ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Adarsh Shetty Column: ನಾಗರಿಕ ಸೇವೆಗೆ ವಿಸ್ತಾರ ಗೊಳ್ಳಬೇಕಿದೆ ಸಕಾಲ ಯೋಜನೆ

ಯಾವುದೇ ಇಲಾಖೆಯ ಸರಕಾರಿ ಸೌಲಭ್ಯಗಳನ್ನು ಪಡೆಯಲು ಜನಸಾಮಾನ್ಯರ ಬೆಳಗ್ಗಿನಿಂದ ಸಂಜೆಯವರೆಗೆ ಕಚೇರಿ ಅಲೆದಾಟ ತಪ್ಪಿಸುವುದು, ತಾವು ಸಲ್ಲಿಸಿದ ಅರ್ಜಿಯ ಪೂರ್ಣ ವಿ

Profile Ashok Nayak Dec 28, 2024 9:52 AM
ವಿಶ್ಲೇಷಣೆ
ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ
ಸಹಾಯಧನಗಳು ಪಾರದರ್ಶಕವಾಗಿ ನಡೆಯಬೇಕಾದರೆ ಎಲ್ಲವನ್ನೂ ಆನ್ ಲೈನ್ ಮೂಲಕ ಸಕಾಲ ಯೋಜನೆಯಡಿ ಫಲಾನುಭವಿಗಳಿಗೆ ದೊರಕುವಂತಾಗಬೇಕು. 94ಸಿ, ಸಿಸಿ ಯೋಜನೆಗಳು, ಬಸವ ವಸತಿ ಯೋಜನೆ, ಭೂ ಪರಿವರ್ತನೆ ಇವೆಲ್ಲವೂ ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ದೊರಕುವಂತಾಗಬೇಕು
ಸರಕಾರಿ ಸೇವೆಗಳು ಎಲ್ಲವೂ ಒಂದೇ ಸೂರಿನಡಿ ಜನಸಾಮಾನ್ಯರ ಕೈಗೆಟುಕುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಅಂದಿನ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರು ಜಾರಿಗೆ ತಂದ ಸಕಾಲ ಯೋಜನೆಯಡಿಯಲ್ಲಿ ಸುಮಾರು 90 ಕ್ಕೂ ಅಧಿಕ ಸೇವೆಗಳು ಆರಂಭಿಕ ದಿನಗಳಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುತ್ತಿತ್ತು. ಈ ಯೋಜನೆ ಬಹುಮುಖ್ಯವಾಗಿ ಮಧ್ಯವರ್ತಿಗಳ ಹಾವಳಿ ತಡೆ ಹಾಗೂ ತ್ವರಿತ ಸೇವೆಗೆ ಪೂರಕವಾದ ವೇದಿಕೆಯನ್ನು ಜನಸಾಮಾನ್ಯರಿಗೆ ಒದಗಿಸಿತ್ತು.
ಯಾವುದೇ ಇಲಾಖೆಯ ಸರಕಾರಿ ಸೌಲಭ್ಯಗಳನ್ನು ಪಡೆಯಲು ಜನಸಾಮಾನ್ಯರ ಬೆಳಗ್ಗಿನಿಂದ ಸಂಜೆಯವರೆಗೆ ಕಚೇರಿ ಅಲೆದಾಟ ತಪ್ಪಿಸುವುದು, ತಾವು ಸಲ್ಲಿಸಿದ ಅರ್ಜಿಯ ಪೂರ್ಣ ವಿವರಗಳನ್ನು ಪಡೆಯಲು ಹಾಗೂ ಪಾರದರ್ಶಕ ಸೇವೆಗಾಗಿ ಸಕಾಲ ಯೋಜನೆ ಸಾಕಷ್ಟು ಪ್ರಯೋಜನ ಉಂಟು ಮಾಡಿದೆ. ಇನ್ನು ಗ್ರಾಮೀಣ ಅಥವಾ ನಗರ ಪ್ರದೇಶದ ಜನರೇ ಇರಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಅಥವಾ ಯಾವುದೇ ಇಲಾಖೆಯ ಪ್ರಮಾಣ ಪತ್ರಗಳನ್ನು ಪಡೆಯಲು ದೂರದ ತಾಲೂಕು ಕೇಂದ್ರವನ್ನು ಅವಲಂಬಿಸುವುದು. ಅನಕ್ಷರಸ್ಥ ಮಂದಿ ಮಧ್ಯ ವರ್ತಿಗಳ ಸಹಾಯ ಪಡೆದು ಲಂಚ ನೀಡಿ ಕೆಲಸ ಮಾಡಿಸಬೇಕಾದ ಸಂದಿಗ್ಧ ಪರಿಸ್ಥಿತಿಗಳು ಎದುರಾಗಿದ್ದವು.
