Puneeth Rajkumar: ಅಪ್ಪು ಬಾಡಿಗಾರ್ಡ್ ಚಲಪತಿ ಪುತ್ರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್!
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಜೊತೆಗೆ ಅಂಗರಕ್ಷಕನಾಗಿದ್ದ ಚಲಪತಿ ನಿಷ್ಠಾವಂತ ಸೇವೆಯನ್ನು ಇಂದಿಗೂ ಜನ ಕೊಂಡಾಡುತ್ತಿದ್ದಾರೆ. ಪುನೀತ್ ಮರಣದ ಬಳಿಕ ಅವರ ಕೆಲ ಒಳ್ಳೆತನದ ಬಗ್ಗೆ ಜನರಿಗೆ ತಿಳಿಯದ ಅದೆಷ್ಟೋ ವಿಚಾರವನ್ನು ಬಾಡಿಗಾರ್ಡ್ ಚಲಪತಿ ಹೇಳಿಕೊಂಡಿದ್ದರು. ಇದೀಗ ಬಾಡಿಗಾರ್ಡ್ ಚಲಪತಿ ಅವರ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.


ಬೆಂಗಳೂರು: ನಟ ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರೊಂದಿಗೆ ಗನ್ ಮ್ಯಾನ್, ಬಾಡಿ ಗಾರ್ಡ್ ಚಲಪತಿ ಅವರು 11 ವರ್ಷದಿಂದಲೂ ಜೊತೆಯಲ್ಲಿ ಇದ್ದರು. ಪುನೀತ್ ಅಕಾಲಿಕ ಮರಣದ ಬಳಿಕ ದೊಡ್ಮನೆ ಕುಟುಂಬದ ನಂಟಿನೊಂದಿಗೆ ಬಾಡಿಗಾರ್ಡ್ ಚಲಪತಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಪವರ್ ಸ್ಟಾರ್ ಜೊತೆಗೆ ಅಂಗರಕ್ಷಕನಾಗಿದ್ದ ಚಲಪತಿ ನಿಷ್ಠಾವಂತ ಸೇವೆಯನ್ನು ಇಂದಿಗೂ ಜನ ಕೊಂಡಾಡುತ್ತಿದ್ದಾರೆ. ಪುನೀತ್ ಮರಣದ ಬಳಿಕ ಅವರ ಕೆಲ ಒಳ್ಳೆತನದ ಬಗ್ಗೆ ಜನರಿಗೆ ತಿಳಿಯದ ಅದೆಷ್ಟೋ ವಿಚಾರವನ್ನು ಬಾಡಿಗಾರ್ಡ್ ಚಲಪತಿ ಹೇಳಿಕೊಂಡಿದ್ದರು. ಇದೀಗ ಬಾಡಿ ಗಾರ್ಡ್ ಚಲಪತಿ ಅವರ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ಮಗಳ ಸಾಧನೆಗೆ ಕೂಡ ಅಪ್ಪು ಸ್ಫೂರ್ತಿ ಎಂದು ಚಲಪತಿ ಹೇಳಿದ್ದಾರೆ.
ಚಲಪತಿ ಮತ್ತು ಲಕ್ಷ್ಮೀ ದಂಪತಿಯ ಹಿರಿಯ ಪುತ್ರಿ ಅಮೂಲ್ಯ ಸಿ ಅವರು ಹುಲ್ಲಹಳ್ಳಿ ಬಳಿಯ ಕ್ರೈಸ್ಟ್ ಅಕಾಡೆಮಿಯಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದಾರೆ. ಈ ಮೂಲಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅಮೂಲ್ಯ ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ 98 ಅಂಕ ಗಳಿಸಿದ್ದಾರೆ. ಇನ್ನು ಎಕನಾಮಿಕ್ಸ್‌ನಲ್ಲಿ 97, ಇಂಗ್ಲೀಷ್ 90, ಬ್ಯುಸಿನೆಸ್ ಸ್ಟಡೀಸ್ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕ ಸೇರಿ ಒಟ್ಟು 600 ಅಂಕಗಳಿಗೆ 566 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಪಿಯು ಪರೀಕ್ಷೆಯಲ್ಲಿ 94. 33 ಪರ್ಸಂಟೇಜ್ ಅಂಕ ಪಡೆದಿದ್ದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಆಕೆಯ ಸಾಧನೆಗೆ ದೊಡ್ಮನೆ ಕುಟುಂಬ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.
