Jagadeesh Maane Column: ಅದು ಭವ್ಯ ಕಾಲವಾಗಿತ್ತು...
ಗ್ರಾಮದ ಬಸ್ ನಿಲ್ದಾಣದ ಬಳಿ ಶೆಟ್ಟರ ಕಿರಾಣಿ ಅಂಗಡಿಯಿತ್ತು. ಇಡೀ ಗ್ರಾಮಕ್ಕೆ ಇದೊಂದೇ ಅಂಗಡಿ, ಹಾಗಾಗಿ ಗ್ರಾಮಸ್ಥರೆಲ್ಲರೂ ದಿನಸಿಯನ್ನು ಅಲ್ಲೇ ಖರೀದಿಸುತ್ತಿದ್ದರು
Source : Vishwavani Daily News Paper
ಗತವೈಭವ
ಜಗದೀಶ್ ಮಾನೆ
ಸುಮಾರು 25-30 ವರ್ಷಗಳ ಹಿಂದೆ, ನಾವೆಲ್ಲ ಚಿಕ್ಕವರಿದ್ದಾಗ, ರಜಾದಿನಗಳಲ್ಲಿ ಅಮ್ಮನ ಜತೆ ಅಜ್ಜನ ಊರಿಗೆ ಹೋಗುತ್ತಿದ್ದೆವು. ನಮ್ಮಂತೆ ಚಿಕ್ಕಮ್ಮ-ದೊಡ್ಡಮ್ಮನ ಮಕ್ಕಳೂ ಅಲ್ಲಿಗೆ ಬರುತ್ತಿದ್ದರು. ಎಲ್ಲರೂ ಸೇರಿ ಅಲ್ಲಿ ಸಂತೋಷದ ಕ್ಷಣಗಳನ್ನು ಆನಂದಿಸುತ್ತಿದ್ದೆವು. ಅಜ್ಜ ಯಾವುದಕ್ಕೂ ಕಮ್ಮಿ ಮಾಡುತ್ತಿರಲಿಲ್ಲ, ವಾರದ ಸಂತೆಗೆ ಹೋಗಿ ನಮಗಾಗಿ ಸಿಹಿತಿನಿಸು ಗಳನ್ನು ತಂದುಕೊಡುತ್ತಿದ್ದರು.
ಗ್ರಾಮದ ಬಸ್ ನಿಲ್ದಾಣದ ಬಳಿ ಶೆಟ್ಟರ ಕಿರಾಣಿ ಅಂಗಡಿಯಿತ್ತು. ಇಡೀ ಗ್ರಾಮಕ್ಕೆ ಇದೊಂದೇ ಅಂಗಡಿ, ಹಾಗಾಗಿ ಗ್ರಾಮಸ್ಥರೆಲ್ಲರೂ ದಿನಸಿಯನ್ನು ಅಲ್ಲೇ ಖರೀದಿಸುತ್ತಿದ್ದರು. ಹೆಗಲ ಮೇಲಿನ ವಸದಲ್ಲಿ ದಿನಸಿ ಸಾಮಾನುಗಳನ್ನು ಕಟ್ಟಿ ತರುತ್ತಿದ್ದ ಅಜ್ಜನ ಬಳಿ ಹೋಗಿ ಅದನ್ನು ತೆಗೆದುಕೊಳ್ಳುತ್ತಿದ್ದೆವು. ಅಜ್ಜನೂ ಬಿಡುವಿದ್ದಾಗೆಲ್ಲ ಶೆಟ್ಟರ ಅಂಗಡಿಯ ಬಳಿ ಕುಳಿತು ಅವರೊಂದಿಗೆ ಹರಟೆ ಹೊಡೆಯುತ್ತಿದ್ದರು, ಪರಸ್ಪರರ ಕಷ್ಟ-ಸುಖದ ಹಂಚಿಕೆ ಯಾಗುತ್ತಿತ್ತು.
