Adarsh Shetty Column: ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿರುವ ವಿಕ್ಷಿಪ್ತರು
ಗಲಭೆಗಳ ಕಾರಣಕರ್ತರು ಯಾರೆಂಬುದು ಗೊತ್ತಿದ್ದರೂ ನಮ್ಮ ಕೆಲ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗಲಭೆಕೋರರನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ದೇಶದ ಸುರಕ್ಷತೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ವಿಚಾರ ಬಂದಾಗಲೆಲ್ಲಾ ಜನನಾಯಕರು ಹೀಗೆ ಗಲಭೆ ಕೋರರ ಪರ ವಹಿಸದೆ, ವಸ್ತುನಿಷ್ಠ ವಾಗಿ ನಡೆದುಕೊಳ್ಳಬೇಕು ಎಂಬುದು ಜನರ ಅಪೇಕ್ಷೆ ಮತ್ತು ನಿರೀಕ್ಷೆಯಾಗಿರುತ್ತದೆ.

ಅಂಕಣಕಾರ ಆದರ್ಶ್ ಶೆಟ್ಟಿ

ಅಭಿಮತ
ಆದರ್ಶ್ ಶೆಟ್ಟಿ, ಉಪ್ಪಿನಂಗಡಿ
ಗಲಭೆಗಳ ಕಾರಣಕರ್ತರು ಯಾರೆಂಬುದು ಗೊತ್ತಿದ್ದರೂ ನಮ್ಮ ಕೆಲ ರಾಜಕಾರಣಿ ಗಳು ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಗಲಭೆಕೋರರನ್ನು ಸಮರ್ಥಿಸಿಕೊಳ್ಳು ತ್ತಾರೆ. ಆದರೆ, ದೇಶದ ಸುರಕ್ಷತೆ ಮತ್ತು ಸಾಮಾಜಿಕ ಸ್ವಾಸ್ಥ್ಯದ ವಿಚಾರ ಬಂದಾಗ ಲೆಲ್ಲಾ ಜನನಾಯಕರು ಹೀಗೆ ಗಲಭೆಕೋರರ ಪರ ವಹಿಸದೆ, ವಸ್ತುನಿಷ್ಠವಾಗಿ ನಡೆದು ಕೊಳ್ಳಬೇಕು ಎಂಬುದು ಜನರ ಅಪೇಕ್ಷೆ ಮತ್ತು ನಿರೀಕ್ಷೆಯಾಗಿರುತ್ತದೆ. ನಮ್ಮ ದೇಶದಲ್ಲಿ ಈ ಹಿಂದೆ ಹಲವಾರು ಕೋಮುಗಲಭೆ, ದಳ್ಳುರಿ, ಹಿಂಸಾಚಾರಗಳು ಸಂಭವಿಸಿವೆ. ಇವುಗಳಿಂದಾಗಿ ಪ್ರಾಣಹಾನಿ, ಸ್ವತ್ತುನಷ್ಟ, ಸಾರ್ವಜನಿಕ ಆಸ್ತಿಗಳಿಗೆ ಹಾನಿ, ಗಲಭೆಕೋರರ ಮತ್ತು ಗಲಭೆಯಲ್ಲಿ ಭಾಗಿಯಾಗದ ಅಮಾಯಕರ ಕೋರ್ಟ್ ಅಲೆದಾಟ, ಕೇಸು, ಜೈಲುವಾಸ ಮುಂತಾದವೆಲ್ಲ ಆದದ್ದೂ ಇದೆ. ಇಂಥ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಹೆಡೆಮುರಿ ಕಟ್ಟಿ ಜೈಲಿಗಟ್ಟಿದರೆ ಮಿಕ್ಕ ಸಮಾಜಘಾತುಕ ಶಕ್ತಿಗಳಿಗೆ ಅದು ಪಾಠವಾಗಿ ಪರಿಣಮಿಸುತ್ತದೆ.
ಇದನ್ನೂ ಓದಿ: Adarsh Shetty Column: ನಾಗರಿಕ ಸೇವೆಗೆ ವಿಸ್ತಾರ ಗೊಳ್ಳಬೇಕಿದೆ ಸಕಾಲ ಯೋಜನೆ
ಆದರೆ, ಅಮಾಯಕರ ಬಂಧನವಾಗಿ, ಗೂಂಡಾ ಕಾಯ್ದೆಯನ್ವಯ ಅವರ ಮೇಲೆ ರೌಡಿ ಶೀಟ್ ತೆರೆದರೆ, ಅದರ ಹಿಂದೆ ರಾಜಕೀಯ ಪ್ರೇರಿತ ಷಡ್ಯಂತ್ರ ಅಥವಾ ವೈಯಕ್ತಿಕ ದ್ವೇಷದ ಕೈವಾಡದ ಸಾಧ್ಯತೆಯಿದೆ ಎನ್ನಬೇಕಾಗುತ್ತದೆ.
