Gururaj Gantihole Column: ಮಂಡಳಿಯ ಚಿತ್ತ ಕೊಳಗೇರಿ ನಿರ್ಮೂಲನೆಯೋ, ಅಭಿವೃದ್ದಿಯೋ ?
ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವ ಮಾಹಿತಿ ಕೊಡುವುದು ಮಂಡಳಿಯ ಕೆಲಸವೆಂಬಂತೆ ಕಾಣಬರುತ್ತಿದೆ. ರಾಜ್ಯಾ ದ್ಯಂತ ಮಂಡಳಿಯ ಕ್ರಿಯಾಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕದಲ್ಲಿರುವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆ ಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಅನುಮಾನ ವ್ಯಕ್ತಪಡಿಸುವ ಕಾಲ ಬಂದಿದೆ.

ಅಂಕಣಕಾರ ಗುರುರಾಜ್ ಗಂಟಿಹೊಳೆ

ಗಂಟಾಘೋಷ
ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇರುವ ಮಾಹಿತಿ ಕೊಡುವುದು ಮಂಡಳಿಯ ಕೆಲಸವೆಂಬಂತೆ ಕಾಣಬರುತ್ತಿದೆ. ರಾಜ್ಯಾ ದ್ಯಂತ ಮಂಡಳಿಯ ಕ್ರಿಯಾಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕದಲ್ಲಿರು ವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆ ಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಅನುಮಾನ ವ್ಯಕ್ತಪಡಿಸುವ ಕಾಲ ಬಂದಿದೆ.
ಸ್ಲಂ ಎನ್ನುವ ಕಲ್ಪನೆ ಮೊದಲು ಆರಂಭವಾಗಿದ್ದು ಲಂಡನ್ ನಗರದಲ್ಲಿ! ಹೌದು, ಇಡೀ ಜಗತ್ತಿನಲ್ಲಿ ನಾವೇ ಶ್ರೇಷ್ಠರು, ಇತರರನ್ನು ಆಳಲು ಹುಟ್ಟಿಕೊಂಡವರು, ನಾವು ಬಿಳಿಯರು, ಸೂರ್ಯ ಮುಳುಗದ ನಾಡಿನವರು ಎಂಬ ಮಾತುಗಳನ್ನು ಹೇಳುತ್ತಿದ್ದ ಬ್ರಿಟಿಷರು, ಜಗತ್ತಿಗೆ ತಮ್ಮಲ್ಲಿನ ಕೊಳಚೆ ನಗರಪ್ರದೇಶವನ್ನು, ಸ್ಲಂ ವಸತಿ ಪ್ರದೇಶವನ್ನು ಮುಚ್ಚಿಟ್ಟು ಬದುಕು ತ್ತಿದ್ದವರು!
ಇದನ್ನೂ ಓದಿ: Gururaj Gantihole Column: ಆಡಳಿತದಲ್ಲಿ ಪಾರದರ್ಶಕತೆಯೇ ಗುಡ್ ಗವರ್ನೆನ್ಸ್
ಸ್ಲಂ ಅಥವಾ ಕೊಳಗೇರಿ ಎಂದು ಅತಿ ಕಡಿಮೆ ವಾಸಸ್ಥಳದಲ್ಲಿ ಅತಿಹೆಚ್ಚು ಜನಸಂಖ್ಯಾ ದಟ್ಟಣೆಯಿಂದ ಕೂಡಿದ, ಕುಡಿಯಲು ಯೋಗ್ಯವಲ್ಲದ ನೀರು ಮತ್ತು ಸರಿಯಾದ ಮೂಲ ಭೂತ ಸೌಕರ್ಯಗಳಿಲ್ಲದ ಕಲುಷಿತ, ಕೊಳಚೆ ಪ್ರದೇಶವನ್ನು ಕರೆಯಬಹುದಾಗಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರ ಕೊಳಗೇರಿ ಪ್ರದೇಶ ಹುಟ್ಟಿಕೊಳ್ಳುತ್ತವೆ ಎನ್ನುವುದನ್ನು ಗಮನಿಸಬಹುದು.
