Saturday, 30th November 2024

WTC 2023-25 Points Table: ಮತ್ತಷ್ಟು ಗಟ್ಟಿಗೊಂಡ ಭಾರತದ ಅಗ್ರಸ್ಥಾನ

WTC 2023-25 Points Table

ಚೆನ್ನೈ: ಭಾನುವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಮುಕ್ತಾಯಕಂ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆತಿಥೇಯ ಭಾರತ 280 ರನ್‌ಗಳ ಜಯ ಸಾಧಿಸುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2023-25 ಅಂಕಪಟ್ಟಿಯಲ್ಲಿ(WTC 2023-25 Points Table) ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಸೋಲು ಕಂಡ ಬಾಂಗ್ಲಾದೇಶ 2 ಸ್ಥಾನಗಳ ಕುಸಿತ ಕಂಡಿದೆ.

ಕಳೆದ ತಿಂಗಳು ಪಾಕಿಸ್ತಾನವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಸರಣಿ ಗೆದ್ದಿದ್ದ ಬಾಂಗ್ಲಾದೇಶ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತ್ತು. ಇದೀಗ 2 ಸ್ಥಾನಗಳ ಕುಸಿತದೊಂದಿಗೆ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಶ್ರೀಲಂಕಾ 4ನೇ ಸ್ಥಾನಕ್ಕೇರಿದೆ. ಭಾರತ ಸದ್ಯ 10 ಪಂದ್ಯಗಳಿಂದ 86 ಅಂಕ ಮತ್ತು ಗೆಲುವಿನ ಪ್ರತಿಶತ ಅಂಕ 71.67 ಹೊಂದಿದೆ. ಆಸ್ಟ್ರೇಲಿಯಾ(62.50) ದ್ವಿತೀಯ ಸ್ಥಾನ ಮತ್ತು ನ್ಯೂಜಿಲ್ಯಾಂಡ್‌(50.00) ಮೂರನೇ ಸ್ಥಾನದಲ್ಲಿದೆ. ಫೈನಲ್‌ ತಲುಪಲು ಸದ್ಯ ಈ ಮೂರು ತಂಡಗಳ ಮಧ್ಯೆ ತೀವ್ರ ಪೈಫೋಟಿ ಏರ್ಪಟ್ಟಿದೆ.

ಟಾಪ್‌ 5 ತಂಡಗಳು

ಭಾರತ-ಗೆಲುವಿನ ಪ್ರತಿಶತ 71.67

ಆಸ್ಟ್ರೇಲಿಯಾ- ಗೆಲುವಿನ ಪ್ರತಿಶತ 62.50

ನ್ಯೂಜಿಲ್ಯಾಂಡ್‌- ಗೆಲುವಿನ ಪ್ರತಿಶತ 50.00

ಶ್ರೀಲಂಕಾ- ಗೆಲುವಿನ ಪ್ರತಿಶತ 42.86

ಇಂಗ್ಲೆಂಡ್‌-ಗೆಲುವಿನ ಪ್ರತಿಶತ 42.19

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

ಫೈನಲ್‌ ಪಂದ್ಯ ಯಾವಾಗ?

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ದಿನಾಂಕವನ್ನು ಈಗಾಗಲೇ ಘೋಷಿಸಲಾಗಿದೆ. ಫೈನಲ್ ಪಂದ್ಯವು ಜೂನ್ 11 ಮತ್ತು ಜೂನ್ 15 ರ ನಡುವೆ ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯಲಿದೆ. ಜೂನ್‌ 16 ಮೀಸಲು ದಿನವಾಗಿದೆ. ಕ್ರಿಕೆಟ್‌ ಕಾಶಿ ಎಂದು ಕರೆಯಲಾಗುವ ಲಾರ್ಡ್ಸ್‌ನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನಡೆಯುತ್ತಿದೆ. ಮೊದಲ ಆವೃತ್ತಿಯ ಫೈನಲ್‌ (2021) ಸೌತ್‌ಹ್ಯಾಂಪ್ಟನ್ನಲ್ಲಿ ಮತ್ತು ಎರಡನೇ ಆವೃತ್ತಿಯ ಫೈನಲ್ (2023)‌ ಓವಲ್‌ನಲ್ಲಿ ನಡೆದಿತ್ತು. ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಬಾರಿ ಚಾಂಪಿಯನ್‌ ಆಗಿ ಮೂಡಿಬಂದಿದ್ದವು. ಎರಡು ಬಾರಿಯೂ ಭಾರತ ರನ್ನರ್ ಅಪ್‌ ಆಗಿತ್ತು. ಮೂರನೇ ಆವೃತ್ತಿಯಲ್ಲಿ ಫೈನಲ್‌ಗೆ ಭಾರತ ಅರ್ಹತೆ ಪಡೆದು ಕಪ್‌ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ.