಸಮಾಜಸೇವೆಯ ಕ್ಷೇತ್ರದಲ್ಲಿ. ಸಾಹಿತ್ಯ ಪ್ರಪಂಚವೇ ಬೇರೆ, ರಾಜಕೀಯ ಪ್ರಪಂಚವೇ ಬೇರೆ; ಸಾರ್ವಜನಿಕ ಸಂಪರ್ಕ, ಸೇವೆ, ಒಡನಾಟದ ಅನುಭವವೇ ಬೇರೆ. ಭೈರಪ್ಪನವರ ಏತನೀರಾವರಿಯ ಕನಸು ಅಷ್ಟು ಸುಲಭವಾಗಿ ಈಡೇರುವಂಥದಾಗಿರಲಿಲ್ಲ. ಅದು ಸರಕಾರದ ವ್ಯವಸ್ಥೆಯಲ್ಲಿ ಅದರ ಪ್ರಕ್ರಿಯೆಯನ್ನು ಪಾಲಿಸಿಯೇ ನಡೆಯಬೇಕಾಗಿತ್ತು.

ರಾಜಕಾರಣಿಗಳನ್ನು ಕಾಣಲೇಬೇಕಿತ್ತು, ಅವಲಂಬಿಸಲೇಬೇಕಿತ್ತು. ಸಾಹಿತ್ಯದ್ದು ವಲ್ಮೀಕ ದೊಳಗಿನ ಪ್ರಪಂಚ. ಆ ತಪಸ್ಸನ್ನು ಭೈರಪ್ಪನವರು ಚೆನ್ನಾಗಿಯೇ ಮಾಡಿದ್ದರು. ಆದರೆ ಪ್ರಕೃತ ಯೋಜನೆಯದು ಹೊರಪ್ರಪಂಚ. ಅದರಲ್ಲಿ ಆರ್ಥಿಕ ಅಂಶ, ತಾಂತ್ರಿಕ ಅಂಶ, ಆಡಳಿತಾತ್ಮಕ ಅಂಶ, ರಾಜಕೀಯ ವರ್ತುಲಗಳು ಎಲ್ಲವೂ ಇದ್ದೇ ಇರುತ್ತವೆ.

ಭೈರಪ್ಪನವರಿಗೆ ಒಗ್ಗದ ಪ್ರಪಂಚ ಅದು. ಆದರೆ ಕೈಬಿಡುವಂತಿರಲಿಲ್ಲ. ಏಕೆಂದರೆ ಭೈರಪ್ಪ ನವರನ್ನು ಕಾಡಿದ್ದು ಋಣಪ್ರe. ತಮ್ಮ ಬಾಲ್ಯದ ದಿನಗಳಲ್ಲಿ ಅವರು ಕಡು ಬಡತನವನ್ನು ಅನುಭವಿಸಿದ್ದರು, ಊರ ಮಗುವಾಗಿ ಬೆಳೆದಿದ್ದರು. ಆದ್ದರಿಂದಲೇ, ತಮ್ಮ ಕಷ್ಟದ ದಿನ ಗಳಲ್ಲಿ ಐದು ರುಪಾಯಿಯಷ್ಟು ಸಹಾಯ ಮಾಡಿದವರಿಗೆ, ಈಗ ಸುಸ್ಥಿತಿಯಲ್ಲಿರುವ ತಾವು ಹತ್ತು ರುಪಾಯಿಯಷ್ಟಾದರೂ ಹಿಂತಿರುಗಿಸಬೇಕು ಎಂಬುದು ಅವರ ಗಾಢಭಾವವಾಗಿತ್ತು.

