ಕನ್ನಡ ಸಾಹಿತ್ಯದಲ್ಲಿ ಪರಿಸರ ಕಾಳಜಿ
ಕನ್ನಡ ಸಾಹಿತ್ಯದಲ್ಲಿ ಪರಿಸರ ಕಾಳಜಿ
Vishwavani News
June 5, 2022
ಎನ್.ಶಂಕರ್ ರಾವ್
ನಮ್ಮ ಹಿರಿಯ ಸಾಹಿತಿಗಳು ಪರಿಸರ ಕಾಳಜಿಯನ್ನು ವ್ಯಕ್ತಪಡಿಸುವ ಹಲವು ಕೃತಿಗಳನ್ನು ರಚಿಸಿದ್ದು ವಿಶೇಷ ಎನಿಸಿದೆ. ಪರಿಸರ ದಿನಾಚರಣೆಯನ್ನು ನಮ್ಮ ಸರಕಾರವು ಆರಂಭಿಸುವ ಮೊದಲೇ, ಆ ಕ್ಷೇತ್ರದಲ್ಲಿ ಕಾರಂತ ಅವರಂತಹ ಲೇಖಕರು ಗಂಭೀರ ಕೆಲಸಗಳನ್ನು ಮಾಡಿದ್ದರು!
ಕವನಗಳು ನೋವಿನಿಂದ ಅಥವಾ ಸಂತೋಷದಿಂದ ಉದ್ಭವವಾಗುತ್ತವೆ ಎಂದು ಡಾ. ಅಬ್ದುಲ್ ಕಲಾಂ ಅವರು ಒಂದು ಸಂದರ್ಭದಲ್ಲಿ ಹೇಳಿದ್ದುಂಟು. ಕನ್ನಡ ಕವಿಗಳು, ಸಾಹಿತಿಗಳು ರಚಿಸಿಕೊಂಡು ಬಂದ ಕವನ, ಲೇಖನಗಳಲ್ಲಿ ಬಹು ಹಿಂದಿ ನಿಂದಲೂ ಪರಿಸರದ ಕುರಿತಾದ ಒಲವು, ಕಾಳಜಿ, ಪ್ರೀತಿ ಇದ್ದುದನ್ನು ಕಾಣುತ್ತೇವೆ. ಕೆಲವು ದಶಕಗಳ ಹಿಂದೆ ಪರಿಸರ ರಕ್ಷಣೆಯು ಒಂದು ಅಭಿಯಾನದ ಸ್ವರೂಪ ಪಡೆದಿರಲಿಲ್ಲ, ಆದರೆ, ಅಂತಹ ದಿನಗಳಲ್ಲಿ ನಮ್ಮ ಹಿರಿಯ ಸಾಹಿತಿಗಳು ಪರಿಸರ ಪ್ರೀತಿಯ ಬರಹಗಳನ್ನು ಬರೆದದ್ದು ವಿಶೇಷ ಎನಿಸುತ್ತದೆ.
ಕುವೆಂಪುರವರು ಬರೆದ ಮೊದಲ ಕನ್ನಡ ಕವನ ಸಂಕಲನ ಅಮಲನ ಕಥೆ. ಚಿಕ್ಕಂದಿ ನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.