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಬದುಕು ಕಟ್ಟಿಕೊಳ್ಳಲು ನಗರ ಪ್ರದೇಶಕ್ಕೆ, ನಗರ ಪ್ರದೇಶದ ಸುತ್ತಮುತ್ತಲಿನ ಜಾಗದಲ್ಲಿ ಇತರೆ ನಗರ, ರಾಜ್ಯಗಳಿಂದ ಬಂದು ವಾಸಿಸುತ್ತ, ಸೂಕ್ತ ದುಡಿಮೆ, ಆದಾಯವಿಲ್ಲದೆ ಕಾಲಾಂತರದಲ್ಲಿ ಕೆಳದರ್ಜೆಯ ಜೀವನಕ್ಕೆ ಹೊಂದಿ ಕೊಳ್ಳುವ ಕೆಲ ಜನರ ಸಮೂಹ ಸ್ಥಳ ‘ಸ್ಲಂ’ ಆಗಿಯೂ ರೂಪಾಂತರಗೊಳ್ಳುವುದಿದೆ.
ಸಮರ್ಪಕ ವಿದ್ಯುತ್, ನೀರು, ವಾಸಯೋಗ್ಯ ಮನೆಗಳು ಇಲ್ಲದೆ ಬಡತನ, ಬಡತನಕ್ಕಿಂತ ಕೆಳದರ್ಜೆಯಲ್ಲಿ ಬದುಕುವ ಲಕ್ಷಣಗಳನ್ನು ಈ ಪ್ರದೇಶಗಳು ಹೊಂದಿವೆ. ಸುಮಾರು 1845ರಲ್ಲಿ ಲಂಡನ್ ನಗರದ ‘ಈ ಎಂಡ್’ ಭಾಗದಲ್ಲಿ ಆಗಿನ ಕಾಲದ ದೊಡ್ಡ ಸ್ಲಂ ಪ್ರದೇಶ ಅಸ್ತಿತ್ವದಲ್ಲಿತ್ತು.

ಸಿರಿವಂತರ ವಾಸಸ್ಥಳದಿಂದ ಸ್ವಲ್ಪ ದೂರ ಮತ್ತು ಹಿಂಬದಿಯಲ್ಲಿದ್ದ ಕಾರಣ, ಇಂತಹ ಪ್ರದೇಶಕ್ಕೆ Slum ಎಂದು ಮೊದಲ ಬಾರಿಗೆ ಕರೆದರು. ಇದರರ್ಥ, ಹಿಂಬದಿ ಕೆಳಮಟ್ಟದ ಪ್ರದೇಶ, ಕಡುಬಡವರ ಕೊಳಚೆ ಪ್ರದೇಶ (street of poor people) ಎಂಬುದಾಗಿದೆ. ಕಾಲ ಕ್ರಮೇಣ, Slum ಎಂಬುದು ಕೆಳಮಟ್ಟದ, ಕೆಟ್ಟಭಾವನೆ ಬೀರುವ, ಸಭ್ಯರಲ್ಲದವರು ಎಂಬರ್ಥ ಬರುವಂತೆ ಬಳಸುತ್ತ ಬರಲಾಯಿತು.
ಏಷ್ಯಾ ಖಂಡದಕ್ಕಿಂತಲೂ ಮೊದಲು ಈ ಕೊಳಚೆ ಪ್ರದೇಶಗಳು ಕಂಡುಬರುತ್ತಿದ್ದು, ಯುರೋಪ್ ದೇಶಗಳಲ್ಲಿ. ಲಂಡನ್ ನಂತರ, 1890ರ ಆಸುಪಾಸಿನಲ್ಲಿ ನ್ಯೂಯಾರ್ಕ್ ನಗರ ಸಹ ದಟ್ಟಣೆಯ ಸ್ಲಂ ಪ್ರದೇಶವನ್ನು ಹೊಂದಿತ್ತು. ಸಿರಿವಂತರ ಬಟ್ಟೆಗಳನ್ನು ರಸ್ತೆಯ ಅಕ್ಕಪಕ್ಕದಲ್ಲಿ ಹರಿಯುತ್ತಿದ್ದ ನೀರಿನ ಬಟ್ಟೆಗಳನ್ನು ಶುಚಿಗೊಳಿಸಲಾಗುತ್ತಿತ್ತು.
