Saturday, 30th November 2024

ಅಂತರಂಗದ ಶಾಂತಿಯ ಪಥ

ಅಭಿಮತ

ಸಂದೀಪ್ ಶರ್ಮಾ ಮೂಟೇರಿ

ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಅಂತಿಮ ಶಾಂತಿ, ಸಮಾಧಾನ, ಸಂತೋಷ ಸಿಗುವುದು ನಾಲ್ಕು ಪುರುಷಾರ್ಥಗಳನ್ನು ಸಮರ್ಥವಾಗಿ ಪಾಲಿಸುವುದರಿಂದ. ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳೆಡೆಗೆ ಜವಾಬ್ದಾರಿಯುತ ಪಯಣದಿಂದ ಹಾಗೂ ಆತ್ಮದ ಮುಕ್ತಿಯಲ್ಲಿ. ಜುಡಾಯಿಸಂ ಪ್ರಕಾರ ಜೀವನದಲ್ಲಿ ಶಾಂತಿ, ಸಂತೋಷ ಪಡೆಯುವುದು ಪ್ರತಿಯೊಬ್ಬನ ನೈತಿಕ ಜವಾಬ್ದಾರಿ.

ಮುಸಲ್ಮಾನರ ಇಸ್ಲಾಂ ಧರ್ಮದ ಪ್ರಕಾರ ಸಂತೋಷ, ನೆಮ್ಮದಿ ಎಂದರೆ ಅದು ಜೀವನ ಪರ್ಯಂತದ ಪ್ರಕ್ರಿಯೆ, ಶಾಂತಿ, ಸಮಾಧಾನ ಹಾಗೂ ಶಾಶ್ವತ ಆನಂದದ ಅನುಭೂತಿ. ಇವೆಲ್ಲ ವ್ಯಾಖ್ಯಾನಗಳಿದ್ದರೂ ಶಾಶ್ವತ ಆನಂದವನ್ನು ಪಡೆದುಕೊಳ್ಳುವ ಜನಸಾಮಾನ್ಯನ ಹುಡುಕಾಟ ಮಾತ್ರ ನಿರಂತರ.
ಲೌಕಿಕ ಜಗತ್ತಿನಲ್ಲಿ ಆಧುನಿಕ ಮಾನವರು ಮನಃಶಾಂತಿಗಾಗಿ, ಸಂತೋಷಕ್ಕಾಗಿ ಏನೇನು ಕಸರತ್ತುಗಳನ್ನು ಮಾಡುತ್ತಾರೋ ಈಗಿನ ಜೀವನಶೈಲಿ ಎಲ್ಲರಿಗೂ ತಿಳಿದೇ ಇದೆ. ಒಬ್ಬೊಬ್ಬರ ಅಭಿರುಚಿಯೂ ಭಿನ್ನ.

ಒಬ್ಬರಿಗೆ ಅಧ್ಯಾತ್ಮದಲ್ಲಿ ಸಮಾಧಾನ ಸಿಕ್ಕರೆ, ಇನ್ನೊಬ್ಬರಿಗೆ ಶಾಪಿಂಗ್ ಮಾಡುವುದರಲ್ಲಿ, ಮತ್ತೊಬ್ಬರಿಗೆ ವಾರಾಂತ್ಯ ಪಾರ್ಟಿ ಮಾಡುವುದಲ್ಲಿ, ಮಗದೊ ಬ್ಬರಿಗೆ ಟ್ರೆಕ್ಕಿಂಗ್‌ನಲ್ಲಿ, ಇನ್ನು ಹಲವರಿಗೆ ಸಂತೋಷವಾಗಿರುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಹ್ಯಾಪಿ ನೆಸ್ ಕೋಚ್‌ಗಳ ಯೂಟ್ಯೂಬ್ ವೀಡಿಯೋಗಳಲ್ಲಿ, ಬೆವರಿಳಿಸುವ ಜಿಮ್‌ಗಳಲ್ಲಿ, ಸಿನೆಮಾ ನೋಡುವುದರಲ್ಲಿ, ಯೋಗ ತರಬೇತಿಯಲ್ಲಿ. ಒಟ್ಟಿನಲ್ಲಿ ಕೊಡುಕೊಳ್ಳುವ ಪ್ರಕ್ರಿಯೆ ಹತ್ತು ಹಲವು ರೀತಿಯಲ್ಲಿ, ರೂಪ ದಲ್ಲಿ. ಅಂತಿಮ ಗುರಿಯೆಂದರೆ ಗೊಂದಲದ, ಧಾವಂತದ, ವ್ಯಾಪಾರಿ ಮನೋಭಾವದ ಸಂಕೀರ್ಣ ಬದುಕಿನ ಜಂಜಾಟದ ನಡುವೆ ಒಂದಷ್ಟು ಮನಃಶಾಂತಿ, ಸಮಾಧಾನದ ಹುಡುಕಾಟ.