ಹಾಗಂದ ಮಾತ್ರಕ್ಕೆ ಇಂತಹ ಆನ್‌ಲೈನ್ ಅರ್ಜಿ ತುಂಬಿ ಬೇರೆ ಅಧಿಕಾರಿಗಳ ಟೇಬಲ್‌ಗಳಿಗೆ ಕಳುಹಿಸುವುದರಿಂದ ಯೋಜನೆಗಳ ಬಳಕೆಯಲ್ಲಿ ಭ್ರಷ್ಟಾಚಾರ ಕೊನೆಗೊಂಡಿದೆಯೆಂದೇನಲ್ಲ. ಆನ್‌ಲೈನ್ ಸೇವೆ, ನೇರ ಡಿಜಿಟಲೀಕರಣ, ಇ-ಸೇವೆಗಳು ಬಂದರೂ ಕೂಡ ಫಲಾನುಭವಿಯ ಫೈಲ್‌ಗಳಲ್ಲಿ ಯಾವುದಾದರೂ ನ್ಯೂನ್ಯತೆಯನ್ನು ಕಂಡು ಹಿಡಿದು ಕಾನೂನು ತೊಡಕು ಎಂದೆಲ್ಲ ಸಬೂಬು ಹೇಳಿ ಕಡತ ಧೂಳು ಹಿಡಿಯುವಂತೆ ಮಾಡಿ ದುಡ್ಡು ಪಡೆಯುವಲ್ಲಿ ಕೆಲ ಅಽಕಾರಿಗಳು ನೈಪುಣ್ಯತೆಯನ್ನು ಹೊಂದಿರುತ್ತಾರೆ. ಕೇಂದ್ರ ಸರಕಾರ ಈಗಾಗಲೇ ಜನ್ ಧನ್ ಖಾತೆಯ ಮೂಲಕ ಕೃಷಿಕರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸೇರಿದಂತೆ ವಿವಿಧ ಸಹಾಯ ಧನಗಳನ್ನು ನೇರ ರೈತರ ಅಥವಾ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿರುವುದರಿಂದ ಜನಸಾ ಮಾನ್ಯರು ಇಲ್ಲಿ ಪಾರದರ್ಶಕತೆಯನ್ನು ಕಾಣುತ್ತಾರೆ.
