ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Arun Joshi Column: ಪ್ರಯಾಗ್‌ರಾಜ್ ಮಹಾಕುಂಭ: ಸಾಮರಸ್ಯಕ್ಕೆ ಆಧಾರಸ್ತಂಭ

‘ಹಿಂದೂ ಆಚರಣೆಗಳೆಂದರೆ ಬರೀ ಮೇಲು-ಕೀಳು ವ್ಯವಸ್ಥೆ, ಪುರೋಹಿತಶಾಹಿ ಪದ್ಧತಿ, ಕೆಲವ ರನ್ನು ಉಪೇಕ್ಷಿಸುವಿಕೆ’ ಎಂಬ ಹಣೆಪಟ್ಟಿ ಹಚ್ಚಿ, ಅದೇ ಧಾಟಿಯಲ್ಲೇ ಹಿಂದೂ ಸಮಾಜವನ್ನು ಬಿಂಬಿಸಲಾಗುತ್ತಿತ್ತು. ಆದರೆ, ಕುಂಭಮೇಳದ ಪ್ರತಿ ಹಂತವನ್ನೂ ಗಮನಿಸಿ ದಾಗ ಇಂಥ ಅಪ ಸವ್ಯಗಳೇನೂ ಕಂಡುಬರಲಿಲ್ಲ

ಪ್ರಯಾಗ್‌ರಾಜ್ ಮಹಾಕುಂಭ: ಸಾಮರಸ್ಯಕ್ಕೆ ಆಧಾರಸ್ತಂಭ

Profile Ashok Nayak Mar 14, 2025 1:47 PM

ಧರ್ಮಕ್ಷೇತ್ರ

ಅರುಣ್‌ ಜೋಶಿ, ಧಾರವಾಡ

ಫೆಬ್ರವರಿ ತಿಂಗಳುಪೂರ್ತಿ ದೇಶ-ವಿದೇಶಗಳ ಮಾಧ್ಯಮಗಳಲ್ಲಿ ಮತ್ತು ಜನಸಮೂಹದಲ್ಲಿ ಮನೆಮಾತಾಗಿದ್ದ ಮಹಾಕುಂಭಮೇಳವು ಶಿವರಾತ್ರಿಯಂದು ಸಮಾಪನಗೊಂಡಿತು. ಸಹ ಸ್ರಾರು ವರ್ಷಗಳಿಂದ ನಂಬಿಕೆಯ ಆಧಾರದ ಮೇಲೆ ನಡೆದುಕೊಂಡು ಬಂದಿರುವ ಈ ಬೃಹತ್ ಮೇಳವು ಪಾಶ್ಚಾತ್ಯರಿಗಷ್ಟೇ ಅಲ್ಲ, ‘ಪಾಶ್ಚಾತ್ಯ ಮನಸ್ಸಿನ’ ಕೆಲ ಭಾರತೀಯರಿಗೂ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ, ಸನಾತನ ಶಕ್ತಿ ಪ್ರದರ್ಶನವಾಗಿದೆ ಎಂದರೆ ಉತ್ಪ್ರೇಕ್ಷೆಯಲ್ಲ. ಮೂಲದಲ್ಲಿ ಇಲ್ಲದಿದ್ದರೂ ಹಿಂದೂಗಳ ಏಕತೆಗೆ ಸವಾಲಾಗಿರುವುದು ಸಮಾಜದಲ್ಲಿರುವ ಜಾತಿ ಆಧರಿತ ಅಸ್ಪೃಶ್ಯತೆ. ಹಲವಾರು ದಾರ್ಶನಿಕರು, ಸುಧಾರಕರು ನೂರಾರು ವರ್ಷ ಗಳಿಂದ ಪ್ರಯತ್ನ ಮಾಡಿದರೂ, ಮೇಲು-ಕೀಳು ಎಂಬ ಮನಸ್ಥಿತಿಯಿಂದ ಸಮಾಜವನ್ನು ಸಂಪೂರ್ಣವಾಗಿ ಮೇಲೆತ್ತಲು ಆಗಿಲ್ಲ.

