Viral Video: ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಏರಿದ ಭೂಪ ; ಯುವಕನ ಹುಚ್ಚಾಟಕ್ಕೆ ನೆಟ್ಟಿಗರು ಗರಂ
ಮಧ್ಯಪ್ರದೇಶದ ಭೋಪಾಲ್‍ನ ಬರ್ಖೇಡಿ ಪ್ರದೇಶದಲ್ಲಿ 33 ವರ್ಷದ ವಿವೇಕ್ ಠಾಕೂರ್ ಎಂಬ ಯುವಕ ಕುಡಿದ ಮತ್ತಿನಲ್ಲಿ ಮೊಬೈಲ್ ಟವರ್ ಮೇಲೇರಿದ ಘಟನೆ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ತಕ್ಷಣ, ಪೊಲೀಸರಿಗೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‍ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಕ್ಷಣಾ ತಂಡ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ.
ಭೋಪಾಲ್: ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಮೊಬೈಲ್ ಟವರ್ ಮೇಲೇರಿದ ಘಟನೆ ಮಧ್ಯಪ್ರದೇಶದ ಭೋಪಾಲ್‍ನ ಬರ್ಖೇಡಿ ಪ್ರದೇಶದಲ್ಲಿ ನಡೆದಿದೆ. ಆತನ ಹುಚ್ಚಾಟವನ್ನು ಅಲ್ಲಿದ್ದವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದೆ.ಅದೃಷ್ಟವಶಾತ್, ಘಟನೆಯಲ್ಲಿ ಆ ವ್ಯಕ್ತಿಗೆ ಯಾವುದೇ ಗಾಯಗಳಾಗಲಿಲ್ಲ. ಸಮಯಕ್ಕೆ ಸರಿಯಾಗಿ ಬಂದ ಪೊಲೀಸರು ಆತನನ್ನು ರಕ್ಷಿಸಿದ್ದಾರೆ. ಆದರೆ ಆ ವ್ಯಕ್ತಿ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಯುವಕನನ್ನು ಭೋಪಾಲ್‌ನ ಐಶ್ಬಾಗ್ ಪ್ರದೇಶದ ನಿವಾಸಿ 33 ವರ್ಷದ ವಿವೇಕ್ ಠಾಕೂರ್ ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈತ ಕುಡಿದ ಅಮಲಿನಲ್ಲಿ ಮೊಬೈಲ್ ಟವರ್ ಏರಿ ಅದನ್ನು ಅಲುಗಾಡಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಅವನು ಟವರ್ ಏರುವುದನ್ನು ನೋಡಿ, ಅದರ ಸುತ್ತಲೂ ದೊಡ್ಡ ಜನಸಮೂಹ ಜಮಾಯಿಸಿದೆ. ಜನರು ಅವನನ್ನು ನೋಡಿ ಆಘಾತಗೊಂಡು ತಕ್ಷಣ, ಪೊಲೀಸರಿಗೆ ಮತ್ತು ಮುನ್ಸಿಪಲ್ ಕಾರ್ಪೊರೇಷನ್‍ಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಮಹಾನಗರ ಪಾಲಿಕೆ, ಪೊಲೀಸ್ ಮತ್ತು ಎಸ್‍ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿದವು.
ಘಟನೆಯ ಬಗ್ಗೆ ಜಹಾಂಗೀರಾಬಾದ್ ಪೊಲೀಸ್ ಠಾಣೆಯ ಎಎಸ್ಐ ರಾಜೇಂದ್ರ ಯಾದವ್ ಮಾತನಾಡಿ, ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ವಿಷಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಂಠಪೂರ್ತಿ ಕುಡಿದು ಮಂಟಪದಲ್ಲೇ ವರನ ರಂಪಾಟ; ಮದುವೆ ಕ್ಯಾನ್ಸಲ್ ಮಾಡಿದ ವಧುವಿನ ತಾಯಿ: ವಿಡಿಯೊ ವೈರಲ್
ಪೊಲೀಸರು ಮತ್ತು ರಕ್ಷಣಾ ತಂಡವು ಯಾವುದೇ ಅನಾಹುತವಾಗಬಾರದೆಂದು ಯುವಕನನ್ನು ಸಂಭಾಷಣೆಯಲ್ಲಿ ತೊಡಗಿಸಿ ಕೊನೆಗೆ ಮಧ್ಯಾಹ್ನ 2: 40 ರ ಸುಮಾರಿಗೆ ಅವನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನಟ್ಟಿಗರು ಆತನ ವಿರುದ್ಧ ಗರಂ ಆಗಿದ್ದಾರೆ.