20ನೇ ಶತಮಾನದ ಕಾಲಘಟ್ಟದಲ್ಲಿ ಸ್ಲಂ/ಕೊಳಚೆ ಪ್ರದೇಶಗಳು ಸಾಮಾನ್ಯವೆಂಬಂತೆ ಯುರೋಪಿನಾದ್ಯಂತ ಹರಡಿಕೊಂಡಿದ್ದವು. ವಿಶ್ವಪ್ರಸಿದ್ಧ ಲೇಖಕ ಚಾರ್ಲ್ಸ್ ಡಿಕ್ ತನ್ನ Oliver Twist (1837- 39)ನಲ್ಲಿ ಲಂಡನ್ ನಗರದ ಸ್ಲಂ ಪ್ರದೇಶವನ್ನು ಇನ್ನಿಲ್ಲದಂತೆ ನಿಂದ ನೆಯ ರೀತಿಯಲ್ಲಿ ವ್ಯಾಖ್ಯಾನಿಸಿ, ಅದರ ಬಗ್ಗೆ ಜಾಗೃತಿ ಹುಟ್ಟುವಂತೆ ಮಾಡುವಲ್ಲಿ ಯಶಸ್ವಿ ಯಾಗಿದ್ದರು.
ಈ ಮೂಲಕ, Public Health Act of 1848 ಎಂಬ ಕಾನೂನನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಪ್ರದೇಶದಲ್ಲಿ ಮೊಟ್ಟಮೊದಲ ಬಾರಿಗೆ ಜಾರಿಗೆ ತರಲಾಯಿತು ಮತ್ತು ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಥಳೀಯ ನಗರ ಸಂಸ್ಥೆಯು ಶುಚಿತ್ವದ ಜವಾಬ್ದಾರಿ ಹೊತ್ತು ಕೊಂಡಿತು.
ನಂತರದ ದಿನಗಳಲ್ಲಿ ಕಾಲ್ಪನಿಕ ಕಾದಂಬರಿಗಳಲ್ಲಿ, ನಿಜವಾಗಿಯೂ ಸ್ಲಂ ಪ್ರದೇಶಗಳನ್ನು ಉಲ್ಲೇಖಿಸಿ, ಅವುಗಳನ್ನು ಗಂಧರ್ವ ನಗರಗಳಂತೆ ಬರೆಯಲಾಗುತ್ತಿತ್ತು. ಇದು, ಜನರನ್ನು ತಮ್ಮ ನಗರ ಪ್ರದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಪ್ರೇರಣೆಗಳಾಗಿ ಬದಲಾದವು. ವಾಸಯೋಗ್ಯ ಮನೆ ಮತ್ತು ಪ್ರದೇಶಗಳ ಅಭಿವೃದ್ಧಿಗೆ 1893 ರಿಂದ 1915ರ ಕಾಲಘಟ್ಟದ ಹತ್ತಾರು ಟ್ರಸ್ಟ್ ಹುಟ್ಟಿಕೊಂಡವು. ಹೀಗೆ, ಕಾದಂಬರಿ, ಲೇಖನಗಳು ಮೊದಲ ಸಾರ್ವಜನಿಕ ಜಾಗೃತಿಗೆ ಕಾರಣವಾದವೆನ್ನಬಹುದು.
ಹೀಗೆ ಹುಟ್ಟಿಕೊಂಡ ಸ್ಲಂ ಪ್ರದೇಶಗಳು ಕ್ರಮೇಣ ಜಾಸ್ತಿಯಾಗುತ್ತಲೇ ಹೋದವು. ನಾಗರಿಕತೆ, ಶಿಕ್ಷಣ ಹೆಚ್ಚುತ್ತ ಹೋದಲೆಲ್ಲ ಸಂಸ್ಕೃತಿ, ಸ್ವಸ್ಥ ಸಮಾಜ ನಿರ್ಮಾಣಗೊಳ್ಳುವ ಬದಲಾಗಿ, ವರ್ಗಶ್ರೇಣಿಗಳು, ಜಾತಿವ್ಯವಸ್ಥೆ, ಸಾಮಾಜಿಕ ಅಸಮಾನತೆಗಳು ಹೆಚ್ಚುತ್ತ ಹೋದವು.
