Rashmika V/S Sreeleela: ಬಾಕ್ಸ್ ಆಫೀಸ್‌ನಲ್ಲಿ ಕನ್ನಡತಿಯರ ಬಿಗ್ ಕ್ಲ್ಯಾಶ್; ರಶ್ಮಿಕಾ, ಶ್ರೀಲೀಲಾ ಪೈಕಿ ಗೆಲ್ಲೋರು ಯಾರು?
Rashmika V/S Sreeleela: ಮಾರ್ಚ್ ಅಂತ್ಯದಲ್ಲಿ 2 ಬಹು ನಿರೀಕ್ಷಿತ ಚಿತ್ರಗಳು ಏಕಕಾಲಕ್ಕೆ ರಿಲೀಸ್ ಆಗಲಿವೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್-ರಶ್ಮಿಕಾ ಮಂದಣ್ಣ ಅಭಿನಯದ ಹಿಂದಿ ಚಿತ್ರ 'ಸಿಕಂದರ್' ಮತ್ತು ನಿತಿನ್-ಶ್ರೀಲೀಲಾ ನಟನೆಯ ತೆಲುಗಿನ ಸಿನಿಮಾ 'ರಾಬಿನ್‌ಹುಡ್' ಒಂದೇ ಬಾರಿಗೆ ತೆರೆ ಕಾಣುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಬಹುದೊಡ್ಡ ಕ್ಲ್ಯಾಶ್ ನಡೆಯಲಿದೆ.

ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ.

ಮುಂಬೈ: ಈ ವರ್ಷದ 2 ಬಹು ನಿರೀಕ್ಷಿತ ಚಿತ್ರಗಳು ಏಕಕಾಲಕ್ಕೆ ತೆರೆ ಕಾಣಲಿದ್ದು, ಬಾಕ್ಸ್ ಆಫೀಸ್ ಬಹುದೊಡ್ಡ ಕ್ಲ್ಯಾಶ್‌ಗೆ ಸಾಕ್ಷಿಯಾಗಲಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan)-ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಹಿಂದಿ ಚಿತ್ರ 'ಸಿಕಂದರ್' (Sikandar) ಮತ್ತು ನಿತಿನ್ (Nithiin)-ಶ್ರೀಲೀಲಾ (Sreeleela) ನಟನೆಯ ತೆಲುಗಿನ ಸಿನಿಮಾ 'ರಾಬಿನ್‌ಹುಡ್' (Robinhood) ಈದ್ ಪ್ರಯುಕ್ತ ಈ ಮಾಸಾಂತ್ಯದಲ್ಲಿ ತೆರೆಗೆ ಬರಲಿದೆ. ಈ 2 ಚಿತ್ರಗಳಲ್ಲಿ ಕನ್ನಡತಿಯರು ನಾಯಕಿಯರಾಗಿದ್ದು, ಈ ಬಾಕ್ಸ್ ಆಫೀಸ್ ಸಮರದಲ್ಲಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಎ.ಆರ್.ಮುರುಗದಾಸ್ (A.R. Murugadoss) ಮೊದಲ ಬಾರಿಗೆ ಸಲ್ಮಾನ್ ಖಾನ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ʼಸಿಕಂದರ್ʼ. ಅಲ್ಲದೆ ಸಲ್ಮಾನ್ ಖಾನ್ ಮತ್ತು ಲಕ್ಕಿ ಚಾರ್ಮ್ ರಶ್ಮಿಕಾ ಮಂದಣ್ಣ ಈ ಸಿನಿಮಾ ಮೂಲಕ ಒಂದಾಗುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಹಾಡು ಗಮನ ಸೆಳೆದಿದೆ. ಇದರಲ್ಲಿ ಸಲ್ಮಾನ್ ಮತ್ತು ರಶ್ಮಿಕಾ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ಹೀಗಾಗಿ ಈ ಫ್ರೆಶ್ ಜೋಡಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಸದ್ಯ 'ಅನಿಮಲ್', 'ಪುಷ್ಪ 2', 'ಛಾವಾ' ಚಿತ್ರಗಳ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಮಂದಣ್ಣ 'ಸಿಕಂದರ್' ಮೂಲಕ ತಮ್ಮ ಜೈತ್ರಯಾತ್ರೆಯನ್ನು ಮುಂದುವರಿಸಲಿದ್ದಾರೆ ಎನ್ನುವ ಲೆಕ್ಕಾಚಾರ ಇದೆ. ಸಲ್ಮಾನ್ ಖಾನ್ ಅವರ ಇತ್ತೀಚಿನ ಕೆಲವು ಚಿತ್ರಗಳು ಬಾಕ್ಸ್ ಅಫೀಸ್‌ನಲ್ಲಿ ಮ್ಯಾಜಿಕ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಚಿತ್ರದ ಅವರೂ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Shah Rukh Khan: ʼಪುಷ್ಪʼ ನಿರ್ದೇಶಕ ಸುಕುಮಾರ್ ಚಿತ್ರದಲ್ಲಿ ಶಾರುಖ್ ಖಾನ್; ಸಾವಿರ ಕೋಟಿ ರೂ. ಸಿನಿಮಾ ಲೋಡಿಂಗ್ ಎಂದ ಫ್ಯಾನ್ಸ್