ಒಂದು ಕಾಲದಲ್ಲಿ, ತಿಳಿದೋ ತಿಳಿಯದೆಯೋ ಇಂಥ ಗಲಭೆಗಳಲ್ಲಿ ಭಾಗಿಯಾದವರು ಒಂದಷ್ಟು ಶಿಕ್ಷೆ ಅನುಭವಿಸಿ, ಹತ್ತಾರು ಮೊಕದ್ದಮೆಗಳನ್ನು ಜಡಿಸಿಕೊಂಡು, ತಮ್ಮ ಅರ್ಧ ಜೀವನವನ್ನು ಕೋರ್ಟು-ಕೇಸುಗಳಲ್ಲೇ ಸವೆಸಿದ ನಿದರ್ಶನಗಳಿವೆ. ಹಾಗೆ ಅಲೆದಾಡುತ್ತಿರು ವವರು ಈಗಲೂ ಸಾಕಷ್ಟು ಕಾಣಸಿಗುತ್ತಾರೆ. ಇಂಥ ಗಲಭೆ ಮತ್ತು ದಳ್ಳುರಿಗೆ, ಅವುಗಳಲ್ಲಿ ಭಾಗಿಯಾದವರು ತಮ್ಮ ತಲೆಯಲ್ಲಿ ತುಂಬಿಕೊಂಡ ಮತಾಂಧತೆ ಒಂದು ಕಾರಣವಾದರೆ, ಮತ್ತೊಬ್ಬರ ಕುಮ್ಮಕ್ಕು ಅಥವಾ ಬಾಹ್ಯ ಪ್ರಚೋದನೆಯು ಮತ್ತೊಂದು ಕಾರಣ ವಾಗಿರು ತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
ಹೀಗೆ ಪ್ರಚೋದನೆಗೆ ಒಳಗಾಗುವವರಲ್ಲಿ ಅನಕ್ಷರಸ್ಥರು, ಬೀದಿ ಬದಿಯಲ್ಲಿ, ಬಸ್ ನಿಲ್ದಾಣ ಗಳಲ್ಲಿ, ಮಾರುಕಟ್ಟೆಗಳಲ್ಲಿ ಅಬ್ಬೇಪಾರಿಗಳಂತೆ ತಿರುಗುವವರು, ಅಮಲು ಪದಾರ್ಥಗಳ ವ್ಯಸನಿಗಳಾಗಿರುವವರು, ಮೈಮುರಿದು ದುಡಿದು ತಿನ್ನದೆ ಕಳ್ಳತನ-ದರೋಡೆಯಂಥ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರು ಕೂಡ ಸೇರಿರುತ್ತಾರೆ. ಮತಾಂಧತೆಯ ಅಮಲನ್ನು ತಲೆಗೇರಿಸಿಕೊಂಡ ಇಂಥವರು ಮಾನವೀಯತೆಯನ್ನು ಮರೆತು ಮೃಗಗಳಂತೆ ವರ್ತಿಸು ವುದು, ಮಕ್ಕಳು-ಮುದುಕರು-ಮಹಿಳೆಯರೆನ್ನದೆ ಸಿಕ್ಕಸಿಕ್ಕವರ ಮೇಲೆ ಹಲ್ಲೆಗೈಯುವುದು, ವಾಹನಗಳಿಗೆ ಬೆಂಕಿ ಹಚ್ಚುವುದು, ಪೊಲೀಸ್ ಠಾಣೆಗಳಿಗೆ ಕಲ್ಲೆಸೆಯುವುದು ವಾಡಿಕೆ.
ಇಂಥ ಸಂದರ್ಭದಲ್ಲಿ ಪೊಲೀಸರು ಕೂಡ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಕೆಲ ವೊಮ್ಮೆ ಕೈಚೆಲ್ಲುವುದುಂಟು. ಕೆಲ ವರ್ಷಗಳ ಹಿಂದೆ ಸಮುದಾಯವೊಂದು ಮಂಗಳೂರಿ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋ ಜಿಸಿತ್ತು. ಈ ಸಂದರ್ಭದಲ್ಲಿ ಗಲಭೆ ನಡೆಸಲೆಂದೇ ನೆರೆಯ ಕೇರಳ ಸೇರಿದಂತೆ ವಿವಿಧ ಭಾಗಗಳಿಗೆ ಸೇರಿದ ನಿಷೇಧಿತ ಪಿಎಫ್ ಐ ಸಂಘಟನೆಯ ಕಾರ್ಯಕರ್ತರು ಜಮಾವಣೆ ಗೊಂಡಿದ್ದಾರೆಂಬ ವರ್ತಮಾನ ಪೊಲೀಸ್ ಇಲಾಖೆಗೆ ಲಭಿಸಿತ್ತು.
