ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshava Prasad B Column: ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಇದು ನಿಜವಾಗಿಯೂ, ಕಾಲೇಜುಗಳ ಪದವಿಗೆ ಮುಕ್ತಾಯವಾಗುವ ಶಿಕ್ಷಣವಲ್ಲ, ಜೀವನ ಪರ್ಯಂತ ಕಲಿಕೆ ಅವಶ್ಯವಿರುವ ಕಲಿಕೆಯ ಯುಗ. ನಿತಿನ್ ಕೌಶಿಕ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಹೀಗೆನ್ನು ತ್ತಾರೆ- “25 ಕೋಟಿ ರುಪಾಯಿ ಸಂಪತ್ತಿನ ಒಡೆಯ 10 ಲಕ್ಷ ರುಪಾಯಿ ಮೌಲ್ಯದ ಸಾಧಾರಣ ಕಾರಿನಲ್ಲಿ ಓಡಾಡುತ್ತಾನೆ. ಆದರೆ ಕೇವಲ 1 ಕೋಟಿ 70 ಲಕ್ಷ ರುಪಾಯಿ ಆಸ್ತಿ ಇರುವ ವ್ಯಕ್ತಿ ಮರ್ಸಿಡಿಸ್ ಬ್ರ್ಯಾಂಡ್ ನ್ಯೂ ಲಕ್ಸುರಿ ಕಾರಿನಲ್ಲಿ ಮಿಂಚುತ್ತಾನೆ.

ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜಕ್ಕೂ ಹಾಗಾಗುತ್ತೀರಾ ?!

ಮನಿ ಮೈಂಡೆಡ್

ನಿಜವಾದ ಸಂಪತ್ತು ಎಂದರೆ ನೀವು ಧರಿಸುವ ಪೋಷಾಕು, ಚಲಾಯಿಸುವ ಕಾರು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಅಲ್ಲ. ಬದಲಿಗೆ, ನೀವು ಕೂಲ್ ಆಗಿ ಹೊಂದಿರುವ ಸ್ಟಾಕ್ಸ್, ಮ್ಯೂಚುವಲ್ ಫಂಡ್ಸ್‌, ರಿಯಲ್ ಎಸ್ಟೇಟ್, ಚಕ್ರಬಡ್ಡಿಯ ಲಾಭ ಮತ್ತು ಸರಳ ಜೀವನಶೈಲಿ. ಇದಾವುದೂ ಇಲ್ಲದೆ ಡ್ರೆಸ್ಸು, ಕಾರು, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂತೃಪ್ತರಾಗುವುದಿದ್ದರೆ ಕ್ಷಣಿಕ ಸುಖ ಸಿಗಬಹುದಷ್ಟೇ. ಅದರ ಬೆನ್ನ ಆರ್ಥಿಕ ಹೊರೆ, ಸಾಲ-ಸೋಲದ ಸುಳಿ ಬೆಂಬಿಡದೆ ಕಾಡಿಯೇ ತೀರುತ್ತದೆ.

ಇನ್ಫೋಸಿಸ್ ಸ್ಥಾಪಕ, ನಮ್ಮೆಲ್ಲರ ಹೆಮ್ಮೆಯ ಐಟಿ ದಿಗ್ಗಜ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್ ಅವರು ಬ್ರಿಟನ್ನಿನ ಮಾಜಿ ಪ್ರಧಾನಿಯೂ ಹೌದು. ಈ ವಾರ ಅವರ ಬಗ್ಗೆ ಬಿಬಿಸಿ ಸೇರಿದಂತೆ ಸಾಕಷ್ಟು ಮಾಧ್ಯಮಗಳಲ್ಲಿ ಬಿತ್ತರವಾದ ಬ್ರೇಕಿಂಗ್ ನ್ಯೂಸ್ ಅನೇಕ ಮಂದಿಯನ್ನು ಅಚ್ಚರಿಗೆ ದೂಡಿದೆ!

