ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲೂ ಇತ್ತು

“ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವಾರಾಧನೆ ಅಥವಾ ಲಿಂಗಾರಾಧ ನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯ ವನ್ನು ನೀಡುತ್ತವೆ. ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ, ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ"

ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲೂ ಇತ್ತು

ಅಂಕಣಕಾರ ರವಿ ಹಂಜ್

Profile Ashok Nayak Mar 18, 2025 8:32 AM

ಬಸವ ಮಂಟಪ

ರವಿ ಹಂಜ್

(ಭಾಗ-೧)

ವೆೈಜ್ಞಾನಿಕವಾಗಿ ಭಾರತದ ಇತಿಹಾಸದ ಕಾಲಮಾನವು ಹರಪ್ಪಾ-ಮೊಹೆಂಜೋದಾರೋ ನಾಗರಿಕತೆ ಯಿಂದ ಆರಂಭವಾಗುತ್ತದೆ. ಅದಕ್ಕೂ ಮುಂಚಿನ ಯಾವುದೇ ಐತಿಹಾಸಿಕ ದಾಖಲೆಗಳು ಈವರೆಗೆ ಸಿಕ್ಕದ ಕಾರಣ ಭಾರತೀಯ ಇತಿಹಾಸವನ್ನು ಇಲ್ಲಿಂದಲೇ ಆರಂಭಿಸಬೇಕಾಗಿದೆ. ಅಂತೆಯೇ ವೀರಶೈವದ ಮೂಲ ಕೂಡ ಹರಪ್ಪಾ-ಮೊಹೆಂಜೋದಾರೋ ಕಾಲವೇ ಎಂದು ಅಲ್ಲಿನ ಉತ್ಖನನ ದಿಂದ ತಿಳಿದುಬರುತ್ತದೆ. ಅಂದರೆ ಭಾರತಕ್ಕೆ ಯಾವ ಐತಿಹಾಸಿಕ ಕಾಲಮಾನದ ಮಾನ್ಯತೆ ಇದೆ ಯೋ ಅದೇ ಐತಿಹಾಸಿಕ ಕಾಲಮಾನದ ಮಾನ್ಯತೆ ವೀರಶೈವಕ್ಕೂ ಮತ್ತದರ ಇಷ್ಟಲಿಂಗ ಸಾಧನೆಗೂ ಇದೆ. ಅಂದರೆ ಭಾರತದ ಪರಂಪರೆಯಷ್ಟೇ ಪ್ರಾಚೀನ ಪರಂಪರೆಯು ವೀರಶೈವದ್ದೂ ಆಗಿದೆ!

ಇದಕ್ಕೆ ಪುರಾವೆಯಾಗಿ ಬ್ರಿಟಿಷ್ ಇತಿಹಾಸಜ್ಞ ಸರ್ ಜಾನ್ ಮಾರ್ಷಲ್ ತಮ್ಮ MohenjoDaro and the Indus Civilization ಸಂಶೋಧನಾ ಗ್ರಂಥದಲ್ಲಿ “ಕಲ್ಲಿನಿಂದ ಮಾಡಿದ ಸಣ್ಣ ಲಿಂಗಾಕೃತಿಗಳು ಮೊಹೆಂಜೋದಾರೋ ಉತ್ಖನನದ ಸಮಯದಲ್ಲಿ ಸಿಕ್ಕಿದ್ದು, ಶೈವಾರಾಧನೆ ಅಥವಾ ಲಿಂಗಾರಾಧ ನೆಯು ಈ ಕಾಲದಲ್ಲಿಯೂ ಪ್ರಚಲಿತವಿತ್ತೆಂದು ಸಾಕ್ಷ್ಯವನ್ನು ನೀಡುತ್ತವೆ. ಇಲ್ಲಿ ದೊರೆತ ಸಣ್ಣ ಲಿಂಗಾಕೃತಿಗಳು ದಕ್ಷಿಣ ಭಾರತದಲ್ಲಿನ ಇಂದಿನ ವೀರಶೈವರು ಕೊರಳಿಗೆ ಕಟ್ಟಿಕೊಂಡಿರುವ, ಕರಂಡದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕದಿವೆ" ಎಂದಿದ್ದಾರೆ.

ಇದನ್ನೂ ಓದಿ: Ravi Hunj Column: ಹಿಂದೂ ಪ್ರಭೇದಗಳ ಒಗ್ಗೂಡಿಸುವಿಕೆ ಒಡೆಯುವಿಕೆ !

ಇವರ ಈ ಕೃತಿ 1931ರಲ್ಲಿ ಪ್ರಕಟಗೊಂಡಿದ್ದು, ಸರ್ ಜಾನ್ ಮಾರ್ಷಲ್ ಬ್ರಿಟಿಷ್ ಭಾರತದ ಭಾರ ತೀಯ ಪುರಾತತ್ವ ಇಲಾಖೆಯ ಡೈರೆಕ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು. ಆಸಕ್ತರು ಇವರ ಈ ಗ್ರಂಥವನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಗ್ರಂಥವು ಅನುಪಲಬ್ಧವಾಗಿದ್ದರೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಕರ್ನಾಟಕದ ಹೆಸರಾಂತ ಸಂಶೋಧಕರಾದ ಆರ್.ಸಿ.ಹಿರೇಮಠ ಅವರ ‘ಮಹಾಯಾತ್ರೆ’ ಕೃತಿಯನ್ನು ಪರಿಶೀಲಿಸಬಹುದು. ಅವರು ತಮ್ಮ ಈ ಕೃತಿಯಲ್ಲಿ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಉಲ್ಲೇಖಿಸುತ್ತ ತಮ್ಮ ಸಂಶೋಧನೆಯ ಇನ್ನಷ್ಟು ಪೂರಕ ವಿಷಯಗಳನ್ನು ಮಂಡಿಸಿದ್ದಾರೆ.

