Virat Kohli: ನಿವೃತ್ತಿ ಸದ್ಯಕ್ಕಿಲ್ಲ, ಆದರೆ ಒಲಿಂಪಿಕ್ಸ್ ಖಚಿತತೆ ಇಲ್ಲ; ಕೊಹ್ಲಿ
ಆತ್ಮತೃಪ್ತಿಗಾಗಿ ಕ್ರಿಕೆಟ್ ಆಡುತ್ತೇನೆ. ಯಾವುದೇ ದಾಖಲೆಗಳನ್ನು ನಿರ್ಮಿಸುವ ಆಸೆ ಇಲ್ಲ. ನನ್ನೊಳಗೆ ಸ್ಪರ್ಧಾತ್ಮಕ ಪ್ರವೃತ್ತಿ ಇನ್ನೂ ಇದೆ. ಅದು ಜೀವಂತ ಇರುವವರೆಗೂ ನಾನು ಕ್ರಿಕೆಟ್ ಆಟವಾಡುತ್ತೇನೆ ಎಂದು ಆರ್‌ಸಿಬಿ ಇನ್ನೊವೇಷನ್ ಲ್ಯಾಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಹ್ಲಿ ಹೇಳಿದರು.


ಬೆಂಗಳೂರು: ನಾನು ಆಟವನ್ನು ಆನಂದಿಸುತ್ತಿದ್ದು, ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಆದರೆ 2028ರ ಒಲಿಂಪಿಕ್ ಕ್ರಿಕೆಟ್ ಆಡುವ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಆರ್‌ಸಿಬಿ ಇನ್ನೊವೇಷನ್ ಲ್ಯಾಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಹ್ಲಿ ಈ ಮಾತುಗಳನ್ನಾಡಿದರು. 'ನೀವು ಹತಾಶರಾಗಬೇಡಿ. ನಾನು ಯಾವುದೇ ದೊಡ್ಡ ಘೋಷಣೆ ಮಾಡುತ್ತಿಲ್ಲ. ಈ ಕ್ಷಣಕ್ಕೆ ಎಲ್ಲವೂ ಸರಿಯಾಗಿದೆ' ಎಂದು ಹೇಳುವ ಮೂಲಕ ಕೊಹ್ಲಿ ಇನ್ನೂ ಕೆಲವು ವರ್ಷ ಆಡುವುದನ್ನು ಖಚಿತಪಡಿಸಿದರು. ಜತೆಗೆ ನಿವೃತ್ತಿಯ ಚರ್ಚೆಗಳಿಗೆ ತೆರೆ ಎಳೆದರು.
'ನಾನು ಆತ್ಮತೃಪ್ತಿಗಾಗಿ ಕ್ರಿಕೆಟ್ ಆಡುತ್ತೇನೆ. ಯಾವುದೇ ದಾಖಲೆಗಳನ್ನು ನಿರ್ಮಿಸುವ ಆಸೆ ಇಲ್ಲ. ನನ್ನೊಳಗೆ ಸ್ಪರ್ಧಾತ್ಮಕ ಪ್ರವೃತ್ತಿ ಇನ್ನೂ ಇದೆ. ಅದು ಜೀವಂತ ಇರುವವರೆಗೂ ನಾನು ಕ್ರಿಕೆಟ್ ಆಟವಾಡುತ್ತೇನೆ' ಎಂದು ಕೊಹ್ಲಿ ಹೇಳಿದ್ದಾರೆ.
ಒಲಿಂಪಿಕ್ಸ್ ಇನ್ನೂ ದೂರ ಇದೆ
ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾದಲ್ಲಿ ವಿರಾಟ್ ಕೊಹ್ಲಿಯ ಪಾತ್ರ ಕೂಡ ಇದೆ. ಇದೇ ನಿಟ್ಟಿನಲ್ಲಿ ಅವರಿಗೆ ನೀವು 2028ರ ಒಲಿಂಪಿಕ್ಸ್ ಆಡುತ್ತೀರಾ ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಕೊಹ್ಲಿ, ಇದು ತುಂಬಾ ದೂರದ ಪ್ರಯಾಣ. 20ರ ವಯಸ್ಸಿನಲ್ಲಿ ನೀವು ಮಾಡಬಹುದಾದಷ್ಟು ಕೆಲಸಗಳನ್ನು ನಿಮ್ಮ 30ರ ವಯಸ್ಸಿನಲ್ಲಿ ಮಾಡಲು ಸಾಧ್ಯವಿಲ್ಲ. ನಾನು ವೃತ್ತಿ ಜೀವನದ ವಿಭಿನ್ನ ಹಂತದಲ್ಲಿ ಇದ್ದೇನೆ ಎಂದು ಹೇಳಿದರು. ಕೊಹ್ಲಿಯ ಈ ಮಾತು ಕೇಳುವಾಗ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ತನಕ ಆಡಿ ನಿವೃತ್ತಿ ಹೇಳುವ ಯೋಜನೆ ಹಾಕಿಕೊಂಡಂತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ತಕ್ಷಣ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.
Virat Kohli is talking about the Indian Cricket Team in the Olympics.
— Virat Kohli Fan Club (@Trend_VKohli) March 15, 2025
- Virat Kohli said, "I will not come back from retirement to play the Olympics. pic.twitter.com/OM9Nlb2Kj5
ಇತ್ತೀಚೆಗೆ ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. 5 ಪಂದ್ಯಗಳಿಂದ 54.50 ಸರಾಸರಿಯಲ್ಲಿ 218 ರನ್ ಗಳಿಸಿದ್ದರು. ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಅಜೇಯ ಶತಕ ಬಾರಿಸಿ ಸಂಭ್ರಮಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಕಿಂಗ್ ಕೊಹ್ಲಿ ಕಳೆದ ಆವೃತ್ತಿಯಲ್ಲಿ 15 ಇನಿಂಗ್ಸ್ ಆಡಿ 741ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಈ ಬಾರಿಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.