#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Cancer Awareness: ಮಂಗಳೂರಿನ ಕೆಎಮ್ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಟ: ಮನೋ ಸ್ಥೈರ್ಯಕ್ಕಾಗಿ ಜಾಗೃತಿ ಕಾರ್ಯಕ್ರಮ

ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಲಯನ್ಸ್ ಕ್ಲಬ್ ಕದ್ರಿ ಸಹಯೋಗದಲ್ಲಿ ‘ಕ್ಯಾನ್ ಕಾನ್ಕರ್’ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತಾದ ಮಿಥ್ಯ ಮತ್ತು ಸತ್ಯ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಮನೋಸ್ಥೈರ್ಯದ ಮಹತ್ವದ ಮೇಲೆ ತಜ್ಞರು ಬೆಳಕು ಚೆಲ್ಲಿದರು.

ಕೆಎಮ್ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಟ

ಕ್ಯಾನ್ ಕಾನ್ಕರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಜ್ಞರು

Profile Deekshith Nair Feb 13, 2025 7:31 PM

ಮಂಗಳೂರು: ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಕೆ ಎಂ ಸಿ ಆಸ್ಪತ್ರೆ(KMC Hospital) ಮಂಗಳೂರು(Mangalore) ಲಯನ್ಸ್ ಕ್ಲಬ್ ಕದ್ರಿ ಸಹಯೋಗದಲ್ಲಿ ‘ಕ್ಯಾನ್ ಕಾನ್ಕರ್’ ಸಾರ್ವಜನಿಕ ಜಾಗೃತಿ(Cancer Awareness) ಕಾರ್ಯಕ್ರಮವನ್ನು ಆಯೋಜಿಸಿತ್ತು.ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತಾದ ಮಿಥ್ಯ ಮತ್ತು ಸತ್ಯ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಮನೋಸ್ಥೈರ್ಯದ ಮಹತ್ವದ ಮೇಲೆ ತಜ್ಞರು ಬೆಳಕು ಚೆಲ್ಲಿದರು. ಕೇವಲ ವೈದ್ಯಕಿಯ ಚಿಕಿತ್ಸೆಗೆ ಬಗ್ಗೆ ಮಾತ್ರವಲ್ಲದೆ ಭಾವನಾತ್ಮಕ ಹಾಗೂ ಜೆನೆಟಿಕ್ ಆಯಾಮಗಳ ಬಗ್ಗೆಯೂ ಸಮಗ್ರ ಚರ್ಚೆ ನಡೆಸಲಾಯಿತು. ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದ್ದಲ್ಲಿ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು ಎಂಬ ಸಂದೇಶವನ್ನು ತಜ್ಞರು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಜೀವನಶೈಲಿಯ ಬಗ್ಗೆಯೂ ತಜ್ಞರು ಅರಿವು ನೀಡಿದರು. ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಶೇಖರಿಸಿಟ್ಟ ಆಹಾರ ಸೇವನೆ ಕೂಡ ಕ್ಯಾನ್ಸರ್ಕಾರಕ ಹಾಗೇ ಆನುವಂಶಿಕವಾಗಿ ಬರುವ ಕ್ಯಾನ್ಸರ್ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಅನುಭವಿಸುವ ಮಾನಸಿಕ ತುಮುಲಗಳ ಬಗ್ಗೆಯೂ ಚರ್ಚಿಸಲಾಯಿತು. ಒನ್ಕೋಲಾಜಿ ತಜ್ಞರು, ಮನೋರೋಗ ತಜ್ಞರು ಹಾಗೂ ಆರೋಗ್ಯ ಸೇವೆಯ ತಜ್ಞರು ಕಾರ್ಯಕ್ರಮದಲ್ಲಿ ಹಾಜರಿದ್ಧ ಸಭಿಕರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿರುವ ಹಲವು ಗೊಂದಲಗಳಿಗೆ ಪರಿಹಾರ ನೀಡಲಾಯಿತು.