ಇದಕ್ಕಾಗಿ ನಿರಂತರ ವ್ಯಾಪಾರ, ವಹಿವಾಟು. ಒಂದು ಕಾಲದಲ್ಲಿ ಸಂತೋಷ, ನೆಮ್ಮದಿಯೆಂದರೆ ಅದೊಂದು ಮನಸ್ಸಿನ ಭಾವ, ಅಧ್ಯಾತ್ಮದ ಅನುಭವ. ಆದರೆ ಈಗ ಸಂತೋಷ ವ್ಯಾಪಾರೀಕರಣದ ಅವಿಭಾಜ್ಯ ತಂತ್ರ. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎನ್ನುವ ಮಾತಿಗೆ ತದ್ವಿರುದ್ಧ ವಾಗಿ ಕಾಸು ಕೊಟ್ಟಾದರೂ ಸಂತೋಷ ಪಡೆದುಕೊಳ್ಳುವ ನಿತ್ಯದ ಪರದಾಟ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯವು ಕೋರ್ಸ್ ಇರಾದ ಮೂಲಕ ನಡೆಸುವ ದಿ ಸೈ ಆ- ವೆಲ್ ಬಿಯಿಂಗ್ ಎನ್ನುವ ಆನ್ಲೈನ್ ತರಬೇತಿಗೆ ಇಲ್ಲಿವರೆಗೆ ಸುಮಾರು ಐವತ್ತು ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡು ತರಬೇತಿ ಪಡೆದಿದ್ದಾರೆ.

ಜೀವನದಲ್ಲಿ ಕ್ಷೇಮವಾಗಿರುವುದಕ್ಕೂ ತರಬೇತಿ ಆರಂಭವಾಗಿದೆ ಹಾಗೂ ಅದಕ್ಕೆ ಅತ್ಯಂತ ಬೇಡಿಕೆಯಿದೆ ಎನ್ನುವುದು ಜೀವನದಲ್ಲಿ ನೆಮ್ಮದಿ, ಸಂತೋಷ ಹಾಗೂ ತೃಪ್ತಿ ಪಡೆದುಕೊಳ್ಳುವ ಮನುಷ್ಯನ ಚಡಪಡಿಕೆಯ ಪ್ರಮಾಣವನ್ನು ಊಹಿಸಿಕೊಳ್ಳಬಹುದು. ಇಂತಹ ಮನಃಸ್ಥಿತಿಯ ಹೊಯ್ದಾಟದಲ್ಲಿರು ವವರ ಕಣ್ಣೆದುರಿಗೆ ಸುಲಭವಾಗಿ ಕಾಣುವುದು, ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುವ ಸಂತೋಷದ ಮಾದರಿಗಳು ಆ ಪರಿಕಲ್ಪನೆಯಲ್ಲಿಯೇ ಸಂತೋಷದ ಹುಡುಕಾಟ, ನೆಮ್ಮದಿಗಾಗಿ ಅಲೆದಾಟ. ಈ ಅನ್ವೇಷಣೆಯ ದಾರಿಯಲ್ಲಿ ನಮ್ಮೆದುರಿಗೆ ತೆರೆದುಕೊಳ್ಳುವುದು ಸಂತೋಷವನ್ನು ತಂದು ಕೊಡುವ ವ್ಯವಹಾರದ ಮಾದರಿಗಳು.