ಅದೇನೆಂದರೆ- ರಿಷಿ ಸುನಕ್ ಅವರು ಗೋಲ್ಡ್‌ಮನ್ ಸ್ಯಾಕ್ಸ್ ಹಣಕಾಸು ಸಂಸ್ಥೆಯಲ್ಲಿ ಹಿರಿಯ ಸಲಹೆಗಾರರಾಗಿ ಉದ್ಯೋಗಕ್ಕೆ ಸೇರಿದ್ದಾರೆ! ಪಾರ್ಟ್‌ಟೈಮ್ ಜಾಬ್ ಅದು. ರಿಷಿ ಸುನಕ್ ಅವರು ಈಗಲೂ ಕನ್ಸರ್ವೇಟಿವ್ ಪಕ್ಷದ ಸಂಸದರೂ ಹೌದು. ಜತೆಗೆ ತಾವು ಈ ಹಿಂದೆ ರಾಜಕೀಯ ಸೇರುವ ಮೊದಲು ಕೆಲಸ ಮಾಡುತ್ತಿದ್ದ ಗೋಲ್ಡ್‌ಮನ್ ಸ್ಯಾಕ್ಸ್‌ಗೇ ಮತ್ತೆ ಸೇರ್ಪಡೆಯಾಗಿದ್ದಾರೆ. ಈ ಸುದ್ದಿ ಯನ್ನು ಕೇಳಿದವರಲ್ಲಿ ಹಲವಾರು ಮಂದಿ, “ನಾರಾಯಣ ಮೂರ್ತಿ ಅಳಿಯನಿಗೆ, ಅದೂ ಮಾಜಿ ಪ್ರಧಾನಿಗೆ ಈ ಕೆಲಸ ಬೇಕಿತ್ತಾ? ಸುಮ್ಮನೆ ಮನೆಯಲ್ಲಿ ತಿಂದು ಉಂಡು, ಆರಾಮವಾಗಿ ಜೀವನ ನಡೆಸಬಹುದಲ್ಲವೇ? ಅವರಿಗೆ ದುಡ್ಡಿಗೇನು ಬರವೇ?" ಎಂದೆಲ್ಲ ಆಡಿಕೊಂಡರು.

ಇದನ್ನೂ ಓದಿ: Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ನಿಜ, ಅವರಿಗೆ ದುಡಿದೇ ಹಣ ಗಳಿಸಬೇಕೆಂದೇನಿಲ್ಲ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಯವರು ಇನ್ಫೋಸಿಸ್‌ನಲ್ಲಿ ಹೊಂದಿರುವ ಷೇರುಗಳಿಂದ 2024ರ ಡಿಸೆಂಬರ್‌ನಲ್ಲಿ 85 ಕೋಟಿ ರುಪಾಯಿಗೂ ಹೆಚ್ಚು ಡಿವಿಡೆಂಡ್ ಪಡೆದಿದ್ದರು ಎಂಬುದು ಸುದ್ದಿಯಾಗಿತ್ತು. ಸ್ವತಃ ರಿಷಿ ಸುನಕ್ ಅವರೂ ಮಾಜಿ ಪ್ರಧಾನಿಯಾಗಿದ್ದವರು. ಇದು ದುಡ್ಡಿನ ಸಂಪಾದನೆಯ ಪ್ರಶ್ನೆಯೇ ಅಲ್ಲ.

ಈ ಘಟನೆಯಿಂದ ಸ್ಪೂರ್ತಿ ಪಡೆದವರೂ ಇದ್ದಾರೆ. ರಿಷಿ ಸುನಕ್ ಅವರು ಬಹುದೊಡ್ಡ ಮೌಲ್ಯ ಯುತ ಸಂದೇಶವನ್ನು ಸಾರಿದ್ದಾರೆ. ಜೀವನ ಪೂರ್ತಿ ಮರೆಯಬಾರದ ಪಾಠವಿದು. “ಬ್ಯಾಂಕಿನ ಗ್ರಾಹಕರ ಜತೆಗೆ ಬೆರೆತು, ಜಾಗತಿಕ ಆರ್ಥಿಕತೆ ಮತ್ತು ರಾಜಕೀಯದ ಒಳನೋಟವನ್ನು ಕಲಿತು ಕೊಳ್ಳಲು ಈ ಕೆಲಸ ಸಹಕಾರಿಯಾಗಲಿದೆ" ಎಂದು ರಿಷಿ ಸುನಕ್ ಹೇಳಿದ್ದಾರೆ.