ಅದನ್ನು ಎಲ್ಲರ ಬಳಿಯೂ ಮತ್ತೆ ಮತ್ತೆ ತೋಡಿಕೊಳ್ಳುತ್ತಿದ್ದರು. ತಮಗೆ ಸಿಕ್ಕಿದ ಎಲ್ಲ ಅವಕಾಶಗಳನ್ನೂ ಬಳಸಿಕೊಂಡು ಅವರು ಬೇಕಾದಷ್ಟು ದಾನಧರ್ಮ ಮಾಡಿದ್ದಿದೆ. ಅದು ವ್ಯಕ್ತಿಗಳಿಗೂ ಸಂಸ್ಥೆಗಳಿಗೂ ಸಂದಿದೆ. ಸರಕಾರವು ಒಂದು ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಯ ರೂಪದಲ್ಲಿ ಕೊಟ್ಟ ಭಾರಿ ಮೊತ್ತದ ಹಣವನ್ನು ಜನಸೇವೆಯ ನಿರ್ದಿಷ್ಟ ಯೋಜನೆ ಗಾಗಿ ವಿನಿಯೋಗಿಸುವಂತೆ ಸರಕಾರಕ್ಕೇ ಹಿಂದಿರುಗಿಸಿದ್ದೂ ಉಂಟು.

ಆದರೆ ಈಗ ಈಡೇರಬೇಕಾಗಿದ್ದುದು ಸಂತೇಶಿವರ ಮತ್ತು ಸುತ್ತಣ ಹತ್ತು ಹಳ್ಳಿಗಳಿಗೆ ಕುಡಿ ಯುವ ನೀರನ್ನು ಒದಗಿಸುವ ಯೋಜನೆ. ಬಿಡುವ ಪ್ರಶ್ನೆಯೇ ಇರಲಿಲ್ಲ. ಆದರೆ ನಿಧಾನಗತಿ ಯಿಂದಾಗಿ ಅಸಹಾಯಕರಾಗಿ ಭೈರಪ್ಪನವರು ನಿರಂತರವಾಗಿ ಚಡಪಡಿಸುವಂತಾಗಿತ್ತು.

ಕೊನೆಗೂ ಅದು ಈಡೇರಿತು. ಅದು ಈಡೇರಿದ್ದು ‘ವಿಶ್ವವಾಣಿ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರ ನೆರವಿನಿಂದಾಗಿ. ಭಟ್ಟರು ತಮ್ಮ ಆಪ್ತರೂ ಆದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿಸಿದರು. ಸಾಮಾನ್ಯವಾಗಿ ಪ್ರಶಸ್ತಿಗಳಿಗೆ ಭಾಜನರಾದ ಉದ್ದಾಮ ಸಾಹಿತಿಗಳು ಕೂಡ ಡಾಲರ್ ಕಾಲನಿಯಲ್ಲಿ ಒಂದು ನಿವೇಶನ ಕೊಡಿಸುವಂತೆ ಕೇಳಿಕೊಂಡು ಬರುವುದನ್ನು ಕಂಡಿದ್ದ ಬೊಮ್ಮಾಯಿಯವರಿಗೆ, ತಮ್ಮ ಊರಿನ ಹಿತಕ್ಕಾಗಿ ಇಷ್ಟು ಒದ್ದಾಡಿಕೊಳ್ಳುತ್ತಿರುವ ಭೈರಪ್ಪನವರನ್ನು ಕಂಡು ಆಶ್ಚರ್ಯವಾಯಿತು, ಜತೆಗೆ ಭೈರಪ್ಪನವರ ಮಾನವೀಯ ತುಡಿತವನ್ನು ಕಂಡು ಕಣ್ಣೀ ರಾದರು.

ಭೈರಪ್ಪನವರಿಗಾಗಿ ಪೂರ್ಣ ಸಮಯವನ್ನು ಮೀಸಲಿಟ್ಟು ಅವರನ್ನು ಆಲಿಸಿದರು, ಆ ಕೆಲಸ ಆಗುವಂತೆ ಆದೇಶ ಮಾಡಿದರು. 25 ಕೋಟಿ ರುಪಾಯಿಗಳನ್ನು ಮಂಜೂರು ಮಾಡಿ ದರು. ಈ ಯೋಜನೆಯು ಕಾರ್ಯಗತವಾಗಿ ಅದನ್ನು ಉದ್ಘಾಟಿಸುವ ಸಮಯವೂ ಬಂತು (9.3.2025).

