Pralhad Joshi: ʼ₹ʼ ಸಿಂಬಲ್ ಡಿಸೈನರ್ ತಮಿಳುನಾಡಿನವರೇ ಎಂಬ ಅಭಿಮಾನವೂ ಇಲ್ಲದಾಯಿತೇ?: ಜೋಶಿ ಪ್ರಶ್ನೆ
Pralhad Joshi: ₹ ಚಿಹ್ನೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಿದ್ದಲ್ಲವೇ? ಪಿ. ಚಿದಂಬರಂ ವಿತ್ತ ಸಚಿವರಾಗಿದ್ದರು. ಎ.ರಾಜಾ, ದಯಾನಿಧಿ ಮಾರನ್ ಸೇರಿದಂತೆ ಅನೇಕರು ಮಂತ್ರಿಗಳಾಗಿದ್ದರು. ಅದೂ ಈ ಚಿಹ್ನೆ ಡಿಸೈನ್ ಮಾಡಿದವರೂ ತಮಿಳುನಾಡಿನವರೇ. ಈ ಅಭಿಮಾನವೂ ಇಲ್ಲದಾಯಿತೇ ಇವರಿಗೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಉಡುಪಿ: ಯುಪಿಎ ಸರ್ಕಾರ ಇದ್ದಾಗಲೇ '₹' ಸಿಂಬಲ್ ಅಂಗೀಕರಿಸಿದ್ದು, ತಮಿಳುನಾಡು ಡಿಎಂಕೆ ಸ್ಟಾಲಿನ್ ಸರ್ಕಾರ ಈಗೇಕೆ ಅದನ್ನು ನಿರಾಕರಿಸುವ ತೀರ್ಮಾನ ತೆಗೆದುಕೊಂಡಿದೆ? ಇದಕ್ಕೆ ಕಾಂಗ್ರೆಸ್ ಮತ್ತದರ ಅಂಗಪಕ್ಷಗಳು ಉತ್ತರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಗ್ರಹಿಸಿದರು. ಉಡುಪಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಇಂಡಿ ಘಟಬಂಧನ್ ಇಂಥ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿವೆ ಎಂದು ಅವರು ವಾಗ್ದಾಳಿ ನಡೆಸಿದರು. ₹ ಚಿಹ್ನೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಮಾಡಿದ್ದಲ್ಲವೇ? ಪಿ. ಚಿದಂಬರಂ ವಿತ್ತ ಸಚಿವರಾಗಿದ್ದರು. ಎ.ರಾಜಾ, ದಯಾನಿಧಿ ಮಾರನ್ ಸೇರಿದಂತೆ ಅನೇಕರು ಮಂತ್ರಿಗಳಾಗಿದ್ದರು. ಅದೂ ಈ ಚಿಹ್ನೆ ಡಿಸೈನ್ ಮಾಡಿದವರೂ ತಮಿಳುನಾಡಿನವರೇ. ಈ ಅಭಿಮಾನವೂ ಇಲ್ಲದಾಯಿತೇ ಇವರಿಗೆ? ಎಂದು ಜೋಶಿ ಪ್ರಶ್ನಿಸಿದರು.
₹ ಚಿಹ್ನೆ ಮೋದಿಯದ್ದಾ ಅಥವಾ ಬಿಜೆಪಿಯದ್ದಾ?
₹ ಚಿಹ್ನೆ ಏನು ಪ್ರಧಾನಿ ಮೋದಿ ಅವರದ್ದೇ? ಅಥವಾ ಬಿಜೆಪಿಯದ್ದೇ? ಎಂದು ಪ್ರಶ್ನಿಸಿದ ಸಚಿವರು, ತಮಿಳುನಾಡಿನಲ್ಲಿ ಕಾಂಗ್ರೆಸ್ ಮಿತ್ರ ಪಕ್ಷ ಡಿಎಂಕೆ ಸಿಎಂ ಸ್ಟಾಲಿನ್ ₹ ಸಿಂಬಲ್ ನಿರಾಕರಿಸಿರುವುದು ದುರ್ದೈವವೇ ಸರಿ ಎಂದು ಟೀಕಿಸಿದರು.
