ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MIW vs DCW: ಮೂರನೇ ಪ್ರಯತ್ನದಲ್ಲೂ ಡೆಲ್ಲಿ ವಿಫಲ; 2ನೇ ಬಾರಿಗೆ ಕಪ್‌ ಗೆದ್ದ ಮುಂಬೈ

Womens Premier League 2025: ಡೆಲ್ಲಿ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾದ ಅನುಭವಿ ಬೌಲರ್‌ ಮರಿಜಾನ್ನೆ ಕಾಪ್‌ 4 ಓವರ್‌ ಬೌಲಿಂಗ್‌ ದಾಳಿ ನಡೆಸಿ ಕೇವಲ 11 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಸಿನ್ನರ್‌ ಜೆಸ್ ಜೊನಾಸೆನ್ 26ಕ್ಕೆ 2, ಚರಣಿ 43 ಕ್ಕೆ 2 ವಿಕೆಟ್‌ ಉರುಳಿಸಿದರು.

ಮೂರನೇ ಪ್ರಯತ್ನದಲ್ಲೂ ಡೆಲ್ಲಿ ವಿಫಲ; 2ನೇ ಬಾರಿಗೆ ಕಪ್‌ ಗೆದ್ದ ಮುಂಬೈ

Profile Abhilash BC Mar 15, 2025 11:32 PM

ಮುಂಬಯಿ: ಸತತ ಮೂರನೇ ಪ್ರಯತ್ನದಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವ ಇರಾದೆಯೊಂದಿಗೆ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮತ್ತೆ ವಿಫಲವಾಯಿತು. ಮುಂಬೈ ಇಂಡಿಯನ್ಸ್‌ ವಿರುದ್ಧ ಶನಿವಾರ ನಡೆದ ಮೂರನೇ ಆವೃತ್ತಿಯ ಡಬ್ಲ್ಯಪಿಎಲ್‌ ಫೈನಲ್‌ನಲ್ಲಿ 8 ರನ್‌ಗಳ ಅಂತರದ ಸೋಲು ಕಂಡಿತು. ಗೆಲುವು ಸಾಧಿಸಿದ ಮುಂಬೈ ಎರಡನೇ ಬಾರಿಗೆ ತವರಿನಲ್ಲಿ ಟ್ರೋಫಿಗೆ ಮುತ್ತಿಕ್ಕಿತು.

ಇಲ್ಲಿನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ಉತ್ತಮ ಬೌಲಿಂಗ್‌ ದಾಳಿ ನಡೆಸಿ ಮುಂಬೈ ತಂಡವನ್ನು 7 ವಿಕೆಟ್‌ಗೆ 149 ರನ್‌ಗೆ ಕಟ್ಟಿ ಹಾಕಿತು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟಲು ಸಾಧ್ಯವಾಗದೆ 9 ವಿಕೆಟ್‌ಗೆ 141 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಕೈಕೊಟ್ಟ ಲ್ಯಾನಿಂಗ್‌-ಶಫಾಲಿ

ಈ ಹಿಂದಿನ ಎರಡು ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಎಡವಿದಂತೆ ಡೆಲ್ಲಿ ಈ ಬಾರಿಯೂ ಬ್ಯಾಟಿಂಗ್‌ನಲ್ಲಿ ಎಡವಿತು. ನಂಬಿಕಸ್ಥ ಆಟಗಾರ್ತಿಯರಾದ ನಾಯಕಿ ಮೆಗ್‌ ಲ್ಯಾನಿಂಗ್‌ 13 ರನ್‌ಗೆ ಆಟ ಮುಗಿಸಿದರೆ ಅವರ ಬೆನ್ನಲ್ಲೇ ಶಫಾಲಿ ಕೂಡ 4 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಬಳಿಕ ಬಂದ ಜೆಸ್ ಜೊನಾಸೆನ್(13) ವಿಕೆಟ್‌ ಕಳೆದುಕೊಂಡರು. 50 ರನ್‌ ಒಟ್ಟುಗೂಡುವ ಮುನ್ನ 4 ವಿಕೆಟ್‌ ಕಳೆದುಕೊಂಡಿತು. ಬಡಬಡನೇ 4 ಬೌಂಡರಿ ಬಾರಿಸಿದ ಜೆಮೀಮಾ ರಾಡ್ರಿಗಸ್‌ 30ರನ್‌ ಬಾರಿಸಿ ವಿಕೆಟ್‌ ಕೈ ಚೆಲ್ಲಿದರು.

ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲಾ ಅಗ್ಗಕ್ಕೆ ಔಟಾದರೂ 6ನೇ ಕ್ರಮಾಂಕದಲ್ಲಿ ತಂಡದ ಗೆಲುವಿಗೆ ಶಕ್ತಿ ಮೀರಿ ಬ್ಯಾಟಿಂಗ್‌ ನಡೆಸಿದ ಮರಿಜಾನ್ನೆ ಕಾಪ್‌ 26 ಎಸೆತಗಳಿಂದ 40 ರನ್‌ ಬಾರಿಸಿದರು. ಇವರ ವಿಕೆಟ್‌ ಬೀಳುತ್ತಿದ್ದಂತೆ ಡೆಲ್ಲಿ ಸೋಲು ಕೂಡ ಖಚಿತವಾಯಿತು. ಇವರು ಕ್ರೀಸ್‌ನಲ್ಲಿ ಇರುವ ತನಕ ಡೆಲ್ಲಿಗೆ ಗೆಲ್ಲುವ ಅವಕಾಶವಿತ್ತು. ಗೆಲುವಿಗೆ 14 ಎಸೆತಗಳಲ್ಲಿ 27 ರನ್‌ ಬೇಕಿದ್ದಾಗ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. ಕನ್ನಡತಿ ನಿಕಿ ಪ್ರಸಾದ್‌ ಕೊನೆ ತನಕ ಆಡಿ ಅಜೇಯ 25 ರನ್‌ ಬಾರಿಸಿದರು. ಆದರೆ ತಂಡವನ್ನು ದಡ ಸೇರಿಸಲು ಸಾಧ್ಯವಾಗಲ್ಲಿ. ಇವರಿಗೆ ಮತ್ತೊಂದು ತುದಿಯಲ್ಲಿ ಯಾರಾದರು ಸಾಥ್‌ ನೀಡಿದರೆ ತಂಡ ಗೆಲ್ಲಬಹುದಿತ್ತು.

ಮುಂಬೈ ಪರ ಬ್ಯಾಟಿಂಗ್‌ನಲ್ಲಿ ಅಷ್ಟಾಗಿ ಕಮಾಲ್‌ ಮಾಡದ ನ್ಯಾಟ್ ಸ್ಕಿವರ್ ಬ್ರಂಟ್ ಬೌಲಿಂಗ್‌ನಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ 3 ವಿಕೆಟ್‌ ಕಿತ್ತು ಗೆಲುವಿನ ರುವಾರಿ ಎನಿಸಿಕೊಂಡರು. ಉಳಿದಂತೆ ಅಮೇಲಿಯಾ ಕೆರ್‌ 2 ವಿಕೆಟ್‌ ಪಡೆದರು.

ಮೂರನೇ ಪ್ರಯತ್ನದಲ್ಲೂ ವಿಫಲ

ಇದು ಡೆಲ್ಲಿ ಆಡಿದ ಸತತ 3ನೇ ಫೈನಲ್‌. ಇದೇ ಬ್ರೆಬೋರ್ನ್ ಸ್ಟೇಡಿಯಂನಲ್ಲಿ 2023ರ ಫೈನಲ್‌ನಲ್ಲಿ ಡೆಲ್ಲಿ ತಂಡ ಮುಂಬೈ 7 ವಿಕೆಟ್‌ಗಳಿಂದ ಸೋತು ರನ್ನರ್‌ ಅಪ್‌ ಆಗಿತ್ತು. ಕಳೆದ ವರ್ಷ ತವರಿನಂಗಳದಲ್ಲಿ ನಡೆದ ಫೈನಲ್‌ನಲ್ಲೂ ಡೆಲ್ಲಿಗೆ ಗೆಲ್ಲಲಾಗಲಿಲ್ಲ. ಆರ್‌ಸಿಬಿ ವಿರುದ್ಧ 8 ವಿಕೆಟ್‌ ಅಂತರದ ಸೋಲು ಕಂಡಿತ್ತು. ಮೂರನೇ ಪ್ರಯತ್ನದಲ್ಲಿಯೂ ಡೆಲ್ಲಿ ವಿಫಲವಾಗಿ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.



ಕಾಡಿದ ಮರಿಜಾನ್ನೆ ಕಾಪ್‌

ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈಗೆ ವೇಗಿ ಮರಿಜಾನ್ನೆ ಕಾಪ್‌ ಆರಂಭದಲ್ಲೇ ಆಘಾತವಿಕ್ಕಿದರು. ಅಪಾಯಕಾರಿ ಹೀಲಿ ಮ್ಯಾಥ್ಯೂಸ್‌(3) ಮತ್ತು ಯಾಸ್ತಿಕಾ ಭಾಟಿಯಾ(8) ಅವರನ್ನು ಪೆವಿಲಿಯನ್‌ಗೆ ಅಟ್ಟಿ ಡೆಲ್ಲಿಗೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಮುಂಬೈ ತಂಡ 14 ರನ್‌ಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮುಂಬೈಗೆ ನಾಯಕಿ ಕೌರ್‌ ಆಸರೆ

ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಮುಂಬೈಗೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಆಸರೆಯಾದರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಡೆಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಹಿಡಿತ ಸಾಧಿಸಿದ ಡೆಲ್ಲಿ ಬೌಲರ್‌ಗಳು ಕೌರ್‌ ಆಟದ ಮುಂದೆ ಲಯ ಕಳೆದುಕೊಂಡರು. ಕೌರ್‌ಗೆ ಮತ್ತೊಂದು ತುದಿಯಲ್ಲಿ ನ್ಯಾಟ್ ಸ್ಕಿವರ್ ಬ್ರಂಟ್ ಸಾಥ್‌ ನೀಡಿದರು. ಆದರೆ ಅವರ ಆಟ ನಿಧಾನಗತಿಯಿಂದ ಸಾಗಿತ್ತು. ಈ ಹಿಂದಿನ ಪಂದ್ಯಗಳಲ್ಲಿ ಆಕ್ರಮಣಕಾರಿಯಾಗು ಆಡುತ್ತಿದ್ದ ಬ್ರಂಟ್ ಈ ಪಂದ್ಯದಲ್ಲಿ 28 ಎಸೆತಗಳಿಂದ 30 ರನ್‌ ಮಾತ್ರ ಗಳಿಸಿದರು. ಬಾರಿಸಿದ್ದು ಕೇವಲ 4 ಬೌಂಡರಿ ಮಾತ್ರ. 30 ರನ್‌ ಬಾರಿಸುವ ಮೂಲಕ ಡಬ್ಲ್ಯುಪಿಎಲ್‌ನಲ್ಲಿ ಒಂದು ಸಾವಿರ ರನ್‌ ಪೂರೈಸಿ ಈ ಸಾಧನೆಗೈದ ಮೊದಲ ಆಟಗಾರ್ತಿ ಎನಿಸಿಕೊಂಡರು. ಮೂರನೇ ವಿಕೆಟ್‌ಗೆ ನ್ಯಾಟ್ ಸ್ಕಿವರ್ ಮತ್ತು ಹರ್ಮನ್‌ ಪ್ರೀತ್‌ ಕೌರ್‌ 89 ರನ್‌ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು.

ಇದನ್ನೂ ಓದಿ IPL 2025: ಪಾಂಡ್ಯಗೆ ನಿಷೇಧ ಶಿಕ್ಷೆ; ಮೊದಲ ಪಂದ್ಯದಲ್ಲಿ ಮುಂಬೈಗೆ ನಾಯಕ ಯಾರು?

ನ್ಯಾಟ್ ಸ್ಕಿವರ್ ಬ್ರಂಟ್‌ ವಿಕೆಟ್‌ ಪತನದ ಬಳಿಕ ಮುಂಬೈ ಮತ್ತೆ ನಾಟಕೀಯ ಕುಸಿತ ಕಂಡಿತು. ಒಂದೆಡೆ ಸಹ ಆಟಗಾರರ ವಿಕೆಟ್‌ ಬೀಳುತ್ತಿದ್ದರೂ ಕೌರ್‌ ಮುನ್ನುಗ್ಗಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿ ತಂಡದ ಮೊತ್ತವನ್ನು ಹಿಗ್ಗಿಸುತ್ತಿದ್ದರು. ಆದರೆ 66 ರನ್‌ ಗಳಿಸಿದ ವೇಳೆ ಇವರ ವಿಕೆಟ್‌ ಕೂಡ ಪತನಗೊಂಡಿತು. ಅವರ ಈ ಅಮೂಲ್ಯ ಬ್ಯಾಟಿಂಗ್‌ ಇನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಸಿಡಿಯಿತು. ಅಂತಿಮ ಹಂತದಲ್ಲಿ ಅಮನ್‌ಜೋತ್ ಕೌರ್ ಅಜೇಯ 14 ರನ್‌ ಬಾರಿಸಿ ತಂಡದ ಮೊತ್ತವನ್ನು 150 ಗಡಿ ಸಮೀಪಕ್ಕೆ ತಂದು ನಿಲ್ಲಿಸಿದರು.

ಡೆಲ್ಲಿ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾದ ಅನುಭವಿ ಬೌಲರ್‌ ಮರಿಜಾನ್ನೆ ಕಾಪ್‌ 4 ಓವರ್‌ ಬೌಲಿಂಗ್‌ ದಾಳಿ ನಡೆಸಿ ಕೇವಲ 11 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಕಿತ್ತರು. ಸಿನ್ನರ್‌ ಜೆಸ್ ಜೊನಾಸೆನ್ 26ಕ್ಕೆ 2, ಚರಣಿ 43 ಕ್ಕೆ 2 ವಿಕೆಟ್‌ ಉರುಳಿಸಿದರು.