ಮನು ಭಾಕರ್ ಗೆದ್ದ ಪ್ಯಾರಿಸ್ ಒಲಿಂಪಿಕ್ಸ್ ಪದಕ ಬದಲಾವಣೆ
Manu Bhaker: ಮನು ಜತೆ ಶೂಟರ್‌ಗಳಾದ ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್, ಕುಸ್ತಿಪಟು ಅಮನ್ ಸೆರಾವತ್ ಕೂಡ ತಮ್ಮ ಪದಕ ಒಳಪು ಕಳೆದುಕೊಂಡಿದ್ದಾಗಿ ಭಾರತ ಒಲಿಂಪಿಕ್ ಸಂಸ್ಥೆಗೆ ದೂರು ನೀಡಿದ್ದಾರೆ.
![Manu Bhaker: ಮನು ಭಾಕರ್ ಗೆದ್ದ ಪ್ಯಾರಿಸ್ ಒಲಿಂಪಿಕ್ಸ್ ಪದಕ ಬದಲಾವಣೆ](https://cdn-vishwavani-prod.hindverse.com/media/original_images/Manu_Bhaker_Paris_Olympics.jpg)
Manu Bhaker Paris Olympics
![Profile](https://vishwavani.news/static/img/user.png)
ನವದೆಹಲಿ, ಜ.16, 2025: ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ವಿಜೇತರಿಗೆ ನೀಡಿದ ಪದಕಗಳು ಕಳೆಗುಂದುತ್ತಿವೆ ಎಂದು ಸ್ವತಃ ಕ್ರೀಡಾಪಟುಗಳೇ ಕೆಲ ದಿನಗಳ ಹಿಂದೆ ಗಂಭೀರ ಆರೋಪ ಮಾಡಿದ್ದರು. ಜತೆಗೆ ಪದಕದ ಫೋಟೊ ಮತ್ತು ವಿಡಿಯೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ (ಐಒಸಿ) ಪದಕಗಳನ್ನು ಮರಳಿ ಪಡೆದು ಹೊಸದನ್ನು ನೀಡಲು ನಿರ್ಧರಿಸಿದೆ.
ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಸೇರಿ ಹಲವು ಕ್ರೀಡಾಪಟುಗಳು ವಿಜೇತ ಪದಕಗಳ ಬಣ್ಣ ಕಳೆದುಕೊಂಡಿವೆ ಎನ್ನಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 5,084 ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಣಕ್ಕಿಡಲಾಗಿತ್ತು. ಈ ಪದಕಗಳನ್ನು ಫ್ರಾನ್ಸ್‌ನ ಐಷಾರಾಮಿ ಆಭರಣಗಳ ತಯಾರಕ ಚೌಮೆಟ್ ವಿನ್ಯಾಸಗೊಳಿಸಿದರೆ, ಮೊನೈ ಡಿ ಪ್ಯಾರಿಸ್ ಪದಕಗಳನ್ನು ತಯಾರುಗೊಳಿಸಿತ್ತು.
ಮೊನೈ ಡಿ ಪ್ಯಾರಿಸ್ ಅಥವಾ ಫ್ರೆಂಚ್ ಸ್ಟೇಟ್ ಮಿಂಟ್ ಎಂಬುದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದ್ದು, ಫ್ರಾನ್ಸ್ ದೇಶದ ನಾಣ್ಯಗಳು ಮತ್ತು ಇತರ ಕರೆನ್ಸಿಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಮನು ಭಾಕರ್, ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದರು. ಈ ಎರಡೂ ಕಂಚಿನ ಪದಕಗಳು ಕೂಡ ಬಣ್ಣ ಕಳೆದುಕೊಂಡಿವೆ. ಅಲ್ಲದೇ ಗುಣಮಟ್ಟವು ಕೂಡ ಕುಂದಿದೆ. ಆದ್ದರಿಂದ ಅವರಿಗೂ ಹೊಸ ಪದಕಗಳನ್ನು ನೀಡಲಾಗುವುದು.
ಮನು ಜತೆ ಶೂಟರ್‌ಗಳಾದ ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್, ಕುಸ್ತಿಪಟು ಅಮನ್ ಸೆರಾವತ್ ಕೂಡ ತಮ್ಮ ಪದಕ ಹೊಳಪು ಕಳೆದುಕೊಂಡಿದ್ದಾಗಿ ಭಾರತ ಒಲಿಂಪಿಕ್ ಸಂಸ್ಥೆಗೆ ದೂರು ನೀಡಿದ್ದಾರೆ.