₹ ಚಿಹ್ನೆ ಬದಲು ರಾಷ್ಟ್ರೀಯ ಹಿತಾಸಕ್ತಿಯ ವಿಚಾರ. ಯುಪಿಎ ಸರ್ಕಾರ ಇದನ್ನು ಅಂಗೀಕರಿಸಿದಾಗ ಡಿಎಂಕೆ ವಿರೋಧಿಸಲಿಲ್ಲ. ಬಿಜೆಪಿಯೂ ವಿರೋಧಿಸಿಲ್ಲ. ಆದರೆ, ಕಾಂಗ್ರೆಸ್ ಮಿತ್ರಪಕ್ಷವಾಗಿ ಡಿಎಂಕೆಯ ಈ ನಡೆ ಈಗೇಕೆ? ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಹಿಂದಿ ಹೇರಿಕೆ ಮಾಡಿಲ್ಲ
ತಮ್ಮ ಕ್ಷುಲ್ಲಕ ರಾಜಕಾರಣಕ್ಕೆ ಹಾಗೂ ಡಿಎಂಕೆ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಹೀಗೆ ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.
ನೆಹರು ಅವರ ಕಾಲದಿಂದಲೂ ತ್ರಿಭಾಷಾ ಸೂತ್ರವಿದೆ. ಹೊಸ ಎನ್ಇಪಿಯಲ್ಲಿ ತ್ರಿಭಾಷಾ ಸೂತ್ರ ಮಾಡಲು ಹೇಳಿದ್ದೇವೆಯೇ ಹೊರತು ಅಲ್ಲಿ ಹಿಂದಿ ಭಾಷೆ ಇರಬೇಕು ಎಂದು ಹೇಳಿದ್ದೇವೆಯೇ? ಎಂದು ಪ್ರಶ್ನಿಸಿದ ಸಚಿವ ಜೋಶಿ, ಹೀಗೆ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಬೇಡಿ ಎಂದರು.
ಪಾಕಿಸ್ತಾನದಲ್ಲಿ ಕುಸಿದ ಆಡಳಿತ ವ್ಯವಸ್ಥೆ
ಪಾಕಿಸ್ತಾನದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ರೈಲು ಹೈಜಾಕ್ ಘಟನೆಯಲ್ಲಿ ಭಾರತದ ಪ್ರಚೋದನೆ ಎಂದು ದೂಷಿಸುವುದು ಅತ್ಯಂತ ಬಾಲಿಶತನ ಎಂದು ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದರು.
ಪಾಕ್ ಆರೋಪಕ್ಕೆ ವಿದೇಶಾಂಗ ಸಚಿವಾಲಯ ಈಗಾಗಲೇ ಸುದೀರ್ಘ ಉತ್ತರ ಕೊಟ್ಟಿದೆ. ಪಾಕಿಸ್ತಾನದಲ್ಲಿ ವಿದೇಶಿಯರು, ರಾಜತಾಂತ್ರಿಕರು ಹೋಗಲು ಭಯಪಡುವ ಪರಿಸ್ಥಿತಿ ಇದೆ. ಹಾಗಿರುವಾಗ ಭಾರತವನ್ನು ದೂಷಿಸುವುದು ಸರಿಯಲ್ಲ ಎಂದು ಖಂಡಿಸಿದ ಜೋಶಿ, ಜಗತ್ತಿನಲ್ಲಿ ಎಲ್ಲೂ ಅಶಾಂತಿ ಇರಬಾರದು ಎಂಬ ಭಾರತದ ಧ್ಯೇಯವನ್ನು ಪಾಕ್ ಅರಿಯಬೇಕಿದೆ ಎಂದರು.
ಈ ಸುದ್ದಿಯನ್ನೂ ಓದಿ | Karnataka Weather: ಮಾ.18, 19ರಂದು ರಾಜ್ಯದ ಉತ್ತರ ಒಳನಾಡಿನಲ್ಲಿ ಬಿಸಿ ಗಾಳಿ ಎಚ್ಚರಿಕೆ
ಭಿನ್ನಮತ ಸರಿಪಡಿಸೋ ಪ್ರಯತ್ನ ನಡೆದಿದೆ
ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಶಮನ ಆಗದೇ? ಎಂಬ ಪ್ರಶ್ನೆಗೆ ಉತ್ತರಿಸಿ, ಎಲ್ಲ ವಿಚಾರ, ವಿಷಯವನ್ನು ಹೈಕಮಾಂಡ್ ಗಮನಿಸಿದೆ. ಸರಿ ಮಾಡುವ ಪ್ರಯತ್ನ ಒಂದು ವಾರದಿಂದ ಮುಂದುವರಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.