ಕುವೆಂಪುರವರ ಸೂರ್ಯಗೀತೆ; ಆನಂದಮಯ ಈ ಜಗಹೃದಯ: ಗೀತೆಯಲ್ಲಿ, ಕವಿಗಳು ಈ ಜಗತ್ತಿನ ಎಲ್ಲಾ ಆಗು-ಹೋಗುಗಳ ಮೂಲವು ಶಿವ’ನೆಂದು ಭಾವಿಸುತ್ತಾರೆ. ಹಸುರಿನಿಂದ ನಳನಳಿಸುವ ಸಹ್ಯಾದ್ರಿಯಂತಹ ಬೆಟ್ಟಗಳು-ಅರಣ್ಯಗಳು. ಭೋರ್ಗರೆವ ಸಾಗರ, ನೀಲಿ ಆಕಾಶ, ಧುಮ್ಮಿಕ್ಕುವ ಜಲಧಾರೆ, ಸೋನೆ ಮಳೆ, ಹಕ್ಕಿಗಳ ಚಿಲಿಪಿಲಿ, ಮೋಡಗಳ ಘರ್ಜನೆ, ಹಾಡುವ ಕೋಗಿಲೆಗಳ ಕಂಠ ಸಿರಿ- ಹೀಗೆ ಪ್ರಕೃತಿಯ ಪ್ರತೀ ಸೌಂದರ್ಯದಲ್ಲೂ ಶಿವನ ಹೃದಯವು ವಿಸ್ತರಿಸಿದೆ ಎಂದು ಕವಿ ಉನ್ಮತ್ತರಾಗಿ ಹಾಡಿದ್ದಾರೆ.
ಪ್ರಕೃತಿಯಲ್ಲಿ ಸಾಧಾರಣವಾಗಿ ಸಂಭವಿಸುವ ಸೂರ್ಯೋದಯ ಚಂದ್ರೋದಯವೂ ದೇವನ ದಯೆ ಎಂದಿದ್ದಾರೆ. ಕುವೆಂಪು ಅವರ ಕಾವ್ಯದಲ್ಲಿ, ಕಾದಂಬರಿಗಳಲ್ಲಿ ಪರಿಸರ, ಪ್ರಕೃತಿ, ನಿಸರ್ಗ ಉದ್ದಕ್ಕೂ ಹರಿದು ಬಂದಿದೆ. ಕುವೆಂಪು ಅವರ ಪರಿಸರ ಪ್ರೇಮವು ಅವರ ಸಾಹಿತ್ಯದಲ್ಲಿ ಕೆಲವು ಕಡೆ ಪ್ರವಾಹದ ಸ್ವರೂಪವನ್ನೂ ಪಡೆದಿದೆ.
“ಮಲೆಗಳಲ್ಲಿ ಮದುಮಗಳು" ಕಾದಂಬರಿಯಲ್ಲಂತೂ ಪ್ರಕೃತಿಯೇ ಒಂದು ಪಾತ್ರದ ರೀತಿಯಲ್ಲಿ ಮೂಡಿಬಂದಿದ್ದು, ಇವೆಲ್ಲವೂ ಕಾದಂಬರಿಕಾರರ ಪ್ರಕೃತಿ ಪ್ರೇಮವನ್ನು ಬಿಂಬಿಸುತ್ತವೆ. ಕುವೆಂಪು ಅವರ ಎರಡೂ ಕಾದಂಬರಿಗಳಲ್ಲಿ ಕಾಡು, ಕಾನನ ದಟ್ಟವಾಗಿ ಚಿತ್ರಣಗೊಂಡಿದೆ. ಸ್ವಾಮಿಯವರ ಪರಿಸರ ಪ್ರೇಮ ಬಿ.ಜಿ.ಎಲ್.ಸ್ವಾಮಿ ಅವರು ಸಸ್ಯ ವಿಜ್ಞಾನಿಯಾಗಿದ್ದರು. ಅವರ ಸಂಶೋ ಧನೆಯ ಸಾಕಷ್ಟು ಭಾಗ ಸಾಹಿತ್ಯ, ಸಂಸ್ಕೃತಗಳೊಂದಿಗೆ ಸಂಬಂಧವಿದ್ದದ್ದು, ಉಪನಿಷತ್ತುಗಳಲ್ಲಿ ಪ್ರಸ್ತಾಪವಾದ ಸಸ್ಯಗಳು, ಕನ್ನಡ ಕವಿಗಳು ವರ್ಣಿಸಿರುವ ಸಸ್ಯಗಳು ಇವನ್ನು ಅಧ್ಯಯನ ಮಾಡುತ್ತಿದ್ದರು.