ಅಜ್ಜ ದಿನಸಿ ಸಾಮಾನುಗಳನ್ನು ತಿಂಗಳಾನುಗಟ್ಟಲೆ ಉದ್ರಿ ತರುತ್ತಿದ್ದರು, ಅಲ್ಲದೆ ಕಷ್ಟದ ಸಂದರ್ಭದಲ್ಲೂ ಶೆಟ್ಟರಿಂದ ಸಾವಿರಾರು ರುಪಾಯಿಗಳ ಸಾಲ ಪಡೆಯುತ್ತಿದ್ದರು. ಬೆಳೆ ಕಟಾವಿನ ನಂತರ ಅದರಿಂದ ಬಂದ ಹಣದಿಂದ ಶೆಟ್ಟರ ಸಾಲ ತೀರಿಸುತ್ತಿದ್ದರು. ಏನಾ ದರೂ ದಿನಸಿ ಅಗತ್ಯವಿದ್ದರೆ ನಾವೇ ಅಂಗಡಿಗೆ ಹೋಗಿ ಅಜ್ಜನ ಹೆಸರು ಹೇಳಿ ತರುತ್ತಿದ್ದೆವು. ಆಗೆಲ್ಲಾ ಶೆಟ್ಟರು, “ಏ ತಮ್ಮಾ, ನೀನು ಶಿವರಾಯಪ್ಪನ ಮೊಮ್ಮಗ, ರತ್ನಕ್ಕನ ಮಗ ಮುಧೋಳ ಹುಡುಗ ಅಲ್ವೇನಪ್ಪಾ?" ಎನ್ನುತ್ತಾ ನಗುನಗುತ್ತಲೇ ನಮ್ಮನ್ನು ವಿಚಾರಿಸಿ ಕೊಳ್ಳುತ್ತಿದ್ದರು.
ಹಾಗೆ ಕೊಟ್ಟ ದಿನಸಿಯ ವಿವರವನ್ನು ಖಾತೆ ಪುಸ್ತಕದಲ್ಲೂ ಜಮಾ ಮಾಡುತ್ತಿರಲಿಲ್ಲ, ಎಲ್ಲ ವ್ಯವಹಾರಗಳೂ ಬಾಯಿ ಲೆಕ್ಕದಲ್ಲೇ ನಡೆಯುತ್ತಿದ್ದವು. ಶೆಟ್ಟರ ಅಂಗಡಿಯೊಂದಿಗಿನ ಆ ನಂಟು ಕೇವಲ ವ್ಯಾವಹಾರಿಕವಾಗಿರಲಿಲ್ಲ, ಮನುಷ್ಯತ್ವವೇ ಅದಕ್ಕೆ ತಳಹದಿಯಾಗಿತ್ತು. ಕುಟುಂಬದ ಸಮಸ್ಯೆ ಮತ್ತು ಅಗತ್ಯಗಳನ್ನು ಅರಿತು ಅವಕ್ಕೆ ಸ್ಪಂದಿಸುತ್ತಿದ್ದರು ಶೆಟ್ಟರು.
ಅಪರಿಚಿತರು ಗ್ರಾಮದ ಯಾವುದೋ ಮೂಲೆಯಲ್ಲಿ ನಿಂತು ಯಾರದ್ದೋ ಮನೆಯ ವಿಳಾಸ ಕೇಳಿದರೆ ಬರೀ ಹೇಳುವುದಷ್ಟೇ ಅಲ್ಲದೆ ಅವರನ್ನು ಆ ಮನೆಗೇ ಕರೆದೊಯ್ಯುತ್ತಿದ್ದ ಶೆಟ್ಟರಿಗೆ ಗ್ರಾಮದ ಪ್ರತಿಯೊಂದು ಮನೆ, ಅದರ ಸದಸ್ಯರೆಲ್ಲರ ಪರಿಚಯವಿರುತ್ತಿತ್ತು. ಕಾರಣ ಇಡೀ ಗ್ರಾಮದ ಜನರು ಒಂದೇ ಕುಟುಂಬದಂತೆ ಬದುಕುತ್ತಿದ್ದ ಕಾಲವದು. ಯಾರದೇ ಮನೆಯಲ್ಲಿ ಶುಭ ಸಮಾರಂಭ ನಡೆದರೂ, ದುಃಖದ ಸಂದರ್ಭ ಒದಗಿದರೂ ಗ್ರಾಮದವರೆಲ್ಲರೂ ಸೇರಿ ತಮ್ಮ ಕೈಲಾದ ಸಹಾಯವನ್ನು ಪ್ರೀತಿಪೂರ್ವಕವಾಗಿ ಮಾಡುತ್ತಿ
ದ್ದರು, ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಮನೆಯಲ್ಲಿ ಬೆಲ್ಲ, ಸಕ್ಕರೆ, ಕಾಫಿ ಪುಡಿ ಒಂದೊಮ್ಮೆ ಕಡಿಮೆ ಬಿದ್ದಾಗೆಲ್ಲ ಪಕ್ಕದ ಮನೆಯವರಿಂದ ಪಡೆದು ನಂತರ ಹಿಂದಿರು ಗಿಸುತ್ತಿದ್ದುದು ವಾಡಿಕೆಯಾಗಿತ್ತು, ಭಾವನಾತ್ಮಕ ಸಂಬಂಧ ಗಟ್ಟಿಯಾಗಿತ್ತು. ಆದರೆ, ಆಧುನಿ ಕತೆ, ನಗರೀಕರಣದ ಪ್ರಭಾವಕ್ಕೊಳಗಾಗಿ ಗ್ರಾಮೀಣರ ಜೀವನಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ, ಆಗುತ್ತಿವೆ.
ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಕಾಲಕಾಲಕ್ಕೆ ಮಳೆಯಾಗದೆ ಸರಿಯಾಗಿ ಬೆಳೆ ಬರುತ್ತಿಲ್ಲ. ಸಾಲದ ಬಾಧೆಯಿಂದ ಬೇಸತ್ತ ರೈತರ ಮಕ್ಕಳು ಉದ್ಯೋಗ ಅರಸಿಕೊಂಡು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಮತ್ತೊಂದೆಡೆ, ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಸಾಂಪ್ರದಾಯಿಕ ವ್ಯವಹಾರ ಪದ್ಧತಿಗಳು ಕ್ಷೀಣಿಸುತ್ತಿವೆ, ಹಳ್ಳಿಗಳಲ್ಲೂ ಆಧುನಿಕ ಮಳಿಗೆ ಗಳು ತಲೆಯೆತ್ತುತ್ತಿವೆ. ಆಧುನಿಕ ತಂತ್ರಜ್ಞಾನದ ಗ್ಯಾಜೆಟ್ಗಳ ಅರಿವು ಅಷ್ಟಾಗಿ ಇಲ್ಲದ ಅಂಗಡಿ ಶೆಟ್ಟರಂಥವರು ತಮ್ಮ ವ್ಯಾಪಾರವನ್ನು ಕಾಲದ ಓಟದೊಂದಿಗೆ ಸಮನ್ವಯ ಗೊಳಿಸಲು ಏದುಸಿರು ಬಿಡುವಂತಾಗಿದೆ.
ಮಾಲ್, ಸೂಪರ್ ಮಾರ್ಕೆಟ್ನಂಥ ದೊಡ್ಡ ಮಳಿಗೆಗಳು ತಮ್ಮ ಜಾಹೀರಾತು ಮತ್ತು ಪ್ರಚಾರ ಚಟುವಟಿಕೆಗಳಿಂದಾಗಿ ವ್ಯಾಪಾರದಲ್ಲಿ ಮುನ್ನಡೆ ಸಾಧಿಸುತ್ತಿವೆ. ಇವುಗಳ ಅಬ್ಬರ ದಲ್ಲಿ ಶೆಟ್ಟರ ಅಂಗಡಿಗಳಂಥ ನೆಲೆಗಳು ಮೂಲೆಗುಂಪಾಗುತ್ತಿವೆ. ಇಂಥ ಪುಟ್ಟ ಅಂಗಡಿ ಗಳಿಗೆ ಸ್ಥಳೀಯ ಗ್ರಾಹಕರೂ ಕಡಿಮೆಯಾಗುತ್ತಿದ್ದಾರೆ.
ಸೂಪರ್ ಮಾರ್ಕೆಟ್ಗಳಲ್ಲಿ ಒಂದೇ ಸ್ಥಳದಲ್ಲಿ ದಿನಸಿ ಮಾತ್ರವಲ್ಲದೆ ಹತ್ತಾರು ಬಗೆಯ ವಸ್ತುಗಳು, ಬೆಲೆಯಲ್ಲಿ ಸ್ಪರ್ಧಾತ್ಮಕತೆ ಲಭ್ಯವಿರುವುದರಿಂದ ಸಹಜವಾಗಿಯೇ ಅವು ಜನಪ್ರಿಯವಾಗುತ್ತಿವೆ. ಮುಖ್ಯವಾಗಿ ಮಾಲ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ, ರೆಸ್ಟೋರೆಂಟ್, ಮಕ್ಕಳಿಗೆ ತರಹೇವಾರಿ ಆಟಗಳು, ಮನರಂಜನಾ ಸೌಲಭ್ಯಗಳು ಸೇರಿದಂತೆ ಹೆಚ್ಚು ಆಕರ್ಷಕ ಆಯ್ಕೆಗಳಿರುವುದರಿಂದ ಗ್ರಾಹಕರು ಅವುಗಳೆಡೆಗೆ ಆಕರ್ಷಿತರಾಗುತ್ತಾರೆ. ಪರಿಣಾಮವಾಗಿ ಶೆಟ್ಟರ ಅಂಗಡಿಗಳು ಭಣಗುಡುತ್ತಿವೆ!