ಉಳ್ಳವರು, ಓದಿದವರು ಒಂದೆಡೆಯಾದರೆ, ಇನ್ನೊಂದೆಡೆ ಬದುಕಿನ ಆರಂಭದ ಸವಲತ್ತು ಗಳನ್ನು ಹೊಂದಲೇ ಕಷ್ಟಪಡಬೇಕಾದ ಕೊಳಗೇರಿ ಸಮುದಾಯಗಳು ಜಾಸ್ತಿಯಾಗುತ್ತ ಹೋದವು. ವಿಶ್ವದ ಬಹುತೇಕ ಭಾಗಗಳಲ್ಲಿ ಈ ಸ್ಲಂ ಅಥವಾ ಕೊಳಗೇರಿ ಪ್ರದೇಶಗಳು ತಲೆಯೆತ್ತಿವೆ. ಕಿಬೇರಾ(ಕೀನ್ಯಾ), ಖಾಯೆಲಿಸ್ಟಾ(ಸೌತ್ ಆಫ್ರಿಕಾ), ಓರಂಗೀ ಟೌನ್ (ಪಾಕಿ ಸ್ತಾನ್), ಧಾರಾವಿ(ಭಾರತ), ನೆಝಾ(ಮೆಕ್ಸಿಕೋ) ಗಳು ಸದ್ಯದ ಬಹುದೊಡ್ಡ ಕೊಳಗೇರಿ ಪ್ರದೇಶಗಳಾಗಿವೆ.
ಕೇಪ್‌ಟೌನ್‌ನ ಖಾಯೆಲಿಸ್ಟಾದ ಕೊಳಗೇರಿಯಲ್ಲಿ ಸರಾಸರಿ 10 ಕುಟುಂಬಗಳು ಒಂದು ಟಾಯ್ಲೆಟ್‌ನಂತೆ ಬಳಸುತ್ತಿವೆ. ಕ್ರಿಮಿನಲ್‌ಗಳೇ ಇಲ್ಲಿ ಹೆಚ್ಚಾಗಿದ್ದು, ಇಲ್ಲಿನ ವ್ಯವಸ್ಥೆ ಸುಧಾರಿಸಲು ಅವರು ಬಿಡಲಾರರು ಎನ್ನುತ್ತಾರೆ ಇಲ್ಲಿಯ ಜನರು. ರಾತ್ರಿಹೊತ್ತು ಮೋರಿ, ಗಟಾರದ ಕೊಳಚೆ ನೀರು ಮನೆಯೊಳಗೆ ನುಗ್ಗಿಬಿಡುತ್ತೆ. ಅಡುಗೆ ಸಾಮಾನುಗಳು ಕೊಳಚೆ ಯೊಂದಿಗೆ ಬೆರೆತುಬಿಡುತ್ತೆ. ಬದುಕುವುದೇ ನರಕದಲ್ಲಿ ಎಂದು ವೃದ್ಧೆ ಕಣ್ಣೀರಾಗುತ್ತಾರೆ.
ಜಗತ್ತಿನ ಕ್ರೂರ ಕೊಳಗೇರಿ ಎಂದೇ ಗುರುತಿಸಲ್ಪಡುವ ಓರಂಗಿ ಟೌನ್‌ನಲ್ಲಿ ಹಾಡುಹಗಲೇ ಅತ್ಯಚಾರ, ಅಪ್ರಾಪ್ತ ಗರ್ಭಿಣಿಯರು, ಕಳ್ಳರಿಗೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಚಿಕ್ಕಚಿಕ್ಕ ಹಣಕ್ಕೆ ಮಾರುವುದು, ಹೆಚ್ಚಿನ ಸಂಖ್ಯೆಯಲ್ಲಿ ಏಡ್ಸ್ ಪೀಡಿತರು ಇಲ್ಲಿದ್ದಾರೆ. ಇನ್ನು, ಕಿಬೇರಾದಲ್ಲಿ ಮಕ್ಕಳ ಸಂಖ್ಯೆಯೇ ಜಾಸ್ತಿಯಿದ್ದು, ಅನೈತಿಕ ಚಟುವಟಿಕೆ, ಸಾಂಕ್ರಾಮಿಕ ಕಾಯಿಲೆಗಳ ಹರಡುವ ಭಯ ಅಲ್ಲಿನ ಸ್ಥಳೀಯ ಆಡಳಿತಕ್ಕೆ ಕಾಡುತ್ತಿದೆ.