ಟಾಲಿವುಡ್ ಸ್ಟಾರ್ ನಿತಿನ್ ಮತ್ತು ಶ್ರೀಲೀಲಾ ಅಭಿನಯದ ʼರಾಬಿನ್‌ಹುಡ್ʼ ಕೂಡ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು ಎನಿಸಿಕೊಂಡಿದೆ. ವೆಂಕಿ ಕುಡುಮುಲ ನಿರ್ದೇಶನದ ಈ ಚಿತ್ರ ಕಳೆದ ವರ್ಷ ಕ್ರಿಸ್‌ಮಸ್ ವೇಳೆಗೆ ತೆರೆಗೆ ಬರಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. 2020ರಲ್ಲಿ ತೆರೆಕಂಡ ʼಭೀಷ್ಮʼ ಸಿನಿಮಾದಲ್ಲಿ ವೆಂಕಿ ಕುಡುಮುಲ ಮತ್ತು ನಿತಿನ್ ಜತೆಯಾಗಿ ಕೆಲಸ ಮಾಡಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಹಾಡಿಗಳುಗಳು ಗಮನ ಸೆಳೆದಿವೆ. ಈ ಚಿತ್ರದ ಮೂಲಕ ನಿತಿನ್ ಮತ್ತು ಶ್ರೀಲೀಲಾ ಮೊದಲ ಬಾರಿಗೆ ಒಂದಾಗುತ್ತಿರುವುದು ವಿಶೇಷ. ಇವರಿಬ್ಬರ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಯಶಸ್ಸು ಕಂಡಿಲ್ಲ. ಹೀಗಾಗಿ ಇಬ್ಬರಿಗೂ ಗೆಲುವು ಅನಿವಾರ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದಕ್ಷಿಣ ಮತ್ತು ಉತ್ತರ ಭಾಗದ ಈ 2 ಚಿತ್ರಗಳ ಪೈಕಿ ಪ್ರೇಕ್ಷಕ ಪ್ರಭು ಯಾರ ಕೈಹಿಡಿಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ದೀಪಾವಳಿ ವೇಳೆಯೂ ಮತ್ತೊಮ್ಮೆ ರಶ್ಮಿಕಾ-ಶ್ರೀಲೀಲಾ ಸ್ಪರ್ಧೆ
ಇದೊಂದು ಬಾರಿ ಮಾತ್ರವಲ್ಲ ಈ ವರ್ಷದ ದೀಪಾವಳಿ ವೇಳೆಯಲ್ಲಿಯೂ ಮತ್ತೊಮ್ಮೆ ರಶ್ಮಿಕಾ ಮತ್ತು ಶ್ರೀಲೀಲಾ ಮಧ್ಯೆ ಪೈಪೋಟಿ ಏರ್ಪಡಲಿದೆ. ವಿಶೇಷ ಎಂದರೆ ಈ ಕನ್ನಡತಿಯರ 2 ಹಿಂದಿ ಚಿತ್ರಗಳು ಅಂದು ಪರಸ್ಪರ ಸೆಣಸಲಿವೆ. ರಶ್ಮಿಕಾ ಮತ್ತು ಬಾಲಿವುಡ್ ಸ್ಟಾರ್ ಆಯುಷ್ಮಾನ್ ಖುರಾನಾ ಮೊದಲ ಬಾರಿಗೆ ಒಂದಾಗುತ್ತಿರುವ ಹಾರರ್ ಕಾಮಿಡಿ ಚಿತ್ರ ʼಥಮʼ. ಆದಿತ್ಯ ಸರ್ಪೋತ್‌ದಾರ್ ನಿರ್ದೇಶನದ ಈ ಸಿನಿಮಾ ದೀಪಾವಳಿಗೆ ತೆರೆಗೆ ಬರುವ ಸಾಧ್ಯತೆ ಇದೆ.
ಇತ್ತ ಶ್ರೀಲೀಲಾ ಬಾಲಿವುಡ್‌ಗೆ ಪಾದರ್ಪಣೆ ಮಾಡುತ್ತಿರುವ ಚಿತ್ರ ʼಆಶಿಕಿ 3ʼ. ಅನುರಾಗ್ ಬಸು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಶ್ರೀಲೀಲಾ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರ ಕೂಡ ದೀಪಾವಳಿಯಂದೇ ರಿಲೀಸ್ ಆಗಲಿದೆ. ಬಿಡುಗಡೆ ದಿನಾಂಕವನ್ನು ಈಗಾಗಲೇ ಸಿನಿಮಾತಂಡ ಘೋಷಿಸಿದೆ. ಹೀಗಾಗಿ ಬಾಕ್ಸ್ ಆಫೀಸ್ ಒಂದೇ ವರ್ಷ ಎರಡು ಬಾರಿ ಕನ್ನಡತಿಯರ ಪೈಪೋಟಿಗೆ ಸಾಕ್ಷಿಯಾಗಲಿದೆ.