ಆದರೆ ಇಂಥ ಸೂಪರ್ಮಾರ್ಕೆಟ್-ಮಾಲ್ಗಳಿಗೆ ಅಡಿಯಿಟ್ಟ ವೇಳೆ ಅದರ ಮಾಲೀಕನ ಜತೆ ಗ್ರಾಹಕರು ತುಟಿಪಿಟಿಕ್ ಅನ್ನೋಹಾಗಿಲ್ಲ; ಸುಮ್ಮನೆ ಟ್ರಾಲಿ ತಳ್ಳಿಕೊಂಡು ಬೇಕಿರುವ ಸಾಮಗ್ರಿಗಳನ್ನು ತುಂಬಿಸಿಕೊಂಡು ಬಿಲ್ ಪಾವತಿಸಿ ಹೊರಬರುವುದಷ್ಟೇ ಕೆಲಸ! ಒಬ್ಬರಿ ಗೊಬ್ಬರು ಮೌನ ಮುರಿಯುವುದಿಲ್ಲ; ಖರೀದಿಯ ಅನುಭವವನ್ನು ಸುಲಭಗೊಳಿಸಲಷ್ಟೇ ಅಲ್ಲಿ ಸಂವಹನ ನಡೆಯುತ್ತಷ್ಟೇ! ಇಂಥ ಮಾಲ್-ಸೂಪರ್ಮಾರ್ಕೆಟ್ಗಳು ಕೇವಲ ಖರೀದಿ ಸುವ ಒತ್ತಡ ಮತ್ತು ಸ್ಪರ್ಧೆಯ ಗೀಳನ್ನು ಸೃಷ್ಟಿಸುತ್ತವೆ, ಒಂದು ವಸ್ತುವನ್ನು ಕೊಳ್ಳಲು ಬಂದವ ಹತ್ತಾರು ವಸ್ತುಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತವೆ, ಅಷ್ಟೇ.
ಇದು ಅನವಶ್ಯಕ ಖರ್ಚುಗಳಿಗೆ ದಾರಿಯಾಗಿ, ಆರ್ಥಿಕ ಹೊರೆಗೂ ಕಾರಣವಾಗುತ್ತದೆ. ತತಲವಾಗಿ ಸಾಮಾಜಿಕ ಒತ್ತಡ ಹೆಚ್ಚಾಗಿ ಸಂಪರ್ಕದ ಕೊರತೆಯೂ ಉಂಟಾಗುತ್ತದೆ ಹಾಗೂ ಮನುಷ್ಯ ಸಂಪರ್ಕಕ್ಕಿಂತ ಹೆಚ್ಚಾಗಿ ‘ವ್ಯಾಪಾರಿ ಉದ್ದೇಶ’ದ ಸಂಪರ್ಕದ ಮೇಲೆ ಗಮನ ಹರಿಸುವಂತಾಗುತ್ತದೆ. ಜನರನ್ನು ಪರಸ್ಪರರಿಂದ ಬೇರ್ಪಡಿಸುವ ಮೂಲಕ ವೈಯಕ್ತಿಕ ಬಾಂಧವ್ಯಗಳು ದುರ್ಬಲಗೊಳ್ಳುವುದಕ್ಕೆ ಅದು ಕಾರಣವಾಗುತ್ತದೆ.
ಸ್ಥಳೀಯ ವ್ಯಾಪಾರಗಳು ಮತ್ತು ಸಾಮಾಜಿಕ ಕಲಿಕೆಗಳು ಕ್ಷೀಣವಾಗುತ್ತವೆ. ಇವೆಲ್ಲಕ್ಕೂ ಮಿಗಿಲಾಗಿ ಇಂಟರ್ನೆಟ್ ಮತ್ತು ಇ-ಕಾಮರ್ಸ್ನ ಜನಪ್ರಿಯತೆಯು, ಆನ್ಲೈನ್ ಖರೀದಿಗೆ ಮುಂದಾಗುವಂತೆ ಜನರನ್ನು ಉತ್ತೇಜಿಸುತ್ತಿದ್ದು, ಇದು ‘ಶೆಟ್ಟರ ಅಂಗಡಿ’ಯಂಥ ಸ್ಥಳೀಕ ವ್ಯಾಪಾರಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವೇಗದ ಅಥವಾ ಧಾವಂತದ ಬದುಕಿಗೆ ಒಡ್ಡಿಕೊಂಡಿರುವ ಜನರು, ಸುಲಭವೂ ತ್ವರಿತವೂ ಆದ ವಿಧಾನಗಳೆಡೆಗೆ ವಾಲು ತ್ತಿದ್ದಾರೆ, ಆದ್ಯತೆ ನೀಡುತ್ತಿದ್ದಾರೆ.
ಅದರಲ್ಲೂ, ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದ ಪರಿಣಾಮ ಜನರು ಅಂಗಡಿಗಳ ಕಡೆಗೆ ತಲೆ ಹಾಕಿಯೂ ಮಲಗದೆ, ಮನೆಯಲ್ಲೇ ಕೂತು ತಮ್ಮಿಷ್ಟದ ಉತ್ಪನ್ನಗಳನ್ನು ಅಮೆಜಾನ್, ಫ್ಲಿಪ್ಕಾರ್ಟ್, ಸ್ವಿಗ್ಗಿ ಮುಂತಾದ ಆನ್ಲೈನ್ ವಿತರಣಾ ವೇದಿಕೆಗಳ ಮೂಲಕ ಖರೀದಿಸು ತ್ತಿದ್ದಾರೆ. ಆರ್ಡರ್ ಮಾಡಿದ ಅರ್ಧ ಗಂಟೆಯೊಳಗಾಗಿ ಬಿರಿಯಾನಿ ಪಾರ್ಸಲ್ ಮನೆಗೆ ಬರುತ್ತದೆ. ಈ ಪರಿಪಾಠ ಎಷ್ಟು ಅನುಕೂಲಕರವೋ ಅಷ್ಟೇ ಅಪಾಯಕಾರಿ!
ಇಲ್ಲಿ ಆನ್ಲೈನ್ ಆರ್ಡರ್ಗೆ ಮೊರೆಹೋಗುವುದರಿಂದ ಜನರು ಮನೆಯಲ್ಲೇ ಉಳಿಯು ವಂತಾಗಿ, ಜನಸಂಪರ್ಕ-ಸಂವಹನ ಕಡಿಮೆಯಾಗುತ್ತದೆ ಮತ್ತು ಮನುಷ್ಯ ಒಂಟಿತನದ ಬಲಿಪಶುವಾಗುವಂತಾಗುತ್ತದೆ. ಮುಂದೆ ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ. ವ್ಯಕ್ತಿಗತ ಸಂಬಂಧಗಳು ಕಡಿಮೆಯಾಗುವುದರಿಂದ ಸಮಾಜ ದಲ್ಲಿನ ಒಗ್ಗಟ್ಟೂ ಸಡಿಲಗೊಳ್ಳುತ್ತದೆ. ಕ್ರಮೇಣ, ಒಬ್ಬರನ್ನೊಬ್ಬರು ಭೇಟಿ ಮಾಡಿ ಕುಶಲೋ ಪರಿ ವಿಚಾರಿಸುವುದು ಕೂಡ ನಿಂತುಹೋದರೆ ಅಚ್ಚರಿ ಪಡಬೇಕಿಲ್ಲ.
ಒಟ್ಟಿನಲ್ಲಿ, ಆಧುನಿಕತೆಯನ್ನು ಹಿತಮಿತವಾಗಿ ಬಳಸಿದರೆ ಬದುಕಿಗೆ ಅದು ಪೂರಕ,
ಅತಿರೇಕವಾದಲ್ಲಿ ಬದುಕಿಗೆ ಮಾರಕ. ನೀವೇನಂತೀರಿ?
(ಲೇಖಕರು ರಾಜ್ಯಶಾಸದ ಅಧ್ಯಾಪಕರು)
ಇದನ್ನೂ ಓದಿ: ಭಾರತೀಯರೆಲ್ಲಾ ಒಂದಾಗಲು ಬೇಕು,ಆರ್ಎಸ್ಎಸ್ ಸಿದ್ಧಾಂತ!