ಇನ್ನು ಭ್ರಷ್ಟಾಚಾರದ ಮುಖವಾಣಿಯಂತಿರುವ ವಾಸಕ್ಕೆ ಸೂರಿಗಾಗಿ ಸರಕಾರದ ನಿವೇಶನ ಪಡೆಯುವ ೯೪ಸಿ, ೯೪ಸಿಸಿ, ಅಕ್ರಮ ಸಕ್ರಮ ಕಡತ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಉದ್ಯೋಗ ಖಾತರಿ ಯೋಜನೆ, ಕೃಷಿ ಇಲಾಖೆಯ ಸವಲತ್ತುಗಳು ಹಾಗೂ ಇನ್ನಿತರ ಸಹಾಯಧನಗಳ ಮಂಜೂರಾತಿ ಗಾಗಿ ಹಲವಾರು ದಾಖಲೆಗಳನ್ನು ಪಡೆದು ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಉಪತಹಶಿಲ್ದಾರ್ ಬಳಿಕ ತಹಶಿಲ್ದಾ ರರ ಕಚೇರಿಯಲ್ಲಿ ಅಂತಿಮಮುದ್ರೆ ಬಿದ್ದ ಬಳಿಕ ಸರಕಾರದ ಹಂತಕ್ಕೆ ತಲುಪಿ ಫಲಾನುಭವಿಯ ಖಾತೆಗೆ ಮೂರು ತಿಂಗಳ ಬಳಿಕ ಸಹಾಯಧನಗಳು ಜಮೆಯಾಗುತ್ತದೆ.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಭ್ರಷ್ಟಾಚಾರದ ವಾಸನೆ ಪಡೆಯುವ ವ್ಯವಸ್ಥೆಯೆಂದರೆ ಅದು ಬಡವರ ಸೂರಿಗಾಗಿ ನಿವೇಶನದ 94ಸಿ ಹಾಗೂ 94ಸಿಸಿ ಕಡತಗಳ ವಿಲೇವಾರಿಯೆಂಬುವುದು.ಮತ್ತೊಂದು ಸರಕಾರಿ,ಕುಮ್ಕಿ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳ ಉದ್ದೇಶಕ್ಕಾಗಿ ಸಕ್ರಮಗೊಳಿಸುವ ಅಕ್ರಮ ಸಕ್ರಮ ಕಡತಗಳು. ಈ ಅಕ್ರಮ ಸಕ್ರಮ ಹಾಗೂ 94 ಸಿ,ಸಿಸಿ ಕಡತಗಳು ತಾರ್ಕಿಕ ಅಂತ್ಯ ಕಾಣಬೇಕಾದರೆ ಇಲ್ಲಿ ಒಂದು ಆಯಾ ಕ್ಷೇತ್ರದ ಶಾಸಕನ ಕೃಪಾಕಟಾಕ್ಷ, ಅಕ್ರಮ ಸಕ್ರಮ ಸಮಿತಿಯ ಸದಸ್ಯರ ಶಿಫಾರಸು ಮತ್ತೊಂದು ಆಡಳಿತ ವ್ಯವಸ್ಥೆಯಲ್ಲಿ ದಳ್ಳಾಳಿಗಳು, ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಉಪತಹಶಿಲ್ದಾರ್, ತಹಶಿಲ್ದಾರ್ ಮಟ್ಟದವರೆಗೆ ದುಡ್ಡು ಚೆಲ್ಲಿದರೆ ಮಾತ್ರ ಫಲಾನುಭವಿಯ ಕೈಗೆ ಹಕ್ಕು ಪತ್ರ ಇಲ್ಲವೇ ಸಾಗುವಾಳಿ ಚೀಟಿ ದೊರೆಯುತ್ತದೆ.