ಇದೇ ರೀತಿ ಸಾಹಿತಿ ಜೆ.ರುದ್ರಪ್ಪನವರು ‘ಶೈವಮತ’ ಎಂಬ ತಮ್ಮ ಲೇಖನದಲ್ಲಿ ಸಹ ಸರ್ ಜಾನ್ ಮಾರ್ಷಲ್ ಅವರ ಗ್ರಂಥವನ್ನು ಆಕರವಾಗಿ ಉಲ್ಲೇಖಿಸಿದ್ದಾರೆ. ಇವರ ಈ ಲೇಖನವು ಅ.ನ.ಕೃ. ಸಂಪಾದಿಸಿರುವ ‘ಭಾರತೀಯ ಸಂಸ್ಕೃತಿ ದರ್ಶನ’ ಕೃತಿಯಲ್ಲಿ ಅಧ್ಯಾಯವಾಗಿದೆ (ಪುಟ 216). ಮೊಹೆಂಜೋದಾರೋ ಉತ್ಖನನದಲ್ಲಿ ದೊರೆತ ಈ ಲಿಂಗಗಳು ಲಿಂಗಗಳಾಗಿದ್ದರೂ ಅವುಗಳ ಕೆಳಗಿನ ಪೀಠ ಯೋನಿಪೀಠ ಎಂದು ಹೇಳಲಾಗದು ಎಂದು ಆರ್ಥರ್ ಬಾಶಂ ಸಂದೇಹವನ್ನು ವ್ಯಕ್ತಪಡಿಸಿದ್ದರು.

ಆದರೆ ಬ್ರಿಟಿಷ್ ಭಾರತದ ಮತ್ತಿಬ್ಬರು ಉತ್ಖನನ ಸಂಶೋಧಕರಾದ ಜೋ ಮತ್ತು ರಾಯನ್, ಹರಪ್ಪಾ ಮತ್ತು ಮೊಹೆಂಜೋದಾರೋದಲ್ಲಿ ತಮಗೆ ಲಿಂಗ ಮತ್ತು ಯೋನಿಪೀಠ ಇರುವ ಇಂದಿನ ರೂಪದ ಲಿಂಗಗಳೇ ಸಿಕ್ಕಿವೆ ಎಂದಿದ್ದಾರೆ. ಭಾರತ ಇತಿಹಾಸಜ್ಞೆ ವೆಂಡಿ ಡೋನಿಗರ್, ಸಿಂಧೂ ಕಣಿವೆ ನಾಗರಿಕತೆಯು ಬಳಸುತ್ತಿದ್ದ ಮೊಹರುಗಳಲ್ಲಿ ಒಂದಾದ ಪಶುಪತಿ ಮೊಹರಿನಲ್ಲಿರುವ ಲಿಂಗಾ ಕೃತಿಯನ್ನು ತೋರಿ ಇಲ್ಲಿ ಸಿಕ್ಕ ಪಳೆಯುಳಿಕೆಗಳು ಲಿಂಗಗಳೇ ಆಗಿರುವವು ಎಂದಿzರೆ. ಒಟ್ಟಾರೆ ಈ ಎ ಉತ್ಖನನಗಳು ಮತ್ತು ಸಂಶೋಧನೆಗಳು ಲಿಂಗಾರಾಧನೆಯು ಸಿಂಧೂ ನಾಗರಿಕತೆಯ ಭಾಗವಾಗಿತ್ತು ಎಂದೇ ಪ್ರತಿಪಾದಿಸಿವೆ.

ಹಾಗಾಗಿ ಲಿಂಗಾರಾಧನೆಯು ಭಾರತದಲ್ಲಿ ಆರ್ಯನ್ ವಲಸಿಗರು ಬರುವ ಮುಂಚಿನಿಂದಲೂ ಇದ್ದ ಮೂಲ ಸಂಸ್ಕೃತಿಯೆನ್ನಬಹುದು. ಅಲ್ಲಿಗೆ ಮೂಲನಿವಾಸಿ ಪಶುಪಾಲಕರ ಪಶುಪತಿಗೂ ಹರಪ್ಪಾ ಮೊಹೆಂಜೋದಾರೊ ಮೊಹರಿಗೂ ನೇರ ಸಂಬಂಧವಲ್ಲದೆ ಲಿಂಗ ಯಾನೆ (ವೀರ)ಶೈವಕ್ಕೆ ಮತ್ತವರ ಇಷ್ಟಲಿಂಗಕ್ಕೆ ಪುರಾವೆಯನ್ನೂ ಸ್ಥಾಪಿಸುತ್ತದೆ.