ಇನ್ನುಳಿದ ಕೊಳಗೇರಿಯ ಸ್ಥಿತಿಗಳು ಇದಕ್ಕಿಂತ ಭಿನ್ನವಾಗೇನು ಇಲ್ಲ. ಇಲ್ಲಿನ ಕೊಳಗೇರಿ ಸುಧಾರಣೆಗೆ, ಶಾಲೆಗಳ ನಿರ್ಮಾಣಕ್ಕೆ, ನೀರು, ಪರಿಸರ ಜಾಗೃತಿ ಕುರಿತಂತೆ ವಿಶ್ವಸಂಸ್ಥೆ ವಿವಿಧ ದೇಶಗಳ ಸಹಾಯದೊಂದಿಗೆ ತನ್ನದೇ ಆದ ಕೆಲಸ ಮಾಡುತ್ತಿದೆ. ಇನ್ನು ಭಾರತ ದಲ್ಲಿ ಕೊಳಗೇರಿ ಸಮಸ್ಯೆಗಳ ವಿಚಾರಕ್ಕೆ ಬಂದರೆ, ಇಲ್ಲಿಯೂ ಸಹ ನೂರಾರು ಕೊಳಗೇರಿ ಪ್ರದೇಶಗಳು ಬಹುತೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ಹರಡುತ್ತಿವೆ ಮತ್ತು ನಮ್ಮ ಜನರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಕನಸಿನ ನಗರವೆಂದೇ ಕರೆಯಲಾಗುವ ಮುಂಬಯಿ ನಗರವು ಏಷ್ಯಾದ ಅತಿದೊಡ್ಡ ಕೊಳಗೇರಿ ಧಾರಾವಿ ಪ್ರದೇಶವನ್ನು ಹೊಂದಿದೆ.
1.5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಕೇವಲ ೨ ಚ.ಕಿ.ಮೀ.ನಲ್ಲಿ ವಾಸಿಸುತ್ತಿದೆ. 1884ರಿಂದ ಆರಂಭವಾದ ಈ ಕೊಳಗೇರಿಯು ನೂರಾರು ಅಪರಾಧ ಕೃತ್ಯಗಳ ಪಾತಕಿಗಳು, ಅನೈತಿಕ ಚಟುವಟಿಕೆಗಳ ತಾಣವಾಗಿ ಭಾರತಕ್ಕೆ ವಿಶ್ವಮಟ್ಟದಲ್ಲಿ ಬಹುದೊಡ್ಡ ಕೆಟ್ಟ ಹೆಸರು ಬರಲು ಕಾರಣವಾಗಿತ್ತು. ಪ್ರಸ್ತುತ, ಮಹರಾಷ್ಟ್ರ ರಾಜ್ಯ ಸರಕಾರ ಮತ್ತು ಅದಾನಿ ಗ್ರೂಪ್ Dharavi Redevelopment Project (DRP) ಯೋಜನೆ ಆರಂಭಿಸಿದ್ದು, ಇದಕ್ಕೆ ಬಾಂಬೆ ಹೈಕೋರ್ಟ್ ಕೂಡ ಶ್ಲಾಘಿಸಿದೆ.