ಸಂತೇಶಿವರದಲ್ಲಿ ನಡೆದ ಅದ್ದೂರಿಯಾದ ಸಮಾರಂಭದಲ್ಲಿ ಭಾಗವಹಿಸಿದ ಬೊಮ್ಮಾಯಿ ಯವರು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿಯಬೇಕಾದ್ದು ಅಗತ್ಯ, ಅದಕ್ಕಾಗಿಯೇ ತಾವು ಈ ಜನೋಪಯೋಗಿಯೂ ಮೂಲಭೂತ ಅಗತ್ಯದ್ದೂ ಆದ ಯೋಜನೆಯನ್ನು ಆಗ ಗೊಳಿಸಿದ್ದು ಎಂದು ಮನತುಂಬಿ ನುಡಿದರು. ಮೈಸೂರಿನ ರಾಜವಂಶಸ್ಥರೂ ಸಂಸದರೂ ಆದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಭೈರಪ್ಪನವರ ಮೇಲಿನ ಅಭಿಮಾನ ಕ್ಕಾಗಿಯೂ, ರಾಜಮನೆತನದ ಸಮಾಜಸೇವಾ ಕಾರ್ಯದ ಮುಂದುವರಿಕೆಯಾಗಿ ನೆರವೇರಿ ರುವ ಏತ ನೀರಾವರಿ ಯೋಜನೆಗೆ ಸಾಕ್ಷಿಯಾಗುವುದಕ್ಕಾಗಿಯೂ ಸಮಾರಂಭಕ್ಕೆ ಬಂದು ಹರ್ಷಗೊಂಡುದು ಆದರ್ಶಪ್ರಾಯವಾದುದಾಗಿತ್ತು. ಅದು ಭೈರಪ್ಪನವರ ಜೀವನದ ಪರ್ವದಿನ.

ನಾನು ಕೂಡ ಆ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿಯೇ ಕೆಲವು ಸಮಾನಮನಸ್ಕ ಗೆಳೆಯರೊಡನೆ ಹೋದೆ. ನನ್ನ ಜತೆ ಇದ್ದವರೆಲ್ಲ ಲೇಖಕರು, ಪತ್ರಿಕೋದ್ಯಮಿಗಳು, ಪತ್ರ ಕರ್ತರು, ಅಭಿಮಾನಿಗಳು. ಭೈರಪ್ಪನವರು ಸಹಜವಾಗಿಯೇ ನಾಲ್ಕು ದಿನ ಮುಂಚಿತವಾಗಿ ಹೋಗಿ ತಮ್ಮ ಬಂಧು ಮತ್ತು ಕಾರ್ಯಕ್ರಮದ ಅಧ್ವರ್ಯು ಕೃಷ್ಣಪ್ರಸಾದರ ಮನೆಯಲ್ಲಿ ಉಳಿದುಕೊಂಡಿದ್ದರು.

ಭೈರಪ್ಪನವರು ಈ ಬಾರಿ ತಮ್ಮ ಹಳ್ಳಿಗೆ ಹೋದ ಕೂಡಲೆ ಮಾಡಿದ ಮೊದಲ ಕೆಲಸ ನೀರಿ ನಿಂದ ತುಂಬಿ ಲವಲವಿಕೆಯಿಂದಿದ್ದ ಕೆರೆಯನ್ನು ನೋಡಲು ಹೋದುದು. ದೋಣಿಗರು ಈ ಸುಸಮಯಕ್ಕಾಗಿ ಕಾದಿದ್ದರು, ಭೈರಪ್ಪನವರನ್ನು ಕೂರಿಸಿಕೊಂಡು ಕೆರೆಯಲ್ಲಿ ಸುತ್ತಾಡಿಸಿ ದರು.