ಬ್ರಿಟಿಷ್ ಉತ್ಖನನ ಅಽಕಾರಿ ಸರ್ ಜಾನ್ ಮಾರ್ಷಲ್ ಅವರ ಮೊಹೆಂಜೋದಾರೋ ಉತ್ಖನನದಲ್ಲಿ ಸಿಕ್ಕ ಸಣ್ಣ ಲಿಂಗಾಕೃತಿಗಳನ್ನು ಶೈವಿಗರು ತಮ್ಮ ಕೊರಳಿಗೆ ಅಥವಾ ತೋಳಿಗೆ ಕಟ್ಟಿಕೊಂಡು ತಿರು ಗುವ ಜಂಗಮ ಸಂಸ್ಕೃತಿಯವರು ಎಂದಿದ್ದಾರೆ. ಇದಕ್ಕೆ ಪೂರಕವಾಗಿ ವೀರಶೈವ ಪದದ ಪ್ರಾಚೀನತೆ ಯನ್ನು ಶಂ.ಬಾ.ಜೋಷಿಯವರು ವೇದಗಳ ಕಾಲಕ್ಕೆ ಒಯ್ಯುವರು. ‘ಶಿವರಹಸ್ಯ’ವೆಂಬ ಅವರ ಕೃತಿಯಲ್ಲಿ, “ನನಗೆ ತಿಳಿದಮಟ್ಟಿಗೆ ವೀರಶೈವ ಶಬ್ದದ ಮೂಲವು ಋಗ್ವೇದದಲ್ಲಿದೆ.

ರುದ್ರನು ವೃಷಭನು, ಎಂದರೆ ವೀರನು. ಆದುದರಿಂದ ಆತನ ಉಪಾಸಕರೂ ವೀರರು; ಅದರಿಂದ ಈ ಹೆಸರು. ಹೀಗೆ ಬರಿಯ ತರ್ಕದಿಂದ ಇದನ್ನು ಎಣಿಕೆ ಹಾಕಬೇಕಾದುದಿಲ್ಲ. ‘ಇಮಾ ರುದ್ರಾಯ ತವಸೇ ಕಪರ್ದಿನೇ ಕ್ಷಯದ್ದೀರಾಯ ಪ್ರಭರಾಮಹೇ ಮತಿಃ | ಯಥಾ ಶಮಸದ್ವಿಷದೇ ಚತುಸ್ಪದೇ ವಿಶ್ವಂ ಪುಷ್ಪಂ ಗ್ರಾಮೇ ಅಸ್ಮಿನ್ನನಾತುರಂ||’ ಅಂದರೆ, ಬಲಿಷ್ಟನೂ, ಜಟಾಧಾರಿಯೂ, ವೀರಪುತ್ರರನ್ನು ಳ್ಳವನೂ ಆದ ರುದ್ರನನ್ನು ಕೊಂಡಾಡುವ; ಅದರಿಂದ ಈ ಊರಿನಲ್ಲಿ ಎರಡು ಕಾಲಿನವರ ಹಾಗೂ ನಾಲ್ಕು ಕಾಲಿನವರ ಕಲ್ಯಾಣವಾಗಿ ಎಲ್ಲರೂ ನಿರೋಗಿಗಳೂ ಪುಷ್ಟರೂ ಆಗುವರು.

ಇದರ ಮುಂದಿನ ಮಂತ್ರದಲ್ಲಿಯೂ, ಬೇರೆ ಮಂಡಲಗಳಲ್ಲಿಯೂ ರುದ್ರಶಿವನು ವೀರರ ತಂದೆ, ವೀರರ ಒಡೆಯ ಎಂಬ ಮಾತುಗಳು ಅಲ್ಲಲ್ಲಿ ಬಂದಿವೆ. ಶಿವ (ರುದ್ರ) ನ ಪುತ್ರರು (ಶಿವಪುತ್ರರು) ಎಂದು ಗೌರವದಿಂದ ಹೇಳಿಕೊಳ್ಳುವ ಮತ್ತು ಆ ಬಗೆಯಾದ ದೃಢಶ್ರದ್ಧೆಯಿರುವ ಶಿವಭಕ್ತರಿಗೆ ಮಾತ್ರ ವಲ್ಲದೆ, ಬೇರೆ ಇನ್ನಾರಿಗೂ ವೀರ (ಶೈವ) ಎಂಬ ಹೆಸರು ಸಮರ್ಪಕವಾಗಲಾರದು. ಕರ್ನಾಟಕ ದಲ್ಲಿಯೇ ಈ ವೀರರು ರುದ್ರನ ಅನುಯಾಯಿಗಳಾದ ರುದ್ರೀಯರು ಇರುತ್ತಿರುವುದರಿಂದ ಈ ನಾಡಿನ ಜನಾಂಗಗಳ ವೇದಕಾಲದ ಐತಿಹ್ಯವನ್ನು ಅರಿತುಕೊಳ್ಳಲು ಈ ಶಬ್ದವು ಬಹಳ ಉಪಯುಕ್ತವಾಗಿದೆ.

