Krishna Hegde Column: ಮಾನವನನ್ನು ಮಾಧವನನ್ನಾಗಿಸುವ ಮಹಾಕುಂಭಮೇಳ
ಗಂಗಾ, ಯಮುನಾ ಮಾತೆಯರ ಆಶೀರ್ವಾದದಿಂದ ಆತ, ಪ್ರಯಾಗ್‌ರಾಜ್ ರಸ್ತೆಯಲ್ಲಿ ತಾತ್ಕಾಲಿ ಕವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯ ಹತ್ತಿರ ನಮ್ಮನ್ನು ಬಿಟ್ಟು ಹಣ ಪಡೆದು ಹೊರಟ. ನಮಗೆ ಬೆಳಗ್ಗೆಯಿಂದಲೂ ತಿಂಡಿಯಿಲ್ಲ, ಊಟವಿಲ್ಲ; ಆದರೂ ಅದೇ ನೋ ಹುಮ್ಮ ಸ್ಸು, ಉತ್ಸಾಹ. ಹೀಗಾಗಿ, ಮತ್ತೆ ಅಲ್ಲಿಯ ಪೊಲೀಸರು ಮತ್ತು ಮಾರ್ಗದರ್ಶ ಕರ ನೆರವು ಪಡೆದು ಸಂಗಮದತ್ತ ನಡೆಯಲು ಪ್ರಾರಂಭಿಸಿ, ಅಂತೂ ಗಮ್ಯದ ಹತ್ತಿರದ ಪ್ರದೇಶವನ್ನು ತಲುಪಿದೆವು

ಮಹಾಕುಂಭ ಮೇಳ

ತೀರ್ಥಯಾತ್ರೆ
ಕೃಷ್ಣ ಹೆಗಡೆ
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಲ್ಲಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದ ಬಗ್ಗೆ ಪ್ರಾರಂಭದಲ್ಲಿ ಅಷ್ಟೊಂದು ಕುತೂಹಲವಿರಲಿಲ್ಲ. ಮೈಸೂರಿನ ಇಸ್ಕಾನ್ ಸಂಸ್ಥೆಯವರು ಹೇಳಿದಾಗಲೂ ನಾನು ಅಷ್ಟು ಆಸಕ್ತಿ ತೋರಲಿಲ್ಲ. ಆದರೆ ಇದಾದ 10 ದಿನಕ್ಕೆ ನನ್ನ ಸ್ನೇಹಿತರೊಬ್ಬರು ಕರೆಮಾಡಿ, “ನಾವು ಕುಂಭಮೇಳಕ್ಕೆ ಹೋಗುತ್ತೇವೆ, ನೀನೂ ಬರುತ್ತೀಯಾ ಹೇಗೆ?" ಅಂತ ಕೇಳಿದರು. ಅದೇನೋ ಗೊತ್ತಿಲ್ಲ, ‘ಹೂಂ’ ಅಂದೆ ಅಷ್ಟೇ...ಸರಿ, ನಾವು ಬೆಂಗಳೂರಿನಿಂದ ಪಟನಾಕ್ಕೆ ವಿಮಾನದಲ್ಲಿ ಹೋಗಿ, ಅಲ್ಲಿಂದ ವಾರಾಣಸಿಗೆ (ಕಾಶಿ) ಕ್ಯಾಬ್ ಮೂಲಕ ತೆರಳಿ, ಅಲ್ಲಿನ ಗಂಗಾನದಿಯಲ್ಲಿ ಮಾಘಸ್ನಾನ ಮಾಡಿ, ವಿಶ್ವನಾಥನನ್ನು ದರ್ಶಿಸಿ, ಗಂಗಾ ತಟಾಕದಲ್ಲಿ ದೋಣಿಯ ಮೂಲಕ ಎಲ್ಲಾ ಘಾಟ್‌ಗಳನ್ನು ವೀಕ್ಷಿಸಿದೆವು.
ಮಾರನೆಯ ದಿನ ಬೆಳಗ್ಗೆ, ಅಂದರೆ ಫೆ.6ರಂದು, ನಾನು, ನನ್ನ ಸ್ನೇಹಿತ ನಾಗೇಶ, ಮುರಳಿ, ಸುರೇಶ, ಸಂತೋಷರ ಕುಟುಂಬದವರು ಸೇರಿ ಒಟ್ಟು 15 ಜನ ಕ್ಯಾಬ್ ಮಾಡಿಕೊಂಡು ಪ್ರಯಾಗ್‌ರಾಜ್ ಕಡೆಗೆ ಹೊರಟು ಮಧ್ಯಾಹ್ನದ ವೇಳೆಗೆ ಅಲ್ಲಿಗೆ ತಲುಪಿದೆವು. ಪ್ರಾರಂಭ ದಲ್ಲಿ ಅಲ್ಲಿ ಅಷ್ಟು ಟ್ರಾಫಿಕ್ ಇರಲಿಲ್ಲ, ಬರುಬರುತ್ತ ಜಾಸ್ತಿಯಾಯಿತು. ಹೀಗಾಗಿ 15 ಕಿ.ಮೀ. ದೂರದಲ್ಲಿ ಕ್ಯಾಬ್ ಪಾರ್ಕ್ ಮಾಡಿ ನಡೆಯಲು ಶುರುಮಾಡಿದೆವು.
ಇದನ್ನೂ ಓದಿ: Yagati Raghu Naadig Column: ಆಸೆಯೇ ದುಃಖಕ್ಕೆ ಮೂಲ..!!
ನಾನು ಮತ್ತು ನನ್ನ ಸ್ನೇಹಿತ ಸ್ವಲ್ಪ ದೂರ ನಡೆದು ಒಬ್ಬ ಮೋಟಾರ್ ಬೈಕ್‌ನವನನ್ನು ಪರಿಚಯ ಮಾಡಿಕೊಂಡು, ಅವನೊಂದಿಗೆ ಕುಳಿತು ಪ್ರಯಾಣ ಮುಂದುವರಿಸಿದೆವು. ಆತ ನಮಗೆ ಗೊತ್ತಿಲ್ಲದ ಯಾವುದೋ ರಸ್ತೆಯಲ್ಲಿ (ಅಂದರೆ ಗದ್ದೆಯಲ್ಲಿ) ಬೈಕ್ ಓಡಿಸಿಕೊಂಡು ಹೋಗತೊಡಗಿದ. ತುಂಬಾ ಕಷ್ಟದ ಪ್ರಯಾಣ ಅದಾಗಿತ್ತು, ಸ್ವಲ್ಪ ವ್ಯತ್ಯಾಸವಾದರೂ ನಾವು ಆಸ್ಪತ್ರೆಯಲ್ಲಿರಬೇಕಿತ್ತು.
