ಸತತ ವೈಫಲ್ಯದ ಹೊರತಾಗಿಯೂ ಸಂಜು ಸ್ಯಾಮ್ಸನ್ ಆಡಬೇಕೆಂದ ಮಾಂಜ್ರೇಕರ್!
Sanjay Manjrekar backs Sanju Samson: ಇಂಗ್ಲೆಂಡ್ ವಿರುದ್ದ ಸತತ ನಾಲ್ಕೂ ಟಿ20ಐ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಬೆಂಬಲ ನೀಡಿದ್ದಾರೆ. ವೈಫಲ್ಯದ ಹೊರತಾಗಿಯೂ ಸಂಜುಗೆ ದೀರ್ಘಾವಧಿ ಅವಕಾಶ ನೀಡಬೇಕೆಂದು ಅವರು ಹೇಳಿದ್ದಾರೆ.
ನವದೆಹಲಿ: ಇಂಗ್ಲೆಂಡ್ ವಿರುದ್ದದ ಟಿ20ಐ ಸರಣಿಯ ಸತತ ನಾಲ್ಕು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಅವರನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಬೆಂಬಲಿಸಿದ್ದಾರೆ. ಸಂಜು ಸ್ಯಾಮ್ಸನ್ ಫಾರ್ಮ್ನಲ್ಲಿದ್ದರೆ ಪಂದ್ಯದ ಮೇಲೆ ಪ್ರಾಬಲ್ಯವನ್ನು ಮೆರೆಯಲಿದ್ದಾರೆ, ಹಾಗಾಗಿ ವೈಫಲ್ಯದ ಹೊರತಾಗಿಯೂ ಅವರಿಗೆ ಅವಕಾಶ ನೀಡಬೇಕೆಂದು ಮಾಂಜ್ರೇಕರ್ ಸಲಹೆ ನೀಡಿದ್ದಾರೆ.
ಈ ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರು ಮೂರು ಬಾರಿ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ, ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ದದ ಟಿ20ಐ ಸರಣಿಯಲ್ಲಿ ಎರಡು ಶತಕಗಳನ್ನು ಸಿಡಿಸಿದ್ದರು. ಆದರೆ, ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಆರಂಭಿಕ ನಾಲ್ಕು ಪಂದ್ಯಗಳಿಂದ ಕೇವಲ 35 ರನ್ಗಳನ್ನು ಮಾತ್ರ ಗಳಿಸಿದ್ದಾರೆ.
IND vs ENG: ಐದನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಇಎಸ್ಪಿಎನ್ ಕ್ರಿಕ್ಇನ್ಪೋ ಜೊತೆ ಮಾತನಾಡಿದ ಸಂಜಯ್ ಮಾಂಜ್ರೇಕರ್, "ನೀವು ಟಿ20ಐ ಪ್ರತಿಭೆಯನ್ನು ನೋಡುತ್ತಿರುವಾಗ, ಅವರ ಬ್ಯಾಟಿಂಗ್ ಪ್ರತಿಭೆ, ಅವರು ಯಾವಾಗ ಚೆನ್ನಾಗಿ ಆಡುತ್ತಾರೆ, ಪಂದ್ಯದಲ್ಲಿ ಯಾವ ಪ್ರಮಾಣದಲ್ಲಿ ಪ್ರಭಾವವನ್ನು ಬೀರಬಹುದು ಎಂಬಿತ್ಯಾದಿ ಅಂಶಗಳನ್ನು ನೀವು ನೋಡಬಹುದು. ಅದರಂತೆ ನೀವು ಸಂಜು ಸ್ಯಾಮ್ಸನ್ ಅವರನ್ನು ನೋಡಿದಾಗ, ಅವರು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ, ಅವರು ಅಸಾಧಾರಣ ಶತಕಗಳನ್ನು ಸಿಡಿಸುತ್ತಾರೆ ಹಾಗೂ ತಂಡವನ್ನು ಒಬ್ಬರೇ ಗೆಲ್ಲಿಸುತ್ತಾರೆ," ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.
2024ರ ಐಸಿಸಿ ಟಿ20ಐ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡ ಬಳಿಕ ಸಂಜು ಸ್ಯಾಮ್ಸನ್ ಅವರು ಮೂರು ಶತಕಗಳು ಹಾಗೂ ಒಂದು ಅರ್ಧಶತಕದೊಂದಿಗೆ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕನಿಷ್ಠ 500ಕ್ಕೂ ಅಧಿಕ ರನ್ ಗಳಿಸಿದ ಭಾರತದ ಆರಂಭಿಕ ಬ್ಯಾಟ್ಸ್ಮನ್ಗಳ ಪೈಕಿ ಸಂಜು ಸ್ಯಾಮ್ಸನ್ ಅತಿ ಹೆಚ್ಚು ಸ್ಟ್ರೈಕ್ ರೇಟ್ (177.54) ಹೊಂದಿದ್ದಾರೆ.
IND vs ENG: ಇಂಗ್ಲೆಂಡ್ಗೆ ಸೋಲಿನ ಬರೆ ಎಳೆದು ಟಿ20ಐ ಸರಣಿ ವಶಪಡಿಸಿಕೊಂಡ ಭಾರತ!
"ಸಂಜು ಸ್ಯಾಮ್ಸನ್ ಅವರಂಥ ಟಿ20 ಬ್ಯಾಟ್ಸ್ಮನ್ಗಳನ್ನು ನೀವು ಬೆಂಬಲಿಸಬೇಕಾಗುತ್ತದೆ, ಏಕೆಂದರೆ ಟಿ20 ಕ್ರಿಕೆಟಿಗರ ಸ್ವಭಾವ ಅದೇ ರೀತಿ ಇರುತ್ತದೆ. ಅವರು ತಮ್ಮ ವೈಯಕ್ತಿಕ ಉದ್ದೇಶಕ್ಕಾಗಿ ಆಡುವುದಿಲ್ಲ. ಅವರು ಪಂದ್ಯದಲ್ಲಿ ಅಪಾಯವನ್ನು ಸತತವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಫಾರ್ಮ್ಗೆ ಮರಳಲು ಕೇವಲ ಒಂದೇ ಒಂದು ಇನಿಂಗ್ಸ್ ಸಾಕು," ಎಂದು ಸಂಜಯ್ ಮಾಂಜ್ರೇಕರ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ಟಿ20ಐ ತಂಡದಲ್ಲಿ ಸಂಜು ಸ್ಯಾಮ್ಸನ್ ಆರಂಭಿಕ ಬ್ಯಾಟ್ಸ್ಮನ್ ಆಗಿ ನಿಯಮಿತವಾಗಿ ಆಡುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತವರು ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಒಂದು ಶತಕವನ್ನು ಸಿಡಿಸಿದ್ದರು. ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಆ ಮೂಲಕ ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಮೂರು ಟಿ20ಐ ಶತಕಗಳನ್ನು ಸಿಡಿಸಿದ ಭಾರತೀಯ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಇದರ ಹೊರತಾಗಿಯೂ ಪ್ರಸಕ್ತ ವರ್ಷದಲ್ಲಿ ಅದೇ ಲಯವನ್ನು ಮುಂದುವರಿಸುವಲ್ಲಿ ಅವರು ವಿಫಲರಾದರು.