ಇದು ನಿಜವಾಗಿಯೂ, ಕಾಲೇಜುಗಳ ಪದವಿಗೆ ಮುಕ್ತಾಯವಾಗುವ ಶಿಕ್ಷಣವಲ್ಲ, ಜೀವನ ಪರ್ಯಂತ ಕಲಿಕೆ ಅವಶ್ಯವಿರುವ ಕಲಿಕೆಯ ಯುಗ. ನಿತಿನ್ ಕೌಶಿಕ್ ಎಂಬ ಚಾರ್ಟರ್ಡ್ ಅಕೌಂಟೆಂಟ್ ಹೀಗೆನ್ನುತ್ತಾರೆ- “25 ಕೋಟಿ ರುಪಾಯಿ ಸಂಪತ್ತಿನ ಒಡೆಯ 10 ಲಕ್ಷ ರುಪಾಯಿ ಮೌಲ್ಯದ ಸಾಧಾರಣ ಕಾರಿನಲ್ಲಿ ಓಡಾಡುತ್ತಾನೆ. ಆದರೆ ಕೇವಲ 1 ಕೋಟಿ 70 ಲಕ್ಷ ರುಪಾಯಿ ಆಸ್ತಿ ಇರುವ ವ್ಯಕ್ತಿ ಮರ್ಸಿಡಿಸ್ ಬ್ರ್ಯಾಂಡ್ ನ್ಯೂ ಲಕ್ಸುರಿ ಕಾರಿನಲ್ಲಿ ಮಿಂಚುತ್ತಾನೆ.

62 R

ವ್ಯತ್ಯಾಸವೇನು? ಒಬ್ಬ ಕೂಲ್ ಆಗಿ ತನ್ನ ಸಂಪತ್ತನ್ನು ವೃದ್ಧಿಸುತ್ತಾನೆ. ಇನ್ನೊಬ್ಬ ಶೋಕಿಗೆ ಬಿದ್ದು ಇರುವುದನ್ನೆಲ್ಲ ಕಳೆದುಕೊಳ್ಳುವ ಇಳಿಜಾರಿನಲ್ಲಿದ್ದಾನೆ". ಹಾಗಾದರೆ ನೀವು ಮೇಲ್ನೋಟಕ್ಕೆ ಶ್ರೀಮಂತರಂತೆ ಕಾಣಬಯಸುತ್ತೀರಾ ಅಥವಾ ನಿಜವಾಗಿಯೂ ಸಿರಿವಂತರಾಗುತ್ತೀರಾ? ಯಾವುದು ಒಳ್ಳೆಯದು? ಸಂಪತ್ತು ಎಂದರೆ ನೀವು ಧರಿಸುವ ಪೋಷಾಕು, ಚಲಾಯಿಸುವ ಕಾರು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಅಲ್ಲ.

ನಿಜವಾದ ಸಂಪತ್ತು ಯಾವುದು ಎಂದರೆ- ನೀವು ಕೂಲ್ ಆಗಿ ಹೊಂದಿರುವ ಸ್ಟಾಕ್ಸ್, ಮ್ಯೂಚುವಲ್ ಫಂಡ್ಸ್‌, ರಿಯಲ್ ಎಸ್ಟೇಟ್, ಚಕ್ರಬಡ್ಡಿಯ ಲಾಭ ಮತ್ತು ಸರಳ ಜೀವನಶೈಲಿ. ಇದಾವುದೂ ಇಲ್ಲದೆ ಡ್ರೆಸ್ಸು, ಕಾರು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಸಂತೃಪ್ತರಾಗುವುದಿದ್ದರೆ ಕ್ಷಣಿಕ ಸುಖ ಸಿಗಬಹುದಷ್ಟೇ. ಅದರ ಬೆನ್ನ ಆರ್ಥಿಕ ಹೊರೆ, ಸಾಲ-ಸೋಲದ ಸುಳಿ ಬೆಂಬಿಡದೆ ಕಾಡಿಯೇ ತೀರುತ್ತದೆ. ಆದ್ದರಿಂದ ನಿಜವಾದ ಸಿರಿವಂತಿಕೆ ಯಾವುದು ಎಂದರೆ, ನೀವು ನಿದ್ರಿಸುತ್ತಿರುವಾಗಲೂ, ನಿಮ್ಮ ಸಂಪತ್ತನ್ನು ಹೆಚ್ಚಿಸಬಲ್ಲ ಆಸ್ತಿಗಳನ್ನು ಹೊಂದುವುದು.

