ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Udupi News: ಇತಿಹಾಸವು ಸಂಸ್ಕೃತಿ, ನಾಗರಿಕತೆಯ ಕನ್ನಡಿ: ವಿಕ್ರಮ್ ಸಂಪತ್

Udupi News: ದಿವಂಗತ ಡಾ. ಪಾದೂರು ಗುರುರಾಜ ಭಟ್ ಅವರ ಜನ್ಮಶತಮಾನೋತ್ಸದ ಅಂಗವಾಗಿ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಉಡುಪಿಯ ಟೌನ್‌ಹಾಲ್‌ನಲ್ಲಿ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಐತಿಹಾಸಿಕ ಸಂಶೋಧನೆಗೆ ನೀಡಿದ ಕೊಡುಗೆಗಾಗಿ ವಿಕ್ರಮ್ ಸಂಪತ್ ಅವರಿಗೆ ಡಾ. ಪಾದೂರು ಗುರುರಾಜ ಭಟ್ ಜನ್ಮಶತಮಾನೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಇತಿಹಾಸವು ಸಂಸ್ಕೃತಿ, ನಾಗರಿಕತೆಯ ಕನ್ನಡಿ: ವಿಕ್ರಮ್ ಸಂಪತ್

Profile Siddalinga Swamy Mar 10, 2025 9:02 PM

ಉಡುಪಿ: ಇತಿಹಾಸವು ದೇಶದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದು ಖ್ಯಾತ ಇತಿಹಾಸ ತಜ್ಞ ವಿಕ್ರಮ್ ಸಂಪತ್‌ ಅಭಿಪ್ರಾಯಪಟ್ಟರು. ದಿವಂಗತ ಡಾ. ಪಾದೂರು ಗುರುರಾಜ ಭಟ್ ಅವರ ಜನ್ಮಶತಮಾನೋತ್ಸದ ಅಂಗವಾಗಿ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಉಡುಪಿಯ ಟೌನ್‌ ಹಾಲ್‌ನಲ್ಲಿ (Udupi News)‌ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತಿಹಾಸವು ಜನರ ಮನಸ್ಸನ್ನು ರೂಪಿಸುತ್ತದೆ. ಈ ಸತ್ಯವನ್ನು ನಮ್ಮ ವಸಾಹತುಶಾಹಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಜಾರ್ಜ್ ಆರ್ವೆಲ್, ‘ಭೂತಕಾಲವನ್ನು ನಿಯಂತ್ರಿಸುವವರು ಭವಿಷ್ಯವನ್ನೂ ನಿಯಂತ್ರಿಸುತ್ತಾರೆʼ ಎಂದಿದ್ದರು ಎಂದು ಹೇಳಿದರು.

Udupi

ಭಾರತದ ದೇಗುಲಗಳು ಮತ್ತು ಪರಂಪರೆಗೆ ಸಂಬಂಧಿಸಿದ ಐತಿಹಾಸಿಕ ನಿರೂಪಣೆಗಳ ಪುನರ್ ಪರಿಶೀಲನೆ ಮತ್ತು ಪುನರ್ ರಚನೆ ಕುರಿತ ಒಳನೋಟವುಳ್ಳ ಚರ್ಚೆ ಮತ್ತು ವಿಶ್ಲೇಷಣೆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಕಾರ್ಯಕ್ರಮದಲ್ಲಿ ವಿಕ್ರಮ್ ಸಂಪತ್ ಅವರು, ಐತಿಹಾಸಿಕ ಸಂಶೋಧನೆಗೆ ನೀಡಿದ ಕೊಡುಗೆಗಾಗಿ ಅವರಿಗೆ ಡಾ.ಪಾದೂರು ಗುರುರಾಜ ಭಟ್ ಜನ್ಮ ಶತಮಾನೋತ್ಸವ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.