ಆಸ್ಪತ್ರೆಯ ಮನೋಶಾಸ್ತ್ರಜ್ಞರಾದ ಡಾ. ಕೀರ್ತಿಶ್ರೀ ಸೋಮ್ಮಣ್ಣ ಮಾತನಾಡಿ, ಕ್ಯಾನ್ಸರ್ ದೈಹಿಕ ಹೋರಾಟ ಮಾತ್ರವಲ್ಲ ಮಾನಸಿಕವಾಗಿಯೂ ಸಾಕಷ್ಟು ಪರಿಣಾಮ ಬೀರುತ್ತದೆ. ಸಿಟ್ಟು, ಗೊಂದಲ, ಬೇಸರ ಇತ್ಯಾದಿ ಕ್ಯಾನ್ಸರ್ ರೋಗಿಗಳಲ್ಲಿ ಕಂಡು ಬರುವ ಸಾಮಾನ್ಯ ಸ್ಪಂದನೆ ಎಂದು ಹೇಳಿದರು. ಈ ಭಾವನೆಗಳನ್ನು ಹತ್ತಿಕ್ಕುವ ಬದಲು ಒಪ್ಪಿಕೊಳ್ಳುವುದು ಉತ್ತಮ. ರೋಗಿಗೆ ಈ ಹಂತದಲ್ಲಿ ಮಾನಸಿಕ ಬೆಂಬಲ ನೀಡುವುದು ಹಾಗೂ ರೋಗಿಯ ಮನೋಸ್ಥೈರ್ಯ ಹೆಚ್ಚಿಸುವುದರಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಲು ಸಹಾಯವಾಗುತ್ತದೆ ಎಂದರು.

ಕೆ ಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಘಿರ್ ಸಿದ್ಧಿಕಿ ಮಾತನಾಡಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಮೊದಲ ಹಂತ . ‘ಕ್ಯಾನ್ ಕಾನ್ಕರ್’ ನಂತಹ ಕಾರ್ಯಕ್ರಮದ ಮೂಲಕ, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರು ಮತ್ತವರ ಕುಟುಂಬಸ್ಥರು ಉತ್ತಮ ಆರೈಕೆ, ಸಹಕಾರ, ಬೆಂಬಲ ಪಡೆಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

ಡಾ. ಪ್ರಶಾಂತ ಬಿ (ಕನ್ಸಲ್ಟೆಂಟ್ ಹೆಮೆಟೊಲಾಜಿ) : ಕ್ಯಾನ್ಸರ್ ಜೀವಕೋಶಗಳು ಅನಿಯಂತ್ರಿತವಾಗಿ ವೇಗವಾಗಿ ದ್ವಿಗುಣಗೊಳ್ಳುತ್ತಾ ಹೋಗುತ್ತವೆ. ಈ ಜೀವಕೋಶಗಳು ಆರೋಗ್ಯ ಜೀವಕೋಶಗಳ ಜಾಗವನ್ನು ಆಕ್ರಮಿಸುತ್ತವೆ. ರೋಗಿಯೂ ಕ್ಯಾನ್ಸರ್ ಪತ್ತೆಯಾದ ಬಳಿಕ ಗೊಂದಲಕ್ಕೊಳಗಾಗುವುದರಿಂದ ಚಿಕಿತ್ಸೆಗೆ ಒಳಪಡುವುದರಲ್ಲೂ ತಡ ಮಾಡುತ್ತಾರೆ. ಆದರೆ ಆರಂಭಿಕ ಹಂತದಲ್ಲಿ ಶೀಘ್ರವಾಗಿ ಚಿಕಿತ್ಸೆ ಆರಂಭಿಸುವುದು ಬಹಳ ಮುಖ್ಯ.

ಡಾ. ಅಭಿಷೇಕ್ ಕೃಷ್ಣ ( ರೇಡಿಯೇಶನ್ ಒನ್ಕೊಲಾಜಿಸ್ಟ್) : ಆಹಾರವನ್ನು ಬೇಯಿಸುವಾಗ ಪ್ಲಾಸ್ಟಿಕ್ ಕಂಟೇನರ್ಗಳು ವಿಷಕಾರಿ ಕೆಮಿಕಲ್ಗಳನ್ನು ಬಿಡುಗಡೆ ಮಾಡುತ್ತವೆ.ಬಿಸ್ಫೆನೊಲ್ ಪಿಎ ಮತ್ತು ಫತಾಲೇಟ್ಸ್ ಕೆಮಿಕಲ್ಗಳು ಹಾಗೂ ಗ್ರೇಡ್ 4,6,7 ನ ಏಕಬಳಕೆಯ ಪ್ಲಾಸ್ಟಿಕ್ನಲ್ಲಿ ಕಂಡುಬರುವ ಮೈಕ್ರೋ ಪ್ಲಾಸ್ಟಿಕ್ಗಳು ಸ್ತನ, ಪ್ರೋಸ್ಟೇಟ್, ಶ್ವಾಸಕೋಶ ಹಾಗೂ ಕೋಲನ್ ಕ್ಯಾನ್ಸರ್ಗೆ ಕಾರಣವಾಗುತ್ತವೆ. ‘