ಅರ್ಜಿದಾರ ನೀಡುವ ಮೊತ್ತದಲ್ಲಿ ಕೊಂಚ ವ್ಯತ್ಯಾಸವಾದರೂ ಕಾನೂನು ತೊಡಕಿನ ನೆಪದಲ್ಲಿ ತಾಲೂಕು ಕಚೇರಿಗಳಲ್ಲಿ ಕಡತಗಳು ಧೂಳು ಹತ್ತಿಕೊಳ್ಳುತ್ತದೆ. ಇಲ್ಲಿ ಬಡಪಾಯಿಗಳು, ರೈತಾಪಿ ವರ್ಗದ ಜನ ಸವಲತ್ತು ಪಡೆಯಲು ಅರ್ಹತೆಯನ್ನು ಹೊಂದಿದ್ದರೂ ರಾಜಕೀಯ ಪುಢಾರಿಗಳ, ಸಮಿತಿ ಸದಸ್ಯರ, ಅಧಿಕಾರಿಗಳ ಕೈಕಾಲು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಎಲ್ಲ ಕಾರಣಕ್ಕಾಗಿ ನಮ್ಮ ಊರಿನ ಪತ್ರಕರ್ತ ಮಿತ್ರರೋರ್ವರು 94ಸಿ, ಸಿಸಿ ಅಕ್ರಮ ಸಕ್ರಮ ವ್ಯವಸ್ಥೆ ಎಂಬುವುದು ಹಾಗೂ ಅದಕ್ಕೊಂದು ಸಮಿತಿಗಳಿಗೆ, ಅಧಿಕಾರಿ ವರ್ಗ, ದಲ್ಲಾಳಿಗಳಿಗೆ ಈ ವ್ಯವಸ್ಥೆ ಚಿನ್ನದ ಮೊಟ್ಟೆ ಇಡುವ ಕೋಳಿ ಎಂಬ ವಿಶೇಷ ವರದಿಯನ್ನು ರಾಜ್ಯಮಟ್ಟದ ಪತ್ರಿಕೆಯಲ್ಲಿ ಮಾಡಿದ್ದರು. ಅಕ್ರಮ ಸಕ್ರಮ ಸಮಿತಿಗಳಿಗೆ ಆಡಳಿತಾರೂಢ ಪಕ್ಷದ ಶಾಸಕರ ಬೆಂಬಲಿಗರನ್ನೇ ಬಹುತೇಕ ಸದಸ್ಯರನ್ನಾಗಿ ಆಯ್ಕೆ ಮಾಡುವ ಪರಿಪಾಠಗಳಿವೆ. ಒಂದು ಎಕರೆಗೆ ಒಂದು ಲಕ್ಷದವರೆಗೆ ಹಾಗೂ 94ಸಿ, ಸಿಸಿಗಳಿಗೆ 30 ರಿಂದ 40 ಸಾವಿರದವರೆಗೆ ದುಡ್ಡಿನ ಬೇಡಿಕೆಗಳು ಬಡ, ಮಾಧ್ಯಮ ವರ್ಗದ ಜನಸಾಮಾನ್ಯರಿಂದ ವಸೂಲು ಮಾಡುವ ಬಗ್ಗೆ ಆರೋಪಗಳಿವೆ. ವೇದಿಕೆ ಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಅಬ್ಬರದ ಭಾಷಣ ಬಿಗಿಯುವ ಜನಪ್ರತಿನಿಧಿಗಳ ಬ್ಯಾಕ್‌ಸೀಟ್ ಡ್ರೈವರ್ ಗಳು, ಹೊಗಳುಭಟರುಗಳು ಅಧಿಕಾರಿ ವರ್ಗಗಳನ್ನು ಬಳಸಿಕೊಂಡು ದುಡ್ಡು ಮಾಡುವ ದಂಧೆಗೆ ಸರಕಾರಿ ಸವಲತ್ತುಯೋಜನೆಗಳು ಬಡಜನರ ರಕ್ತ ಹೀರುತ್ತಿದೆ.
