Friday, 29th November 2024

Dasara: ದಸರಾ ಉತ್ಸವ ಜನರ ಉತ್ಸವವಾಗಲಿ

ತುಮಕೂರು: ದಸರಾ ಉತ್ಸವ ಜನರ ಉತ್ಸವ ಆಗಬೇಕೇ ಹೊರತು ಅಧಿಕಾರಿಗಳ ಉತ್ಸವ ಆಗಬಾರದು, ದುರಾ ದೃಷ್ಟವಶಾತ್ ನಗರದಲ್ಲಿ ಜಿಲ್ಲಾಡಳಿತದಿಂದ ನಡೆದಿರುವ ದಸರಾ ಉತ್ಸವ ಅಧಿಕಾರಿಗಳ ಉತ್ಸವ ಆಗಿದೆ ಎಂದು ನೋವಿನಿಂದ ಹೇಳಬೇಕಾಗಿದೆ. ಸರ್ಕಾರದ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯನಾದ ನನಗೆ ವೈಯಕ್ತಿಕ ವಾಗಿಯಾಗಲಿ, ಟೆಲಿಫೋನ್ ಕರೆ ಮೂಲಕವಾಗಲಿ ಆಹ್ವಾನ ನೀಡಿಲ್ಲ, ಇದು ಒಳ್ಳೆಯ ಬೆಳವಣ ಗೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ ವಿಷಾದಿಸಿದರು.

ನಗರದ ಕೆ.ಆರ್.ಬಡಾವಣೆಯ ಶ್ರೀ ರಾಮ ಮಂದಿರದಲ್ಲಿ ತುಮಕೂರು ದಸರಾ ಸಮಿತಿ ಹಮ್ಮಿಕೊಂಡಿರುವ ನವರಾತ್ರಿ ಉತ್ಸವದಲ್ಲಿ ಗುರುವಾರ ಸಂಜೆಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ದಸರಾ ಉತ್ಸವದಲ್ಲಿ ಅಧಿಕಾರಿಗಳಿಗೆ ನೋಟೀಸ್ ನೀಡಿ ಬಲವಂತವಾಗಿ ಭಾಗವಹಿಸುವಂತೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಅಧಿಕಾರಿಗಳು ದಿಕ್ಕು ತಪ್ಪಿಸಿದ್ದಾರೆ ಎಂದರು.

ದಸರಾ ಉತ್ಸವ ಎಲ್ಲರೂ ಒಳಗೊಳ್ಳುವ ಈ ನಾಡಿನ ವಿಶಿಷ್ಟ ಆಚರಣೆ. ಮೈಸೂರು ರಾಜಮನೆತನದವರು ಆರಂಭಿಸಿದ ದಸರಾ ಉತ್ಸವ ಇಂದು ವಿಶ್ವ ವಿಖ್ಯಾತಿಯಾಗಿದೆ. ಮೈಸೂರು ಮಹಾರಾಜರು ಈ ನಾಡಿಗೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಹಳೆ ಮೈಸೂರು ಭಾಗದ ಜನರು ಅವರ ಋಣದಲ್ಲಿದ್ದೇವೆ, ನಾವು ಋಣ ತೀರಿಸುವ ಕೆಲಸ ಮಾಡಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಸಂಗೀತ ಬೆಳಗಲು ದಸರಾ ವೇದಿಕೆ ಅವಕಾಶ ನೀಡಬೇಕು ಎಂದು ಚಿದಾನಂದ ಗೌಡ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಾಡಿನ ಸಂಸ್ಕೃತಿ, ಪರಂಪರೆಯ ಆಚರಣೆಯ ಪ್ರತೀಕವಾಗಿ ದಸರಾ ಆಚರಣೆ ಆಗುತ್ತಿದೆ. ತುಮಕೂರು ದಸರಾ ಸಮಿತಿ ಕಳೆದ 33 ವರ್ಷಗಳಿಂದ ಸಂಪ್ರದಾಯಬದ್ಧವಾಗಿ ನಾಡ ಹಬ್ಬ ಆಚರಿಸುತ್ತಿದೆ. ನಗರದ ಹಲವಾರು ಹಿರಿಯರು ಈ ಕಾರ್ಯಕ್ಕೆ ನಾಂದಿ ಹಾಡಿ ಮುಂದುವರೆಯಲು ನೆರವಾಗಿದ್ದಾರೆ ಎಂದು ಹೇಳಿದರು.

ಸೂಫಿಯ ಕಾನೂನು ಕಾಲೇಜು ಪ್ರಾಚಾರ್ಯ ಡಾ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಮಹೇಶ್, ಖಜಾಂಚಿ ಜಿ.ಎಸ್.ಬಸವರಾಜು, ಕಾರ್ಯದರ್ಶಿಗಳಾದ ಹನುಮಂತರಾಜು, ಕೆ.ಶಂಕರ್, ಸಂಯೋಜಕ ಕೆ.ಎನ್.ಗೋವಿಂದರಾವ್, ಸಹಕಾರ್ಯದರ್ಶಿ ಕೆ.ಪರಶುರಾಮಯ್ಯ, ಮುಖಂಡರಾದ ಓಬಯ್ಯ, ನಾಗರಾಜು, ಸಿದ್ದರಾಜುಗೌಡ, ಸಾಗರ್ ಮೊದಲಾದವರು ಭಾಗವಹಿಸಿದ್ದರು. ದಸರಾ ಉತ್ಸವಕ್ಕೆ ಉಚಿತವಾಗಿ ವಿದ್ಯುತ್ ದೀಪಾಲಂಕಾರಕ್ಕೆ ಸಹಕರಿಸಿದ ವಿವಿಧ ವಿದ್ಯುತ್ ಗುತ್ತಿಗೆದಾದರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.

ಇದಕ್ಕೂ ಮೊದಲು ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ನಡೆಯಿತು. ನಾಡಿನ, ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮಹಿಳೆಯರು, ಪುರುಷರು, ಮಕ್ಕಳು ಸಂಭ್ರಮದಿAದ ಪ್ರದರ್ಶಿಸಿದರು. ಹಿಂದಿನ ದಿನ ನಡೆದ ರಂಗಗೀತೆಗಳ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹೆಚ್.ಡಿ.ರಂಗಸ್ವಾಮಯ್ಯ ಪ್ರಥಮ, ವಿದ್ಯಾಶ್ರೀ ದ್ವಿತೀಯ, ಶ್ರೀರಕ್ಷಾ ತೃತೀಯ ಬಹುಮಾನ ಹಾಗೂ ಪಾರಿತೋಷಕ ಸ್ವೀಕರಿಸಿದರು. ನಂತರ ಸಾಯಿರಾಮನ್ ನೃತ್ಯ ಕಲಾ ಶಾಲೆ ವಿದ್ಯಾರ್ಥಿಗಳು ನೃತ್ಯ ವೈಭವ ಪ್ರದರ್ಶಿಸಿ ರಂಜಿಸಿದರು.

ಇ0ದು ಜಾನಪದ ವೈಭವ
ದಸರಾ ಸಮಿತಿಯ ನವರಾತ್ರಿ ಉತ್ಸವದಲ್ಲಿ ಶುಕ್ರವಾರ ಸಂಜೆ ಹೆಸರಾಂತ ತಂಡಗಳಿಂದ ಜಾನಪದ ವೈಭವ ಕಾರ್ಯಕ್ರಮ ಏರ್ಪಾಟಾಗಿದೆ.