ಡಾ.ವಿವೇಕಾನಂದ ಭಟ್ (ಕನ್ಸಲ್ಟೆಂಟ್ ಮೆಡಿಕಲ್ ಜೆನೆಟಿಕ್ಸ್): ಕ್ಯಾನ್ಸರ್ ಪತ್ತೆ ಹಾಗೂ ರೋಗವನ್ನು ತಡೆಗಟ್ಟುವಲ್ಲಿ ಜೆನಿಟಿಕ್ಸ್ (ಆನುವಂಶಿಕ) ಮಾಹಿತಿ ಮಹತ್ವದ್ದಾಗಿರುತ್ತದೆ. ವ್ಯಕ್ತಿಯ ಕುಟುಂಬದ ಆರೋಗ್ಯ ಮಾಹಿತಿ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳ ಬಗ್ಗೆ ಪತ್ತೆ ಹಚ್ಚಬಹುದು. ಸೊಮ್ಯಾಟಿಕ್ ಅಥವಾ ಜರ್ಮಲಿನ್ ಪರೀಕ್ಷೆ ಈ ರೀತಿಯ ಆನುವಂಶಿಕವಾಗಿ ಬರುವ ಕ್ಯಾನ್ಸರ್ ಬಗ್ಗೆ ತಿಳಿಯಲು ಸಹಕಾರಿ.

ಡಾ. ಹರೀಶ್ ಇ ( ಸರ್ಜಿಕಲ್ ಆನ್ಕೋಲಾಜಿಸ್ಟ್) : ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್ ಮಹಿಳೆಯರಿಗಿಂತ ಭಿನ್ನವಾಗಿರುತ್ತದೆ. ಪ್ರೋಸ್ಟೇಟ್, ಬಾಯಿ, ಶ್ವಾಸಕೋಶ, ಮೂತ್ರಕೋಶ ಕ್ಯಾನ್ಸರ್ ಇವು ಸಾಮಾಣ್ಯವಾಗಿ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್. ಧೂಮಪಾನ, ಮದ್ಯಪಾನ, ಬೊಜ್ಜು, ಹೆಚ್ಪಿವಿ ವೈರಸ್ ಕ್ಯಾನ್ಸರ್‌ಗೆ ಪ್ರಮುಖ ಕಾರಣ.

ಡಾ. ಸನಲ್ ಫರ್ನಾಂಡೀಸ್ ( ಮೆಡಿಕಲ್ ಒನ್ಕೋಲಾಜಿಸ್ಟ್) : ಒಮ್ಮೆ ರೋಗಿಯು ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖವಾದರೆ ಅವರನ್ನು ‘ಕ್ಯಾನ್ಸರ್ ಗೆದ್ದವರು’ ಎನ್ನಲಾಗುತ್ತದೆ. ಚಿಕಿತ್ಸೆ ಬಳಿಕ ಮತ್ತೆ ಮೊದಲ ಉತ್ಸಾಹದಲ್ಲೇ ಜೀವನ ನಡೆಸುವುದು ಬಹಳ ಮುಖ್ಯ.

ಡಾ. ಕಾರ್ತಿಕ್ ಕೆ ಎಸ್ (ಕನ್ಸಲ್ಟೆಂಟ್ ಸರ್ಜಿಕಲ್ ಒನ್ಕೊಲಾಜಿಸ್ಟ್) : ಮಹಿಳೆಯರು ಕುಟುಂಬದ ಬೆನ್ನೆಲುವು. ಆಕೆಯಲ್ಲಿ ಪತ್ತೆಯಾಗುವ ಕ್ಯಾನ್ಸರ್ ಆಕೆಯನ್ನು ಮಾತ್ರವಲ್ಲ ಈಡೀ ಕುಟುಂಬವನ್ನು ಬಾಧಿಸುತ್ತದೆ. ಸ್ತನ, ಅಂಡಾಶಯ, ಗರ್ಭಕಂಠದ ಕ್ಯಾನ್ಸರ್ ಸಾಮಾಣ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್. ಅನಾರೋಗ್ಯಕರ ಆಹಾರ ಸೇವನೆ, ಬೊಜ್ಜು, ಎಸ್ಟ್ರೋಜನ್ ಪ್ರಮಾಣ ನೇರವಾಗಿ ಸ್ತನ ಕ್ಯಾನ್ಸರ್ಗೆ ಕಾರಣವಾಗುತ್ತದೆ.