ಇನ್ನು ಕೆಲವು ಕಡೆ ಜನಪ್ರತಿನಿಧಿಗಳ ಈ ಬೆಂಬಲಿಗ ವರ್ಗಗಳು ಅರ್ಧದಷ್ಟು ಮೊತ್ತ ಪಡೆದು ಅತ್ತ ಕೆಲಸವೂಮಾಡಿಕೊಡದೆ ಇತ್ತ ಪಡೆದ ಹಣವೂ ವಾಪಾಸು ನೀಡದೇ ಅಧಿಕಾರಿಗಳ ತಲೆಗೆ ಕಟ್ಟಿ ವಂಚಿಸುತ್ತಿರುವ ಪ್ರಕರಣಗಳುಬೆಳಕಿಗೆ ಬಂದಿವೆ.ಸಮಾಜದಲ್ಲಿ ಅನೇಕ ಕುಟುಂಬಗಳು ಸ್ವಂತ ನಿವೇಶನಕ್ಕಾಗಿ ಭ್ರಷ್ಟಾಚಾರದ ಪರಾಕಾಷ್ಠೆಯಿಂದ ಅಧಿಕಾರಿ ಹಾಗೂ ರಾಜಕಾರಣಿಗಳ ಮನೆ ಬಾಗಿಲಿಗೆ ತೆರಳಿ ಅಂಗಲಾಚುವ ಪರಿಸ್ಥಿತಿ ಮತ್ತೊಂದೆಡೆ ಹಣ ನೀಡದೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಅಧಿಕಾರಿಗಳ ಮಾನಸಿಕತೆಗೆ ಫಲಾನುಭವಿಗಳು ಹೈರಾಣಾಗಿ ಬಿಡುತ್ತಾರೆ.
ಕೈಯಲ್ಲಿ ದುಡ್ಡಿಲ್ಲದ ಬಡಪಾಯಿಗಳು ತಮ್ಮ ಮೈಮೇಲಿದ್ದ ಚಿನ್ನಾಭರಣ ಅಡವಿಟ್ಟು ಸ್ಥಳೀಯ ಬ್ಯಾಂಕ್,ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ದಳ್ಳಾಳಿ ಅಧಿಕಾರಿ ವರ್ಗದ ಕೈಬಿಸಿ ಮಾಡಬೇಕಾದ ಪರಿಸ್ಥಿತಿ ಗಳಲ್ಲಿದೆ ಜನಸಾಮಾನ್ಯರ ಬದುಕು.
ಅದೆಷ್ಟೋ ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಒದ್ದಾಟ ನಡೆಸುತ್ತಿರುವ ವಯೋವೃದ್ಧರುಗಳು ಹಕ್ಕು ಪತ್ರವನ್ನು ಕ್ಷೇತ್ರದ ಶಾಸಕರುಗಳ ಕೈಯಿಂದ ವೇದಿಕೆಯಲ್ಲಿ ಪಡೆದುಕೊಳ್ಳುವ ಸಂದರ್ಭದಲ್ಲಿ ಕಣ್ಣೀರಿಡುವ ದೃಶ್ಯಗಳನ್ನು ಕೂಡ ಆಗಾಗ ಕಾಣುತ್ತೇವೆ. ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಇಲಾಖೆ ಜನಸಾಮಾನ್ಯರಿಗೆ ಬಹು ಹತ್ತಿರ ವಾಗಿರುವ ವ್ಯವಸ್ಥೆ. ಜನರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆಗಾಗಿ ಸರಕಾರದ ಸವಲತ್ತುಗಳಿಗಾಗಿ ಈ ಇಲಾಖೆಗಳನ್ನು ಹೆಚ್ಚು ಜನರು ಅವಲಂಬಿತರಾಗುತ್ತಾರೆ. ಇನ್ನು ಸರಕಾರಿ ವ್ಯವಸ್ಥೆಯಲ್ಲಿನ ಎಲ್ಲ ಸಹಾಯಧನಗಳು ಪಾರದರ್ಶಕವಾಗಿ ನಡೆಯಬೇಕಾದರೆ ಎಲ್ಲವನ್ನೂ ಆನ್ ಲೈನ್ ಮೂಲಕ ಸಕಾಲ ಯೋಜನೆಯಡಿ ಫಲಾನುಭವಿ ಗಳಿಗೆ ದೊರಕುವಂತಾಗಬೇಕು. 94ಸಿ, ಸಿಸಿ ಯೋಜನೆಗಳು, ಬಸವ ವಸತಿ ಯೋಜನೆ, ಭೂ ಪರಿವರ್ತನೆ ಇವೆಲ್ಲವೂ ನಿಗದಿತ ಅವಽಯಲ್ಲಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ, ಆ ಅರ್ಜಿಯ ಪ್ರಗತಿ ಹಾಗೂ ಸ್ಟೇಟಸ್‌ಗಳು-ಲಾನುಭವಿಗಳಿಗೆ ದೊರಕುವಂತಾಗಬೇಕು.