ಗಂಗಾ, ಯಮುನಾ ಮಾತೆಯರ ಆಶೀರ್ವಾದದಿಂದ ಆತ, ಪ್ರಯಾಗ್‌ರಾಜ್ ರಸ್ತೆಯಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯ ಹತ್ತಿರ ನಮ್ಮನ್ನು ಬಿಟ್ಟು ಹಣ ಪಡೆದು ಹೊರಟ. ನಮಗೆ ಬೆಳಗ್ಗೆಯಿಂದಲೂ ತಿಂಡಿಯಿಲ್ಲ, ಊಟವಿಲ್ಲ; ಆದರೂ ಅದೇ ನೋ ಹುಮ್ಮಸ್ಸು, ಉತ್ಸಾಹ. ಹೀಗಾಗಿ, ಮತ್ತೆ ಅಲ್ಲಿಯ ಪೊಲೀಸರು ಮತ್ತು ಮಾರ್ಗದರ್ಶ ಕರ ನೆರವು ಪಡೆದು ಸಂಗಮದತ್ತ ನಡೆಯಲು ಪ್ರಾರಂಭಿಸಿ, ಅಂತೂ ಗಮ್ಯದ ಹತ್ತಿರದ ಪ್ರದೇಶವನ್ನು ತಲುಪಿದೆವು. ಹೀಗೆ ನಾವು ಸಾಗುತ್ತಿದ್ದ ದಾರಿಯ ಎರಡೂ ಬದಿಯಲ್ಲಿ ಅಖಾ ಡಗಳು, ಮಧ್ಯೆ ಕೋಟಿ ಸಂಖ್ಯೆಯಲ್ಲಿರುವ ಭಕ್ತಾದಿಗಳು, ಅವರ ನಡುವೆ ನಮ್ಮ ನಡಿಗೆ. ಅದೊಂದು ಅವಿಸ್ಮರಣೀಯ ಅನುಭವ. ಜನದಟ್ಟಣೆಯ ನಿರ್ವಹಣೆಗಾಗಿ ಉತ್ತರ ಪ್ರದೇಶ ಸರಕಾರವು ಮಹಾಕುಂಭಮೇಳದ ಸುತ್ತಲಿನ ಪ್ರದೇಶವನ್ನು ‘ವಾಹನ ಸಂಚಾರ ರಹಿತ ವಲಯ’ ಎಂದು ಘೋಷಿಸಿದೆ.
ಅಂತೂ ನಾವು ನಿರೀಕ್ಷಿಸುತ್ತಿದ್ದ ಗಂಗಾ-ಯಮುನಾ-ಸರಸ್ವತಿ ನದಿಗಳ ಸಂಗಮ ಸ್ಥಾನ ವನ್ನು ತಲುಪಿ, ಶುದ್ಧ ಸಂಕಲ್ಪದೊಂದಿಗೆ ಪವಿತ್ರ ಸ್ನಾನವನ್ನು ಮಾಡಿದೆವು. ಭಾರತವು ಹೊಂದಿರುವ ಶ್ರೇಷ್ಠ ಸಂಪ್ರದಾಯದ ಪ್ರತೀಕವಾಗಿ ಈ ಕುಂಭಮೇಳವನ್ನು ನೋಡುತ್ತೇವೆ. ಇದು ದೇವರೊಂದಿಗಿನ ಸಹಭಾಗಿತ್ವವಾಗಿದ್ದು, ಜನಸಾಮಾನ್ಯರು ಸ್ವಯಂಪ್ರೇರಣೆಯಿಂದ ಇಲ್ಲಿಗೆ ಬರುತ್ತಿದ್ದಾರೆ.
ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಈ ನೆಲದಲ್ಲಿ ನಾಡಿನ ಸಾಧು-ಸಂತರು, ನಾಗಾ ಸಾಧುಗಳು, ಅಘೋರಿಗಳು ಮುಖಾಮುಖಿಯಾಗುತ್ತಾರೆ, ಪವಿತ್ರಸ್ನಾನ ಮಾಡುತ್ತಾರೆ. ಈ ನಡುವೆ, ಅಗ್ನಿದುರಂತ, ಕಾಲ್ತುಳಿತದ ಪ್ರಕರಣಗಳು ನಮ್ಮನ್ನು ಒಂದಿಷ್ಟು ವಿಚಲಿತರನ್ನಾ ಗಿಸಿದ್ದು ನಿಜ.