ಒಂದು ಲಕ್ಸುರಿ ಬ್ರ್ಯಾಂಡೆಡ್ ಕಾರು ಮಾತ್ರ ನಿಮ್ಮನ್ನು ಶ್ರೀಮಂತರನ್ನಾಗಿಸುವುದಿಲ್ಲ. ಶೋ ರೂಮ್‌ ನಿಂದ ಖರೀದಿಸಿ, ಹೊರಗೆ ತಂದ ಕ್ಷಣದಿಂದಲೇ ಅದರ ಮೌಲ್ಯ ಕರಗಲು ಆರಂಭವಾಗುತ್ತದೆ. ಆದರೆ ನಿಮ್ಮ ಸ್ಟಾಕ್ಸ್, ಮ್ಯೂಚುವಲ್ ಫಂಡ್ಸ್, ಇಟಿಎಫ್, ಸೈಟ್, ಬಾಡಿಗೆಗೆ ಕಟ್ಟಿರುವ ಮನೆ ನಿಮ್ಮ ಆದಾಯ ಮೂಲಗಳನ್ನು ಹೆಚ್ಚಿಸುತ್ತವೆ. ‌

ಆರ್ಥಿಕ ಸ್ವಾತಂತ್ರವನ್ನು ತಂದು ಕೊಡುತ್ತವೆ. ಆದ್ದರಿಂದ ಕಣ್ಣಿಗೆ ಕಾಣುವ ಲಕ್ಸುರಿ ಮತ್ತು ಆರ್ಥಿಕ ಸ್ವಾತಂತ್ರ್ಯದ ವ್ಯತ್ಯಾಸವನ್ನು ಅರಿತುಕೊಳ್ಳಿ, ಗೊಂದಲಕ್ಕೀಡಾಗದಿರಿ. ನಿಮ್ಮ ಬಳಿ ಕೇವಲ ಸಾವಿರ ರುಪಾಯಿ ಇದ್ದರೂ ನಿರಾಶರಾಗದಿರಿ, ಸಾವಿರವನ್ನು ಲಕ್ಷಕ್ಕೆ ಪರಿವರ್ತಿಸುವುದು ಹೇಗೆ ಎಂದು ಆಲೋಚಿಸಿ, ಲಕ್ಷವನ್ನು ಕೋಟಿಗೆ ವೃದ್ಧಿಸುವುದು ಹೇಗೆ ಎಂದು ಕಾರ್ಯಪ್ರವೃತ್ತರಾಗಿ. ಸಾವಿರ ವನ್ನು ಲಕ್ಷಕ್ಕೆ ಬದಲಿಸಿದರೂ ಆತ ಯಶಸ್ವಿ ವ್ಯಕ್ತಿಯೇ. ಲಕ್ಷಾಧಿಪತಿಯೊಬ್ಬ ಕೋಟ್ಯಧಿಪತಿ ಯಾಗಬಲ್ಲ.

ಆದರೆ ಮಾರ್ಗ ಮುಖ್ಯವಾಗುತ್ತದೆ. ನಿತಿನ್ ಕೌಶಿಕ್ ಮತ್ತೊಂದು ಉದಾಹರಣೆ ಕೊಡುತ್ತಾರೆ- ಇದು ನೈಜ ಕಥೆ. ಹುಡುಗನೊಬ್ಬನಿಗೆ ಪ್ರತಿ ತಿಂಗಳು 18700 ರುಪಾಯಿ ಆದಾಯ ಇತ್ತು. ಒಂದು ಸಲ ಇಎಂಐ (ಸಮಾನ ಮಾಸಿಕ ಕಂತು) ಅಡಿಯಲ್ಲಿ ಬೈಕ್ ಖರೀದಿಸಿದ. ಆದರೆ ಅದು ಬಳಿಕ ಆತನ ಹಣಕಾಸು ಜೀವನದ ನಿಯಂತ್ರಣವನ್ನೇ ತಪ್ಪಿಸಿತು. ಆ ಹುಡುಗ ಕೇವಲ 10,000 ರುಪಾಯಿ ಸಂಬಳ ಇದ್ದಾಗಲೇ 5000 ಇಎಂಐನಲ್ಲಿ ಬೈಕ್ ಖರೀದಿಸಿದ್ದ.