ಇದನ್ನೂ ಓದಿ: Shishir Hegde Column: ಪ್ರೀತಿಯ ಹೆಂಡತಿಗೊಂದು ಬಹಿರಂಗ ಪತ್ರ

ಜಾತಿಭೇದ ಎಂಬುದು ಹಿಂದೂ ಸಮಾಜವನ್ನು ಮಗ್ಗುಲ ಮುಳ್ಳಾಗಿ ಕಾಡುತ್ತಿರುವುದು ಸತ್ಯ; ಹೀಗಿರುವಾಗ ಕುಂಭಮೇಳದಂಥ ಸನಾತನಿಗಳ ಆಚರಣೆಯಲ್ಲಿ ಕೋಟ್ಯಂತರ ಜನರು ಭಾಗಿಯಾದ ಸಂದರ್ಭದಲ್ಲಿ, ಸಮಾಜದ ಏಕತೆಗೆ ಅನುಕೂಲವಾಗುವ ಸಾಮರಸ್ಯದ ನಡಾವಳಿಗಳು, ಆಚಾರ-ವಿಚಾರಗಳು ವ್ಯವಹಾರದಲ್ಲಿ ಸಹಜವಾಗಿ ಕಂಡುಬಂದಿರುವುದು ಅತ್ಯಂತ ಸಂತೋಷದ ವಿಷಯ. ಆ ಅಂಶಗಳ ಆಧಾ ರದ ಮೇಲೆ ಸಮುದಾಯವನ್ನು ಮುನ್ನಡೆಸುವ ಜವಾಬ್ದಾರಿ ಹಿಂದೂ ಸಮಾಜದ ಪ್ರತಿಯೊಬ್ಬರ ಮೇಲಿದೆ.

‘ಹಿಂದೂ ಆಚರಣೆಗಳೆಂದರೆ ಬರೀ ಮೇಲು-ಕೀಳು ವ್ಯವಸ್ಥೆ, ಪುರೋಹಿತಶಾಹಿ ಪದ್ಧತಿ, ಕೆಲವರನ್ನು ಉಪೇಕ್ಷಿಸುವಿಕೆ’ ಎಂಬ ಹಣೆಪಟ್ಟಿ ಹಚ್ಚಿ, ಅದೇ ಧಾಟಿಯಲ್ಲೇ ಹಿಂದೂ ಸಮಾಜವನ್ನು ಬಿಂಬಿಸಲಾಗುತ್ತಿತ್ತು. ಆದರೆ, ಕುಂಭಮೇಳದ ಪ್ರತಿ ಹಂತವನ್ನೂ ಗಮನಿಸಿ ದಾಗ ಇಂಥ ಅಪಸವ್ಯಗಳೇನೂ ಕಂಡುಬರಲಿಲ್ಲ. ಅಂದರೆ, ಯಾವುದೇ ರೀತಿಯ ಜಾತ್ಯಾ ಧಾರಿತ, ವರ್ಣಾಧಾರಿತ, ಭಾಷಾಧಾರಿತ, ವೃತ್ತಿ ಆಧಾರಿತ ತಾರತಮ್ಯಗಳಿಗೆ ಅಲ್ಲಿ ಆಸ್ಪದ ವಿರಲಿಲ್ಲ.

ಗಂಗೆಯ ಮಡಿಲಲ್ಲಿ ಎಲ್ಲರೂ ಪವಿತ್ರರು ಮತ್ತು ಸಮಾನರು. ಭಾರತದ ಶ್ರದ್ಧಾವಂತ ಜನರಷ್ಟೇ ಅಲ್ಲದೆ, ವಿಶ್ವದ 73 ದೇಶಗಳ ಸುಮಾರು 50 ಲಕ್ಷ ಪ್ರಜೆಗಳು ಭಾಗವಹಿಸಿದ್ದ ಈ ಮಹಾಕುಂಭಮೇಳದ ಆಚರಣೆಯಲ್ಲಿ ಎಲ್ಲಿಯೂ ಇಂಥ ತಾರತಮ್ಯದ ವ್ಯವಸ್ಥೆಗಳು ಇರಲಿಲ್ಲ ಎಂಬುದೇ ಹೆಮ್ಮೆಯ ವಿಷಯ. ಸಮಾಜದ ತಥಾಕಥಿತ ಸ್ಪೃಶ್ಯ-ಅಸ್ಪೃಶ್ಯ, ವಿದ್ಯಾ ವಂತ-ಅನಕ್ಷರಸ್ಥ, ಶ್ರೀಮಂತ-ಬಡವ, ಸ್ತ್ರೀ-ಪುರುಷ, ಹಿಂದಿ-ಹಿಂದಿಯೇತರ, ಉತ್ತರ ಭಾರ ತೀಯ-ದಕ್ಷಿಣ ಭಾರತೀಯ, ಅಧಿಕಾರಿ-ಅಧಿಕಾರೇತರ ಈ ಎಲ್ಲಾ ಎಲ್ಲೆಗಳನ್ನೂ ಮೀರಿ, ಒಂದೇ ನದಿಯ ಸ್ನಾನಘಟ್ಟಗಳಲ್ಲಿ ಅಕ್ಕಪಕ್ಕದಲ್ಲಿ ಮಿಂದು ಎದ್ದರು.

ಒಟ್ಟಾಗಿ ತಮ್ಮ ನಂಬಿಕೆಯಂತೆ ದೇವರನ್ನು ಭಜಿಸಿದರು, ಪ್ರಸಾದ ಸ್ವೀಕರಿಸಿದರು. ಈ ಏಕತೆ ಮತ್ತು ಧಾರ್ಮಿಕತೆಯ ಪ್ರಜ್ಞೆಯು ಬಹುತೇಕವಾಗಿ ಸಾಕಾರಗೊಳ್ಳುವುದು/ಸಾಧ್ಯವಾಗು ವುದು ಕುಂಭಮೇಳ ಮತ್ತು ಪಂಢರಾಪುರದ ‘ವಾರಿ’ಯಂಥ ಉನ್ನತ ಧಾರ್ಮಿಕ ಆಚರಣೆ ಗಳಲ್ಲೇ ಹೊರತು, ಬರಹ-ಭಾಷಣಗಳಿಂದಲ್ಲ ಎಂಬುದು ದೃಢಪಟ್ಟಿದೆ. ಹಿಂದೂ ಆಚರಣೆಗಳೆಂದರೆ ಜಾತಿಭೇದ, ಶೋಷಣೆ, ಪುರೋಹಿತಶಾಹಿ ಅಟ್ಟಹಾಸ ಎಂಬುದೇ ಹಿಂದೂ-ಏಕತಾ ವಿರೋಧಿಗಳು ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಮಾಡಿಕೊಂಡು ಬಂದಿದ್ದ ಅಪಪ್ರಚಾರ. ಅವರ ಈ ‘ವಿಭಜನಕಾರಿ ಅಜೆಂಡಾ’ ಕುಂಭಮೇಳದಿಂದ ಕಾಲ ಬಾಹಿರವಾಗಿದೆ.

ಇಲ್ಲಿ ‘ಶೋಷಣೆ’, ‘ಶೋಷಿತ’ ಎಂಬ ಶಬ್ದಗಳಿಗೆ ಆಸ್ಪದವೇ ಇರಲಿಲ್ಲ. ಅನೇಕ ಅಖಾಡಗಳ ಸಾಧುಗಳಲ್ಲಿ ಜಾತಿ, ಭಾಷೆಗಳು ಬೇರೆ ಬೇರೆ ಇದ್ದರೂ ಟ್ಟಾಗಿ ಆಚರಣೆಗಳಲ್ಲಿ ತೊಡಗಿದ್ದರು ಎಂಬುದು ಇದರ ಸಾಕ್ಷೀರೂಪವಾಗಿತ್ತು; ಹಿಂದೂ ಸಂತರಿಗೆ ಪೂರ್ವಾಶ್ರಮದ ಜಾತಿ ಕಟ್ಟಳೆ ಯಿಲ್ಲ ಎಂಬ ತತ್ವವು ಈ ಕುಂಭಮೇಳದಲ್ಲಿ ಕಂಡುಬಂದ ಇಂಥ ದೃಶ್ಯಗಳಿಂದ ದೃಢ ಪಟ್ಟಿತು.