ವೀರ ಬಣಂಜುಗಳು, ವೀರ ಪಂಚಾಳರು ಎಲ್ಲರೂ ರುದ್ರೀಯರೇ" ಎಂದಿದ್ದಾರೆ. ಅಲ್ಲಿಗೆ ಇಂದಿನ ವೀರಶೈವರಲ್ಲಿರುವ ವರ್ಗಗಳಾದ ವೀರ ಮಾಹೇಶ್ವರ (ಜಂಗಮ), ವೀರ ಬಣಂಜು (ಬಣಜಿಗ), ವೀರ ಪಂಚಾಳ (ಪಂಚಮಸಾಲಿ) ರ ಬಗ್ಗೆ ಸಹ ಐತಿಹಾಸಿಕ ಸ್ಪಷ್ಟತೆ ಸಿಗುತ್ತದೆ. ಮತ್ತವರೆಲ್ಲರೂ ಇಷ್ಟ ಲಿಂಗಧಾರಿಗಳಾಗಿದ್ದರು. ಈ ವೀರಶೈವ ಸಂಸ್ಕೃತಿಯು ಬೌದ್ಧರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆ ಪ್ರಭಾವದಿಂದಲೇ ಬೌದ್ಧರು ಬುದ್ಧನ ಅಥವಾ ನಂತರದ ಬೌದ್ಧ ಗುರುಗಳ ಜೈವಿಕ ಪಳೆಯು ಳಿಕೆಗಳಾದ ಹಲ್ಲು, ಮೂಳೆ, ಕೂದಲುಗಳನ್ನೋ ಕರಂಡಕಗಳಲ್ಲಿಟ್ಟು ಪೂಜಿಸುತ್ತಿದ್ದರು ಮತ್ತು ತಮ್ಮೊಟ್ಟಿಗೆ ದೇಶಾಂತರದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು.

ಮುಂದೆ ಸ್ತೂಪಗಳನ್ನು ಕಟ್ಟಲು ತೊಡಗಿದಾಗ ಆ ಸ್ತೂಪಗಳಲ್ಲಿ ಈ ಕರಂಡಕಗಳನ್ನು ಸ್ಥಾವರ ಗೊಳಿಸಲಾರಂಭಿಸಿದರು. ಆ ಕರಂಡಕಗಳ ಸಂಸ್ಕೃತಿಯಿಂದ ಪ್ರಭಾವಿತರಾಗಿ ಶೈವರು ತೋಳು ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ ತಮ್ಮ ಲಿಂಗಗಳನ್ನು ಇಂಥ ಕರಂಡಕಗಳಲ್ಲಿಟ್ಟು ಅವುಗಳನ್ನು ತೋಳು ಕೊರಳಿಗೆ ಕಟ್ಟಿಕೊಳ್ಳಲಾರಂಭಿಸಿರಬೇಕು ಅಥವಾ ಶೈವಿಗರೇ ಬೌದ್ಧರ ಈ ಪದ್ಧತಿಯನ್ನು ಅಳವಡಿಸಿ ಕೊಂಡಿರಲೂಬಹುದು.

ಒಟ್ಟಾರೆ ಲಿಂಗಗಳನ್ನು ಕರಡಿಗೆಯಲ್ಲಿಟ್ಟುಕೊಳ್ಳುವ ಸಂಸ್ಕೃತಿ ಸಹ ಕ್ರಿಸ್ತಶಕ ಒಂದನೇ ಶತಮಾನ ದಲ್ಲಿಯೇ ಬಳಕೆಯಲ್ಲಿದ್ದಿತು. ಪುನರ್ಜನ್ಮದಲ್ಲಿ ನಂಬಿಕೆಯಿರದ ಬೌದ್ಧರು ನಿರ್ವಾಣ ಹೊಂದಿದ ಜೀವಿಗಳ ಭೌತಿಕ ಪಳೆಯುಳಿಕೆಗಳಾದ ಹಲ್ಲು, ಕೂದಲು, ಮೂಳೆಗಳನ್ನು ಕರಂಡಕದಲ್ಲಿಟ್ಟು ಪೂಜಿಸಿದರೆ, ಶೈವರು ತಮ್ಮ ಆತ್ಮವನ್ನೇ ಲಿಂಗದ ರೂಪವಾಗಿಸಿಟ್ಟು ಪೂಜಿಸುತ್ತಿದ್ದರು.

ಕ್ರಿ.ಶ. 127ರಲ್ಲಿ ಕಾನಿಷ್ಕನ ಪಟ್ಟಾಭಿಷೇಕದ ಪ್ರಥಮ ವಾರ್ಷಿಕೋತ್ಸವದಲ್ಲಿ ರಚಿಸಿದ ಕರಂಡಕದ ಆಕಾರದಂತೆಯೇ ಶೈವಿಗರ ಲಿಂಗವಿಡುವ ಕರಂಡಕ ಯಾನೆ ಕರಡಿಗೆಯ ಆಕಾರವಿದೆ. ಹೀಗೆ ಪರಸ್ಪರ ಪ್ರಭಾವಿಸುವ ಸಂಸ್ಕೃತಿಯಿಂದಲೇ ಹಿಂದೂ, ಬೌದ್ಧ, ಜೈನ, ಪಾಶುಪತ ಶೈವಗಳು ಒಂದೇ ಸಂಸ್ಕೃತಿಯ ಕವಲುಗಳು ಎನಿಸುವುದು. ಕಾನಿಷ್ಕನ ಈ ಕರಂಡಕವು ಇಂದು ಪಾಕಿಸ್ತಾನದ ಪೇಶಾವರ್ ವಸ್ತುಸಂಗ್ರಹಾಲಯದಲ್ಲಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಇದಿಷ್ಟು ಐತಿಹಾಸಿಕವಾಗಿ ವೀರಶೈವ, ಇಷ್ಟಲಿಂಗ, ಕರಡಿಗೆ ಮತ್ತು ವೀರಶೈವ ವರ್ಗ(ಜಂಗಮ, ಬಣಜಿಗ, ಪಂಚಮಸಾಲಿ) ದ ಸಂಸ್ಕೃತಿಯು ಭಾರತದಲ್ಲಿ ಬಸವಪೂರ್ವದ ಅದೆಷ್ಟೋ ಶತಮಾನ ಗಳಿಗೂ ಮುನ್ನವೇ ಇದ್ದಿತು ಎಂಬ ಪುರಾವೆಯನ್ನೊದಗಿಸುತ್ತದೆ. ಕ್ರಿ.ಶ.11ನೇ ಶತಮಾನದ ವೀರಶೈವ ಕೊಂಡಗುಳಿ ಕೇಶಿರಾಜ ವಚನಗಳಲ್ಲಿರುವ ವಿಚಾರಗಳನ್ನೇ ಕಂದಪದ್ಯದ ರೂಪದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.