“ಹಸುರು ಹೊನ್ನು" ಪುಸ್ತಕದುದ್ದಕ್ಕೂ ಅವರು ಪ್ರಸ್ತಾಪಿಸಿದ ಮರಗಿಡಗಳು ಹಣ್ಣು ಹೂಗಳನ್ನು ಬೇರೆ ಬೇರೆ ಭಾಷೆಗಳ ಸಾಹಿತ್ಯ ಗಳಲ್ಲಿ ಕವಿಗಳು ಹೇಗೆ ವರ್ಣಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಹಸುರು ಹೊನ್ನು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಬಂದಿದೆ. ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಅಧ್ಯಯನದ ಭಾಗವನ್ನೇ ಆ ಪುಸ್ತಕ ರಚನೆಯ ಕಥನ ಕ್ರಮವಾಗಿ ಕೈಗೆತ್ತಿ ಕೊಂಡಿರುವ ಬಿ.ಜಿ.ಎಲ್. ಸ್ವಾಮಿಯವರು, ಕೃತಿಯುದ್ದಕ್ಕೂ ನೂರಾರು ಸಸ್ಯಗಳ ಪರಿಚಯವನ್ನು ಮಾಡಿಸುತ್ತಾರೆ.
ವಿಶೇಷವೆಂದರೆ, “ಹಸುರು ಹೊನ್ನು" ಪುಸ್ತಕವು ಸಸ್ಯಶಾಸಕ್ಕೆ ಸಂಬಂಧಿಸಿದ ಗ್ರಂಥವಾದರೂ, ಅದನ್ನು ಒಂದು ಕಾದಂಬರಿಯಂತೆ ಅಥವಾ ಪ್ರವಾಸ ಕಥನದಂತೆ ಓದಿಕೊಳ್ಳಬಹುದು. ಎಲ್ಲೂ ಬೋರ್ ತರಿಸದೇ ವಿಜ್ಞಾನ ಸಂಬಂಧದ ವಿಷಯವನ್ನು ಆಕರ್ಷಕ ವಾಗಿ ಪ್ರಸ್ತುತಪಡಿಸಬಹುದು ಎಂಬುದಕ್ಕೆ ಅವರು ರಚಿಸಿದ “ಹಸುರು ಹೊನ್ನು" ಒಂದು ಉತ್ತಮ ಉದಾಹರಣೆ. ಆ ಪುಸ್ತಕ ದಲ್ಲಿರುವ ನೂರಾರು ಸಸ್ಯಗಳ ರೇಖಾಚಿತ್ರಗಳನ್ನು ಸ್ವಾಮಿಯವರೇ ಚಿತ್ರಿಸಿದ್ದು ಮತ್ತೊಂದು ವಿಶೇಷ. ಕನ್ನಡದಲ್ಲಿ ಪರಿಸರದ ಕುರಿತು ಇಷ್ಟೊಂದು ಆಕರ್ಷಕ ಶೈಲಿಯಲ್ಲಿ ಕೃತಿ ರಚಿಸಿದವರಲ್ಲಿ ಬಿ.ಜಿ.ಎಲ್.ಸ್ವಾಮಿಯವರು ಪ್ರಥಮರು ಮತ್ತು ಪ್ರಮುಖರು.
ಇದಲ್ಲದೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ದಲ್ಲಿ ತುಂಬ ಸ್ವಾರಸ್ಯವಾಗಿ ಆ ದೇಶದಿಂದ ಬಂದ ಸಸ್ಯಗಳನ್ನು ಕುರಿತು
ಬರೆದಿದ್ದಾರೆ. ‘ಸಾಕ್ಷಾತ್ಕಾರದ ದಾರಿಯಲ್ಲಿ’ ವೀಳ್ಯದೆಲೆ, ಅಡಿಕೆ, ಆಫೀಮು ಮೊದಲಾದವುಗಳ ಕುರಿತ ಸ್ವಾರಸ್ಯವಾದ ಮಾಹಿತಿ
ತಿಳಿಸಿದ್ದಾರೆ. ಸಸ್ಯಗಳ ಕುರಿತು ಬಿ.ಜಿ.ಎಲ್.ಸ್ವಾಮಿಯವರು ಹಲವು ಪುಸ್ತಕಗಳನ್ನು ರಚಿಸಿದ್ದು, ಅವೆಲ್ಲವೂ ಜನಪ್ರಿಯ ವಾಗಿರುವುದು ಒಂದು ದಾಖಲೆ.