ಇದರಂತೆಯೇ, ತಮಿಳುನಾಡಿನ ಮರೀನಾ ಬೀಚ್ ಎದುರಿಗಿರುವ ನಚಿಕುಪ್ಪಂ ಕೊಳ ಗೇರಿಯು ಒಂದು ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಹೊಂದಿದೆ. ಕಂಚಿಪುರಂ ಜಿಲ್ಲೆಯ ಕಲ್ಲುಕುಟೈ ಕೊಳಗೇರಿಯು ಸಹ 16 ಸಾವಿರ ಕುಟುಂಬಗಳನ್ನು 350 ಎಕರೆ ಜಾಗದಲ್ಲಿ ಹೊಂದಿದ್ದು, ದಿನಕ್ಕೆ ಎರಡು ಊಟಕ್ಕೆ ಸೀಮಿತವಾದ ಬದುಕು ಇಲ್ಲಿನವರದಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ನಗರವು ರಾಜೇಂದ್ರ ನಗರ ಕೊಳಗೇರಿಯನ್ನು ಹೊಂದಿದ್ದು, ನಗರದ ಶೇ.20ರಷ್ಟು ಜನರು ಇಲ್ಲಿ ವಾಸಮಾಡುತ್ತಿರುವುದು ಸಹ ರಾಜಧಾನಿ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ದೇವರ ಜೀವನಹಳ್ಳಿ (ಡಿಜೆ ಹಳ್ಳಿ ಗಲಭೆ ಖ್ಯಾತಿ)ಯು ಕರ್ನಾಟಕದ ಅತಿದೊಡ್ಡ ಸ್ಲಂ ಪ್ರದೇಶವಾಗಿದ್ದರೆ, ಲಗ್ಗೆರೆಯು ದೊಡ್ಡ ಸ್ಲಂ ಸೆಟಲ್‌ಮೆಂಟ್ ಪ್ರದೇಶವಾಗಿ ಗುರುತಿಸಿ ಕೊಂಡಿದೆ. ಇನ್ನು, ಬಳ್ಳಾರಿಯು ಎರಡನೇ ಸ್ಥಾನದಲ್ಲಿದ್ದರೆ, ಸ್ಲಂ ಅಥವಾ ಕೊಳಗೇರಿ ಯನ್ನು ಹೊಂದದೇ ಇರುವ ನಗರವೆಂದು ಮಂಗಳೂರು ಶುಚಿತ್ವ ನಿರ್ವಹಣೆಗೆ ಗುರುತಿಸ ಲ್ಪಟ್ಟಿದೆ. ತೆಲಂಗಾಣದ ಹೈದರಾಬಾದ್ ನಗರದಲ್ಲಿನ ಇಂದಿರಮ್ಮ ಕೊಳಗೇರಿ ನಗರವು ಸಹ ಮೇಲಿನವುಗಳಿಗಿಂತ ಭಿನ್ನವಾಗಿಲ್ಲ.
7 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇಲ್ಲಿದ್ದು, ಇದೇ ಹೈದರಾಬಾದ್ ನಗರ ವ್ಯಾಪ್ತಿಯಲ್ಲಿ 120 ಗುರುತಿಸಿದ ಮತ್ತು 30 ಗುರುತಿಸಲಾಗದ ಕೊಳಗೇರಿಗಳಿವೆ ಎಂದು ಅಂದಾಜಿಸಲಾಗಿದೆ. ಇವು ಗಳಂತೆ, ಲಕ್ನೋದ ಮೆಹಬೂಬ್‌ನಗರ, ನಾಗ್ಪುರದ ಸರೋಜ್ ನಗರ, ಹ್ಮದಾಬಾದ್‌ನ ಪರಿವರ್ತನ್ ಸ್ಲಂ, ಬೂಪಾಲ್ ಸತ್ನಾಮಿ ಸ್ಲಂ, ದೆಹಲಿಯ ಭಾಲ್ಸಾ ಸ್ಲಂ, ಕೋಲ್ಕೋತಾದ ಬಸಂತಿ ಸ್ಲಂ ಸೇರಿದಂತೆ ಗುರುತಿಸಲಾಗದ ಅಸಂಖ್ಯ ಕೊಳಗೇರಿಗಳು ದೇಶದ್ಯಾಂತ ಮತ್ತು ನಮ್ಮ ಕರ್ನಾಟಕದಾದ್ಯಂತ ಇವೆ ಎಂಬುದು ಸಹಜ ಬಲ್ಲ ವಿಚಾರವಾಗಿದೆ.
