ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kho Kho World Cup: ಖೋ ಖೋ ವಿಶ್ವಕಪ್‌; ಭಾರತಕ್ಕೆ ಡಬಲ್‌ ಟ್ರೋಫಿ ಜೋಶ್‌

ಖೋ ಖೋ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಸ್ಫೂರ್ತಿದಾಯಕ ಪ್ರದರ್ಶನ ತೋರಿದ ಭಾರತದ ಮಹಿಳಾ ಮತ್ತು ಪುರುಷರ ಖೋ ಖೋ ತಂಡವು ನೇಪಾಳ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್‌ ಗೆದ್ದ ಐತಿಹಾಸಿಕ ಸಾಧನೆ ಮಾಡಿತು.

Kho Kho World Cup: ಖೋ ಖೋ ವಿಶ್ವಕಪ್‌; ಭಾರತಕ್ಕೆ ಡಬಲ್‌ ಟ್ರೋಫಿ ಜೋಶ್‌

India men Kho Kho Team

Profile Abhilash BC Jan 19, 2025 10:14 PM

ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಖೋ ಖೋ ವಿಶ್ವಕಪ್ 2025ರ ಫೈನಲ್ ಪಂದ್ಯದಲ್ಲಿ ಸ್ಫೂರ್ತಿದಾಯಕ ಪ್ರದರ್ಶನ ತೋರಿದ ಭಾರತದ ಮಹಿಳಾ ಮತ್ತು ಪುರುಷರ ಖೋ ಖೋ ತಂಡವು ನೇಪಾಳ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್‌ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.

ಆರಂಭದಲ್ಲಿ ನಡೆದ ಮಹಿಳಾ ಫೈನಲ್‌ ಪಂದ್ಯದಲ್ಲಿ ಪ್ರಿಯಾಂಕಾ ಇಂಗಲೆ ನೇತೃತ್ವದ ಭಾರತ ತಂಡ ನೇಪಾಳವನ್ನು 78-40 ಅಂತರದಿಂದ ಹಿಮ್ಮಟ್ಟಿಸಿ ವಿಶ್ವಕಪ್‌ ಮುಡಿಗೇರಿಸಿಕೊಂಡಿತು. ಈ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಭಾರತೀಯ ಕ್ರೀಡಾಭಿಮಾನಿಗಳಿಗೆ ಕೆಲವೇ ಗಂಟೆಗಳ ಅಂತರದಲ್ಲಿ ಭಾರತೀಯ ಪುರುಷರು ಕೂಡ ವಿಶ್ವಕಪ್‌ ಗೆದ್ದು ಡಬಲ್‌ ಗೆಲುವಿನ ಖುಷಿಯನ್ನು ಉಣಬಡಿಸಿದರು.



1 ನೇ ಸರದಿಯಲ್ಲಿ ಚೇಸಿಂಗ್‌ ಮಾಡುವಾಗ ಮೆನ್ ಇನ್ ಬ್ಲೂ 26-0 ಮುನ್ನಡೆ ಸಾಧಿಸಿತು. ಡಿಫೆಂಡ್ ಮಾಡುವಾಗ ಎದುರಾಳಿಗಳಿಗೆ ಹೆಚ್ಚು ಅಂಕವನ್ನು ಬಿಟ್ಟುಕೊಡದೆ ಮುನ್ನಡೆ ಸಾಧಿಸಿ ಅಂತಿಮವಾಗಿ 54-36 ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿದಿತು.

ಭಾರತದ ಮಹಿಳಾ ಮತ್ತು ಪುರುಷರ ತಂಡ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ತೋರಿತು. ಅಜೇಯವಾಗಿ ಫೈನಲ್‌ ಪ್ರವೇಶಿಸಿ ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿತು.



ಮೋದಿ ಶ್ಲಾಘನೆ

ಮೊದಲ ಬಾರಿಗೆ ಖೋ ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಮತ್ತು ಪುರುಷರ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

'ಈ ವಿಜಯೋತ್ಸವವು ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಗೆ ಮತ್ತೆ ಜೀವ ಕಳೆ ತುಂಬಿದೆ. ನಿಮ್ಮ ಈ ಸಾಧನೆ ರಾಷ್ಟ್ರದ್ಯಾಂತ ಅಸಂಖ್ಯಾತ ಯುವ ಕ್ರೀಡಾಪಟುಗಳನ್ನು ಪ್ರೇರೇಪಿಸಿದೆ. ಈ ಸಾಧನೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಈ ಕ್ರೀಡೆಯನ್ನು ಮುಂದುವರಿಸಲು ದಾರಿ ಮಾಡಿಕೊಡಲಿ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.



ಪಂದ್ಯದ ಸ್ವರೂಪ

ಪ್ರತೀ ತಂಡಗಳಿಂದ ತಲಾ 9 ಆಟಗಾರರು ಆಡಳಿಯುತ್ತಾರೆ. 9+9 ನಿಮಿಷಗಳ 2 ಹಂತದಲ್ಲಿ ಪಂದ್ಯ ಸಾಗುತ್ತವೆ. ಒಂದು ತಂಡ ಡೆಫೆಂಡಿಂಗ್‌ಗೆ ಇಳಿದರೆ, ಮತ್ತೊಂದು ತಂಡ ಚೇಸಿಂಗ್‌ ನಡೆಸುತ್ತದೆ. ಅಂಕಣಕ್ಕೆ ಆಗಮಿಸುವ ಡಿಫೆಂಡಿಂಗ್‌ ತಂಡದ ಮೂವರು ಆಟಗಾರರನ್ನು ಚೇಸಿಂಗ್‌ ತಂಡದ 9 ಆಟಗಾರರು ಬೆನ್ನಟ್ಟಿ ಮುಟ್ಟಬೇಕು. ಇದರಲ್ಲಿ ಚೇಸಿಂಗ್‌ ತಂಡದ 8 ಆಟಗಾರರಲ್ಲಿ ನಾಲ್ವರು ಒಂದು ದಿಕ್ಕಿಗೆ, ಮತ್ತೆ ನಾಲ್ವರು ಇನ್ನೊಂದು ದಿಕ್ಕಿಗೆ ತಿರುಗಿ ಸಮಾನ ದೂರದಲ್ಲಿ ಕುಳಿತುಕೊಳ್ಳುತ್ತಾರೆ. ಒಂಬತ್ತನೇ ಆಟಗಾರ ಎದುರಾಳಿ ತಂಡದ ಆಟಗಾರರನ್ನು ಬೆನ್ನಟ್ಟಬೇಕು. ಅಂತಿಮವಾಗಿ ಗರಿಷ್ಠ ಅಂಕ ಗಳಿಸಿದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಗುತ್ತದೆ.