ತೇಜಸ್ವಿ ಬಹುದೊಡ್ಡ ಪರಿಸರ ತಜ್ಞರು, ಸಾಹಿತ್ಯ ಆರಾಧಕರು, ಪರಿಸರಸವನ್ನು ಸೂಕ್ಷ್ಮವಾಗಿ ಗಮನಿಸಿ, ಪರಿಸರದ ವ್ಯಾಪಾರ ಗಳನ್ನು ಲೇಖನಗಳಲ್ಲಿ ಹಿಡಿದಿಟ್ಟ ಉತ್ತಮ ಸಾಹಿತಿ. ಪ್ರಕೃತಿ ಮತ್ತು ಪ್ರಾಣಿಗಳು ತೇಜಸ್ವಿಯವರಿಗೆ ಇಂದ್ರಿಯಗಳಾಗಿದ್ದವು. ಮೈಸೂರಿನಂತಹ ನಗರದ ವಾಸವನ್ನು ತೊರೆದು, ಮೂಡಿಗೆರೆ ಸುತ್ತಲಿನ ಪ್ರಕೃತಿಯ ಮಡಿಲಲ್ಲಿ ಬಾಳಿ ಬದುಕಿದರು. ತೇಜಸ್ವಿ ಯವರ ಪರಿಸರದ ಕಥೆ ಹೊಸ ರೀತಿಯ ಬರವಣಿಗೆ. ಮಾನೀಟರ್, ಕಿವಿಯೊಡನೆ ಒಂದು ದಿನ, ಮಾಸ್ತಿ ಮತ್ತು ಭೈರ, ಸುಸ್ಮಿತ ಮತ್ತು ಹಕ್ಕಿಮರಿ, ಎಂಗ್ಟನ ಪುಂಗಿ, ಕುಕ್ಕುಟ ಪಿಶಾಚಿ, ಮೂಲಿಕೆ ಬಳ್ಳಿಯ ಸುತ್ತ ಹೀಗೆ ಮುಂತಾದ ಪರಿಸರವನ್ನು ಕುರಿತ ಹದಿನಾಲ್ಕು ಬರಹಗಳಿವೆ.
ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ ಎಂಬ ತೇಜಸ್ವಿಯವರ ಮಾತಿಗೆ ಪರಿಸರದ ಕತೆ
ಉತ್ತಮ ಉದಾಹರಣೆ. ಅವರ ಕರ್ವಾಲೋ ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದು ತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಪರಿಸರವೇ ಒಂದು ಪಾತ್ರವಾಗಿ ಕಾದಂಬರಿಗೆ ಜೀವ ನೀಡುವ ಅಪರೂಪದ ನಿದರ್ಶನ “ಕರ್ವಾಲೋ" ಕಾದಂಬರಿಯಲ್ಲಿದೆ. ತೇಜಸ್ವಿಯವರು ಹಕ್ಕಿ ಗಳ ಕುರಿತು ಸಹ ಪುಸ್ತಕಗಳನ್ನು ರಚಿಸಿದ್ದಾರೆ.
ಕಾರಂತರ ಪರಿಸರ ಹೋರಾಟ
ನಡೆದಾಡುವ ವಿಶ್ವಕೋಶ ಎಂದೇ ಹೆಸರಾಗಿದ್ದ ಸಾಹಿತಿ ಶಿವರಾಮ ಕಾರಂತರ ಪ್ರಕೃತಿ ಪ್ರೀತಿ ಬಹಳ ವಿಶೇಷ ಎನಿಸಿತ್ತು. ನಮ್ಮ ರಾಜ್ಯದ ಅತಿ ಸುಂದರ ತಾಣಗಳಿಗೆ ಭೇಟಿ ನೀಡುವುದು ಅವರ ಗಂಭೀರ ಹವ್ಯಾಸವಾಗಿತ್ತು. ಕುದುರೆಮುಖ, ಕುಮಾರಪರ್ವತ, ಕೊಡಚಾದ್ರಿ ಮೊದಲಾದ ಪ್ರಾಕೃತಿಕ ಸೌಚಿದರ್ಯ ಹೊಂದಿದ್ದ ಜಾಗಗಳಿಗೆ ಅವರು ಕಾಲ್ನಡಿಗೆಯಲ್ಲೇ ಭೇಟಿ ನೀಡಿ, ಅಲ್ಲಿನ ಪರಿಸರ ಅಧ್ಯಯನ ಮಾಡಿದ್ದರು.