ಕೊಳಗೇರಿ ಪ್ರದೇಶವು ಕಡಿಮೆಯಾಗದೇ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿ ಪ್ರದೇಶವನ್ನು ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಸಮಸ್ಯೆ, ಶಿಕ್ಷಣ ಮತ್ತು ಸಾಮೂಹಿಕ ಜಾಗ್ರತೆ, ಶುಚಿತ್ವ, ಗ್ರಾಮೀಣ - ನಗರಪ್ರದೇಶ ವಲಸೆ, ನಗರೀಕರಣ, ಕಳಪೆ ಮನೆಗಳ ನಿರ್ಮಾಣ, ಕಾಲೋನಿ ನಿರ್ಮಾಣ, ಪ್ರತ್ಯೇಕತೆ, ಸಾಮಾಜಿಕ ವ್ಯವಸ್ಥೆಯಿಂದ ಹೊರಗುಳಿಯುವಿಕೆ, ಆರ್ಥಿಕ ವ್ಯವಸ್ಥೆಯೊಳಗೆ ಬಾರದಿರುವ ಜೀವನಶೈಲಿ ಪ್ರಮುಖ ಕಾರಣಗಳೆಂದು ಗುರುತಿಸಿ ಇವುಗಳ ಪರಿಹಾರಕ್ಕೆ ಪ್ರಯತ್ನ ಪಡಲಾಗುತ್ತಿದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಡೆಸಿದ ಸಮೀಕ್ಷೆಯ ಪ್ರಕಾರ, ರಾಜ್ಯದಲ್ಲಿ 2804 ಕೊಳೆಗೇರಿ ಪ್ರದೇಶಗಳಿದ್ದು, ಅದರಲ್ಲಿ 597 ಕೊಳೆಗೇರಿ ಪ್ರದೇಶಗಳು ಬೆಂಗಳೂರು ನಗರದಲ್ಲಿವೆ. ರಾಜ್ಯದ ಕೊಳೆಗೇರಿಗಳ ಜನಸಂಖ್ಯೆಯು ಸುಮಾರು 4.50 ಲಕ್ಷ ಎಂದು ಅಂದಾಜಿಸಲಾಗಿದೆ, ಇದು ರಾಜ್ಯದ ನಗರ ಜನಸಂಖ್ಯೆಯ ಶೇ.22.56ರಷ್ಟಿದೆ.
ಕರ್ನಾಟಕ ಕೊಳೆಗೇರಿ ಪ್ರದೇಶಗಳ(ಸುಧಾರಣೆ ಮತ್ತು ತೆರವು) ಕಾಯಿದೆ 1973ರ ಅಡಿಯಲ್ಲಿ ತಿಳಿಸಲಾದ ಅಧಿಕೃತ ಮಾಹಿತಿ ಇದಾಗಿದೆ. ಕರ್ನಾಟಕದಲ್ಲಿ ಒಟ್ಟು ನಗರವಾಸಿಗಳ ಸಂಖ್ಯೆ (2011ರ ಜನಗಣತಿ) 2.18 ಕೋಟಿಯಷ್ಟಿದ್ದು, ಒಟ್ಟು 28.4ರಷ್ಟು ಕೊಳಚೆ ಪ್ರದೇಶ ಗಳಿವೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಅಂದಾಜು ನಿವಾಸಿಗಳ ಸಂಖ್ಯೆ 41 ಲಕ್ಷ ಗಳಷ್ಟಿದೆ. ಕರ್ನಾಟಕ ಕೊಳಗೇರಿ ಪ್ರದೇಶ ಕಾಯಿದೆಯಡಿ 2397ರಷ್ಟು ಘೋಷಿಸಲಾದ ಮತ್ತು 40 ಅಘೋಷಿತ ಕೊಳಚೆ ಪ್ರದೇಶಗಳಿವೆ ಎಂದು ಮಂಡಳಿಯ ದಾಖಲೆಗಳು ಹೇಳುತ್ತವೆ.
ಇನ್ನು ಕರ್ನಾಟಕದಲ್ಲಿ ಕೊಳಚೆ ನಿರ್ಮೂಲನೆ ಮತ್ತು ಕೊಳಗೇರಿ ಪ್ರದೇಶಗಳನ್ನು ಸೂಕ್ತ ರೀತಿಯಲ್ಲಿ ಅಭಿವೃದ್ದಿಗೊಳಿಸಲು ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಕೊಳಚೆ ನಿರ್ವಹಣೆ ವಿಧಾನಶಾಸ್ತ್ರವೆಂದು ಕರೆಯಬಹುದು. ಸ್ಲಂ ಪ್ರದೇಶವು 5 ಪ್ರಮುಖ ಸಮಸ್ಯೆ ಗಳನ್ನು ಹೊಂದಿದ್ದು, ಮಲೀನ ನೀರು, ಕೆಟ್ಟ ಪರಿಸರ, ಅಸುರಕ್ಷಿತ ಕಟ್ಟಡ-ಕಳಪೆ ಮನೆಗಳ ನಿರ್ಮಾಣ, ಜನಸಂಖ್ಯಾ ದಟ್ಟಣೆ, ಸುರಕ್ಷತೆಯಿಲ್ಲದ ಜೀವನ ವಿಧಾನ ಇತ್ಯಾದಿ ಸೇರಿವೆ.