ಬಳಿಕ ಮಾತನಾಡಿದ ವಿಕ್ರಮ್ ಸಂಪತ್, ಭಾರತದ ಶಿಕ್ಷಣ ಪದ್ಧತಿ ಮೇಲೆ ಮೆಕಾಲೆ ಅವರ ಪ್ರಭಾವವನ್ನು ಉಲ್ಲೇಖಿಸಿದ ಅವರು, ಬ್ರಿಟಿಷರಂತೆ ಯೋಚಿಸುವ ಮತ್ತು ವರ್ತಿಸುವ ಭಾರತೀಯರ ವರ್ಗವನ್ನು ರಚಿಸುವ ಉದ್ದೇಶದಿಂದಲೇ ಭಾರತಕ್ಕೆ ಇಂಗ್ಲಿಷ್ ಭಾಷೆಯನ್ನು ಪರಿಚಯಿಸಲಾಯಿತು ಎಂದು ಹೇಳಿದರು. ಭಾರತದ ಇತಿಹಾಸವು ಹೆಚ್ಚಾಗಿ ದೆಹಲಿ-ಕೇಂದ್ರಿತವಾಗಿ ಉಳಿದಿದೆ. ಪ್ರಾಥಮಿಕವಾಗಿ ರಾಜಧಾನಿಯ ಆಡಳಿತಗಾರರ ಮೇಲೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ ದಕ್ಷಿಣ ಭಾರತ ಮತ್ತು ಈಶಾನ್ಯ ಭಾರತದ ಪ್ರಮುಖ ಭಾಗಗಳನ್ನು ಮುಖ್ಯವಾಹಿನಿಯ ನಿರೂಪಣೆಗಳಲ್ಲಿ ಕಡೆಗಣಿಸಲಾಗಿದೆ ಎಂದು ಅವರು ವಿಷಾದಿಸಿದರು.

1741ರಲ್ಲಿ ನಡೆದ ಕೋಲಾಚೆಲ್ ಕದನದಲ್ಲಿ ತಿರುವಾಂಕೂರಿನ ರಾಜ ಮಾರ್ತಾಂಡ ವರ್ಮ ಅವರು ಡಚ್ ಈಸ್ಟ್ ಇಂಡಿಯಾ ಕಂಪನಿಯನ್ನು ನಿರ್ಣಾಯಕವಾಗಿ ಸೋಲಿಸಿದರು. ಇದು ಭಾರತದಲ್ಲಿ ಡಚ್ ವಸಾಹತುಶಾಹಿಯನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ನುಚ್ಚುನೂರು ಮಾಡಿದ ಐತಿಹಾಸಿಕ ಘಟನೆ ಎಂದು ನೆನಪಿಸಿಕೊಂಡರು. ಅಂದು ಅವರು ಜಯಗಳಿಸದಿದ್ದರೆ, ನಾವು ಇಂದು ಕೆಲವು ಸ್ಥಳಗಳಲ್ಲಿ ಡಚ್ ಮಾತನಾಡುತ್ತಿದ್ದೆವು. ಕೇರಳದಲ್ಲಿ ಸಹ, ಇತಿಹಾಸದ ಈ ಅಧ್ಯಾಯದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ, ಆರು ಶತಮಾನಗಳ ಕಾಲ ಅಸ್ಸಾಂ ಆಳಿದ ಅಹೋಮ್‌ ರಾಜಮನೆತನದ ಮರೆತುಹೋದ ಪರಂಪರೆಯ ಬಗ್ಗೆ ಪ್ರಸ್ತಾಪಿಸಿ, ಈ ರಾಜವಂಶದ ಬಗ್ಗೆ ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ ಎಂದು ಪ್ರಶ್ನಿಸಿದರು. ಭಾರತದ ಎಲ್ಲಾ ಪ್ರದೇಶಗಳನ್ನು ಪ್ರತಿನಿಧಿಸುವ ಸಮಗ್ರ, ಅಂತರ್ಗತ ಐತಿಹಾಸಿಕ ನಿರೂಪಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಡಾ. ಸುರೇಂದ್ರನಾಥ ಬೊಪ್ಪರಾಜು ಮಾತನಾಡಿ, ದೇವಾಲಯದ ವಾಸ್ತುಶಿಲ್ಪ, ಸಂಕೀರ್ಣ ಕೆತ್ತನೆಗಳು ಮತ್ತು ಪ್ರಾಚೀನ ಭಾರತೀಯ ಕುಶಲಕರ್ಮಿಗಳ ಕಲಾತ್ಮಕ ಪಾಂಡಿತ್ಯದ ಕುರಿತು ಆಳವಾದ ವಿಶ್ಲೇಷಣೆಯೊಂದಿಗೆ ಮಾಹಿತಿ ನೀಡಿದರು.