ಬಸವಣ್ಣನಿಗಿಂತ ಒಂದು ಶತಮಾನದಷ್ಟು ಹಿಂದಿನವನಾದ ಈತನ ಕುರಿತು ಶಿಲಾಶಾಸನ ಗಳಿರುವುದಲ್ಲದೆ ಆತನು ಇಷ್ಟಲಿಂಗ ಪೂಜೆ, ಜಂಗಮ ದಾಸೋಹ ಮಾಡುತ್ತಿದ್ದನೆಂದು ದಾಖಲೆಗಳು ಇವೆ. ಆದರೆ ಬಸವಾಭಿಮಾನಿ ಸಂಶೋಧಕರು ಈತನ ಕಂದಪದ್ಯಗಳ ತಾಳೆಗರಿಗಳಲ್ಲಿ ಶ್ರೀ ಗುರು ಬಸವಲಿಂಗಾಯ ನಮಃ ಎಂದಿರುವ ಕಾರಣ ಇವೆಲ್ಲವೂ ಪ್ರಕ್ಷಿಪ್ತ ಎಂದು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ತಾಳೆಗರಿಗಳ ನಕಲು ಪ್ರತಿಗಳನ್ನು ಮಾಡುವಾಗ ಲಿಪಿಕಾರರು (ಗುಮಾಸ್ತರು) ತಮ್ಮ ತಮ್ಮ ಇಷ್ಟ ದೇವತೆಗಳ ‘ನಮಃ’, ‘ಪ್ರಸನ್ನ’ ಎಂದು ಬರೆಯುತ್ತಿದ್ದುದು ವಾಡಿಕೆ. ಹೀಗೆ 15ನೇ ಶತಮಾನದಲ್ಲಿ ನಕಲು ಮಾಡಿರುವ ವ್ಯಕ್ತಿ ಈ ‘ನಮಃ’ ಅನ್ನು ಬರೆದಿರಬಹುದು. ಆದರೆ ಇತರೆ ಆಕರಗಳನ್ನು ಗಮನಿಸಿದಾಗ ಕೊಂಡಗುಳಿಯ ಅಸ್ತಿತ್ವ ಬಸವಣ್ಣನಿಗಿಂತ ಹೆಚ್ಚು ವಾಸ್ತವ ಎನಿಸುತ್ತದೆ. ಆದರೆ ಇದೇ ತರ್ಕವನ್ನು ವಚನಗಳ ಓಲೆಗರಿಗೆ ಅನ್ವಯಿಸಿದರೆ ಈವರೆಗೆ ಸಿಕ್ಕಿರುವ ವಚನಗಳ ಓಲೆಗರಿಗಳು 15ನೇ ಶತಮಾನದವು ಮತ್ತು ಶರಣರು 12ನೇ ಶತಮಾನದಲ್ಲಿ ಕ್ರಾಂತಿ ಮಾಡಿದ್ದರು ಎನ್ನುವ ಯಾವ ಪುರಾವೆಗಳೂ ಇಲ್ಲ ಎಂಬಲ್ಲಿಗೆ ಬಸವಾಭಿಮಾನಿಗಳ ತರ್ಕ ಬಿದ್ದುಹೋಗುತ್ತದೆ.

ಇದೇ ರೀತಿ ದೇವರ ದಾಸಿಮಯ್ಯ ಸಹ ಬಸವಪೂರ್ವ ಇಷ್ಟಲಿಂಗ ಆರಾಧನೆಯ ವೀರಶೈವ ವಚನಕಾರ ಎಂದು ಸಾಬೀತಾಗಿದೆ. ಗುರು ಲಿಂಗ ಜಂಗಮ ಉಖದ ಆತನ ವಚನವೊಂದು ಹೀಗಿದೆ: ‘ಗುರುಭಕ್ತನಾದಲ್ಲಿ ಘಟಧರ್ಮವಳಿದು, ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು, ಜಂಗಮ ಭಕ್ತಿಯಲ್ಲಿ ಧನದಾಸೆಯಳಿದು, ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ, ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ, ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ’.

ಇನ್ನು ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿ ಬಸವಣ್ಣನನ್ನು ಭೇಟಿ ಮಾಡುವ ಮೊದಲೇ ಇಷ್ಟಲಿಂಗಾಧಾರಿಗಳಾಗಿದ್ದರು ಎನ್ನುವುದು ಗಮನಾರ್ಹ.

