Bank Robbery: ವಿಜಯಪುರ ಬ್ಯಾಂಕ್ ದರೋಡೆ: 15 ಆರೋಪಿಗಳ ಬಂಧನ, ಮಾಜಿ ಮ್ಯಾನೇಜರ್, ಉಪನ್ಯಾಸಕ, ರೈಲ್ವೆ ನೌಕರರೆಲ್ಲಾ ಸೇರಿ ಮಾಡಿದ ದರೋಡೆ!
Bank Robbery: ಬಂಧಿತರೆಲ್ಲರೂ ಹುಬ್ಬಳ್ಳಿ ನಗರದವರು ಮತ್ತು ಸ್ನೇಹಿತರಾಗಿದ್ದರು. ಪ್ರಥಮ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಈ ಹಿಂದೆ ನಡೆದಿದ್ದ ದೊಡ್ಡ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಅಧ್ಯಯನ ಮಾಡಿದ್ದರು. ಜೊತೆಗೆ ಸಿನಿಮಾ, ಧಾರಾವಾಹಿಗಳನ್ನು ನೋಡಿ ಬ್ಯಾಂಕ್ ಕಳುವಿಗೆ ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿದ್ದರು ಎಂದು ಹೇಳಿದರು.


ವಿಜಯಪುರ: ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಆರೋಪಿಗಳಲ್ಲಿ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆಯ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್ಮನ್, ಎಲೆಕ್ನಿಷಿಯನ್ ಕೂಡ ಇರುವುದು ಗೊತ್ತಾಗಿದೆ.
ಬಂಧಿತ ಆರೋಪಿಗಳಿಂದ ಒಟ್ಟು 39 ಕೆ.ಜಿ.ಚಿನ್ನ, 11.16 ಕೋಟಿ ನಗದು ಹಾಗೂ ಕಳ್ಳತನಕ್ಕೆ ಬಳಸಿದ್ದ ರೈಲ್ವೆ ಇಲಾಖೆಗೆ ಸೇರಿದ ಗೂಡ್ಸ್ ಲಾರಿ, 4 ವಾಕಿಟಾಕಿ, ಒಂದು ಪಿಸ್ತೂಲ್ನಂತಿರುವ ಸಿಗರೇಟ್ ಲೈಟರ್, 2 ಗ್ಯಾಸ್ ಸಿಲಿಂಡರ್, ಒಂದು ಆಕ್ಸಿಜನ್ ಸಿಲಿಂಡರ್, ಬರ್ನಿಂಗ್ ಗನ್, ನಕಲಿ ಕೀಲಿಕೈಗಳು, ವಿವಿಧ ಕಂಪನಿಗಳ ಐದು ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಕುಮಾರ್ ರಾಠೋಡ್ ಮತ್ತು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ನಗರದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮನಗೂಳಿ ಕೆನರಾ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ (41), ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ (38), ಸುನೀಲ ಮೋಕಾ (40) ಎಂಬವರನ್ನು ಈಗಾಗಲೇ ಬಂಧಿಸಿ ಅವರಿಂದ 10.75 ಕೋಟಿ ಮೌಲ್ಯದ 10.5 ಕೆ.ಜಿ.ಬಂಗಾರದ ಆಭರಣ ಮತ್ತು ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮೂವರು ಆರೋಪಿಗಳು ವಿಚಾರಣೆಯಲ್ಲಿ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಆರೋಪಿಗಳಾದ ಹುಬ್ಬಳ್ಳಿ ನೈರುತ್ಯ ರೈಲ್ವೆ ನೌಕರರಾದ ಬಾಲರಾಜ ಮಣಿಕಮ್ ಯೆರುಕುಲಾ(40), ಬಾಬುರಾವ್ ಮಿರಿಯಾಲ (40), ಸೋಲೋಮ ಪಲುಕುರಿ (40), ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಪೀಟರ್ (40), ಖಾಸಗಿ ನೌಕರ ಗುಂಡು ಜೋಸೆಫ್ (28), ಚಂದನರಾಜ್ (29), ಚಾಲಕ ಇಜಾಜ್ ಧಾರವಾಡ(34), ವಾಚಮನ್ ಸುಸೈರಾಜ್ (44), ನಕಲಿ ಕೀಲಿ ಕೈ ತಯಾರಿಸುವ ಅಂಗಡಿಯ ಮಹಮ್ಮದ್ ಆಸೀಫ್ ಕಲ್ಕೂರ (31), ಚಾಲಕ ಅನೀಲ ಮಿರಿಯಾಲ (40), ಖಾಸಗಿ ಉದ್ಯೋಗಿ ಅಬು ಅಲಿಯಾಸ್ ಮೋಹನಕುಮಾರ (42), ಇಲೆಕ್ನಿಷಿಯನ್ ಮರಿಯಾದಾಸ (40) ಎಂಬವರನ್ನು ಬಂಧಿಸಿಲಾಗಿದೆ.