ಮಾಸ್ಟರ್‌ಕ್ಲಾಸ್‌ಗಳು, ಡೊಪೋಮಿನ್ ಹೆಚ್ಚಿಸಲು ಬಳಸಬಹುದಾದ ವೈದ್ಯಕೀಯ ಉತ್ಪನ್ನಗಳು, ಧನಾತ್ಮಕ ಚಿಂತನೆ ಹೆಚ್ಚಿಸುವ ವ್ಯಾಯಾಮಗಳು, ಆಹಾರೋತ್ಪನ್ನಗಳು, ಸುಂದರವಾಗಿ ಕಾಣಿಸುವುದರಿಂದ ಆನಂದವಾಗಿರಬಹುದು ಎನ್ನುವುದಕ್ಕೆ, ಜಿಮ್ ಸೇರಿದಂತೆ ದೇಹಕ್ಕೆ ಕಸರತ್ತು ನೀಡುವ ತರಬೇತಿ ಕೇಂದ್ರಗಳ ಜಾಹಿರಾತುಗಳು ಇತ್ಯಾದಿ. ಒಟ್ಟಿನಲ್ಲಿ ಸಂತೋಷ ಪಡೆಯುವುದಕ್ಕೆ ಹಲವಾರು ಪರಿಹಾರೋಪಾಯಗಳು, ಶಾಂತಿ ನೆಮ್ಮದಿ ಪ್ರವಾಸಿ
ತಾಣಗಳಲ್ಲಿವೆ, ಹಸಿರು ಪರಿಸರದಲ್ಲಿದೆ, ನದಿ, ಬೆಟ್ಟಗುಡ್ಡಗಳಲ್ಲಿದೆ ಎನ್ನುವ ಟ್ರಾವೆಲಿಂಗ್ ಪ್ರಚಾರಗಳು. ಆದರೆ ಅದನ್ನು ಪಡೆದುಕೊಳ್ಳಲು ಮತ್ತದೇ ಹಣವೆಂಬ ಅಸ್ತ್ರ.

ಒಂದು ಅಂಕಿಅಂಶದ ಪ್ರಕಾರ ೨೦೦ ಬಿಲಿಯನ್ ಹ್ಯಾಪಿನೆಸ್, ೨ ಮಿಲಿಯನ್ ಹ್ಯಾಪಿನೆಸ್ ಇಸ್ ಚಾಯ್ಸ್ ಎನ್ನುವ ಇನ್‌ಸ್ಟಾಗ್ರಾಂ ಪೋಸ್ಟ್‌ಗಳಿವೆ. ಇತರ ಸಾಮಾಜಿಕ ಜಾಲತಾಣಗಳೇನು ಕಡಿಮೆ ಇಲ್ಲ. ಮನುಷ್ಯ ಹೇಗೆ ಸಂತೋಷ ವಾಗಿರಬಹುದು, ನೆಮ್ಮದಿ ಪಡೆದುಕೊಳ್ಳಬಹುದು ಎನ್ನುವುದರ ಬಗೆಗೆ ಸಂದೇಶಗಳು ಲೆಕ್ಕವಿಲ್ಲದಷ್ಟು. ದಾರ್ಶನಿಕರು ಹೇಳುವಂತೆ ಸಂತೋಷ ಬೇರೆಲ್ಲೂ ಇಲ್ಲ ನಮ್ಮೊಳಗೇ ಇದೆ ಎನ್ನುವುದನ್ನು ಸಾವಿರಾರು ಜನರು  ಹಲವಾರು ರೀತಿಯಲ್ಲಿ ಹೇಳುವ ಸಂದೇಶಗಳೂ ಇವೆ. ಆದರೂ ಗಿಟ್ಟಿಸಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಸಂತೋಷ ಸಣ್ಣಸಣ್ಣ ವಿಚಾರಗಳಲ್ಲಿವೆ, ಅದು
ದಿನನಿತ್ಯದ ನಿರಂತರ ಪ್ರಕ್ರಿಯೆ ಎನ್ನುವುದು ಮರೆತೇ ಬಿಡುತ್ತೇವೆ.

ನಮಗೆಲ್ಲ ಸಂತೋಷವೆಂದರೆ ಅದೊಂದು ಗುರಿ. ಅದರೆಡೆಗೆ ಗಂಭೀರವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ, ಕೂಡಿಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಹಲವನ್ನು ಕಳೆದುಕೊಳ್ಳುತ್ತೇವೆ. ಸಂತೋಷದ ಪರಿಕಲ್ಪನೆಯ ಮಾದರಿಯನ್ನು ಮುಂದಿಡುವ ಮಾರುಕಟ್ಟೆ ಬೆಳೆಯುತ್ತಲೇ ಇದೆ.

(ಲೇಖಕರು: ಸಿವಿಲ್ ಎಂಜಿನೀಯರ್ ಹಾಗೂ ಹವ್ಯಾಸಿ ಬರಹಗಾರರು)