***

ಗ್ರಂಥೇತಿಹಾಸದ ಪ್ರಕಾರವಾಗಿ ವೀರಶೈವ ಇಷ್ಟಲಿಂಗದ ಕುರಿತಾಗಿ ವೇದವ್ಯಾಸರು ಬರೆದಿರುವ ರೆನ್ನುವ ಸ್ಕಂದ ಪುರಾಣದಲ್ಲಿ, “ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ | ಸಂಪೂಜಯತ್ತಂಗ ಸ ವೀರಶೈವಂ|" ಎಂಬ ಶ್ಲೋಕದಲ್ಲಿ ಬರುತ್ತದೆ. ಈ ಶ್ಲೋಕದ ಅರ್ಥ, “ಯಾರು ತನ್ನ ಹಸ್ತಪೀಠದಲ್ಲಿ ಇಷ್ಟಲಿಂಗವನ್ನಿಟ್ಟು ತನ್ನ ಮನಸ್ಸನ್ನು ನೆಲೆಗೊಳಿಸಿ ಬಾಹ್ಯ ಕ್ರಿಯೆಗಳನ್ನು ದೂರಮಾಡಿ ಶ್ರದ್ಧೆಯಿಂದ ಪೂಜಿಸುವನೋ ಅವನೇ ವೀರಶೈವ" ಎಂದಾಗುತ್ತದೆ.

ಸ್ಕಂದ ಪುರಾಣವನ್ನು ಬಹಳಷ್ಟು ಶತಮಾನಗಳ ಹಿಂದೆಯೇ ಬರೆದಿದೆ ಎನ್ನಲಾದರೂ ಇತಿಹಾಸ ತಜ್ಞರು ಲಭ್ಯ ಪುರಾವೆಗಳ ಪ್ರಕಾರ ಕ್ರಿ.ಶ. 8ನೇ ಶತಮಾನ ಎಂದು ಮಾನ್ಯ ಮಾಡಿದ್ದಾರೆ. ಹಾಗಾಗಿ ಗ್ರಂಥೇತಿಹಾಸಿಕವಾಗಿ ಇಷ್ಟಲಿಂಗ ಪರಿಕಲ್ಪನೆ 8ನೇ ಶತಮಾನದಲ್ಲಿ ಸಹ ಇದ್ದಿತು ಎಂದೇ ಸಾಬೀತಾ ಗುತ್ತದೆ. ವಚನಕಾರ ಸಿದ್ಧವೀರ ದೇಶಿಕೇಂದ್ರನು ತನ್ನ ವಚನದಲ್ಲಿ ಸ್ಕಂದ ಪುರಾಣವನ್ನು ಹೀಗೆ ಉಲ್ಲೇಖಿಸಿದ್ದಾನೆ: ‘ವ್ಯಾಸನುಸುರ್ದ ಸ್ಕಂದಪುರಾಣದಲ್ಲಿಯ ಶ್ರೀಶೈಲಕಲ್ಪ ನೋಳ್ಪುದಯ್ಯಾ. ಅಲ್ಲಿ ಸಿದ್ಧಸಾಧಕರ ಸನ್ನಿದ್ಧಿಯಿಂದರಿಯಬಹುದಯ್ಯಾ. ಮಾಡಿದನೊಬ್ಬ ಪೂರ್ವದಲ್ಲಿ ಗೋರಕ್ಷ ಮಾಡಿದನೊಬ್ಬ ಮತ್ಸ್ಯೀಂದ್ರನಾಥ, ಮಾಡಿದರೆಮ್ಮ ವಂಶದ ಶ್ರೀಗುರುಶಾಂತ ದೇವರು.

ಇದು ಕಾರಣ, ಯೋಗದ ಭೇದ ಯೋಗಿಗಳಂತರಂಗದಿಂದರಿತಡೆ ಯೋಗಸಿದ್ಧಿ ಸತ್ಯ ಸತ್ಯ, ಶ್ರೀಗುರು ತೋಂಟದಸಿದ್ಧಲಿಂಗೇಶ್ವರ". ಸ್ಕಂದ ಪುರಾಣದಲ್ಲಿ “ಶಿವಾಶ್ರಿತೇಷು ತೇ ಶೈನಾ ಜ್ಞಾನಯಜ್ಞ ರತಾ ನರಾಃ | ಮಾಹೇಶ್ವರಾಃ ಸಮಾಖ್ಯಾ ತಾಃ ಕರ್ಮಯಜ್ಜ ರತಾ ಭುವಿ|" ಎಂಬ ಮತ್ತೊಂದು ಶ್ಲೋಕ ವಿದೆ. ಅರ್ಥಾತ್ ವೀರಶೈವ ಮಾಹೇಶ್ವರರು eನಯಜ್ಞದಲ್ಲಿ, ಕರ್ಮಯಜ್ಞದಲ್ಲಿ ರತರಾಗಿರುವವರು ಎಂದು. ಇವೇ ಶ್ಲೋಕಗಳು ಸಿದ್ಧಾಂತ ಶಿಖಾಮಣಿಯಲ್ಲಿಯೂ ಇವೆ.

ವೀರಶೈವ ಪದದ ನಿವೇಚನೆಯನ್ನು ‘ವಿ’ ಎಂದರೆ ವಿದ್ಯಾ, ‘ರ’ ಎಂದರೆ ರಮಿಸುವುದು; ವೀರಶೈವ ಎಂದರೆ ಶೈವವಿದ್ಯೆಯಲ್ಲಿ ರತನಾದವನು ಎಂದು ಪಂಡಿತರುಗಳು ನಿರ್ವಚಿಸಿದ್ದಾರೆ.