ಅದು ಅವರ ಪಾಲಿಗೆ ತೆಪ್ಪೋತ್ಸವದ ಕೈಂಕರ್ಯ. ನಾವು ಹೋದಾಗಲೂ ನಮ್ಮ ತಂಡ ದವರು ಮೊದಲು ನೆನೆದದ್ದು ಭೈರಪ್ಪನವರು ಆ ಕೆರೆಯಲ್ಲಿ ಈಜಾಡುತ್ತಿದ್ದುದನ್ನು, ಅವರ ಈಜಿನ ಸಾಹಸವನ್ನು. ಬೆಸ್ತರು ನಮ್ಮನ್ನೂ ತಮ್ಮ ತೆಪ್ಪಗಳಲ್ಲಿ ಕೂರಿಸಿಕೊಂಡು ಸುತ್ತಾಡಿ ಸಿದರು. ಆದರೆ ಒಬ್ಬರಾಗಲೀ ನಾವು ಕೊಡಲು ಹೋದ ಹಣವನ್ನು ಸ್ವೀಕರಿಸಲಿಲ್ಲ. ಅವರು ಅಲ್ಲಿಂದಲೇ ಭೈರಪ್ಪನವರಿಗೆ ಕೈಮುಗಿದರು, ಅವರು ಊರಿಗೆ ಮಾಡಿರುವ ಉಪಕಾರವನ್ನು ತಮ್ಮ ಮುಗ್ಧ, ಸರಳ, ನೇರ ಭಾಷೆಯಲ್ಲಿ ಮನದಾಳದಿಂದ ತೋಡಿ ಕೊಂಡರು.

ನಮ್ಮನ್ನು ಕೆರೆಯಲ್ಲಿ ಸುತ್ತಾಡಿಸುವ ಅವಕಾಶ ದೊರೆತುದು ದೇವರು ಒದಗಿಸಿಕೊಟ್ಟ ಸದವಕಾಶವೆಂದರು. ಒಣಗುತ್ತಿದ್ದ ತೋಟಗಳು ಕೆರೆ ತುಂಬಿದ್ದರಿಂದಾಗಿ ಉಳಿದುಕೊಂಡವು, ಕೆಳಮುಖವಾಗಿ ಸೊರಗಿಹೋಗಿದ್ದ ಇಳುವರಿ ವೈಭವದ ಸ್ಥಿತಿಯನ್ನು ಮುಟ್ಟಿದೆಯೆಂದರು. ಇಂಗಿಹೋಗಿದ್ದ ಕೊಳವೆ ಬಾವಿಗಳ ಜಲಮಟ್ಟ ಏರಿದೆ ಎಂದರು, ತಮ್ಮ ಊರಿಗೆ ಜೀವಕಳೆ ಬಂತು ಎಂದರು. ಅದು ಅವರಿಗೆ ದೊಡ್ಡಹಬ್ಬವಾಗಿತ್ತು.

ಸಮಾರಂಭದ ಹಿಂದಿನ ರಾತ್ರಿ ಭೈರಪ್ಪನವರು ಸಂತೇಶಿವರದ ಬೀದಿಗಳಲ್ಲಿ ಸುತ್ತಲು ಹೊರಟರು. ಅವರಿಗೆ ಈಗ 94 ವರ್ಷ, ದೇಹವು ದುರ್ಬಲವಾಗಿದೆ, ನೆನಪಿನ ಶಕ್ತಿ ಕುಂದಿದೆ. ಆದರೆ ಅಂದು ಆ ಕ್ಷಣದಲ್ಲಿ ಅವರಿಗೆ ಶಕ್ತಿ ತುಂಬಿಬಂದಿತ್ತು. ಪ್ರತಿ ಮನೆಯ ಮುಂದೆ ನಿಂತು ಮನೆಯವರ ಒಡನೆ ಕುಶಲೋಪರಿ ನಡೆಸಿದರು. ಪೂರ್ವಿಕರನ್ನೂ ಪೂರ್ವದ ದಿನಗಳನ್ನೂ ನೆನೆದರು.