ದುರ್ಗಮ ಪ್ರದೇಶಗಳಲ್ಲಿದ್ದ ಜಲಪಾತಗಳ ಬಳಿ ಹೋಗಿ, ಅವುಗಳ ಚಿತ್ರಣವನ್ನು ಓದುಗರಿಗೆ ನೀಡಿದ್ದರು. ಹಕ್ಕಿಗಳ ಕುರಿತು ಪುಸ್ತಕ ರಚಿಸಿದ್ದ ಶಿವರಾಮ ಕಾರಂತರು, ಮಕ್ಕಳಿಗಾಗಿ ಪ್ರಾಣಿಗಳ ಪರಿಚಯವನ್ನೂ ಮಾಡಿಕೊಟ್ಟಿದ್ದರು. ನಮ್ಮ ದೇಶದ ಪರಿಸರದ ಪರಿಸ್ಥಿತಿಯ ಕುರಿತ ಅಪರೂಪದ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಉತ್ತರಕನ್ನಡ ಜಿಲ್ಲೆಯಲ್ಲಿ ಯೋಜನೆ ಯೊಂದರಿಂದ ಪರಿಸರ ನಾಶವಾಗುವ ಸ್ಥಿತಿ ಎದುರಾದಾಗ, ಸ್ವತಃ ಹೋರಾಟಕ್ಕೆ ಧುಮುಕಿದ ಧೀರಸಾಹಿತಿ ಅವರು. ಕನ್ನಡದಲ್ಲಿ ಪರಿಸರ ರಕ್ಷಣೆಯ ಕುರಿತು ಗಂಭೀರ ಪ್ರಯತ್ನ ನಡೆಸಿದ ಮೊದಲ ಸಾಹಿತಿ ಶಿವರಾಮ ಕಾರಂತರು.
ಕವಿ ಬೇಂದ್ರೆಯವರ ಶ್ರಾವಣ ಪರಿಸರದ ಸೌಂದರ್ಯಕ್ಕೊಂದು ನಿದರ್ಶನ. ಆ ಕವನದಲ್ಲಿ ಶ್ರಾವಣದ ವೈಭವವನ್ನು ಕಾಣುತ್ತೇವೆ.
ಶ್ರಾವಣ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣ ಬಂತು||
ಎಂಬ ಕವಿಯ ನಲವಿನ ಹಾಡು, ಕವಿ ಕಂಡ ಶ್ರಾವಣದ
ಚೆಲುವಿನ ಚಿತ್ರಗಳಿವು.
ಆಗ್ಯೇದ ಲಗ್ನ | ಅದರಾಗ ಭೂಮಿ ಮಗ್ನ
ಹಸುರುಟ್ಟ ಬಸುರಿಯಾ ಹಾಂಗ |
ನೆಲ ಹೊಲ ಹ್ಯಾಂಗ |
ಅರಿಸಿಣಾ ಒಡೆಧಾಂಗ
ಹೊಮ್ಮುತಾವ | ಬಂಗಾರ ಚಿಮ್ಮುತಾವ |
ಗುಡ್ಡ ಗುಡ್ಡ ಸ್ಥಾವರಾಲಿಂಗ
ಅವಕ ಅಭ್ಯಂಗ
ಎರಿತವನ್ನೋ ಹಾಂಗ
ಕೂಡ್ಯಾವ ಮೋಡ! ಸುತ್ತೆಲ್ಲ ನೋಡ ನೋಡ. ಈ ಚಿತ್ರಗಳಲ್ಲೆಲ್ಲಾ ಕವಿ ಶ್ರಾವಣದ ವೈಭವವನ್ನು ತಾವೇ ತೆರೆದಿದ್ದಾರೆ.
