ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PSI Recruitment: ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ: ಸಚಿವ ಪರಮೇಶ್ವರ್

PSI Recruitment: ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವೆಲ್ಲವನ್ನು ಹಂತಹಂತವಾಗಿ ನೇಮಕಾತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ: ಸಚಿವ ಪರಮೇಶ್ವರ್

Profile Prabhakara R Jan 26, 2025 3:26 PM

ತುಮಕೂರು: ರಾಜ್ಯದಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಅವೆಲ್ಲವನ್ನು ಹಂತಹಂತವಾಗಿ ನೇಮಕಾತಿ ಮಾಡಲಾಗುವುದು. ಮೂರು ತಿಂಗಳೊಳಗೆ 1500 ಪಿಎಸ್‌ಐ ಹುದ್ದೆಗಳ ನೇಮಕಾತಿ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜು ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ನಿರ್ಮಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಕಡೆಗಳಲ್ಲಿ ಭೂಮಿ ಗುರುತಿಸಲಾಗಿದೆ. ವಸಂತ ನರಸಾಪುರ‌ ಹೊಂದಿಕೊಂಡತೆ ರಾಷ್ಟ್ರೀಯ ಹೆದ್ದಾರಿ 48 ಸಮೀಪ 3 ಸಾವಿರ ಭೂಮಿ ಹಾಗೂ ಶಿರಾ ತಾಲೂಕಿನ ಸಿ.ಬಿ.ದೇವಸ್ಥಾನ ಸಮೀಪ 4 ರಿಂದ 5 ಸಾವಿರ ಎಕರೆ ಭೂಮಿಯನ್ನು ನಕ್ಷೆ ಮೂಲಕ ಗುರುತಿಸಲಾಗಿದೆ. ಜಿಲ್ಲೆಯ ಶಾಸಕರು, ಸಂಸದರು ಪಕ್ಷಾತೀತವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು.

ಮೈಕ್ರೋ ಫೈನಾನ್ಸ್ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗಿದೆ.‌ ಮೈಕ್ರೋಫೈನಾನ್ಸ್‌ಗಳಿಗೆ ಸಬಂಧಿಸಿದಂತೆ ಈಗಿರುವ ಕಾನೂನು ಬಲಪಡಿಸಲಾಗುವುದು. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸುಗ್ರಿವಾಜ್ಞೆ ಮೂಲಕ ಕಾನೂನು ಜಾರಿಗೆ ತರಲಾಗುವುದು. ಸುಮೋಟೊ ಕೇಸ್ ತೆಗೆದುಕೊಳ್ಳಲು ಪೊಲೀಸರಿಗೆ ಅವಕಾಶವಿಲ್ಲ. ಇದಕ್ಕೆ ಅವಕಾಶ‌ ಕಲ್ಪಿಸಲಾಗುವುದು. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲದ ಹಣ ವಸೂಲಿ ಮಾಡಲು ಬಡವರಿಗೆ ತೊಂದರೆ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದು ಹೇಳಿದರು.

ಅನಧಿಕೃತ ಫೈನಾನ್ಸ್ ಹಾವಳಿಯನ್ನು ಮಟ್ಟ ಹಾಕಲಾಗುವುದು. ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಈ ವರ್ಷ ಏಳು ಜನರು ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 14 ಪ್ರಕರಣ ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಕಾನೂನು‌ ಕ್ರಮ ತೆಗೆದುಕೊಂಡಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Mysore News: ಗಣರಾಜ್ಯೋತ್ಸವ ಭಾರತೀಯರನ್ನು ಭಾವನಾತ್ಮಕವಾಗಿ, ಭಾಷಿಕವಾಗಿ, ಭೌಗೋಳಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಬೆಸುಗೆ ಹಾಕಿದ ದಿನ: ಎನ್ ಚಲುವರಾಯಸ್ವಾಮಿ

ನಿಮ್ಮ ಅಭಿಮಾನಿಗಳಿಂದ ಮುಂದಿನ ಮುಖ್ಯಮಂತ್ರಿ ಪರಮೇಶ್ವರ್ ಎಂಬ ಕೂಗು ಎದ್ದಿದೆ ಎಂಬುದರ ಕುರಿತು ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ತೆರೆ ಎಳೆದರು.

ಶ್ರೀ ಸಿದ್ಧಗಂಗಾ ಮಠದಲ್ಲಿ ಗಣರಾಜ್ಯೋತ್ಸವ ಆಚರಣೆ

Siddaganga mutt

ತುಮಕೂರು: ಶ್ರೇಷ್ಠ ಸಂವಿಧಾನದ ಫಲವಾಗಿ ಭಾರತವು ವಿಶ್ವದಲ್ಲಿ 4ನೇ ಆರ್ಥಿಕ ದೇಶವಾಗಿ ಬೆಳೆದಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ಶ್ರೀ ಸಿದ್ಧಗಂಗಾ ಮಠದಲ್ಲಿ ಧ್ವಜಾರೋಹಣಾ ನೆರವೇರಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಬಲಿಷ್ಟವಾಗಿದ್ದು, ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಎಂದು ಹೇಳಿದರು.

76 ವರ್ಷಗಳಲ್ಲಿ ಭಾರತ ಅನೇಕ ಸಾಧನೆಗಳನ್ನು ಮಾಡಿದೆ. ಬಡತನ, ಹಸಿವು, ಅನಕ್ಷರತೆಯಿಂದ ಬಳಲುತ್ತಿದ್ದ ಅಂದಿನ ಭಾರತ, ಬಲಿಷ್ಠ ಭಾರತವಾಗಿ ಬೆಳೆದಿದೆ. ಪ್ರಪಂಚದಲ್ಲಿ 4ನೇ ಆರ್ಥಿಕತೆಯ ದೇಶವಾಗಿದೆ. ಇದರಲ್ಲಿ ಪ್ರತಿಯೊಬ್ಬ ಭಾರತೀಯನ ಶ್ರಮವಿದೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಸಿಗಲಿ ಎಂದು ಆಶಿಸಿದರು‌.

ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರು ಇಡೀ ದೇಶದಲ್ಲಿ ಯಾವುದೇ ಒಂದು ಧಾರ್ಮಿಕ ಸಂಸ್ಥೆ ನೀಡದಂತಹ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕೋಟ್ಯಂತರ ಬಡ ಮಕ್ಕಳಿಗೆ ಜಾತಿ, ಮತ, ಬೇದವಿಲ್ಲದೆ ಅನ್ನ, ಆಶ್ರಯ, ಅಕ್ಷರ ಕಲ್ಪಿಸಿದರು. ಪರಮಪೂಜ್ಯ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಶ್ರೀಗಳು ಸಾಗುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರಾದ ಪರಮೇಶ್ವರ್ ಅವರು, ಮಠದ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವಪೀಠಿಕೆಯನ್ನು ಬೋಧಿಸಿದರು. ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದರು. ಶಾಸಕರಾದ ಜ್ಯೋತಿಗಣೇಶ, ಸುರೇಶ್‌ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ಎಸ್ಪಿ ಅಶೋಕ್ ಉಪಸ್ಥಿತರಿದ್ದರು.