ಅಧಿಕಾರಿ ಅಥವಾ ಮಧ್ಯವರ್ತಿಗಳು ಈ ವ್ಯವಸ್ಥೆಯಲ್ಲಿ ಮೂಗು ತೂರಿಸದಂತಹ ವ್ಯವಸ್ಥೆಗಳು ನಿರ್ಮಾಣವಾಗ ಬೇಕಿದೆ. ಕೆಲ ಜಿಲ್ಲೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರಿ ವರ್ಗಗಳು, ತಹಶಿಲ್ದಾರ್, ಸಹಾಯಕ ಆಯುಕ್ತರು, ನೋಂದಾವಣಾಧಿಕಾರಿಗಳು, ನಗರಸಭೆ, ಪುಡಾ, ಪಟ್ಟಣ ಪಂಚಾಯತ್ ಅಧಿಕಾರಿ ವರ್ಗಗಳೇ ಇಂತಿಷ್ಟು ಮಾಮೂಲು ನೀಡಬೇಕೆಂಬ ಒತ್ತಡಗಳಿವೆ. ಈ ಕಾರಣಕ್ಕಾಗಿಯೂ ಅಧಿಕಾರಿ ವರ್ಗಗಳು ಮಾನವೀಯತೆ ಮರೆತು ವಸೂಲಿ ಬಾಜಿಗೆ ಇಳಿಯುತ್ತಿರುವುದು ಕೂಡ ಗುಟ್ಟಿನ ಸಂಗತಿಯಲ್ಲ.
ಇನ್ನು ತಾಲೂಕಿನ ಹೋಬಳಿ ಮಟ್ಟದಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸುತ್ತಿದ್ದ ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರಗಳನ್ನು ಬಿಜೆಪಿ ಸರಕಾರದಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರು ಅಟಲ್ ಜೀ ಜನಸ್ನೇಹಿ ಕೇಂದ್ರ ಎಂಬ ಹೆಸರಿನಲ್ಲಿ ನಾಮಕರಣ ಮಾಡಿದ್ದು, ಈ ನಾಡಕಚೇರಿ ಅಥವಾ ಜನಸ್ನೇಹಿ ಕೇಂದ್ರದಲ್ಲಿ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳು ಲಭ್ಯವಿರುವ ಹಿನ್ನೆಲೆಯಲ್ಲಿ ದಿನವಿಡೀ ಸಾಲು ಗಟ್ಟಲೆ ಜನರು ಸರತಿ ನಿಲ್ಲುವುದು ಕಂಡು ಬರುತ್ತದೆ. ಈ ನಾಡಕಚೇರಿ ಅಥವಾ ಜನಸ್ನೇಹಿ ಕೇಂದ್ರಗಳಲ್ಲಿ ಕೂಡ ಹಲವು ಸಮಸ್ಯೆ ಗಳು ತಾಂಡವವಾಡುತ್ತಿದೆ.