ಊರಿನ ಜನ ವಾಸ್ತವವಾಗಿಯೇ ಭೈರಪ್ಪನವರ ಪ್ರಪಂಚವಾಗಿದ್ದರು. ಅವರ ಪ್ರೀತಿ, ಅಭಿಮಾನ, ಹರ್ಷ, ತೃಪ್ತಿ ನೋಡಲೇಬೇಕಾದ ಜೀವನದ ಒಂದು ಮಧುರ ಕ್ಷಣ. ಏತ ನೀರಾ ವರಿಯ ಆ ಯೋಜನೆಗೆ ಭೈರಪ್ಪನವರ ಹೆಸರನ್ನೇ ಇಡಬೇಕೆಂದು ಹತ್ತು ಹಳ್ಳಿಯ ಸಮಸ್ತರು ಆಸೆಪಟ್ಟುದು ಆಶ್ಚರ್ಯದ್ದಲ್ಲ.

ಜಲ ಎಂದರೆ ಜೀವನ ಎಂಬ ಅರ್ಥವಿದೆಯಂತೆ. ಅದು ಪಂಡಿತರ, ನಿಘಂಟಿನ ದಾಖಲೆ. ಆದರೆ ನಾವು ಕಾಣುತ್ತಿದ್ದುದು ಹಳ್ಳಿಗರ, ರೈತರ ಹೃದಯದ ದಾಖಲೆಯನ್ನು. ಮಾರನೆಯ ದಿನದ ಸಮಾರಂಭದಲ್ಲಿ ಭೈರಪ್ಪನವರ ಕಾದಂಬರಿಯ ಪ್ರದರ್ಶಿಕೆಗಳು 27 ಟ್ರ್ಯಾಕ್ಟರು ಗಳಲ್ಲಿ ಅಲಂಕೃತಗೊಂಡು ವೈಭವದ ಮೆರವಣಿಗೆಯೇ ನಡೆಯಿತು. ಅದು ನಡೆದುದು ಗುಡಿಸಿ, ತೊಳೆದು, ಬಣ್ಣಬಣ್ಣದ ರಂಗವಲ್ಲಿ ಹಾಕಿ, ತಳಿರುತೋರಣಗಳಿಂದ ಸಿಂಗರಿಸಿದ ಬೀದಿಗಳಲ್ಲಿ, ಎಲ್ಲ ಜಾತಿಜನ ವರ್ಗಗಳೂ, ರಾಜಕೀಯ ಪಕ್ಷಗಳೂ, ಹತ್ತಾರು ಹಳ್ಳಿಗಳೂ ಪ್ರೀತಿಯಿಂದ ಸೇರಿದ್ದ ಜಾತ್ರೆಯಲ್ಲಿ.

ಆ ಸಮಾರಂಭದ ಸಂದರ್ಭದಲ್ಲಿ ನಾನು ಒಂದು ಟ್ಯಾಬ್ಲೋ ಇದ್ದ ಟ್ರ್ಯಾಕ್ಟರನ್ನು ಏರಿ 3 ಕಿಲೋಮೀಟರು ಸಾಗಬೇಕಾದ ಸಂದರ್ಭ ಬಂದಿತ್ತು. ಟ್ರ್ಯಾಕ್ಟರಿನಲ್ಲಿ ಟ್ಯಾಬ್ಲೋಗಳನ್ನು ಸಾಗಿಸುತ್ತಿದ್ದ ಚಾಲಕರು ಆ ಹಳ್ಳಿಯ ರೈತರ ಮಕ್ಕಳು, ಪದವೀಧರರು, ದೂರದ ಊರು ಗಳಲ್ಲಿ ದೊಡ್ಡ ಉದ್ಯೋಗಗಳಲ್ಲಿರುವವರು. ವಿಶೇಷವೆಂದರೆ ಅವರಲ್ಲಿ ಹೆಣ್ಣುಮಕ್ಕಳೂ ಸೇರಿದ್ದರು. ಅವರಿಗೆ ಅದು ಸಾರ್ಥಕ ಕ್ಷಣ. ದೇಶವು ತನ್ನ ಪ್ರಗತಿಯಲ್ಲಿ ಭರವಸೆ ಇಟ್ಟು ಕೊಳ್ಳಬಹುದೆಂಬುದಕ್ಕೂ ಅದು ಸಾಕ್ಷಿಯಾಗಿತ್ತು.

(ಲೇಖಕರು ಸಾಹಿತಿ)