ಆರಂಭದಲ್ಲಿ ಇದು ನಿಭಾಯಿಸುವಂತಿತ್ತು. ಆದರೆ ಒಂದು ಸಲ ಲ್ಯಾಪ್‌ಟಾಪ್ ಬಿದ್ದು ಮುರಿಯಿತು. ಮತ್ತೊಂದು 3000 ರುಪಾಯಿಯ ಇಎಂಐ ಸೇರಿತು. ಉಳಿದ 2000 ರುಪಾಯಿ ಯಾವುದಕ್ಕೂ ಸಾಲದಾಯಿತು. ಆಹಾರದ ಬಿಲ್ ಗಳು ಹೆಚ್ಚಾಗಿ ಜೀವನ ಬರ್ಬಾದ್ ಆಗಿತ್ತು. ಇದಕ್ಕೆ ಪರಿಹಾರವಾಗಿ 45000 ರುಪಾಯಿಗಳ ವೈಯಕ್ತಿಕ ಸಾಲ ತೆಗೆದುಕೊಂಡ. ಆದರೂ ನೆಮ್ಮದಿ ಇಲ್ಲ. ಮರು ವರ್ಷ ಮತ್ತೆ ಕಿಸೆ ಖಾಲಿ. ಮತ್ತೆ 35000 ರು. ಸಾಲ. ಈಗ ಆ ಹುಡುಗನ ಸಂಬಳ 18700 ರುಪಾಯಿ ಇದ್ದರೂ, ಎರಡೆರಡು ಇಎಂಐಗಳ ಹೊರೆ ಹೊತ್ತುಕೊಂಡು ನಲುಗುತ್ತಿದ್ದಾನೆ.

ವೇತನದ ಬಹುಪಾಲು ಮೊತ್ತ ಸಾಲ ಮರುಪಾವತಿಗೆ ಹೋಗುತ್ತದೆ. ಆತನ ವೈಯಕ್ತಿಕ ಹಣಕಾಸು ಜೀವನ ದುರ್ಭರವಾಗಿದೆ. ಇದೊಂದು ಉದಾಹರಣೆಯಷ್ಟೇ. ಇಂಥ ಸ್ಟೋರಿಗಳು ಅನೇಕ. ನಾವು ತಾತ್ಕಾಲಿಕ ತೃಪ್ತಿಗೋಸ್ಕರ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಕೌಶಿಕ್. ಹಾಗಾದರೆ ಈ ಸ್ಟೋರಿಯ ನೀತಿ ಏನು? ನಿಮ್ಮ ಆದಾಯದ ಶೇಕಡ 30-40ಕ್ಕಿಂತ ಹೆಚ್ಚು ಇಎಂಐ ಬೇಡ. ಗ್ಯಾಜೆಟ್‌ಗಳಿಗೆ ಸಾಲ-ಸೋಲ ಮಾಡದಿರಿ. ಕ್ರೆಡಿಟ್ ಕಾರ್ಡ್ ತುರ್ತುನಿಧಿಯಲ್ಲ. ನಿಮ್ಮ ಲೈಫ್‌ -ಸ್ಟೈಲ್ ಅನ್ನು ಹೆಚ್ಚಿಸುವುದಕ್ಕೆ ಮೊದಲು ಆದಾಯವನ್ನು ಬೆಳೆಯಲು ಬಿಡಿ.