ಸೂಕ್ತ ಕಟ್ಟಡ ಕೊರತೆ, ಸರ್ವರ್ ಸಮಸ್ಯೆ, ಸಿಬ್ಬಂದಿಗಳ ಕೊರತೆ ಮುಂತಾದ ಸಮಸ್ಯೆಗಳು ಜನಸಾಮಾನ್ಯರನ್ನು ಬೆಳಗಿನಿಂದ ಸಂಜೆಯವರೆಗೆ ಹೈರಾಣಾಗಿಸುತ್ತಿದೆ. ಸರಕಾರಗಳು ಬಹುಮುಖ್ಯವಾಗಿ ಹೆಚ್ಚುವರಿಯಾಗಿ ಕಂಪ್ಯೂಟರ್, ಪ್ರಿಂಟರ್ ನಂತಹ ಸೌಲಭ್ಯಗಳನ್ನು ಒದಗಿಸುವುದು. ಈಗಾಗಲೇ ಈ ವ್ಯವಸ್ಥೆಯಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಅಥವಾ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಯಂಗೊಳಿಸುವುದು ಇಲ್ಲವೇ ಸಿಬ್ಬಂದಿಗಳಿಗೆ ಗರಿಷ್ಠ ವೇತನ ನಿಗದಿ, ಜೀವನ ಭದ್ರತೆ ಒದಗಿಸುವ ಕಡೆ ಕಂದಾಯ ಇಲಾಖೆ ಲಕ್ಷ್ಯ ವಹಿಸಬೇಕಿದೆ.ಕೆಲವು ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ದುಡ್ಡು ಮಾಡುವುದೆಂದರೆ ಕೆಟ್ಟ ಚಾಳಿಯೆನಿಸಿಬಿಟ್ಟಿದೆ.
ತಮಗೆ ದೊರಕುವ ಸರಕಾರಿ ಸಂಬಳದಲ್ಲಿ ತೃಪ್ತಿಪಟ್ಟುಕೊಳ್ಳದೆ ತಮಗೆ ಸಿಕ್ಕಿದ್ದನ್ನು ಬಾಚಿಕೊಳ್ಳುವ ಮನಸ್ಥಿತಿಯೂ ಇದೆ. ತಾವು ಲಂಚದ ರೂಪದಲ್ಲಿ ಪಡೆಯುವ ದುಡ್ಡಿನಲ್ಲಿ ಅದೆಷ್ಟು ಕಣ್ಣೀರು, ಸಾಲ,ನೋವುಗಳು, ಕಷ್ಟಗಳು ಅಡಕವಾಗಿರುವ ಬಗ್ಗೆ ಹಣ ನೀಡಿದ ಮಂದಿಗೆ ಮಾತ್ರ ಅರಿವಿಗೆ ಬಂದಿರುತ್ತದೆ. ಮಾನವೀಯತೆ ಮರೆತು ಸಂಪಾದಿ ಸಿದ ಹಣ ಯಾರಿಗೂ ಶಾಶ್ವತವಾಗಿ ದಕ್ಕಿದ ಉದಾಹರಣೆಗಳು ಕಡಿಮೆ. ಸರಕಾರಗಳು ಬಹುಮುಖ್ಯವಾಗಿ ಜನಸಾಮಾನ್ಯರು, ಬಡ ಪಾಯಿಗಳಿಗೆಂದು ಘೋಷಿಸುವ ಯೋಜನೆಗಳು ಅನುದಾನಗಳು ಸಮರ್ಪಕವಾಗಿ ಫಲಾನುಭವಿಯ ನೇರ ಕೈಗೆ ದೊರಕು ವ ವ್ಯವಸ್ಥೆಗಳನ್ನು ಕಲ್ಪಿಸಬೇಕಿದೆ. ಸಕಾಲ ಯೋಜನೆಯನ್ನು ಮತ್ತಷ್ಟು ವಿಸ್ತಾರಗೊಳಿಸಿ ಆ ಯೋಜನೆಗೆ ಶಕ್ತಿ ತುಂಬಿ ಸರಕಾರದ ಒಂದಷ್ಟು ನಿಯಮಗಳನ್ನು ಸಡಿಲೀಕರಣಗೊಳಿಸಿ ಯೋಜನೆಗಳು ಸರಳವಾಗಿ ಜನಸಾಮಾನ್ಯರ ಕೈಸೇರುವಂತೆ ಮಾಡಬೇಕಿದೆ.
(ಲೇಖಕರು: ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Aneesh B Column; ಕನ್ನಡ ಅಂದರೆ GenZ ಗಳಿಗೇಕೆ ಹಿಂಜರಿಕೆ?