ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Mahashivratri 2025: ಫೆ. 26ರಂದು ತುಮಕೂರಿನ ಕಲ್ಪತರು ವನದಲ್ಲಿ ಶ್ರೀ ಶನೈಶ್ಚರ ಜಯಂತಿ, ಚಂದ್ರಮೌಳೀಶ್ವರ ಸ್ವಾಮಿಗೆ ಗಂಗಾಜಲಾಭಿಷೇಕ

Mahashivratri 2025: ತುಮಕೂರು ನಗರದ ಗಾರ್ಡನ್ ರಸ್ತೆಯ ಕಲ್ಪತರು ವನದಲ್ಲಿ ಶ್ರೀ ಶನೈಶ್ಚರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಫೆ. 26ರ ಬುಧವಾರದಂದು ಶ್ರೀ ಶನೈಶ್ಚರ ಜಯಂತಿ ಹಾಗೂ ಮಹಾಶಿವರಾತ್ರಿ (Mahashivratri 2025) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ನಗರದ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಶಿವಲಿಂಗಕ್ಕೆ ಗಂಗಾ ಜಲದಿಂದ ಅಭಿಷೇಕ ಮಾಡುವ ಅಪೂರ್ವ ಅವಕಾಶವನ್ನು ಭಕ್ತರಿಗೆ ಕಲ್ಪಿಸಲಾಗುತ್ತಿದೆ.

ಫೆ. 26ಕ್ಕೆ ಕಲ್ಪತರು ವನದಲ್ಲಿ ಶನೈಶ್ಚರ ಜಯಂತಿ, ಶಿವಲಿಂಗಕ್ಕೆ ಅಭಿಷೇಕ

Profile Prabhakara R Feb 25, 2025 1:56 PM

ತುಮಕೂರು: ನಗರದ ಗಾರ್ಡನ್ ರಸ್ತೆಯ ಕಲ್ಪತರು ವನದಲ್ಲಿ ಶ್ರೀ ಶನೈಶ್ಚರ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಫೆ. 26ರ ಬುಧವಾರದಂದು ಶ್ರೀ ಶನೈಶ್ಚರ ಜಯಂತಿ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಯಂತಿ ಅಂಗವಾಗಿ ಶ್ರೀ ಶನೈಶ್ಚರ ಸ್ವಾಮಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ತಿಲತೈಲಾಭಿಷೇಕ, ನವಗ್ರಹ ಶಾಂತಿ ಹಾಗೂ ಶನಿಶಾಂತಿ ಭಕ್ತಾಧಿಗಳ ಸ್ವಹಸ್ತದಲ್ಲಿ ತಿಲತೈಲಾಭಿಷೇಕ ಮಾಡಿಸುವ ಅವಕಾಶವಿರುತ್ತದೆ. ಭಕ್ತರು ಸೇವೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಟ್ರಸ್ಟ್ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ: 0816 2006119 ಸಂಪರ್ಕಿಸಿ.

ಶಿವಲಿಂಗಕ್ಕೆ ಭಕ್ತರಿಂದ ಗಂಗಾಜಲಾಭಿಷೇಕ

ತುಮಕೂರು: ನಗರದ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರಸ್ವಾಮಿ ದೇವಾಲಯದಲ್ಲಿ ಫೆ.26 ರ ಮಹಾಶಿವರಾತ್ರಿಯಂದು ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ಪಂಚಲೋಹದ ಶಿವಲಿಂಗಕ್ಕೆ ಭಕ್ತಾದಿಗಳು ಗಂಗಾ ಜಲದಿಂದ ತಾವೇ ಸ್ವತಃ ಅಭಿಷೇಕ ಮಾಡುವ ಅಪೂರ್ವ ಅವಕಾಶವನ್ನು ಇದೇ ಮೊದಲಿಗೆ ಕಲ್ಪಿಸಲಾಗುತ್ತಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಕೆ.ವೈ. ಲಕ್ಷ್ಮೀನರಸಿಂಹ ಶಾಸ್ತ್ರಿ ತಿಳಿಸಿದ್ದಾರೆ.

ದೇವಾಲಯದಲ್ಲಿ ಪ್ರತಿ ವರ್ಷದಂತೆ ಮಹಾಶಿವರಾತ್ರಿ ಪೂಜಾದಿಗಳು ಶಾಸ್ತ್ರೋಕ್ತವಾಗಿ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ಏಕವಾರ ರುದ್ರಾಭಿಷೇಕದೊಂದಿಗೆ ದೇವತಾ ಕಾರ್ಯಗಳು ಆರಂಭವಾಗುತ್ತವೆ. ಅಪರಾಹ್ನ 12 ಗಂಟೆಗೆ ಶ್ರೀ ಕೇದಾರೇಶ್ವರಸ್ವಾಮಿ ಸನ್ನಿಧಿಯಲ್ಲಿ ಮತ್ತೊಮ್ಮೆ ಏಕವಾರ ರುದ್ರಾಭಿಷೇಕವಿರುತ್ತದೆ. ಸಂಜೆ 4-30 ರಿಂದ ರಾತ್ರಿ 11 ಗಂಟೆಯವರೆಗೆ ಮೊದಲನೇ ಯಾಮದ ಪೂಜೆ, ರಾತ್ರಿ 11-30 ರಿಂದ 1-30 ರವರೆಗೆ ಎರಡನೇ ಯಾಮದ ಪೂಜೆ, ರಾತ್ರಿ 2 ಗಂಟೆಯಿಂದ 3-30 ರವರೆಗೆ ಮೂರನೇ ಯಾಮದ ಪೂಜೆ, ಮುಂಜಾನೆ 3-30 ರಿಂದ 5 ಗಂಟೆಯವರೆಗೆ ನಾಲ್ಕನೇ ಯಾಮದ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅಂದು ಸಂಜೆ 6 ಗಂಟೆಯಿಂದ ಸದ್ಗುರು ಭಜನಾ ಮಂಡಲಿ ತಂಡದಿಂದ ದೇವಾಲಯದಲ್ಲಿ ಭಜನಾ ಕಾರ್ಯಕ್ರಮ ನಡೆಯುವುದು ಎಂದು ಲಕ್ಷ್ಮೀನರಸಿಂಹ ಶಾಸ್ತ್ರಿ ತಿಳಿಸಿದ್ದಾರೆ.