ಕಣ್ಣಿಗೆ ಕಾಣಿಸುವಂಥದ್ದು ನಿಜವಾದ ಸಂಪತ್ತಲ್ಲ. ನಿಜವಾದ ಸಂಪತ್ತು ಕಾಲಾಂತರದಲ್ಲಿ ನಿಮಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡುತ್ತದೆ. ಮನಃಶಾಂತಿಯನ್ನು ಕೊಡುತ್ತದೆ. ಕಾಯಂ ಉದ್ಯೋಗ ಗಳು ನಶಿಸುತ್ತಿರುವ ಸಮಕಾಲೀನ ಜಗತ್ತಿನಲ್ಲಿ ಅನಿಶ್ಚಿತತೆಯೇ ನಿಶ್ಚಿತವಾಗಿದೆ. ಆದ್ದರಿಂದ ವೈಯಕ್ತಿಕ ಹಣಕಾಸು ವ್ಯವಸ್ಥೆಯನ್ನು ದಿನೇದಿನೆ ಅಚ್ಚುಕಟ್ಟಾಗಿಸದಿದ್ದರೆ ಸಂಕಷ್ಟ ಕಟ್ಟಿಟ್ಟಬುತ್ತಿ.

ಜೆರೋಧಾದ ಸ್ಥಾಪಕ ನಿಖಿಲ್ ಕಾಮತ್ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಪೋಸ್ಟ್ ಕುತೂಹಲಕರವಾಗಿದೆ. 2030ರೊಳಗೆ 17 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. 9.2 ಕೋಟಿ ಉದ್ಯೋಗಗಳು ನಾಶವಾಗಲಿವೆ. ನಿವ್ವಳ 7.8 ಕೋಟಿ ಉದ್ಯೋಗಗಳು ಸಿಗಲಿವೆ. ಕೃಷಿ ಕೆಲಸಗಾರರು, ಸಾಫ್ಟ್‌ ವೇರ್ ಮತ್ತು ಅಪ್ಲಿಕೇಶನ್ ಡೆವಲಪರ್ಸ್ ಮತ್ತು ಲಘು ಟ್ರಕ್ ಇಲ್ಲವೇ ಡೆಲಿವರಿ ಸರ್ವೀಸ್ ಚಾಲಕರ ಹುದ್ದೆಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ.

ಆಧುನಿಕ ಜೀವನಶೈಲಿಯಿಂದ ಡೆಲಿವರಿ ಗಿಫ್ಟ್‌ ಉದ್ಯೋಗಗಳ ಸಂಖ್ಯೆ ಹೆಚ್ಚಲಿದೆ. ಬಿಗ್ ಡೇಟಾ, ಫಿನ್ ಟೆಕ್, ಟೆಕ್ ರೋಲ್ ಇರುವ ಹುದ್ದೆಗಳು ಹೆಚ್ಚಲಿವೆ. ಕ್ಯಾಶಿಯರ್, ಕ್ಲರ್ಕ್, ಸೆಕ್ರೆಟರಿಯಂಥ ‘ಯಾಂತ್ರಿಕ ಹುದ್ದೆಗಳು’ ನಶಿಸಲಿವೆ ಎನ್ನುತ್ತಾರೆ ನಿಖಿಲ್ ಕಾಮತ್. ಹಾಗಂತ ಈ ಬೆಳವಣಿಗೆ ಬಗ್ಗೆ ಆತಂಕಪಡಬೇಕಿಲ್ಲ. ಆದರೆ ಪೂರ್ವಸಿದ್ಧತೆಯ ಭಾಗವಾಗಿ ವೈಯಕ್ತಿಕ ಹಣಕಾಸು ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವುದು ನಿರ್ಣಾಯಕ.

ಏಕೆಂದರೆ, “ಸಂಪತ್ತನ್ನು ಗಳಿಸುವುದು ಕೂಡ ಒಂದು ವಿಜ್ಞಾನ" ಎನ್ನುತ್ತಾನೆ ಖ್ಯಾತ ಚಿಂತಕ ವ್ಯಾಲೆಸ್ ಡಿ ವಾಟಲ್ಸ್. ಇದೂ ಅಂಕ ಗಣಿತದ ಹಾಗೆಯೇ. ನಿರ್ದಿಷ್ಟವಾದ ನಿಯಮಗಳ ಮೂಲಕ ನಿಸ್ಸಂದೇಹವಾಗಿ ಯಾರು ಬೇಕಾದರೂ ಶ್ರೀಮಂತರಾಗಬಹುದು. ನಿಯಮಗಳನ್ನು ತಿಳಿದೋ, ತಿಳಿಯದೆಯೋ ಅನುಸರಿಸಿದರೆ ಆಯಿತು. ಅಂಥ ವ್ಯಕ್ತಿ ಸಿರಿವಂತನಾಗುತ್ತಾನೆ. ಇತರರು ಎಷ್ಟೇ ಕಠಿಣ ಪರಿಶ್ರಮ ಪಟ್ಟರೂ ಬಡವರಾಗಿಯೇ ಉಳಿಯುತ್ತಾರೆ ಎನ್ನುತ್ತಾನೆ ವಾಟಲ್ಸ್.