ಬಂಧಿತರೆಲ್ಲರೂ ಹುಬ್ಬಳ್ಳಿ ನಗರದವರು ಮತ್ತು ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದರು. ಪ್ರಥಮ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ರಾಜ್ಯ, ದೇಶದ ವಿವಿಧೆಡೆ ಈ ಹಿಂದೆ ನಡೆದಿದ್ದ ದೊಡ್ಡ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಅಧ್ಯಯನ ಮಾಡಿದ್ದರು. ಜೊತೆಗೆ ಸಿನಿಮಾ, ಧಾರಾವಾಹಿಗಳನ್ನು ನೋಡಿ ಬ್ಯಾಂಕ್ ಕಳುವಿಗೆ ಮೂರು ತಿಂಗಳ ಮೊದಲೇ ಯೋಜನೆ ರೂಪಿಸಿದ್ದರು ಎಂದು ಹೇಳಿದರು.
ಬ್ಯಾಂಕ್ ಕಳುವಾದ ಸಂದರ್ಭದಲ್ಲಿ ದಾಖಲಿಸಲಾಗಿದ್ದ ಎಫ್ಐಆರ್ನಲ್ಲಿ 58.97 ಕೆ.ಜಿ. ಚಿನ್ನಾಭರಣ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದರು. ಆದರೆ, ತನಿಖೆಯ ವೇಳೆ ಕಳುವಾಗಿದ್ದ ಬಂಗಾರದ ಪ್ರಮಾಣವನ್ನು ನಿಖರವಾಗಿ ಪರಿಶೀಲಿಸಿದಾಗ ಒಟ್ಟು 40.7 ಕೆ.ಜಿ. ಎಂಬುದು ಖಚಿತವಾಗಿದೆ. ಈ ಕುರಿತು ಬ್ಯಾಂಕಿನ ಅಧಿಕಾರಿಗಳು ಲಿಖಿತ ವರದಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಂಧಿತ ಆರೋಪಿಗಳಿಂದ 39 ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಒಂದಷ್ಟು ಬಂಗಾರ ಮಾರಾಟ ಮಾಡಿ ಬಂದ ಹಣವನ್ನು ಗೋವಾದ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಡಿಪಾಸಿಟ್ ಮಾಡಿದ್ದ 31.16 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂರ್ನಾಲ್ಕು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆ ಕಾರ್ಯ ನಡೆದಿದೆ. ಕಳವಾಗಿದ್ದ ಚಿನ್ನಾಭರಣದಲ್ಲಿ ಶೇ 85ರಷ್ಟು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಮೇ 23ರಿಂದ 25ರ ನಡುವೆ ಕಳ್ಳರು ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನ ಸೇಫ್ ಲಾಕರ್ನಲ್ಲಿದ್ದ ಅಂದಾಜು 53.26 ಕೋಟಿ ಮೌಲ್ಯದ ಬಂಗಾರದ ಆಭರಣ ಹಾಗೂ 15,20,450 ನಗದು ಸೇರಿದಂತೆ ಒಟ್ಟು 53.31 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಇದನ್ನೂ ಓದಿ: Robbery Case: ಚಿಕ್ಕಬಳ್ಳಾಪುರ ಜಿಲ್ಲೆಗೂ ಎಂಟ್ರಿ ಕೊಡ್ತು ʼಚಡ್ಡಿ ಗ್ಯಾಂಗ್ʼ; ಹಲವು ಕಡೆ ಕಳ್ಳತನಕ್ಕೆ ಯತ್ನ