ಡಾ. ಪರಮೇಶ್ವರಿ ಹಿರೇಮಠ ಅವರು ತಮ್ಮ ‘ಶಿವಾಗಮಗಳು ಮತ್ತು ವಚನ ಸಾಹಿತ್ಯ’ ಎಂಬ ಸಂಶೋಧನಾ ಗ್ರಂಥದಲ್ಲಿ ಉಖಿಸಿರುವಂತೆ ಸೂಕ್ಷ್ಮಾಗಮವು ಲಿಂಗದಿಂದಲೇ ಸಕಲ ದೇವಾನು ದೇವತೆಗಳು ಉದಯಿಸಿದರು ಎನ್ನುತ್ತದೆ. ಲಿಂಗದಿಂದಲೇ ದೇವಾನುದೇವತೆಗಳು ಸೃಷ್ಟಿಗೊಂಡ ವಿಸೃತ ವರ್ಣನೆಯನ್ನು ಸೂಕ್ಷ್ಮಾಗಮದಲ್ಲಿ ಹೀಗೆ ನಿರೂಪಿಸುತ್ತದೆ: ‘ದೇವದಾನವಗಂಧರ್ವಾ ವೇದಾಃ ಸಾಂಗಾಃ ಸನಾತನಾಃ| ಉತ್ಪದ್ಯತೇತ್ರ ಕಲ್ಪಾದೌ ಕಲ್ಪಾಂತೇ ಚ ಲಯಂಗತಾಃ|| ದಕ್ಷಿಣಾಂಗಾತ್ತತೋ ಬ್ರಹ್ಮಾ ವಿಷ್ಣುರ್ವಾಮಾಂಗತಸ್ತಥಾ| ಸಮಸ್ತವೇದಜನನೀ ಗಾಯತ್ರೀ ಹೃದಯಾದಭೂತ್|| ವೇದಾಃ ಶಿರಃಸಮುದ್ಭೂತಾಃ ಸಾಂಗೋಪಾಂಗಾಃ ಸಹಸ್ರಶಃ|’ ಅಂದರೆ, “ದೇವತೆಗಳು, ರಾಕ್ಷಸರು, ಗಂಧರ್ವರು, ವೇದಗಳು ಕಲ್ಪದ ಆರಂಭದಲ್ಲಿ ಲಿಂಗದಿಂದಲೇ ಉದ್ಭವಿಸಿದವು,

ಮತ್ತೆ ಕಲ್ಪದ ಕೊನೆಯಲ್ಲಿ ಅದರ ಲಯ ಹೊಂದಿದವು. ಲಿಂಗದ ಬಲಭಾಗದಿಂದ ಬ್ರಹ್ಮನು, ಎಡಭಾಗದಿಂದ ವಿಷ್ಣು ಮತ್ತು ಹೃದಯದಿಂದ ಸರ್ವವೇದಗಳ ಜನನಿಯಾದ ಗಾಯತ್ರಿಯು ಉತ್ಪನ್ನರಾದರು. ಅಂಗ-ಉಪಾಂಗಗಳಿಂದ ಕೂಡಿದ ವೇದಗಳು ಅದರ ಶಿರಸ್ಸಿನಿಂದ ಉದ್ಭವಿಸಿದವು" ಎಂದು ತಿಳಿಸಿದೆ.

ಇದನ್ನೇ ವಚನಕಾರ ಬಾಲಸಂಗಯ್ಯ ಆಗಮಗಳ ಉಖಗಳೊಂದಿಗೆ ವಿವರಿಸುತ್ತಾ, “...ಅನಂತ ಕೋಟಿ ಬ್ರಹ್ಮರು, ಅನಂತ ಕೋಟಿ ವಿಷ್ಣಾದಿಗಳು, ಅನಂತ ಕೋಟಿ ಇಂದ್ರಾದಿಗಳು, ಅನಂತ ಕೋಟಿ ದೇವ ರ್ಕಳು, ಇವರೆಲ್ಲ ಎಲ್ಲಿ ಹುಟ್ಟುವರು ಅದೇ ‘ಗಂ’ ಎಂಬ ಶಬ್ದ. ಇದಕ್ಕೆ ಅಖಂಡಾಗಮೇ;