ಡಾ. ಬಸಿಲಾ ಅಮೀರ್ ಅಲಿ (ಕನ್ಸಲ್ಟೆಂಟ್ ಬ್ರೆಸ್ಟ್ ಸರ್ಜನ್ ) : ಭಾರತದಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚುತ್ತಿದೆ. 20 ರಲ್ಲಿ ಒಬ್ಬ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದ್ದು , ಈ ಸಮಸ್ಯೆಯಿಂದ ಸಾವನ್ನಪ್ಪುವವರ ಸಂಖ್ಯೆಯೂ ಅಧಿಕವಾಗಿದೆ.ಇದಕ್ಕೆ ಕಾರಣ ರೋಗ ಪತ್ತೆಹಚ್ಚುವಲ್ಲಿ ತಡ ಮಾಡುವುದು ಹಾಗೂ, ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಳ್ಳದೇ ಇರುವುದು.

ಡಾ. ಹರ್ಷ ಪ್ರಸಾದ್ ( ಕನ್ಸಲ್ಟೆಂಟ್ ಪಿಡಿಯಾಟ್ರಿಕ್ ಹೆಮೆಟೊ-ಒನ್ಕೊಲಾಜಿ) : ಚಿಕ್ಕ ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಲುವುದು ಬಹು ಅಪರೂಪ. ಶೇ. 2-3ಕ್ಕೂ ಕಡಿಮೆ ಪ್ರಕರಣಗಳು ಮಾತ್ರ ಪತ್ತೆಯಾಗುತ್ತವೆ. ದಕ್ಷಿಣ ಕನ್ನಡದಲ್ಲಿ ಪ್ರತಿ ವರ್ಷ 120 ಮಕ್ಕಳಲ್ಲಿ ಕ್ಯಾನ್ಸರ್ ಕಂಡು ಬರುತ್ತಿದೆ. ಅದರಲ್ಲಿ ⅓ ರಷ್ಟು ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಆದರೆ ಸಮಾಧಾನಕರ ವಿಷಯವೇನೆಂದರೆ ಕ್ಯಾನ್ಸರ್ ಗುಣಪಡಿಸುವ ಪ್ರಮಾಣವೂ ಅಧಿಕವಾಗಿದೆ.

ಈ ಸುದ್ದಿಯನ್ನೂ ಓದಿ: Modi US Visit : ಅಮೆರಿಕದಲ್ಲಿ ಮೋದಿ; ಡಿಎನ್‌ಐ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಜೊತೆ ಮಾತುಕತೆ

ಪ್ರಶ್ನೋತ್ತರ ವೇಳೆ , ಅತಿಯಾದ ನಾನ್ ವೆಜ್ ಆಹಾರ ಸೇವೆನೆಯನ್ನು ತಡೆಯುವ ಬಗ್ಗೆ, ಹಣ್ಣುಗಳನ್ನು ಕೀಟನಾಶಕದಿಂದ ಮುಕ್ತಗೊಳಿಸಿ ಸೇವಿಸುವ ಬಗ್ಗೆ ಚರ್ಚೆಗಳು ನಡೆದವು. ಆಂಟಿ ಆಕ್ಸಿಡೆಂಟ್ ಭರಿತ ಆಹಾರ ಸೇವಿಸಲು ವೈದ್ಯರು ಸಲಹೆ ನೀಡಿದರು. ಕ್ಯಾನ್ಸರ್ ವಿರುದ್ಧದ ಹೋರಾಟ ಮೆಡಿಕಲ್ ಚಿಕಿತ್ಸೆಗೂ ಮೀರಿ, ಕುಟುಂಬ ಸಮುದಾಯಗಳು ಒಗ್ಗಟ್ಟಾಗಿ ರೋಗಿಗೆ ಬೆಂಬಲ ನೀಡಿ ಕ್ಯಾನ್ಸರ್ ಗುಣಪಡಿಸಬೇಕು ಎಂಬ ಸಂದೇಶ ನೀಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ.