ಮೂಟೆಯಲ್ಲಿ ಪೆಂಗೋಲಿನ್‌ ?

ಮೂಟೆಯಲ್ಲಿ ಪೆಂಗೋಲಿನ್‌ ?

image-6bd55ecf-a2e5-4316-b9b9-a1967b32c16c.jpg
Profile Vishwavani News November 6, 2022
image-d0b632af-aa98-4a61-9806-c18a9d20baff.jpg
ಶಶಿಧರ ಹಾಲಾಡಿ ಬೆಟ್ಟದ ನಡುವೆ ಇದ್ದ ಆ ಮುರುಕು ಬಂಗಲೆಯ ಹಿಂಭಾಗದಲ್ಲಿರುವ ಪುಟ್ಟ ಗುಡಿಸಲಿನಲ್ಲಿ ಅವನೇಕೆ ಮುದುರಿ ಕುಳಿತಿದ್ದ? ಅವನ ಪಕ್ಕದಲ್ಲಿದ್ದ ಮೂಟೆಗಳಲ್ಲಿ ಏನಿದ್ದವು? ಮತ್ತೆ ನಡೆಯತೊಡಗಿದೆವು. ಒಂದು ಗಂಟೆ ನಡೆದ ನಂತರ, ಒಮ್ಮೆಗೇ ದೊಡ್ಡ ದೊಡ್ಡ ಮರಗಳ ಸಂಖ್ಯೆ ಜಾಸ್ತಿಯಾಗತೊಡಗಿತು. ಬಿಳಲುಗಳು, ಪೊದೆಗಳು, ಕುರುಚಲು ಗಿಡಗಳ ಸಂಖ್ಯೆಯೂ ಜಾಸ್ತಿಯಾಯಿತು. ಬಿಸಿಲೇರಿದ್ದರೂ, ಸಾಕಷ್ಟು ನೆರಳಿದ್ದುದರಿಂದ, ನಡೆಯು ವಾಗ ಸುಸ್ತಾಗಲಿಲ್ಲ. ಡಾ. ಕಲ್ಲೂರಾಯರು ತಂದಿದ್ದ ಕ್ಯಾನಿನ ನೀರು ಬಾಯಾರಿಕೆ ತಣಿಸಿತು. ಸ್ವಲ್ಪ ದೂರ ನಡೆದ ನಂತರ, ಒಂದು ಮುರುಕಲು ಗೋಡೆ ಕಾಣಿಸಿತು. ಅದು ಒಂದು ಪಾಗಾರ. ಅದರಾಚೆ, ಮಂಗಳೂರು ಹೆಂಚು ಹೊದಿಸಿದ, ತುಸು ದೊಡ್ಡದಾದ ಕಟ್ಟಡ ಕಾಣಿಸಿತು. ‘ಇದೇ ಸಾರ್, ಬಂಗಲೆ! ಅಲ್ವಾ! ಬ್ರಿಟಿಷರು ಕಟ್ಟಿದ್ದು ಇನ್ನೂ ಇದೆ’ ಎಂದ ರಾಮಸ್ವಾಮಿ, ಸ್ವಲ್ಪ ಉದ್ವೇಗದಿಂದಲೇ ನೇರವಾಗಿ ಆ ಮುರುಕಲು ಕಟ್ಟಡದತ್ತ ನಡೆದ. ಕಲ್ಲೂರಾ ಯರು ಸಹ ಕುತೂಹಲದಿಂದ ನೋಡಿ, ‘ಯೆಸ್’ ಎನ್ನುತ್ತಾ ತಲೆಯಾಡಿಸಿದರು. ಸುತ್ತಲೂ ಬೆಳೆದಿದ್ದ ಕಾಡಿನ ನಡುವೆ, ಒಂದಷ್ಟು ಜಾಗವನ್ನು ತೆರೆವು ಮಾಡಿ, ಬಯಲನ್ನಾಗಿಸಿ ದ್ದರು. ಅದರ ನಡುವೆ ಈ ಬಂಗಲೆ! ಅದು