ಆದರೆ, ಒಮ್ಮೆ ಅಲ್ಲಿ ಸ್ನಾನ ಮಾಡಿದ ಮೇಲೆ ಆದ ಹಿತಾನುಭವವೇ ಬೇರೆಯದ್ದಾಗಿತ್ತು. ನಾವು ಬೇರೆಲ್ಲೂ ಸ್ನಾನ ಮಾಡಿದಾಗ ಸಿಗುವ ಖುಷಿಗಿಂತ ಇದು ವಿಭಿನ್ನವಾಗಿತ್ತು. 10 ಸಾವಿರ ಎಕರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಾಣವಾಗಿರುವ ಟೆಂಟ್‌ಗಳು, ನೀರು, ಊಟ, ತಿಂಡಿ, ಸ್ನಾನ, ಶೌಚಾಲಯ ವ್ಯವಸ್ಥೆಗಳು, ಸುಮಾರು 25 ಸೆಕ್ಟರ್‌ನಲ್ಲಿ ಹರಡಿದ್ದ ಸಾಧುಗಳ ಅಖಾಡಗಳು, ನದಿಪಾತ್ರದಲ್ಲಿ ಕಬ್ಬಿಣದ ಹಲಗೆ ಹಾಸಿ ನಿರ್ಮಿಸಿದ ರಸ್ತೆಗಳು, ಸೇತುವೆಗಳು, ಝಗಮಗಿಸುವ ಲಕ್ಷಾಂತರ ವಿದ್ಯುತ್ ದೀಪಗಳು ಇತ್ಯಾದಿಗಳನ್ನು ನೋಡಿ ಅಚ್ಚರಿಯಾಯಿತು.
‘ಅಬ್ಬಾ ಇದರ ವಿಶ್ವರೂಪವೇ!’ ಎಂದು ದಂಗಾದೆವು. ಕೆಲವು ಬಾಬಾಗಳ, ಸಾಧುಗಳ ದರ್ಶನವಾಯಿತು. ನಂತರ, ಪ್ರಯಾಗ್‌ರಾಜ್‌ನಿಂದ ಅಯೋಧ್ಯೆಗೆ ತೆರಳಿ ಪ್ರಭು ಶ್ರೀರಾಮ ಚಂದ್ರನ ದರ್ಶನ ಮಾಡಿ ಪುನೀತರಾಗಿ ಊರಿಗೆ ಮರಳಿದೆವು. ಅಂತೂ ಈ ತೀರ್ಥಯಾತ್ರೆ ಯು ನನ್ನ ಜೀವನದಲ್ಲಿ ಅವಿಸ್ಮರಣೀಯ ಅನುಭವವನ್ನು ನೀಡಿದ್ದಂತೂ ಸತ್ಯ. ಪ್ರಯಾಗ್ ರಾಜ್‌ನಲ್ಲಿ ಈ ಸ್ಮರಣೀಯ ಮಹಾಕುಂಭಮೇಳ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರಿಗೆ ಹಾಗೂ ಅಲ್ಲಿನ ಪೊಲೀಸ್ ಸಿಬ್ಬಂದಿವರ್ಗಕ್ಕೆ ಹೃದಯಪೂರ್ವಕ ಕೃತಜ್ಞತೆ ಗಳನ್ನು ಸಲ್ಲಿಸಲೇಬೇಕು. ಈ ಐತಿಹಾಸಿಕ ಸಂದರ್ಭದ ಭಾಗವಾಗಿದ್ದು ನನ್ನ ಅದೃಷ್ಟವೂ ಹೌದು, ಹೆಮ್ಮೆಯ ಸಂಗತಿಯೂ ಹೌದು. ಈ ಮಹಾಕುಂಭ ಮೇಳವು ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಜಗತ್ತಿಗೆ ಪ್ರದರ್ಶಿಸಿರುವುದು ಮಾತ್ರವಲ್ಲದೆ, ಅದರ ಐತಿಹಾಸಿಕ ಮಹತ್ವವನ್ನೂ ಗಟ್ಟಿಗೊಳಿಸಿದೆ.
ಮಹಾಕುಂಭದಂಥ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮೇಳವನ್ನು ಸಂಘಟಿಸಿರುವ ಪರಿ ಅಸಾಧಾರಣವಾಗಿದ್ದು, ಇಲ್ಲಿಗೆ ಹೋಗಿಬರಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.
(ಲೇಖಕರು ಬಿಇಎಂಎಲ್ ನಿವೃತ್ತ ಉದ್ಯೋಗಿ)