ಶ್ರೀಮಂತರಾಗಲು ಪರಿಸರ ಮುಖ್ಯವಾಗುವುದಿಲ್ಲ. ಒಂದೇ ಕುಟುಂಬದಲ್ಲಿ ಹುಟ್ಟಿದ ಅಂಬಾನಿ ಸೋದರರ ಅಜಗಜಾಂತರ ವ್ಯತ್ಯಾಸವಿದೆ. ಮುಕೇಶ್ ಅಂಬಾನಿ ಯಶಸ್ವಿ ಉದ್ಯಮಿಯಾಗಿ ಜಗತ್ತಿನ ಗಮನ ಸೆಳೆದರೆ, ಅನಿಲ್ ಅಂಬಾನಿ ಮಹಾಪತನಕ್ಕಾಗಿ ಸುದ್ದಿಯಾದರು. ಶ್ರೀಮಂತರು ಮತ್ತು ಬಡವರು ಒಂದೇ ನಗರದಲ್ಲಿ, ಪಟ್ಟಣದಲ್ಲಿ, ಹಳ್ಳಿಗಳಲ್ಲಿ ಇರುತ್ತಾರೆ. ಒಂದೇ ಸ್ಥಳ, ವಾತಾವರಣ‌ ದಲ್ಲಿ ಹುಟ್ಟಿದವರಲ್ಲೂ ಸಂಪತ್ತಿನ ವಿಚಾರದಲ್ಲಿ ವ್ಯತ್ಯಾಸವನ್ನು ಕಾಣಬಹುದು.

ಒಂದೇ ಬಿಸಿನೆಸ್ ಮಾಡುವವರಲ್ಲಿಯೂ ಬಡವರು ಮತ್ತು ಶ್ರೀಮಂತರನ್ನು ಕಾಣಬಹುದು. ಏಕೆ ಹೀಗಾಗುತ್ತದೆ? ಕಾರಣ ಶ್ರೀಮಂತಿಕೆಗೆ ನಿರ್ದಿಷ್ಟ ವಿಧಾನವನ್ನು ಪಾಲಿಸಿದರೆ ಮಾತ್ರ ಫಲಿತಾಂಶ ಸಿಗುತ್ತದೆ. ಇದೇನು ‘ರಾಕೆಟ್ ಸೈ’ ಕೂಡ ಅಲ್ಲ. ಎಷ್ಟೋ ಮಂದಿ ಪ್ರತಿಭಾವಂತರೆನ್ನಿಸಿಕೊಂಡವರೂ, ಹಣಕಾಸು ವಿಚಾರದಲ್ಲಿ ಸೋತು ಸುಣ್ಣವಾಗಿರುವ ನೈಜ ಕಥನಗಳು ಇವೆ.

ಸಾಮಾನ್ಯ ಓದು-ಬರಹ ಇರುವವರೂ ಕೋಟ್ಯಧಿಪತಿಗಳಾಗಿ ಬಡತನ ನೀಗಿಸಿಕೊಂಡ ನಿದರ್ಶನ ಗಳು ಸಾಕಷ್ಟಿವೆ. ಅವರಿಗೆ ಇದು ಹೇಗೆ ಸಾಧ್ಯವಾಯಿತು ಎಂದರೆ, ಅವರು ಗೊತ್ತಿದ್ದೋ, ಇಲ್ಲದೆಯೋ ಶ್ರೀಮಂತಿಕೆಯನ್ನು ಗಳಿಸುವ ಸರಿಯಾದ ವಿಧಾನವನ್ನು ಕೈಗೊಂಡಿರುತ್ತಾರೆ ಅಂತ ವಾಟಲ್ಸ್ ವಿವರಿಸುತ್ತಾನೆ!