‘ಅಸಂಖ್ಯಾತಮಹಾವಿಷ್ಣುಃ ಅಸಂಖ್ಯಾತಪಿತಾಮಹಾಃ|

ಅಸಂಖ್ಯಾತಸುರೇಂದ್ರಾಣಾಂ ಲೀಯತೇ ಸರ್ವದೇವತಾಃ||

ವಿಷ್ಣು ಸಂe ಅಸಂಖ್ಯಾತಾಃ ಅಸಂಖ್ಯಾತಪಿತಾಮಹಾಃ|

ಅಸಂಖ್ಯಾತಸುರೇಂದ್ರಾಣಾಂ ಗಮ್ಯತೇ ಸರ್ವದೇವತಾಃ||

ಲೀಯತೇ ಗಮ್ಯತೇ ಯತ್ರಬ್ರಹ್ಮ ವಿಷ್ಣ್ವಾದಿ ದೇವತಾಃ|

ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ವಂ ಪರಾಯಣೈಃ||" ಎಂದು ಸಕಲ ದೇವಾನುದೇವತೆಗಳು ಲಿಂಗದಿಂದ ಸೃಷ್ಟಿಗೊಂಡ ಬಗೆಯನ್ನು ಸಮರ್ಥಿಸಿzರೆ. ಅಲ್ಲದೇ ‘ಲೀಯಂತೇ ಮೂಧಿ ವೈ ವೇದಾಃ ಸಷಡಂಗಪದಕ್ರಮಾಃ||’ ಎಂದು ಲಿಂಗದ ಶಿರಸ್ಸಿನಲ್ಲಿ ಗಾಯತ್ರೀಮಂತ್ರ ಸಹಿತವಾದ, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ ಮತ್ತು ಜ್ಯೋತಿಷ್ಯವೆಂಬ ಆರು ಅಂಗಗಳಿಂದ ಕೂಡಿದ ಸಮಗ್ರ ವೇದವು ಮತ್ತು ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ ಮತ್ತು ಘನಗಳೆಂಬ ಎಂಟು ಪಾಠಕ್ರಮಗಳಿಂದ ಕೂಡಿದ ವೇದಾಂಗಗಳು ಲಿಂಗದಲ್ಲಿ ನೆಲೆಯಾಗಿದೆ ಎಂದು ಹೇಳುವ ಮೂಲಕ ಚಂದ್ರeನಾಗಮವು ಲಿಂಗದ ಜ್ಞಾನಮಯಸ್ವರೂಪವನ್ನು ನಿರೂಪಿಸುತ್ತದೆ.

ಲಿಂಗ ಮಹಿಮೆಯನ್ನು ಸೂಕ್ಷ್ಮಾಗಮವು ಕೊಂಡಾಡುತ್ತ, ಈ ಜ್ಯೋತಿರ್ಲಿಂಗದ ತೇಜಸ್ಸಿನಿಂದಲೇ ಚಂದ್ರಾದಿಗ್ರಹ ನಕ್ಷತ್ರಗಳು ನಿಯಮಿತರಾಗಿ, ಕಾಲಕ್ಕನುಸಾರವಾಗಿ, ಹಗಲಿರುಳು ಬೆಳಗುತ್ತವೆ. ಲಿಂಗದ ಭಯದಿಂದಲೇ ಗಾಳಿಯು ಮೂರು ಲೋಕಗಳಲ್ಲೂ ಸದಾ ಬೀಸುತ್ತಿದೆ. ರವಿ ಉದಯಿಸು ತ್ತಾನೆ. ಬೆಂಕಿ ಸುಡುತ್ತದೆ. ಚಂದ್ರ ತಂಪಾಗಿರುವನು, ಯಮನು (ಮೃತ್ಯುರೂಪದಲ್ಲಿ ಎಡೆಯೂ) ಓಡಾಡುತ್ತಾನೆ. ಆದ್ದರಿಂದ ಲಿಂಗವು ಸತ್-ಚಿತ್-ಆನಂದ ಸ್ವರೂಪದ ಪರಬ್ರಹ್ಮವಾಗಿದೆ. ಈ ಲಿಂಗವು ಅವ್ಯಕ್ತವಾಗಿದ್ದರೂ, ಈ ಜಗತ್ತಿನ ರೂಪದಲ್ಲಿ ವ್ಯಕ್ತವಾಗಿದೆ ಮತ್ತು ಅನಂತವೂ ವಿಶ್ವತೋ ಮುಖವೂ, ನಿರ್ಮಲವೂ, ಪರಮಪದವೂ, ಜ್ಯೋತಿಸ್ವರೂಪವೂ ಆಗಿರುವ ಲಿಂಗವನ್ನು ಜ್ಞಾನಿಗಳು ದರ್ಶನ ಮಾಡುತ್ತಾರೆ ಎಂದು ಪ್ರತಿಪಾದಿಸಿದೆ. (ಆಕರ ಗ್ರಂಥ: ‘ಶಿವಾಗಮಗಳು ಮತ್ತು ವಚನ ಸಾಹಿತ್ಯ’ ಡಾ. ಪರಮೇಶ್ವರಿ ಹಿರೇಮಠ ಅವರ ಪಿಎಚ್‌ಡಿ ಸಂಶೋಧನಾ ಗ್ರಂಥ).

ಒಟ್ಟಾರೆ ಉತ್ಖನನ ಇತಿಹಾಸವು ಇಷ್ಟಲಿಂಗ ಪರಿಕಲ್ಪನೆಯು ಭಾರತ ಇತಿಹಾಸದ ಮೂಲ ದಿಂದಲೂ ಇದ್ದು, ಕರಡಿಗೆ ಪದ್ಧತಿ ಬೌದ್ಧರ ಕಾಲದಿಂದಲೂ ಇದ್ದಿತು ಎಂದರೆ, ಗ್ರಂಥೇತಿಹಾಸವು ೮ನೇ ಶತಮಾನದ ಪುರಾವೆ ಕೊಟ್ಟು ಈ ಸಂಸ್ಕೃತಿ ಅನವರತವಾಗಿ ನಡೆದುಕೊಂಡು ಬರುತ್ತಿತ್ತು ಎಂದು ಸಾಬೀತುಪಡಿಸುತ್ತದೆ.

ಇನ್ನುಳಿದಂತೆ ಬಸವಪೂರ್ವದಿಂದಲೂ ಇರುವ ಆಗಮಗಳು ಸೃಷ್ಟಿಯ ಮೂಲವೇ ಲಿಂಗವೆಂದು ಲಿಂಗಾರಾಧನೆಯ ಮಹತ್ವವನ್ನು ಕೊಂಡಾಡಿವೆ. ಬಸವಾದಿ ಶರಣರು ಹೇರಳವಾಗಿ ತಮ್ಮ ವಚನ ಗಳಲ್ಲಿ ಆಗಮಗಳ ಉಖವನ್ನು ಮಾಡಿರುವ ಕಾರಣ ಆಗಮಗಳು ಬಸವಪೂರ್ವದಿಂದಲೂ ಇದ್ದವೆನ್ನಬಹುದು.

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)