ಭಾರತದ ಸಂವಿಧಾನ ಆರ್‌ಎಸ್‌ಎಸ್‌ನ ರೂಲ್ ಬುಕ್ ಅಲ್ಲ; ಸಂಸತ್‌ನ ಮೊದಲ ಭಾಷಣದಲ್ಲೇ ಮೋದಿಗೆ ತಿವಿದ ಪ್ರಿಯಾಂಕಾ ಗಾಂಧಿ
Priyanka Gandhi: ಪ್ರಿಯಾಂಕಾ ಗಾಂಧಿ ಇಂದು ತಮ್ಮ ಮೊದಲ ಸಂಸತ್ ಭಾಷಣದಲ್ಲಿ ಆಡಳಿದ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

ನವದೆಹಲಿ: ಭಾರತದ ಸಂವಿಧಾನ(Indian Constitution) ಸಂಘದ ರೂಲ್ ಬುಕ್(Rule Book) ಅಲ್ಲ ಎಂದು ಸಂಸತ್ತಿನ(Parliament) ತಮ್ಮ ಚೊಚ್ಚಲ ಭಾಷಣದಲ್ಲೇ ಪ್ರಧಾನಿ ನರೇಂದ್ರ ಮೋದಿ(Narendra Modi), ಆರ್‌ಎಸ್‌ಎಸ್(RSS) ಮತ್ತು ಬಿಜೆಪಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ(Priyanka Gandhi) ಮಾತಿನಿಂದಲೇ ತಿವಿದಿದ್ದಾರೆ.
ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಇಳಿದಿದ್ದ ಪ್ರಿಯಾಂಕ ಗಾಂಧಿ, ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಸಂವಿಧಾನದ 75ನೇ ವಾರ್ಷಿಕೋತ್ಸವದ ವೇಳೆ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ ಪ್ರಿಯಾಂಕಾ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಸುದೀರ್ಘವಾದ ಮೂವತ್ತು ನಿಮಿಷಗಳ ಭಾಷಣದಲ್ಲಿ ಮೋದಿ ಮತ್ತು ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.
"You topple governments with the power of money; People of the nation knows about their (BJP) 'washing machine'. 'Is taraf daag, uss taraf swachhata'": #PriyankaGandhi tears into centre in #LokSabha speech#ParliamentWinterSession #Parliament pic.twitter.com/ieSRHLtc0i— News18 (@CNNnews18) December 13, 2024
"ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಉರಿಯುವ ನ್ಯಾಯ, ಅಭಿವ್ಯಕ್ತಿ ಮತ್ತು ಆಶಯದ ಜ್ವಾಲೆಯಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ನ್ಯಾಯವನ್ನು ಪಡೆಯುವ ಹಕ್ಕಿದೆ ಎಂದು ಗುರುತಿಸುವ ಅಧಿಕಾರವನ್ನು ನಮ್ಮ ಸಂವಿಧಾನ ನೀಡಿದೆ" ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಈ ಬಾರಿ ಮತ್ತೆ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದ್ದರೆ ಅವರು ಖಂಡಿತವಾಗಿಯೂ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಆದರೆ ಜನಾದೇಶ ತಮ್ಮ ಪರವಾಗಿ ಬಾರದ ಹಿನ್ನೆಲೆಯಲ್ಲಿ ಆ ವಿಚಾರದಲ್ಲಿ ಸುಮ್ಮನಿರುವ ಅನಿವಾರ್ಯತೆ ಅವರಿಗೆ ಎದುರಾಗಿದೆ. ಇದಕ್ಕಾಗಿ, ನಾನು ನಮ್ಮ ಮತದಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ.