ಮಾ.1, 6ರಂದು ಶ್ರೀ ರಾಘವೇಂದ್ರ ಸ್ವಾಮಿಯ ಪಟ್ಟಾಭಿಷೇಕ, ವರ್ಧಂತಿ

Raghavendra swamy

ತುಮಕೂರು: ಇಡೀ ಜಿಲ್ಲೆಯಲ್ಲಿ ಅತೀ ಪುರಾತನವಾದ ಸುಮಾರು 500 ವರ್ಷ ಇತಿಹಾಸವುಳ್ಳ ಶ್ರೀ ವಿಜಯೀಂದ್ರತೀರ್ಥ ಪ್ರತಿಷ್ಠಾಪಿತ ಮುಖ್ಯಪ್ರಾಣದೇವರು ಇರುವ ನಗರದ ಚಿಕ್ಕಪೇಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ (ದೊಡ್ಡರಾಯರ ಮಠ) ಮಾ.1 ರ ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಯ 404 ನೇ ವರ್ಷದ ಪಟ್ಟಾಭಿಷೇಕ ಹಾಗೂ ಮಾ.6ರ ಗುರುವಾರದಂದು 430 ನೇ ವರ್ಷದ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಮಹೋತ್ಸವದ ಅಂಗವಾಗಿ ರಾಘವೇಂದ್ರ ಸ್ವಾಮಿಗೆ ವಿಶೇಷ ಫಲ, ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಶ್ರೀ ರಾಘವೇಂದ್ರ ಸ್ತೋತ್ರ ಪಾರಾಯಣ, ರಥೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಸಹಸ್ರಾರು ಭಕ್ತರಿಗೆ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ.

ಮಾ. 1 ರಿಂದ 6 ರವರೆಗೆ ಪ್ರತಿದಿನ ಸಂಜೆ 6:30ಕ್ಕೆ ಮರುತಾಚಾರ್ಯರಿಂದ ಶ್ರೀ ರಾಘವೇಂದ್ರ ವಿಜಯದ ಬಗ್ಗೆ ಪ್ರವಚನ ಏರ್ಪಡಿಸಲಾಗಿದೆ. ಭಕ್ತರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೊಡ್ಡರಾಯರ ಮಠದ ಗುರುರಾಜ ಆಚಾರ್ಯ(ದೂ:9844081764) ತಿಳಿಸಿದ್ದಾರೆ.

ಶ್ರೀಹರಿ ಗುರುಗಳ ಸನ್ನಿಧಾನದಲ್ಲಿ 430ನೇ ವರ್ಧಂತಿ

ತುಮಕೂರು: ನಗರದ ಹನುಮಂತಪುರದಲ್ಲಿರುವ ಶ್ರೀಹರಿ ಗುರುಗಳ ಸನ್ನಿಧಾನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾ.1ರ ಶನಿವಾರ ಶ್ರೀ ರಾಘವೇಂದ್ರ ಸ್ವಾಮಿಯ 404 ನೇ ವರ್ಷದ ಪಟ್ಟಾಭಿಷೇಕ ಹಾಗೂ ಮಾ.6ರ ಗುರುವಾರದಂದು 430 ನೇ ವರ್ಷದ ವರ್ಧಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಮಹೋತ್ಸವದ ಅಂಗವಾಗಿ ರಾಘವೇಂದ್ರ ಸ್ವಾಮಿಗೆ ಪ್ರಾತಃ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಸ್ತ್ರ ಸಮರ್ಪಣೆ, ಅಲಂಕಾರ ಪೂಜೆ, ಗುರುಪಾದ ಪ್ರಕ್ಷಾಲನ ಮಹಾಪೂಜೆ, ರಥೋತ್ಸವ, ಅಷ್ಟಾವಧಾನ, ತೊಟ್ಟಿಲು ಸೇವಾ, ಮಂತ್ರಾಕ್ಷತೆ ಹಾಗೂ ತೀರ್ಥ ಪ್ರೋಕ್ಷಣೆ ಹಮ್ಮಿಕೊಳ್ಳಲಾಗಿದೆ.

ಮಹೋತ್ಸವದ ಪ್ರಯುಕ್ತ ಸಂಜೆ 6:30ಕ್ಕೆ ವ್ಯಾಸಮುನಿ ಆಚಾರ್ಯ ದಿದ್ದಿಗಿ ಅವರಿಂದ ರಾಘವೇಂದ್ರ ಸ್ವಾಮಿಗಳ ಕುರಿತಾದ ಧಾರ್ಮಿಕ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತರು ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಠದ ಮುಖ್ಯಸ್ಥರು (ದೂ:9844731154) ಮನವಿ ಮಾಡಿದ್ದಾರೆ.