ಪದ್ಮಶ್ರೀ ಪುರಸ್ಕೃತ ಕೆ.ಕೆ. ಮಹಮ್ಮದ್ ಅವರು, ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರದ ಕುರಿತು ಮಾತನಾಡಿದರು. ಮಧ್ಯಪ್ರದೇಶದ ಬಟೇಶ್ವರದಲ್ಲಿರುವ, ಆಕ್ರಮಣಗಳಿಂದಾಗಿ ನಾಶವಾಗಿದ್ದ ಸುಮಾರು 7-8ನೇ ಶತಮಾನದ ಗುರ್ಜರ-ಪ್ರತಿಹಾರ ದೇವಾಲಯಗಳ ಪುನರುಜ್ಜೀವನ ಮತ್ತು ಪುನಶ್ಚೇತನಕ್ಕಾಗಿ ತಾವು ಮಾಡಿದ ಪ್ರಯತ್ನಗಳನ್ನು ಅವರು ವಿವರಿಸಿದರು.

ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಪಿ. ಶ್ರೀಪತಿ ತಂತ್ರಿ ಮಾತನಾಡಿ, ಸ್ವಾತಂತ್ರ್ಯದ ನಂತರದ ಭಾರತೀಯ ಇತಿಹಾಸದ ವಿಕಸನ ಮತ್ತು ಭವಿಷ್ಯದ ಪೀಳಿಗೆಗೆ ಶಿಕ್ಷಣ ನೀಡುವಲ್ಲಿ ನಿಷ್ಪಕ್ಷಪಾತ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವ ಅಗತ್ಯದತ್ತ ಕಾರ್ಯಕ್ರಮವು ಗಮನಹರಿಸಿದೆ. ಭಾರತದ ಐತಿಹಾಸಿಕ ಅಸ್ಮಿತೆ ಮತ್ತು ಸಮಕಾಲೀನ ಕಾಲದಲ್ಲಿ ಅದರ ಪ್ರಸ್ತುತತೆಯ ಕುರಿತು ಅರ್ಥಪೂರ್ಣ ಚರ್ಚೆ ಮಾಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.

ಟ್ರಸ್ಟ್‌ನ ಕಾರ್ಯದರ್ಶಿ ವಿಶ್ವನಾಥ ಪಾದೂರು ಮಾತನಾಡಿ, ಭಾರತದ ದೇವಾಲಯ ಪರಂಪರೆ, ಐತಿಹಾಸಿಕ ಸತ್ಯ, ಭಾರತದ ಸಾಂಸ್ಕೃತಿಕ ಅಸ್ಮಿತೆ ರೂಪಿಸುವಲ್ಲಿ ದೇವಾಲಯಗಳ ಪಾತ್ರದ ಕುರಿತು ಅರ್ಥಪೂರ್ಣ ಸಂವಾದವನ್ನು ಏರ್ಪಡಿಸುವುದು ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್‌ನ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮವು ಇತಿಹಾಸಕಾರರು, ವಿದ್ವಾಂಸರು, ವಾಸ್ತುಶಿಲ್ಪಿಗಳು ಮತ್ತು ಭಾರತದ ಶ್ರೀಮಂತ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವ ಉತ್ಸಾಹಿಗಳನ್ನು ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸಿತು ಎಂದರು.

ಈ ಸುದ್ದಿಯನ್ನೂ ಓದಿ | Karnataka Weather: ನಾಳೆ ಮೈಸೂರು, ಚಾಮರಾಜನಗರ ಜಿಲ್ಲೆ ಸೇರಿ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ

ಡಾ.ಮಾಲತಿ ಕೃಷ್ಣಮೂರ್ತಿ ಅವರು, ಶಿಕ್ಷಕ ಮತ್ತು ಪ್ರಾಂಶುಪಾಲರಾಗಿದ್ದ ಗುರುರಾಜ್ ಭಟ್ ಅವರು ತಮ್ಮ ಮಾನವೀಯ ಧೋರಣೆಗೆ ಹೆಸರಾದವರು ಎಂದು ಸ್ಮರಿಸಿದರು. ತರಗತಿಯಲ್ಲಿನ ಅವರ ಪಾಂಡಿತ್ಯ ಪಾಠಗಳು ಹೇಗೆ ಆಳವಾಗಿ ಬೇರೂರಿವೆ ಮತ್ತು ಅವರ ಸರಳತೆ, ಕಠಿಣ ಪರಿಶ್ರಮ ಮತ್ತು ಸಹಾನುಭೂತಿಯು ತಮ್ಮ ಮೇಲೆ ಹೇಗೆ ಶಾಶ್ವತವಾದ ಪ್ರಭಾವ ಬೀರಿತು ಎಂಬುದನ್ನು ಒತ್ತಿ ಹೇಳಿದರು.