ಅನೇಕ ಅಖಾಡಗಳ ಸಮ್ಮೇಳನಗಳಲ್ಲಿ ಹಿಂದುಳಿದ ವರ್ಗಗಳ ಮಠಾಧೀಶರುಗಳನ್ನು ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ನಿಯೋಜಿಸಿದ್ದು ಸಾಮರಸ್ಯದ ದೃಷ್ಟಿಯಿಂದ ಅತ್ಯಂತ ಸೂಕ್ತ ನಡೆಯಾಗಿತ್ತು. ಹಿಂದೂ ಸಮಾಜದ ಧಾರ್ಮಿಕ ಆಚರಣೆಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ ಎಂದು ಆರೋಪಿಸಲಾಗುತ್ತೆ; ಆದರೆ ಕುಂಭಮೇಳಗಳಲ್ಲಿ ಪುರುಷರಿಗೆ ಸಮಾನರಾಗಿ, ಸಾಧುಗಳ ಜತೆಗೆ ಸಾಧ್ವಿಯರು ಮತ್ತು ಸಾಮಾನ್ಯ ಕುಟುಂಬಗಳ ಮಹಿಳೆ ಯರು ಭಾಗಿಯಾಗಿದ್ದನ್ನು ನೋಡಿದರೆ ಹಾಗೂ ಜಗತ್ತಿನ ಯಾವುದೇ ಧಾರ್ಮಿಕ ಆಚರಣೆ ಯಲ್ಲಿ ಕೂಡ ಈ ಪ್ರಮಾಣದಲ್ಲಿ ಮಹಿಳೆಯರ ಸುರಕ್ಷಿತ-ಸಹಭಾಗಿತ್ವ ಇಲ್ಲದ್ದನ್ನು ಅವ ಲೋಕಿಸಿದರೆ, ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ನೀಡಲಾಗಿರುವ ಉನ್ನತ ಸ್ಥಾನ ಮಾನದ ಅರಿವಾಗುತ್ತದೆ.

ಸ್ವಾತಂತ್ರ್ಯಾನಂತರದ ಭಾರತದಲ್ಲಿ ಭಾಷಾ ಸಾಮರಸ್ಯ, ಅದರಲ್ಲೂ ವಿಶೇಷವಾಗಿ ಉತ್ತರ-ದಕ್ಷಿಣ ಭಾರತಗಳ ಏಕಾತ್ಮಕತೆಯು ಕಂಡುಬರುವ ಸಾಧ್ಯತೆ ಮರೀಚಿಕೆ ಎನಿಸಿತ್ತು. ಆದರೆ ಈ ಮಹಾಕುಂಭಮೇಳದಲ್ಲಿ, ಹಿಂದಿ-ಹಿಂದಿಯೇತರ, ದಕ್ಷಿಣ-ಉತ್ತರ, ನಗರವಾಸಿ-ಗ್ರಾಮ ವಾಸಿ ಈ ಯಾವ ಅಂಶಗಳೂ ಏಕತೆಗೆ ಅಡ್ಡ ಬರಲಿಲ್ಲ. ಪ್ರಯಾಗ್‌ರಾಜ್‌ನ ಹಲವಾರು ಸ್ಥಳಗಳಲ್ಲಿ ಹಿಂದಿ-ಇಂಗ್ಲಿಷ್ ಜತೆಗೆ ಕನ್ನಡ, ತಮಿಳು, ತೆಲುಗು ಅಷ್ಟೇ ಏಕೆ ಉರ್ದುವಿನಲ್ಲಿ ಕೂಡ ಮಾರ್ಗಸೂಚಿ ಫಲಕಗಳನ್ನು ಹಾಕಲಾಗಿತ್ತು.

ಅಲ್ಲಿ ಹಿಂದಿ ಭಾಷಿಕರು ಬೇರಾವ ಭಾಷೆಯ ಅಕ್ಷರಗಳಿಗೂ ಮಸಿ ಬಳಿಯಲಿಲ್ಲ, ತಕರಾರು ಎತ್ತಲಿಲ್ಲ. ಅನೇಕರ ಅನುಭವ ಎಂಬಂತೆ, ಹಿಂದಿ ಭಾಷೆ ಬರದ ಯಾತ್ರಿಕರಿಗೆ ಹಲವು ಬಾರಿ ಸ್ಥಳೀಯರು ಸಹಾಯಕ್ಕಾಗಿ ನಿಂತಿದ್ದು ಈ ಮೇಳದ ಹಿರಿಮೆಯೇ ಸರಿ. ರಸ್ತೆ-ರಸ್ತೆಗಳಲ್ಲಿ, ನದಿದಂಡೆಗಳಲ್ಲಿ, ಗೊತ್ತಿಲ್ಲದ ಊರುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿ ಯಾತ್ರೆಯನ್ನು ಮಾಡಿದ್ದು ಸನಾತನ ಧರ್ಮದಲ್ಲಿರುವ ಸುರಕ್ಷೆಯ ಪ್ರತೀಕ.

ಪರಿಚಯವೇ ಇಲ್ಲದ ವಿವಿಧ ರಾಜ್ಯಗಳ ಅನೇಕ ಯಾತ್ರಿಗಳಿಗೆ ಸ್ಥಳೀಯ ಜನರು ಆಶ್ರಯ-ಆಹಾರವನ್ನು ನೀಡಿದ್ದು ವಿಶೇಷ. ಭಾರತದ ಅಥವಾ ವಿಶ್ವದ ಅನೇಕ ಶಹರಗಳಲ್ಲಿ ಬರೀ ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ, ಸೇರಿರುವ ಕೆಲವೇ ಸಾವಿರ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವುದಿದೆ. ಈ ಆಚರಣೆಯ ವೇಳೆ ಮಹಿಳೆಯರ ಜತೆ ಅನುಚಿತ ವರ್ತನೆ, ಆಸ್ತಿಪಾಸ್ತಿಗಳ ಮೇಲೆ ಆಕ್ರಮಣ ನಡೆಯುವುದಿದೆ. ಆದರೆ ಕುಂಭ ಮೇಳದಲ್ಲಿ ಕೋಟ್ಯಂತರ ಪುರುಷರು-ಮಹಿಳೆಯರು ಒಟ್ಟಾಗಿ ಸೇರಿದ್ದರೂ, ಯಾವುದೇ ಅನುಚಿತ-ಅಹಿತಕರ ಘಟನೆಗಳು ನಡೆಯದಂತೆ ಅಲ್ಲಿ ಸೇರಿರುವ ಜನರ ಮಾನಸಿಕತೆ ಯನ್ನು ನಿಯಂತ್ರಿಸುವ ಮನೋವೈಜ್ಞಾನಿಕ ಅಂಶವಾದರೂ ಯಾವುದು? ಎಂಬುದು ಅಧ್ಯಯನಕ್ಕೆ ಯೋಗ್ಯವಾದ ವಿಷಯ.

ಇದು ರಾಜಕೀಯ ಪಕ್ಷಗಳ ಬಹಿರಂಗ ಸಭೆಗಳಲ್ಲಿ, ರೇವ್ ಪಾರ್ಟಿಗಳಲ್ಲಿ, ಹೊಸವರ್ಷದ ಸಂಭ್ರಮಾಚರಣೆಗಳಲ್ಲಿ, ಹಲವು ಸಭೆ-ಸಮಾರಂಭಗಳಲ್ಲಿ ಸಾಧ್ಯವಾಗಿಲ್ಲವೇಕೆ ಎಂಬು ದನ್ನು ಮನಶ್ಶಾಸ್ತ್ರಜ್ಞರು ಕಂಡುಹಿಡಿಯಬೇಕು. ಒಟ್ಟಿನಲ್ಲಿ, ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳವು ಭಾರತ ದೇಶಕ್ಕೆ ಅಥವಾ ಹಿಂದೂ ಸಮಾಜಕ್ಕೆ ಅನೇಕ ಸಕಾರಾತ್ಮಕ ಅಂಶ ಗಳನ್ನು, ವಿಶೇಷವಾಗಿ ಸಾಮರಸ್ಯದ ಅಡಿಪಾಯವನ್ನು ಮತ್ತೊಮ್ಮೆ ಹಾಕಿಕೊಟ್ಟಿದೆ.

ಈ ಸಾಮರಸ್ಯದ ಆಧಾರದ ಮೇಲೆ ಮುನ್ನಡೆದಲ್ಲಿ, ಭಾರತದಲ್ಲಿ ಸಮಾನತೆ, ಸರ್ವರ ಏಳಿಗೆ ಎಂಬ ಸಂವಿಧಾನದ ಆಶಯಗಳನ್ನು ನಾವು ಸಾಧಿಸಬಹುದು.

(ಲೇಖಕರು ವಕೀಲರು ಹಾಗೂ ಭಾರತ ಸರಕಾರದ

ನಿಕಟಪೂರ್ವ ಸಹಾಯಕ ಸಾಲಿಸಿಟರ್ ಜನರಲ್)