ಸುಸ್ಥಿತಿಯಲ್ಲಿದ್ದಾಗ, ಅದರೊಳಗೆ ಇದ್ದವರು, ಒಂದು ಕೋವಿ ಹಿಡಿದು, ಸುತ್ತಲೂ ತೆರವು ಮಾಡಿದ್ದ ಜಾಗದಲ್ಲಿ ಕಂಡ ಯಾವುದೇ ಪ್ರಾಣಿಯತ್ತ ಬೇಕಾದರೂ ಗುಂಡು ಹಾರಿಸಬಹುದಿತ್ತು. ಆ ಕಟ್ಟಡದ ಗೋಡೆಯ ಗಾರೆ ಕಿತ್ತುಹೋಗಿತ್ತು. ಮರದ ಬಾಗಿಲುಗಳು ಅರ್ಧಂಬರ್ಧ ಮುರಿದು ಬಿದ್ದಿದ್ದವು. ಕಿಟಿಕಿ ಮತ್ತು ಬಾಗಿಲಿನ ಕೆಲವು ಹಲಗೆಗಳನ್ನು ಮತ್ತೊಮ್ಮೆ ಜೋಡಿಸಿ, ರಿಪೇರಿ ಮಾಡುವ ಯತ್ನ ಮಾಡಿದ್ದು ಗೊತ್ತಾಗುತ್ತಿತ್ತು. ಛಾವಣಿಯ ಮೇಲೆ ಹುಲ್ಲುಗಿಡಗಳು, ಕೆಲವು ಬಳ್ಳಿಗಳು ಬೆಳೆದಿದ್ದವು. ಆದರೂ ಅದೊಂದು ಬಂಗಲೆ! ಕಾಲದಿಂದ ಕಾಲಕ್ಕೆ ರಿಪೇರಿ ಇಲ್ಲದೇ, ಭೂತಬಂಗಲೆಯ ರೀತಿ ಕಾಣಿಸುತ್ತಿತ್ತು. ನಿಧಾನವಾಗಿ ಅದರ ಸುತ್ತಲೂ ಇದ್ದ ಖಾಲಿ ಜಾಗದಲ್ಲಿ ಒಂದು ಸುತ್ತು ಹಾಕಿ, ಅಲ್ಲೇ ನೆಲಕ್ಕೆ ಹಾಸಿದ್ದ ಚಪ್ಪಡಿ ಕಲ್ಲಿನ ಮೇಲೆ ಕುಳಿತೆವು. ನಡೆದು ನಡೆದು ಸುಸ್ತಾಗಿತ್ತು. ನೀರು ಕುಡಿದೆವು. ‘ನಾನು ಎಲ್ಲೋ ಓದಿದ್ದೆ. ಈ ಕಾಡಿನಲ್ಲಿ ಬ್ರಿಟಿಷರು ಬಂಗಲೆ ಕಟ್ಟಿದ್ದರು ಅಂತ. ಆದರೆ, ಅದರ ಗೋಡೆಗಳು ಇನ್ನೂ ಇವೆ, ಛಾವಣಿಯೂ ಇದೆ ಎಂದು ಕಂಡು ಆಶ್ಚರ್ಯವಾಗಿದೆ. ಬೇಸಗೆಯ ಸಮಯದಲ್ಲಿ ಬ್ರಿಟಿಷರು ಇರುವುದಕ್ಕೆ ಮಾಡಿಕೊಂಡ ಬಂಗಲೆ ಇದು’ ಎಂದರು ಕಲ್ಲೂರಾಯರು. ನಮ್ಮ ತಂಡದ ಮೂವರಿಗಿಂತ ವಯಸ್ಸಿನಲ್ಲಿ ಅವರು ನಾಲ್ಕಾರು ವರ್ಷ ದೊಡ್ಡವ ರಾಗಿದ್ದ ಅವರು, ನೋಡನೋಡು ತ್ತಿದ್ದಂತೆಯೇ ನಮ್ಮ ಆ ಪುಟ್ಟ ತಂಡದ ನಾಯಕರಾಗಿ ರೂಪುಗೊಂಡ ಪರಿ ವಿಸ್ಮಯ ಮೂಡಿಸಿತು! ನಾವೆಲ್ಲರೂ ಅವರ ಅಭಿಪ್ರಾಯಗಳನ್ನು ಕೇಳುತ್ತಾ, ಅವರ ಮಾತಿಗೆ ಬೆಲೆಕೊಡಲು ಆರಂಭಿಸಿದ್ದೆವು. ಇವತ್ತು ತಾನೇ ಪರಿಚಯಗೊಂಡಿದ್ದ ರಾಮಸ್ವಾಮಿಯೂ, ತನಗೆ ಸ್ಥಳೀಯ ವಿವರ ಗೊತ್ತಿದೆ ಎಂದು ಬಡಾಯಿ ಕೊಚ್ಚಿ ಕೊಂಡರೂ, ಕಲ್ಲೂರಾಯರ ತಿಳಿವಳಿಕೆಗೆ ಗೌರವ ಕೊಡುತ್ತಿದ್ದ. ಭಾಸ್ಕರನು ಇಡ್ಲಿ ಡಬ್ಬಿ ತೆರೆದು, ಮುತ್ತುಗದ ಎಲೆಯಲ್ಲಿ ಇಡ್ಲಿ, ಚಟ್ನಿ, ಉಪ್ಪಿಟ್ಟು ಹಾಕಿ ಎಲ್ಲರಿಗೂ ಕೊಟ್ಟ. ತಿಂಡಿ ತಿನ್ನುವಾಗ ರಾಮಸ್ವಾಮಿಯದು ವಿಪರೀತ ಮಾತು, ಒಟಗುಟ್ಟುವಿಕೆ. ಇಡ್ಲಿ ಉಪ್ಪಿಟ್ಟು ತಿಂದ ನಂತರ, ನಾನು ಒಂದು ಮರದ ಬುಡದಲ್ಲಿ ನಿಂತು, ಕೈತೊಳೆಯುತ್ತಾ, ಬಾಯಿಗೆ ನೀರು ಹಾಕಿಕೊಂಡು ಮುಕ್ಕಳಿಸುತ್ತಾ ಇದ್ದೆ. ನನ್ನ ಹಿಂದಿನಿಂದ ಒಂದು ದನಿ ಕೇಳಿಸಿತು. ‘ನಮಸ್ಕಾರ ಸೋಮಿ’ ನಾನು ಬಾಯಿಯಲ್ಲಿ ನೀರು ಹಾಕಿಕೊಂಡು ಮುಕ್ಕಳಿಸುತ್ತಾ ಇದ್ದುದರಿಂದ, ತಕ್ಷಣ ತಿರುಗಿ ನೋಡಲು ಸಾಧ್ಯವಾಗಲಿಲ್ಲ, ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಮಾಡಲೂ ಸಾಧ್ಯವಾಗಲಿಲ್ಲ. ಈ ಕಾಡಿನ ಮಧ್ಯೆ ನನಗೆ ನಮಸ್ಕಾರ ಮಾಡುವವರಾರಪ್ಪಾ ಎಂದು ಅಚ್ಚರಿಗೊಂಡೆ. ‘ಯಾರಯ್ಯಾ ನೀನು?’ ಕಲ್ಲೂರಾಯರ ಗದರಿಕೆಯ ಪ್ರಶ್ನೆ. ‘ನಾವು ಸೋಮಿ’ ‘ನಾವು ಅಂದರೆ ಯಾರು?’ ‘ನಾವು ಸೋಮೆ. ಈ ಸೋಮೇರಿಗೆ ಗೊತ್ತೈತೆ ನಾವು ಯಾರು ಅಂತ’ ಎನ್ನುತ್ತಾ ಆ ದನಿ ಇನ್ನಷ್ಟು ಹತ್ತಿರ ಬಂತು. ಬಾಯಲ್ಲಿದ್ದ ನೀರನ್ನು ಮರದ ಬುಡಕ್ಕೆ ಉಗುಳಿ, ತಿರುಗಿ ನೋಡಿದೆ. ನನ್ನೆದರು ತೆಳ್ಳಗಿನ ಆಕೃತಿ ನಿಂತಿತ್ತು. ಸುಮಾರು ಆರು ಅಡಿ ಎತ್ತರ, ತಲೆಗೊಂದು ಮಾಸಲು ಬಟ್ಟೆಯ ಮುಂಡಾಸು. ಆ ಮುಂಡಾಸನ್ನು ಕಟ್ಟಿದ ರೀತಿಗೆ, ತಲೆ, ಕಣ್ಣು, ಭುಜ ಎಲ್ಲವೂ ಬಹುಪಾಲು ಮುಚ್ಚಿ ಹೋಗಿತ್ತು. ಪೂರ್ತಿ ಜೂಲುಜೂಲಾದ ಅರ್ಧತೋಳಿನ ಅಂಗಿ, ಅಲ್ಲಲ್ಲಿ ಹರಿದುಹೋಗಿತ್ತು. ಆತನ ಭುಜದ ಮೇಲೆ ನಾಲ್ಕಾರು ಉದ್ದನೆಯ ಗಳದಂತಹ ಮರದ ಕಾಂಡಗಳಿದ್ದವು. ಎಡಗೈಯಲ್ಲಿ ಒಂದು ಸಣ್ಣ ಗೋಣಿಚೀಲದಲ್ಲಿ, ಏನನ್ನೋ ತುಂಬಿಸಿಕೊಂಡಿದ್ದ. ‘ನಾವು ಸೋಮಿ’ ಎಂದು ಆತ ಊರಗಲ ಬಾಯಿ ತೆರೆದು, ಎಲ್ಲಾ ಹಲ್ಲುಗಳನ್ನೂ ಕಾಣಿಸುವ ರೀತಿ ನಕ್ಕ. ಕೂಡಲೆ ಗೊತ್ತಾಯಿತು, ಕೆಂಚಪ್ಪ! ಬೆಳಗಿನಿಂದ ಕಾಡಿನಲ್ಲಿ ನಡೆದು, ನಾಡಿನ ಪ್ರಪಂಚದ ನೆನಪುಗಳ ಕೋಶವನ್ನು ನಾಡಿನಲ್ಲೇ ನಾನು ಬಿಟ್ಟುಬಂದಿದ್ದೆನೆ? ಒಮ್ಮೆಗೇ ಆತನ ಹೆಸರಿನ ನೆನಪು ಸಹ ಆಗಲಿಲ್ಲ. ನೆಗಡಿಯಾದವರ ರೀತಿ ಆತನ ದನಿಯೂ ಬದಲಾಗಿತ್ತು. ಆದರೆ ಮಾತನಾಡುವ ಶೈಲಿ ಅದೇ. ‘ಓ ಕೆಂಚಪ್ಪ. ಎಲ್ಲೇನೋ ಮಾಡ್ತಿ ದೀಯಾ? ನಿನ್ನ ಸ್ವರಕ್ಕೆ ಏನಾಗಿದೆ? ನೆಗಡಿನಾ?’ ಎಂದೆ ಅಚ್ಚರಿಯಿಂದ. ‘ನೆಗಡಿ ಪಗಡಿ ನಮಗೆಲ್ಲಿ ಬರುತ್ತೆ ಸೋಮೆ, ಕಾಡಲ್ಲೇ ಸುತ್ತಾಡೋ ಜನ ನಾವು. ಇಲ್ಲೇ ಸೋಮೆ ನಮ್ಮ ಗುಡ್ಲು ಇರೋದು. ಅವತ್ತು ನಿಮ್ಮ ಬ್ಯಾಂಕಿನ ಅಕವಂಟ್ ಮಾಡೋವಾಗ, ಹಿರೆಕಲ್ಲುಗುಡ್ಡ ಅಂತ ಎಡ್ರಾಸ್ ಕೊಟ್ಟಿದ್ದೆ ಸೋಮಿ, ಇದೇ ಆ ಜಾಗ. ಕುಪ್ಪೂರು ಪರಮೇಶಿಗೆ ಅದ್ಯಾವುದೋ ಮರದ ಚಕ್ಕೆ ಬೇಕಿತ್ತು. ಔಸ್ದಿಗೆ. ಅದನ್ನು ತರಾಣ ಅಂತ ಬಂದಿದ್ದೆ. ಇಲ್ಲೇ, ಈ ಬಂಗ್ಲೆ ಹಿಂಭಾಗದಲ್ಲೇ ನಮ್ಮ ಗುಡ್ಲು ಇದೆ. ಇನ್ನೊಂದು ಗುಡ್ಲು, ಬೆಟ್ಟದ ಕೆಳಗೆ ಇದೆ’ ಎಂದು ತನ್ನ ಭುಜದ ಮೇಲಿದ್ದ ಮರದ ಕೋಲುಗಳನ್ನು ಕೆಳಗೆ ಹಾಕಿದ. ಆದರೆ ಕೈಲಿದ್ದ ಗೋಣಿಚೀಲವನ್ನು ಮಾತ್ರ ಭದ್ರವಾಗಿ ಹಿಡಿದಿದ್ದ. ‘ಅಲ್ಲಾ ಕಣೋ, ಈ ಕಾಡಲ್ಲಿ ಒಬ್ಬನೇ ಹೆಂಗೆ ಸುತ್ತುತ್ತೀಯಾ? ಭಯ ಇಲ್ಲವಾ?’ ಎಂದೆ. ‘ನಮಗೆ ಅದೆಂತಾ ಭಯ ಸೋಮಿ. ಈ ಬಂಗ್ಲೆ ಹಿಂದಿನ ಗುಡ್ಲುವಿನಲ್ಲಿ ಇರ‍್ತೀನಿ. ನಮ್ಮಪ್ಪಾರ ಕಾಲದಿಂದಲೂ ಇದೇ ಗುಡ್ಲಲ್ಲಿ ಇದೀನಿ. ಒಂದ್ ಸಾರಿ ಭಾರೀ ಮಳೆಗಾಲ ಬಂದಿತ್ತು, ಆಗ ಬಂದ ದೊಡ್ಡ ಜ್ವರಕ್ಕೆ ನಮ್ಮಪ್ಪ ಅಮ್ಮ ತೀರಿಕೊಂಡದ್ದು ಇದೇ ಗುಡ್ಲಲ್ಲಿ ಸೋಮೆ. ಒಂದೊಂದು ಸಲ ಬೆಟ್ಟದ ಕೆಳಗೆ ಹಳ್ಳಿಲಿರೋ ಗುಡ್ಲುಗೆ ಹೋಗ್ತೀನಿ. ನಂಗೇನೂ ಭಯ ಇಲ್ಲ ಸೋಮೆ. ಕರಡಿ, ಚಿರತೆ ಒಂದೊಂದು ಐತೆ, ಒಂದೆರಡು ಸಲ ಈ ಬಂಗ್ಲೆ ತಾವ ಬಂದಿತ್ತು. ಆದರೆ, ಅದು ಅದರ ಪಾಡಿಗೆ ಹೋಗುತ್ತೆ, ನಾವು ಅದರ ತಂಟೆಗೆ ಹೋಗಬಾರದು ಅಷ್ಟೆ. ಚಿರತೆ ಏನೂ ಪರವಾಗಿಲ್ಲ ಸೋಮಿ, ಕರಡಿಯ ಹತ್ತಿರ ಹಗಲಿನಲ್ಲಿ ಹೋಗಲೇಬಾರದು, ತಿವಿಯೋಕೆ ಬರುತ್ತೆ’ ಎಂದ ಕೆಂಚಪ್ಪ ನಗುತ್ತಾ. ನಾವಿಬ್ಬರೂ ಲೋಕಾಭಿ ರಾಮ ಮಾತನಾಡುವುದನ್ನು ಕಂಡು ಕಲ್ಲೂರಾಯರು ನಿಬ್ಬೆರಗಾದರು. ನಾನು ಏನೋ ನೆನಪಿಸಿಕೊಂಡವನಂತೆ, ಕಲ್ಲೂರಾಯ ರತ್ತ ತಿರುಗಿ, ‘ಸಾರ್ ಇವನ ಹತ್ತಿರ ಒಂದು ಪೆಂಗೊಲಿನ್ (ಚಿಪ್ಪುಹಂದಿ) ಇತ್ತು. ನಾನು ಕಲ್ಕೆರೆಗೆ ಬಂದ ದಿನ, ಒಂದು ದಾರಕ್ಕೆ ಪೆಂಗೊಲಿನ್‌ನ್ನು ಕಟ್ಟಿಕೊಂಡು ಕಲ್ಕೆರೆಯಲ್ಲಿ ಓಡಾಡ್ತಿದ್ದ.. (ಕೆಂಚಪ್ಪನತ್ತ ತಿರುಗಿ) ಈ ಬೆಟ್ಟದಲ್ಲೂ ಚಿಪ್ಪುಹಂದಿ ಇದಾವೆ ಅಂದ್ಯಲ್ಲ, ಎಲ್ಲಿ ಇದಾವೆ?’ ಎಂದು ಕೇಳಿದೆ. ಅಷ್ಟರ ತನಕ ಎಲ್ಲಾ ಹಲ್ಲುಗಳನ್ನು ತೋರಿ ಸುತ್ತಾ ನಗುತ್ತಾ ಮಾತನಾಡುತ್ತಿದ್ದ ಕೆಂಚಪ್ಪನು, ಒಮ್ಮೆಗೇ ಗಂಭೀರನಾಗಿ, ಎಚ್ಚರಿಕೆಯಿಂದ ಮಾತನಾಡುವವನಂತೆ ‘ಇಲ್ಲಿಂದ ದೂರ ಇರೋ ಚಿಕ್ಕ ತಿರುಪತಿ ಬೆಟ್ಟದಲ್ಲಿ ಒಂದೊಂದು ಐತೆ’ ಎಂದು ಸುಮ್ಮನಾದ. ಅದು ವರೆಗೆ ಮುಕ್ತವಾಗಿ ಮಾತನಾಡುತ್ತಿದ್ದ ಆತ, ಚಿಪ್ಪುಹಂದಿಯ ಹೆಸರು ಕೇಳಿದ ಕೂಡಲೇ ತುಸು ಗಾಬರಿಗೊಂಡದ್ದು ನಮಗೆಲ್ಲಾ ಗೊತ್ತಾಯಿತು. ‘ಓಹ್, ಚಿಪ್ಪು ಹಂದಿ ಇದೆಯಾ? ನಮಗೆ ತೋರಿಸುತ್ತೀಯಾ?’ ಎಂದು ಕಲ್ಲೂರಾಯರು ಪ್ರಶ್ನಿಸಿದ ಶೈಲಿಗೆ, ಕೆಂಚಪ್ಪ ಪೂರ್ತಿ ಬೆಚ್ಚಿ ಬಿದ್ದು, ‘ಈಗ ಇಲ್ಲಿ ಇಲ್ಲ ಸೋಮಿ, ಎಲ್ಲೋ ಒಂದೊಂದು ದೂರದ ಬೆಟ್ಟದಾಗೆ ಐತೆ. ಆದರೆ ಅದನ್ನು ನೋಡೋದಿಕ್ಕೆ ರಾತ್ರಿ ಹೋಗಬೇಕು’ ಎನ್ನುತ್ತಾ, ನಿಧಾನವಾಗಿ ಬಂಗಲೆಯ ಹಿಂಭಾಗದತ್ತ ನಡೆದ. ನನ್ನನ್ನು ಕಂಡು ಇಷ್ಟಗಲ ನಗುತ್ತಾ ಸಂತಸ ವ್ಯಕ್ತಪಡಿಸಿ ಮಾತನಾಡಿಸಿದ್ದ ಅವನೀಗ, ಸಂಕೋಚ ಮುದ್ದೆಯಾಗಿ, ಮೌನವಾಗಿ ನಮ್ಮಿಂದ ತಪ್ಪಿಸಿಕೊಂಡು ಹೋಗುವವನಂತೆ ಸದ್ದು ಮಾಡದೇ ಬಂಗಲೆಯ ಹಿಂಭಾಗಕ್ಕೆ ಹೋಗಿದ್ದು ನನ್ನಲ್ಲಿ ಅಚ್ಚರಿ ಹುಟ್ಟಿ ಸಿತ್ತು. ರಾಮಸ್ವಾಮಿ ಮತ್ತು ಭಾಸ್ಕರ ಇಬ್ಬರೂ ಪರಸ್ಪರ ನೋಡಿ, ಕಣ್ಣಲ್ಲೇ ಮಾತನಾಡಿಕೊಂಡರು. ಕಲ್ಲೂರಾಯರು ಅವನು ಹೋದ ದಿಕ್ಕಿನತ್ತ ನೋಡುತ್ತಾ ನಿಂತರು. ಬಂಗಲೆಯ ಸುತ್ತಲೂ ಮರ, ಗಿಡ ಕಡಿದು ಮೈದಾನದಂತಹ ಖಾಲಿ ಜಾಗ ಮಾಡಿದ್ದರಲ್ಲ, ಅದರಲ್ಲೇ ನಡೆದು ಅವನು ಬಂಗಲೆಯ ಹಿಂಭಾಗದಲ್ಲಿ ಮರೆಯಾದ ನಂತರ, ರಾಮಸ್ವಾಮಿಯು ಮೆತ್ತಗಿನ ದನಿಯಲ್ಲಿ ‘ಅದನ್ನು ಹಿಡಿಯುವುದೇ ಅವನ ಕೆಲಸ ಸಾರ್’ ಎಂದ. ‘ಯಾವುದನ್ನು?’ ಎಂದರು ಕಲ್ಲೂರಾಯರು. “ಅದೇ ಸಾರ್, ಪೆಂಗೊಲಿನ್, ಚಿಪ್ಪುಹಂದಿ!" ನಾನು ಅವನು ಸಾಗಿದ ದಾರಿಯಲ್ಲೇ ಹಿಂಬಾಲಿಸಿದೆ. ಬಂಗಲೆಯ ಹಿಂದೆ ಪೊದೆ ಬೆಳೆದ ಭಾಗದಲ್ಲಿ, ಪೊದೆಗಳ ನಡುವೆ ಒಂದು ಕಾಲ್ದಾರಿ ಇತ್ತು. ಅದರಾಚೆ ಒಂದಷ್ಟು ಮರಗಿಡಗಳ ನಡುವೆ ಒಂದು ಗುಡಿಸಲು ಇತ್ತು. ಅದನ್ನು ಗುಡಿಸಲು ಎಂದು ಕರೆಯುವುದು ತುಸು ಕಷ್ಟವೇ. ಒಂದು ಭಾಗದಲ್ಲಿ ಜರಿದು ಬಿದ್ದ ಗೋಡೆ, ಆ ಗೋಡೆ ಬಿದ್ದ ಭಾಗದಲ್ಲಿ ಮುಳ್ಳುಗಿಡಗಳ ರಕ್ಷಣೆ. ಅದರ ಇನ್ನೊಂದು ಭಾಗದಲ್ಲಿ ಇಳಿಜಾರಿನ ಮಾಡು. ಇನ್ನೊಂದು ಕಡೆ ಬಿದ್ದುಹೋದಂತಿದ್ದ ಗೋಡೆಯ ಸಂದಿಯಲ್ಲಿ, ಹಳೆಯ ಹಲಗೆಗಳನ್ನು ಆಧಾರವಾಗಿರಿಸಿ, ಬಾಗಿಲಿನಂತಹ ರಚನೆ ಮಾಡಲಾಗಿತ್ತು. ಅದಕ್ಕೊಂದು ಮುಳ್ಳಿನ ತಡಿಕೆಯ ರಕ್ಷಣೆ! ಮಾಡಿನ ಮೇಲೆಲ್ಲಾ, ಒಣಗಿದ ಸೊಪ್ಪು ಸದೆಯನ್ನು ಹೊದಿಸಲಾಗಿತ್ತು. ಬಹುಷಃ ಬ್ರಿಟಿಷರ ಕಾಲದಲ್ಲೋ, ನಂತರದಲ್ಲೋ ನಿರ್ಮಾಣಗೊಂಡಿದ್ದ ಔಟ್‌ಹೌಸ್‌ನಂತಹ ರಚನೆ ಅದಾಗಿರಬೇಕು. ಆಗಲೋ ಈಗಲೋ ಬಿದ್ದುಹೋಗುವಂತಹ ಸ್ಥಿತಿಯನ್ನು ತಲುಪಿ ವರ್ಷಗಳೇ ಕಳೆದಿತ್ತು. ಮುಳ್ಳುಗಿಡಗಳು, ಒಣಗಿದ ಸೊಪ್ಪು ಸೌದೆಗಳೇ ಅದಕ್ಕೀಗ ಆಧಾರ. ಅದರ ಮುಳ್ಳಿನ ತಡಿಕೆ ಬಾಗಿಲ ಬಳಿ ಹೋಗಿ ಇಣುಕಿ ನೋಡಿದರೆ, ಒಳಗೆ ಕೆಂಚಪ್ಪ ಒಂದು ಮೂಲೆಯಲ್ಲಿ ಕುಳಿತಿದ್ದ. ಆ ಗುಡಿಸ ಲಿನ ನೆಲ ಬರೇ ಮಣ್ಣು! ನನ್ನನ್ನು ಕಂಡವನೇ ಬೆಚ್ಚಿಬಿದ್ದವರಂತೆ ತಡಬಾಯಿಸಿ, ಎದ್ದು ಹೊರಬಂದ. ‘ಇಲ್ಲೇನೋ ಮಾಡ್ತಿದೀ ಯಾ?’ ಎಂದೆ. ಹತ್ತಾರು ಕಿ.