ಮಗಳ ಸಾಧನೆ ಬಗ್ಗೆ ಬಾಡಿಗಾರ್ಡ್ ಚಲಪತಿ ಅವರು ಸಂತಸಗೊಂಡಿದ್ದು ತನ್ನ ಮಗಳು ಈ ಸಾಧನೆ ಮಾಡಲು ಪುನೀತ್ ರಾಜ್ಕುಮಾರ್ ಅವರ ಆಶೀರ್ವಾದ ಕಾರಣ. ನಾನು ಕೆಲಸ ನಿಮಿತ್ತ ಹೆಚ್ಚು ಹೊರಗೆ ಇರುತ್ತಿದ್ದೆ. ಹೀಗಾಗಿ ಕುಟುಂಬದ ಜವಾಬ್ದಾರಿ ಅಪ್ಪು ಸರ್ ನೋಡಿಕೊಂಡಿದ್ದರು.ಎಷ್ಟೋ ಬಾರಿ ಸಲಹೆ ಕೂಡ ನೀಡಿದ್ದರು. ಪ್ರಾಥಮಿಕ ಶಾಲೆಯಿಂದಲೂ ನನ್ನ ಮಗಳನ್ನು ಅವರೇ ಓದಿಸಿದ್ದು ನನ್ನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅಪ್ಪು ಸರ್ ಅವರೇ ಹೊತ್ತಿದ್ದರು. ಮಗಳ ಈ ಸಾಧನೆಗೆ ಯಜಮಾನರೇ ಕಾರಣ ಅವರೇ ಸ್ಫೂರ್ತಿ ಎಂದು ಪುನೀತ್ ರಾಜ್ಕುಮಾರ್ ಅವರ ಸಹಾಯವನ್ನು ಸ್ಮರಿಸಿದ್ದಾರೆ
ಪುನೀತ್ ರಾಜ್‌ಕುಮಾರ್ ಅವರು ನನಗೆ ವಿದ್ಯಾದಾನ ಮಾಡಿದ್ದಾರೆ. ಶಿಕ್ಷಣಕ್ಕೆ ಬೇಕಾದ ಸಹಕಾರ ನೀಡಿದ್ದಾರೆ. ಹೀಗಾಗಿ ಸಾಧನೆಗೂ ಸಾಕಷ್ಟು ನೆರವಾಯಿತು. ವಾಣಿಜ್ಯ ವಿಭಾಗದಲ್ಲಿ 94.33 ಶೇಕಡಾ ಪಡೆದಿದ್ದು ಅವರ ಸ್ಫೂರ್ತಿಯಿಂದಲೇ. ಮುಂದೆ ಬಿಕಾಂ ಓದುವ ಆಸೆ ಇದೆ. ಬಳಿಕ ಸಿಎ ಆಗಬೇಕು ಎಂಬ ಕನಸು ಹೊಂದಿರುವುದಾಗಿ ಚಲಪತಿ ಪುತ್ರಿ ಅಮೂಲ್ಯ ಅವರು ತಿಳಿಸಿದ್ದಾರೆ.
ಇದನ್ನು ಓದಿ: Ashwini Puneeth Rajkumar: ಕಾಪು ಮಾರಿಯಮ್ಮ ದೇಗುಲಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ
ಪುನೀತ್ ರಾಜ್‌ಕುಮಾರ್ ಜೊತೆಗೆ ಅನೇಕ ವರ್ಷದಿಂದ ಗನ್ ಮ್ಯಾನ್ ಆಗಿ ಕೆಲಸ ನಿರ್ವಹಿಸಿದ್ದ ಚಲಪತಿ ಅವರು ದೊಡ್ಮನೆ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದಿಕೊಂಡಿದ್ದರು. ಪುನೀತ್ ನಿಧನದ ಬಳಿಕ ಛಲಪತಿ ಹೆಚ್ಚು ಕುಗ್ಗಿ ಹೋಗಿದ್ದರು. ಬಳಿಕ ಅಶ್ವಿನಿ ಪುನೀತ್ ತಮ್ಮ ಮನೆಯಲ್ಲಿ ಬಾಡಿಗಾರ್ಡ್ ಆಗಿ ಕೆಲಸ ಮಾಡಲು ಸೂಚಿಸಿದ್ದರು. ಆದರೆ ಅಪ್ಪು ಇಲ್ಲದ ಮನೆಯಲ್ಲಿ ಇರಲು ಮನಸ್ಸು ಭಾರವಾಗುತ್ತದೆ. ಕೊನೆಯ ತನಕ ಅವರ ನೆನಪಲ್ಲೇ ಇರುವೆ ಎಂದು ಚಲಪತಿ ಅವರು ತಿಳಿಸಿದ್ದರು. ಸದ್ಯ ಪುನೀತ್ ಅಭಿಮಾನಿಗಳು ಚಲಪತಿ ಪುತ್ರಿಯ ಸಾಧನೆಗೆ ಮನಸಾರೆ ಹಾರೈಸಿದ್ದಾರೆ.