ಇದರ ಮುಂದುವರಿದ ಭಾಗವೆಂಬಂತೆ, ಪೊಲೀಸರು ಆ ಸಭೆಗೆ ತಡೆಯೊಡ್ಡುವ ಸಂದರ್ಭ ದಲ್ಲಿ ಉಂಟಾದ ಗಲಭೆಯಲ್ಲಿ ಕೆಲವರ ಪುಂಡಾಟದಿಂದಾಗಿ ಅದೆಷ್ಟೋ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಯಿತು. ಪೊಲೀಸರು ಕೊಂಚವೇ ಮೈಮರೆತಿದ್ದರೂ ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು.
ಇನ್ನು, ಸಾಮಾಜಿಕ ಜಾಲತಾಣವೊಂದರಲ್ಲಿ ಕಂಡುಬಂದ ಆಕ್ಷೇಪಾರ್ಹ ಬರಹದ ನೆಪ ವೊಡ್ಡಿ ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯ ವಿಷಯಕ್ಕೆ ಬರೋಣ. ಈ ವೇಳೆ, ಕಂಡ ಕಂಡ ಮನೆ-ವಾಹನಗಳಿಗೆ ಕಲ್ಲು ತೂರಿ, ಬೆಂಕಿ ಹಚ್ಚುವವರೆಗೆ ಮುಂದುವರಿದ ಪುಂಡರ ಅಟ್ಟಹಾಸವು, ತರುವಾಯದಲ್ಲಿ ಪೊಲೀಸರ ವಿರುದ್ಧವೇ ಬಲ ಪ್ರದರ್ಶನಕ್ಕೆ ಮುಂದಾಗಿತ್ತು.
ಸಾಲದೆಂಬಂತೆ, ಶಾಸಕರೊಬ್ಬರ ಮನೆಯೂ ಈ ಗಲಭೆಯಲ್ಲಿ ಬೆಂಕಿಗೆ ಆಹುತಿಯಾಯಿತು. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ಮತ್ತು ಇತ್ತೀಚೆಗೆ ಉದಯಗಿರಿಯಲ್ಲಿ ನಡೆದ ಗಲಭೆಗಳು ಕೂಡ ಇಂಥದೇ ವೈಪರೀತ್ಯವನ್ನು ಹೊಂದಿದ್ದವು. ಇಂಥ ಗಲಭೆಗಳ ಸಂದರ್ಭ ದಲ್ಲಿ ಕಾರಣಕರ್ತರು ಯಾರೆಂಬುದು ಗೊತ್ತಿದ್ದರೂ ಮತ್ತು ಆ ಗಲಭೆಗಳಿಂದಾದ ಸ್ವತ್ತು ನಷ್ಟವು ಪರಮಾವಧಿ ಮಟ್ಟಕ್ಕೇರಿದ್ದರೂ ನಮ್ಮ ಕೆಲ ರಾಜಕಾರಣಿಗಳು ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಗಲಭೆಕೋರರನ್ನು ಸಮರ್ಥಿಸಿಕೊಳ್ಳುವುದನ್ನು ಕಾಣಬಹುದು.
ಆದರೆ, ದೇಶದ ಸುರಕ್ಷತೆಯ ವಿಷಯ ಮತ್ತು ಸಾಮಾಜಿಕ ಸ್ವಾಸ್ಥ್ಯದ ವಿಚಾರಗಳು ಬಂದಾ ಗಲೆಲ್ಲಾ ಜನನಾಯಕರೆನಿಸಿಕೊಂಡವರು ಹೀಗೆ ಗಲಭೆಕೋರರ ಪರ ವಹಿಸದೆ, ವಸ್ತು ನಿಷ್ಠವಾಗಿ ನಡೆದುಕೊಳ್ಳಬೇಕು ಎಂಬುದು ಜನರ ಅಪೇಕ್ಷೆ ಮತ್ತು ನಿರೀಕ್ಷೆಯಾಗಿರುತ್ತದೆ. ಜನನಾಯಕರು ಆಳುವ ಪಕ್ಷಕ್ಕೆ ಸೇರಿದವರಿರಲಿ ಅಥವಾ ಪ್ರತಿಪಕ್ಷದವರೇ ಆಗಿರಲಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಹಿತರಕ್ಷಣೆಯ ಹೊಣೆ ಹೊತ್ತವರೇ ಆಗಿರುತ್ತಾರೆ. ಇದನ್ನು ಅವರು ಮರೆಯಬಾರದು.