ಅದೇ ಅನುಭವವನ್ನು ಧ್ವನಿಸುವ ರೀತಿ ಇದು: ಗಿಡಗಂಟೆಯಾ ಕೊರಳೊಳಗಿಂದ ಹಕ್ಕೀಗಳ ಹಾಡು
ಹೊರಟಿತು ಹಕ್ಕೀಗಳ ಹಾಡು
ಗಂಧರ್ವರ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು ಕಾಡಿನಾ ನಾಡು!
ಬೇಂದ್ರೆಯವರು ಉದಯದಲ್ಲಿ ಹಕ್ಕಿಗಳ ಹಾಡನ್ನು ಕೇಳಿದಾಗ ಪಡೆದ ಅನುಭವ ಇದು. ನಿಸಾರ್ ಅವರ ಜೋಗದ ಸಿರಿ ಅಂತೂ ಪ್ರಕೃತಿಯ ವರ್ಣನೆಯ ನಿತ್ಯೋತ್ಸವ. ಜಿ.ಎಸ್. ಎಸ್ ಅವರ ಕವನಗಳಲ್ಲಿ ಪರಿಸರ ಪ್ರೀತಿಯು ಗಮನಸೆಳೆಯುತ್ತದೆ.
ನಮ್ಮ ರಾಜ್ಯವು ಪ್ರಕೃತಿ ಸೌಂದರ್ಯದ ಗಣಿ. ಸಹ್ಯಾದ್ರಿ ಕಾಡು, ಕರಾವಳಿಯ ಪರಿಸರ, ಬಯಲುಸೀಮೆಯ ಸುಂದರ ಪ್ರಾಕೃತಿಕ ದೃಶ್ಯ ಮೊದಲಾದವುಗಳು ನಮ್ಮ ನಾಡಿನ ಕವಿ, ಸಾಹಿತಿಗಳ ಮೇಲೂ ಪ್ರಭಾವ ಬೀರಿವೆ. ಪರಿಸರ ದಿನಾಚರಣೆಯಂತಹ ಶಿಷ್ಟಾಚಾರಕ್ಕೆ ಕಟ್ಟು ಬೀಳುವ ಮುನ್ನವೇ ನಮ್ಮ ಸಾಹಿತಿಗಳು ಪರಿಸರ, ಸಸ್ಯ, ಪ್ರಾಣಿಗಳನ್ನು ತಮ್ಮ ರಚನೆಯಲ್ಲಿ ತಂದು, ಪರಿಸರ ಪ್ರೀತಿಯನ್ನು ಮೆರೆದಿದ್ದು ವಿಶೇಷವೇ ಸರಿ.
ನಮ್ಮ ಪರಿಸರ ಸಂರಕ್ಷಣೆ ಬಗ್ಗೆ ಉತ್ತಮ ಚಿಂತನೆ ಮತ್ತು ನಮ್ಮ ಕರ್ತವ್ಯಗಳ ಕುರಿತು ಮಾಹಿತಿ ನೀಡುವ ಮೂಲಕ, ವನಮಹೋ ತ್ಸವ ಆಚರಣೆ, ಪರಿಸರ ದಿನಾಚರಣೆ, ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಇತ್ಯಾದಿ, ಒಂದು ದಿನಕ್ಕೆ ಸೀಮಿತ ವಾಗದೆ, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ, ಎಲ್ಲರೂ ಒಟ್ಟಾಗಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಮಾಡೋಣ. ಜತೆಗೆ ಸಾಹಿತ್ಯ ಸೇವೆಯ ಮೂಲಕ ಪರಿಸರ ಪ್ರೀತಿ ಅಭಿವ್ಯಕ್ತವಾಗಲಿ.