ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಡಾ.ರಾಜಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅಭಿನಯದ ʼನಿಂಬಿಯಾ ಬನಾದ ಮ್ಯಾಗʼ ಚಿತ್ರದ ಟ್ರೇಲರ್ ಬಿಡುಗಡೆ

Nimbia Banada Myaga Movie: ಮೇರು ನಟ ಡಾ.ರಾಜಕುಮಾರ್ ಅವರ ಮೊಮ್ಮಗ (ಮಗಳ ಮಗ) ಷಣ್ಮುಖ ಗೋವಿಂದರಾಜ್ ನಾಯಕನಾಗಿ ನಟಿಸಿರುವ ʼನಿಂಬಿಯಾ ಬನಾದ ಮ್ಯಾಗʼ (ಪೇಜ್ 1) ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಅಶೋಕ್ ಕಡಬ ನಿರ್ದೇಶಿಸಿರುವ ಈ ಚಿತ್ರವು ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಷಣ್ಮುಖ ಗೋವಿಂದರಾಜ್ ಅಭಿನಯದ ʼನಿಂಬಿಯಾ ಬನಾದ ಮ್ಯಾಗʼ ಚಿತ್ರದ ಟ್ರೇಲರ್ ಔಟ್‌

Profile Siddalinga Swamy Apr 1, 2025 9:25 PM

ಬೆಂಗಳೂರು: ಕನ್ನಡದ ಮೇರು ನಟ ಡಾ.ರಾಜಕುಮಾರ್ ಅವರ ಮೊಮ್ಮಗ (ಮಗಳ ಮಗ) ಷಣ್ಮುಖ ಗೋವಿಂದರಾಜ್ ನಾಯಕನಾಗಿ ನಟಿಸಿರುವ ʼನಿಂಬಿಯಾ ಬನಾದ ಮ್ಯಾಗʼ (ಪೇಜ್ 1) ಚಿತ್ರದ (Nimbia Banada Myaga Movie)‌ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಡಾ.ರಾಜಕುಮಾರ್ ಮಗಳು,‌ ಅಳಿಯ ಹಾಗೂ ನಾಯಕ ಷಣ್ಮುಖ ಅವರ ತಾಯಿ - ತಂದೆ ಲಕ್ಷ್ಮೀ ಹಾಗೂ ಗೋವಿಂದರಾಜು ಅವರು ಟ್ರೇಲರ್ ಅನಾವರಣ ಮಾಡಿ ಮಗನ ಚಿತ್ರಕ್ಕೆ ಶುಭ ಕೋರಿದರು‌. ವಿ. ಮಾದೇಶ್ ನಿರ್ಮಾಣದ, ಅಶೋಕ್ ಕಡಬ ನಿರ್ದೇಶಿಸಿರುವ ಈ ಚಿತ್ರ ಏಪ್ರಿಲ್ 4 ರಂದು ಬಿಡುಗಡೆಯಾಗಲಿದೆ.



ನಟ ಷಣ್ಮುಖ ಮಾತನಾಡಿ, ʼನಿಂಬಿಯಾ ಬನದ‌ ಮ್ಯಾಗʼ ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ. ಈ ಚಿತ್ರ ಮಲೆನಾಡಿನ ಮಡಿಲಲ್ಲಿ ನಡೆಯುವ ಸುಂದರ ದೃಶ್ಯ ಕಾವ್ಯ. ಅಮ್ಮ‌ - ಮಗನ ಬಾಂಧವ್ಯದ ಕಥೆ. ಅಶೋಕ್ ಕಡಬ ನಿರ್ದೇಶನ, ವಿ. ಮಾದೇಶ ಅವರ ನಿರ್ಮಾಣ ಹಾಗೂ ಇಡೀ ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ತಂದೆ, ತಾಯಿ, ದೊಡ್ಡಪ್ಪ,‌ ಚಿಕ್ಕಮ್ಮ‌ ಹಾಗೂ ನನ್ನ ಪತ್ನಿ ಸೇರಿದಂತೆ ಅನೇಕ ಕುಟುಂಬ ಸದಸ್ಯರು ಇಂದಿನ ಸಮಾರಂಭಕ್ಕೆ ಆಗಮಿಸಿದ್ದಾರೆ. ನನ್ನ ಸೋದರಮಾವಂದಿರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ‌ ಗೀತಾ ಶಿವರಾಜಕುಮಾರ್,‌ ಮಂಗಳಾ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್,‌ ಶ್ರೀಮುರಳಿ ಹೀಗೆ ಕುಟುಂಬ ಸದಸ್ಯರೆಲ್ಲರು ನನ್ನ ಚಿತ್ರಕ್ಕೆ ಶುಭ ಕೋರಿದ್ದಾರೆ. ನಿಮ್ಮೆಲ್ಲರಿಗೂ ಧನ್ಯವಾದ ಎಂದರು.

ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಮಲೆನಾಡ ಭಾಗದ ಬೆಂಗಾಡಿಯಲ್ಲಿ ಮೇಲ್ ಬೈಲ್ ದೊಡ್ಡ ಮನೆಯ ನಾಲ್ಕು ವರ್ಷದ ಮಗು ಅಚ್ಚು (ಅಚ್ಚಣ್ಣ) ಕಾಣೆಯಾಗಿದೆ. ಆ ತಾಯಿ ಇಂದಲ್ಲ ನಾಳೆ ಮಗು ಬಂದೆ ಬರುತ್ತೆ ಅನ್ನೋ ನಂಬಿಕೆಯಲ್ಲೇ ಕಾಯುತ್ತಿದ್ದಾಳೆ. ಕಾಲ ಉರುಳಿದಂತೆ 25 ವರ್ಷದ ನಂತರ ಮೇಲ್ ಬೈಲ್ ದೊಡ್ಡಮನೆಯಲ್ಲಿ ಸಂತೋಷದ ವಾತಾವರಣ. ಕಾರಣ ಕಳೆದು ಹೋದ ಮಗ ಅಚ್ಚಣ್ಣ ಬಂದಿದ್ದಾನೆ. ಮುಂದೆ ಏನೂ ಎಂಬುದು ʼನಿಂಬಿಯಾ ಬನಾದ ಮ್ಯಾಗ - ಪೇಜ್ – 1ʼ ಚಿತ್ರದ ಕಥಾ ಸಾರಾಂಶ. ಭಾಗ 2. ಸಹ ಬರಲಿದೆ. ಷಣ್ಮುಖ ಅವರು ಮೊದಲ ಬಾರಿಗೆ ನಾಯಕನಾಗಿ‌ ನಟಿಸಿದ್ದಾರೆ. ತನುಶ್ರೀ ಈ ಚಿತ್ರದ ನಾಯಕಿ. 25 ವರ್ಷಗಳ ನಂತರ ʼಮೇಘಮಾಲೆʼ ಖ್ಯಾತಿಯ ಸುನಾದ್ ರಾಜ್ ಸಹ ಇದರಲ್ಲಿ ಅಭಿನಯಿಸಿದ್ದಾರೆ. ಆರೋನ್ ಕಾರ್ತಿಕ್ ಸಂಗೀತ ನೀಡಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿದ್ದು ಕಾಂಚನಹಳ್ಳಿ ಛಾಯಾಗ್ರಹಣ, ರವಿತೇಜ ಸಂಕಲನ ಹಾಗೂ ಮದನ್ ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಏಪ್ರಿಲ್ 4 ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು.

ಈ ಸುದ್ದಿಯನ್ನೂ ಓದಿ | Celebrities Ugadi Fashion: ಟ್ರೆಡಿಷನಲ್‌ವೇರ್‌ನಲ್ಲಿ ಯುಗಾದಿ ಹಬ್ಬ ಆಚರಿಸಿದ ಸೆಲೆಬ್ರೆಟಿಗಳಿವರು

ನಿರ್ಮಾಪಕ ವಿ. ಮಾದೇಶ್, ನಾಯಕಿ ತನುಶ್ರೀ, ಚಿತ್ರದಲ್ಲಿ ನಟಿಸಿರುವ ʼಮೇಘಮಾಲೆʼ ಖ್ಯಾತಿಯ ಸುನಾದ್‌ರಾಜ್, ಸಂದೀಪ್ ಮಲಾನಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಈ ವೇಳೆ ಹಿರಿಯ ನಿರ್ಮಾಪಕ ಎಸ್‌.ಎ. ಚಿನ್ನೇಗೌಡ, ಡಾ. ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಮುಂತಾದವರು ಉಪಸ್ಥಿತರಿದ್ದರು.