ಇನ್ನು ತಮ್ಮ ಭಾಷಣದಲ್ಲಿ ಗೌತಮ್ ಅದಾನಿಯ ಹೆಸರನ್ನು ಪ್ರಸ್ತಾಪಿಸದೇ "ದೇಶದ ಪ್ರತೀ ಪ್ರಜೆಗಳಲ್ಲಿ ಒಂದು ಅನುಮಾನವಿದೆ. ಅದು, ಒಬ್ಬರ ಲಾಭಕ್ಕಾಗಿ ಆಡಳಿತ ಪಕ್ಷವು ಕೆಲಸ ಮಾಡುತ್ತಿದೆಯೇ? ಒಬ್ಬ ವ್ಯಕ್ತಿಯನ್ನು ರಕ್ಷಿಸಲು 142 ಕೋಟಿ ಜನರ ಹಿತವನ್ನು ಕಾಪಾಡಿಕೊಳ್ಳದೇ ಇರುವುದು ಬಹಳ ದೊಡ್ಡ ದುರಂತ. ಈ ದೇಶದ ಎಲ್ಲಾ ಉದ್ಯಮಗಳು, ಹಣ ಮತ್ತು ಸಂಪನ್ಮೂಲಗಳು ಒಂದು ವ್ಯಕ್ತಿ ಕಡೆಗೆ ಹೋಗುತ್ತಿದೆ" ಎಂದು ಪ್ರಿಯಾಂಕಾ ಗಾಂಧಿ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ನಮ್ಮ ಸಂವಿಧಾನದ ಸುರಕ್ಷಾ ಕವಚವನ್ನು ಕಳೆದ ಹತ್ತು ವರ್ಷಗಳಲ್ಲಿ ದುರ್ಬಲಗೊಳಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಸಂವಿಧಾನದಲ್ಲಿನ ಸಾಮಾಜಿಕ ನ್ಯಾಯವನ್ನು ಹತ್ತಿಕ್ಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಸರ್ಕಾರಿ ಸೇವೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ "ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಜಾತಿಗಣತಿ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪ್ರಿಯಾಂಕಾ "ಇಂದು ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷದ ಮಿತ್ರರು ಇದನ್ನು ಪ್ರಸ್ತಾಪಿಸಿದ್ದಾರೆ.ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ಜಾತಿಗಣತಿ ಬಗ್ಗೆ ಚರ್ಚೆ ನಡೆಯಿತು. ಹೀಗಾಗಿ ಯಾರ ಸ್ಥಿತಿಗತಿ ಹೇಗೆ ಇದೆ ಎಂಬುದು ನಮಗೆ ತಿಳಿಯುವುದು ಅತೀ ಮುಖ್ಯ. ಇಡೀ ವಿಪಕ್ಷಗಳು ಚುನಾವಣೆಯಲ್ಲಿ ಧ್ವನಿ ಎತ್ತಿದಾಗ ಜಾತಿ ಗಣತಿ ನಡೆಯಬೇಕು ಎಂಬುದು ಅದರ ಅವಶ್ಯಕತೆಗೆ ಸಾಕ್ಷಿ. ನಾವು ಇಂತಹ ಗಂಭೀರವಾದ ವಿಷಯವನ್ನು ಪ್ರಸ್ತಾಪಿಸಿದರೆ ಅವರು, ‘ನಾವು ದನಗಳನ್ನು ಕದಿಯುತ್ತೇವೆ, ನಾವು ಮಂಗಳಸೂತ್ರವನ್ನು ಕದಿಯುತ್ತೇವೆ ಎಂದರು" ಎಂದು ಕುಹಕದ ಮಾತುಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೆಸರೇಳದೆಯೇ ಕಟುವಾಗಿ ಟೀಕಿಸಿದ್ದಾರೆ. ಒಟ್ಟಾರೆ ಸಂಸತ್ತಿನ ತಮ್ಮ ಚೊಚ್ಚಲ ಭಾಷಣದಲ್ಲೇ ಪ್ರಿಯಾಂಕಾ ಗಾಂಧಿ ಆಡಳಿತ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ. ಪ್ರಿಯಾಂಕಾ ಭಾಷಣಕ್ಕೆ ಕಾಂಗ್ರೆಸ್ ಸಂಸದರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Rahul Gandhi: ರಾಹುಲ್ ಗಾಂಧಿ ವಿರುದ್ಧ ʻರಾಯಲ್ʼ ಲೀಡರ್ಸ್ ರೆಬೆಲ್- ರಾಜಮನೆತನಗಳ ಬಗ್ಗೆ ಕಾಂಗ್ರೆಸ್ ನಾಯಕ ಹೇಳಿದ್ದೇನು?