ಸಮಾಜದಲ್ಲಿ ಅನಾಗರಿಕವಾಗಿ ನಡೆದುಕೊಳ್ಳುವ ಅಥವಾ ಭೀತಿಯ ವಾತಾವರಣ ಸೃಷ್ಟಿಸುವ ಗಲಭೆಕೋರರನ್ನು ಹಾಗೆ ಸಮರ್ಥಿಸಿಕೊಂಡರೆ, ಪುಂಡು-ಪೋಕರಿಗಳಿಗೆ ಪರೋಕ್ಷವಾಗಿ ನೈತಿಕ ಬೆಂಬಲ ನೀಡಿದಂತಾಗುವುದಿಲ್ಲವೇ? ಆದ್ದರಿಂದ, ರಾಜಕಾರಣದಲ್ಲಿ ಸ್ಥಾನಮಾನದ ಅಪೇಕ್ಷೆಯುಳ್ಳ ಅಥವಾ ನಿರ್ದಿಷ್ಟ ಸಮುದಾಯದ ಮತಗಳಿಕೆಯ ಗುಪ್ತ ಕಾರ್ಯಸೂಚಿಯನ್ನುಳ್ಳ ಜನನಾಯಕರು ಗಲಭೆಕೋರರನ್ನು ಬೆಂಬಲಿಸುವುದನ್ನು ಕೈಬಿಟ್ಟು, ನಮ್ಮ ಸಮಾಜದ ಮತ್ತು ದೇಶದ ಭವಿಷ್ಯದ ರಕ್ಷಣೆಗೆ ಕಟಿಬದ್ಧರಾಗಬೇಕಾದ ಅಗತ್ಯವಿದೆ.
ಗಲಭೆಗಳಲ್ಲಿ ಭಾಗಿಯಾಗಿ ಶಿಕ್ಷೆಗೊಳಗಾದ ಪುಂಡರು ಜನನಾಯಕರ ಬೆಂಬಲ ಅಥವಾ ಒತ್ತಡದಿಂದಾಗಿ ಕೆಲವೇ ತಿಂಗಳಲ್ಲಿ ಜಾಮೀನು ಪಡೆದು ಹೊರಬರುವಂತಾದಲ್ಲಿ, ಅಂಥ ಮತ್ತಷ್ಟು ಕೃತ್ಯಗಳಲ್ಲಿ ಮತ್ತೆ ಪಾಲ್ಗೊಳ್ಳಲು ಅವರು ಹಿಂದು-ಮುಂದು ನೋಡುವುದಿಲ್ಲ. ಆದ್ದರಿಂದ, ಗಲಭೆ, ಸಾರ್ವಜನಿಕ ಸ್ವತ್ತಿಗೆ ಹಾನಿ ಮತ್ತು ಸಮಾಜದಲ್ಲಿ ಕ್ಷೋಭೆಯ ಸೃಷ್ಟಿಗೆ ಮುಂದಾಗುವ ಪುಂಡರ ಮೇಲೆ ಗೂಂಡಾ ಕಾಯ್ದೆ ಪ್ರಯೋಗ, ರೌಡಿ ಶೀಟ್ ತೆರೆಯುವಿಕೆ, ಗಡಿಪಾರು ಮಾಡುವಿಕೆ ಮುಂತಾದ ನಿಷ್ಠುರ ಕ್ರಮಗಳನ್ನು ತೆಗೆದುಕೊಳ್ಳುವಂತಾಗಬೇಕು.
ಜಾಮೀನು ಸಿಗದಂಥ ಮೊಕದ್ದಮೆಗಳು ಅವರ ಮೇಲೆ ದಾಖಲಾಗಬೇಕು. ಒಂದು ಬಾರಿ ಇಂಥ ಗಲಭೆ/ಪುಂಡಾಟಿಕೆಯ ಪ್ರಕರಣಗಳಲ್ಲಿ ಆರೋಪಿಗಳು ತೊಡಗಿದ ನಂತರ, ಅಂಥ ವರ ಮೇಲೆ ಪೊಲೀಸರು ಕಣ್ಗಾವಲು ಇಡುವಂತಾಗಬೇಕು, ಆರೋಪಿಗಳು ನಿಯತ ಕಾಲದಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕುವಂತಾಗಬೇಕು.
ಮಿಕ್ಕಂತೆ, ಮಾನವೀಯತೆ ಮರೆತು ಮೃಗೀಯ ವರ್ತನೆ ತೋರುವ ಪುಂಡ-ಪೋಕರಿಗಳಿಗೆ ಬುದ್ಧಿಮಾತು ಹೇಳಿ ಸರಿದಾರಿಗೆ ತರುವ ಕೆಲಸವನ್ನು ಆಯಾ ಸಮುದಾಯದ ಪ್ರಮುಖರೂ ಮಾಡಬೇಕಿದೆ. ಹಿಂಸಾಕೃತ್ಯಗಳಿಗೆ ಪ್ರಚೋದಿಸದೆ, ಪುಂಡರ ಕೃತ್ಯಗಳನ್ನು ಸಮರ್ಥಿಸದೆ, ಹೊಣೆಯರಿತು ಕೆಲಸ ಮಾಡುವುದಕ್ಕೆ ಕೆಲ ರಾಜಕಾರಣಿಗಳೂ ಮುಂದಾಗಬೇಕಿದೆ.
ಅಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಬರುವ ಒಂದಷ್ಟು ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳು, ನಮ್ಮ ಸಾಮಾಜಿಕ ಸೌಹಾರ್ದ ಮತ್ತು ನೆಮ್ಮದಿಯನ್ನು ಹಾಳುಗೆಡಹುತ್ತವೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ದೈವ/ದೇವರು ಮತ್ತು ಧರ್ಮದ ನಿಂದನೆ ಎಲ್ಲವೂ ಈ ಮಾಧ್ಯಮಗಳ ಮೂಲಕ ನಡೆಯುತ್ತಿದೆ. ನಕಲಿ ಜಾಲತಾಣಗಳ ಸೃಷ್ಟಿಯ ಮೂಲಕ ವ್ಯಕ್ತಿಯನ್ನು, ಸಮುದಾಯವನ್ನು, ಸಮಾಜವನ್ನು ನಿಂದಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಲೇ ಇವೆ.
ಹೀಗೆ ಕುಮ್ಮಕ್ಕು ನೀಡುವ ಸಾಮಾಜಿಕ ಮಾಧ್ಯಮಗಳಿಗೂ, ಅವುಗಳಿಂದ ಪ್ರಚೋದನೆ ಗೊಂಡು ಕಾನೂನನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುವವರಿಗೂ ಪೊಲೀಸರು ಲಗಾಮು ಹಾಕಬೇಕಿದೆ, ಅವರ ಮೇಲೆ ಹದ್ದಿನ ಕಣ್ಣು ಇಡುವ ಅಗತ್ಯವಿದೆ.
ಮಾತ್ರವಲ್ಲ, ಗಲಭೆಗಳು ಮತ್ತು ಗುಂಪು ಘರ್ಷಣೆಗಳ ಸಂದರ್ಭದಲ್ಲಿ ಸಮಾಜದ ಶಾಂತಿ ಭಂಗಕ್ಕೆ ಕಾರಣರಾಗುವ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟುಮಾಡುವ, ಭೀತಿಯ ವಾತಾವರಣವನ್ನು ಸೃಷ್ಟಿಸುವ ಪುಂಡರುಗಳಿಂದಲೇ ಎಲ್ಲ ನಷ್ಟವನ್ನೂ ವಸೂಲು ಮಾಡುವಂತಾಗಬೇಕು. ಜತೆಗೆ ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಾಗಬೇಕು. ಆಗ ಮಾತ್ರವೇ ಇಂಥ ಸಮಾಜಘಾತುಕ ಶಕ್ತಿಗಳಿಗೆ ಎಚ್ಚರಿಕೆ ಯ ಸಂದೇಶ ರವಾನೆಯಾದಂತಾಗುತ್ತದೆ.
ಸಮಾಜದಲ್ಲಿ ಶಾಂತಿ-ನೆಮ್ಮದಿಯ ವಾತಾವರಣವು ರೂಪುಗೊಳ್ಳಬೇಕೆಂದರೆ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರಗಳಿಗೆ ಇತಿಶ್ರೀ ಹಾಡಬೇಕೆಂದರೆ, ಪೊಲೀಸ್ ಇಲಾಖೆ ಇಂಥ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕಾದ ಅನಿವಾರ್ಯತೆಯಿದೆ ಹಾಗೂ ರಾಜಕೀ ಯ ಪಕ್ಷಗಳ ನಾಯಕರು ‘ಪಕ್ಷಾತೀತವಾಗಿ’ ಆಲೋಚಿಸಬೇಕಾದ ಅಗತ್ಯವಿದೆ.
(ಲೇಖಕರು ಹವ್ಯಾಸಿ ಬರಹಗಾರರು)