ಮೀ. -ಸಲೆಯಲ್ಲಿ ಜನವಸತಿಯೇ ಇಲ್ಲದ ಈ ಕಾಡುಪ್ರದೇಶದಲ್ಲಿ, ಹೊಟ್ಟೆಪಾಡಿಗಾಗಿ ಮುರುಕಲು ಗುಡಿಸಲಿನಲ್ಲಿ ಏಕಾಂಗಿಯಾಗಿ ಬಂದು ಕುಳಿತಿದ್ದ ಕೆಂಚಪ್ಪನಿಗೂ, ಜೀವರಕ್ಷಣೆಗೆ ನೆಲದಲ್ಲಿ ಹದಿನೈದು ಅಡಿ ಉದ್ದದ ಸುರಂಗ ತೋಡಿ ಅದರಲ್ಲಿ ಅಡಗಿ ಕುಳಿತುಕೊಳ್ಳುವ ಪೆಂಗೊಲಿನ್‌ಗೂ ತುಸು ಸಾಮ್ಯತೆ ಕಂಡು, ಅವನ ಕುರಿತು ಮೂಡಿದ್ದ ಕನಿಕರ ಇನ್ನಷ್ಟು ಹೆಚ್ಚಾಯಿತು! ‘ಹೋಗಲಿ ಬಿಡು, ನಾನು ಯಾರಿಗೂ ಹೇಳೊಲ್ಲ, ನಿಜವಾಗಿಯೂ ಚಿಪ್ಪುಹಂದಿ ಹಿಡಿದಿದ್ದೀಯಾ ನೀನು?’ ಎಂದು ಕೇಳುತ್ತಾ ಅವನ ಗುಡಿಸಲಿನೊಳಗೆ ಇಣುಕಲು ಪ್ರಯತ್ನಿಸಿದೆ. ‘ಸೋಮಿ, ಕಾಲಿಗೆ ಬೀಳ್ತೀನಿ, ಒಳಗೆ ಹೋಗ್ಬೇಡಿ. ನೆಲವೆಲ್ಲಾ ಮಣ್ಣು. ಆ ಮೂಲೆ ಯಲ್ಲಿ ಹಾವೂ ಐತೆ, ಬೇರೇನೋ ಐತೆ ದಮ್ಮಯ್ಯ ಸೋಮಿ, ಬಂಗ್ಲೆಗೆ ನಡೀರಿ, ನಾನೂ ಬತ್ತೀನಿ’ ಎಂದ ಕೆಂಚಪ್ಪ, ಬಾಗಿ ಕೈ ಮುಗಿದ. ನಾನು ಒಂದು ಹೆಜ್ಜೆ ಒಳಗೆ ಇಟ್ಟು,ಗುಡಿಸಲಿನ ಒಳಗೆಲ್ಲಾ ಸಮೀಕ್ಷೆ ಮಾಡಿದೆ. ಹೊರಗಿನಿಂದ ಕಂಡದ್ದಕ್ಕಿಂತಲೂ ಒಳಗೆ ತುಸು ವಿಶಾಲವಾಗಿತ್ತು ಆ ಗುಡಿಸಲು. ಅಲ್ಲಿ ಒಳಭಾಗದಲ್ಲಿ ಇನ್ನೊಂದು ಕೊಠಡಿಯೂ ಇತ್ತು! ಒಂದು ಮೂಲೆಯಲ್ಲಿ ನಾಲ್ಕಾರು ಗೋಣಿಚೀಲಗಳು ಕಂಡವು. ಅವುಗಳ ಒಳಗೆ ಏನಿರಬಹುದು? ಕೆಂಚಪ್ಪ ಹೇಳಿದಂತೆ ಹಾವು ಮತ್ತು ಇನ್ನೇನಾದರೂ ಪ್ರಾಣಿಗಳು ಇರಬಹುದೆ? ಒಂದು ಗೋಣಿಚೀಲವು ತುಸು ಅಲ್ಲಾಡಿದಂತೆ ಅನಿಸಿದ್ದು ನನ್ನ ಭ್ರಮೆಯೋ ಅಥವಾ ಆ ಮಬ್ಬುಬೆಳಕಿನಲ್ಲಿ ನಡೆದ ಕತ್ತಲುಬೆಳಕಿನ ಆಟವೋ? (‘ಅಬ್ಬೆ’ ಕಾಂದಂಬರಿಯ ಆಯ್ದ ಭಾಗ)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