ಇವುಗಳಿಗೆ ಪರ್ಯಾಯವಾಗಿ, ಕೊಳಗೇರಿ ಮುಕ್ತದ ಮೂಲಕ, ಮಾಹಿತಿ ಸಂಗ್ರಹ, ಮ್ಯಾ ಪಿಂಗ್, ವಿಶ್ಲೇಷಣಾ ವಿಧಾನ ಕೊಳಗೇರಿಗಳನ್ನು ನಿರ್ಮೂಲನೆಗೊಳಿಸುವ ಮತ್ತು ಅಭಿವೃದ್ಧಿಗೊಳಿಸಿದ ಪ್ರದೇಶಗಳನ್ನಾಗಿ ಬದಲಾಯಿಸುವ ಹಲವು ಯೋಜನೆಗಳು ಈ ಹಂತದಲ್ಲಿ ಬರುತ್ತವೆ.
ಹತ್ತಾರು ದಶಕಗಳು ಕಳೆದರೂ, ಕೊಳಗೇರಿಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಬಗ್ಗೆ ಮಾಹಿತಿ ಕೊಡುವುದು ಮಂಡಳಿಯ ಕೆಲಸ ಎನ್ನುವ ರೀತಿಯಲ್ಲಾಗಿದೆ. ರಾಜ್ಯಾದ್ಯಂತ ಮಂಡಳಿಯ ಕ್ರಿಯಾ ಯೋಜನೆಯಾಗಲಿ, ತ್ವರಿತಗತಿಯ ಬದಲಾವಣೆಯ ಅಭಿವೃದ್ಧಿಗಳಾಗಲಿ ಎಲ್ಲಿ ಯೂ ಕಂಡುಬಾರದಿರುವುದರಿಂದ, ಜನಸಾಮಾನ್ಯರು ಈ ಮಂಡಳಿಯ ನಾಮಫಲಕ ದಲ್ಲಿರುವಂತೆ, ಇದು ಕೊಳಗೇರಿಯನ್ನು ನಿರ್ಮೂಲನೆಗೊಳಿಸುವುದಕ್ಕೆ ಇರುವುದೋ ಅಥವಾ ಕೊಳಗೇರಿ ಪ್ರದೇಶಗಳನ್ನು ಅಭಿವೃದ್ಧಿ ಮಾಡುವುದಕ್ಕೋ ಎಂದು ಕಾಲೆಳೆಯು ತ್ತಿರುವುದರಲ್ಲಿ ತಪ್ಪಿಲ್ಲವೆಂದು ಕಾಣುತ್ತದೆ.
ಕೊಳಗೇರಿಯಲ್ಲಿನ ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಜಾಗ್ರತಿ ಮತ್ತು ಸುರಕ್ಷತೆ ಮೊದಲ ಆದ್ಯತೆಯಾಗಬೇಕಿದೆ. ಹಿರಿಯರಿಗೆ ವೈದ್ಯಕೀಯ ನೆರವಿನ ಅಗತ್ಯತೆಯಿದೆ. ನೋಡಿಕೊಳ್ಳು ವವರಿಲ್ಲದೆ ಸಾಂಕ್ರಾಮಿಕ ಖಾಯಿಲೆಗೆ ತುತ್ತಾದರೆ, ಅದು ಇಡೀ ಸಮಾಜಕ್ಕೆ ಮಾರಕ ವಲ್ಲವೇ!? ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ವಸತಿ ಇಲಾಖೆ ಸೇರಿ ಮಾಡಬೇಕಾದ ಕೆಲಸ ಗಳು ಕೊಳಗೇರಿ ವ್ಯಾಪ್ತಿಯಲ್ಲಿ ಬಹಳಷ್ಟಿವೆ. ಇವರನ್ನು ಒಳಗೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಪ್ರಮುಖ ಕಾರ್ಯಯೋಜನೆಗಳನ್ನು ಸಾರ್ವಜನಿಕರಿಗೆ ದೃಢವಾಗಿ ಎದೆತಟ್ಟಿ ಹೇಳಬಲ್ಲದೋ?