Summer Skin Care: ಉರಿ ಬಿಸಿಲಿನಿಂದ ಬೆವರುಗುಳ್ಳೆ ಸಮಸ್ಯೆ ಕಾಡುತ್ತಿದ್ದರೆ ಈ ಮನೆಮದ್ದು ಬಳಸಿ
ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೆವರು ಗುಳ್ಳೆ ತಪ್ಪಿದ್ದಲ್ಲ. ಅದರಲ್ಲೂ ಈ ಬಿಸಿಲಿಗೆ ಉರಿ ಸೆಕೆಯನ್ನು ತಡೆಯಲಾರದೆ ಇರುವ ಅದೆಷ್ಟೋ ಮಂದಿಗೆ ಈ ಬೆವರು ಗುಳ್ಳೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಈ ಗುಳ್ಳೆಗಳು ಸಾಮಾನ್ಯ ವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ಕಾಣಿಸಿಕೊಂಡಿದ್ದರೆ ನೀವು ಕೆಲವೊಂದು ಮನೆ ಮದ್ದುಗಳನ್ನು ಪ್ರಯತ್ನಿಸಬಹುದು.

Heat Rash

ನವದೆಹಲಿ: ಅತಿಯಾದ ಬಿಸಿಲಿನಿಂದಾಗಿ ಬಾಯಾರಿಕೆಯ ಜತೆಗೆ ವಿಪರೀತವಾಗಿ ಬೆವರುವಿಕೆಯ ಸಮಸ್ಯೆ ಕೂಡ ಕಂಡು ಬರುತ್ತದೆ. ಇದರ ಜತೆ ಬೇಸಗೆಯಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಅದು ಬೆವರು ಗುಳ್ಳೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಬೆವರು ಗುಳ್ಳೆ ತಪ್ಪಿದ್ದಲ್ಲ. ಅದರಲ್ಲೂ ಈ ಬಿಸಿಲಿಗೆ ಅದೆಷ್ಟೋ ಮಂದಿಗೆ ಈ ಬೆವರು ಗುಳ್ಳೆ ತುಂಬಾ ಕಿರಿಕಿರಿ ಉಂಟು ಮಾಡುತ್ತದೆ. ಈ ಗುಳ್ಳೆಗಳು ಸಾಮಾನ್ಯವಾಗಿ ಮುಖ, ಕುತ್ತಿಗೆ, ಬೆನ್ನು, ಎದೆ ಹಾಗೂ ತೊಡೆಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದು ತುರಿಕೆ ಹಾಗೂ ನೋವಿನಿಂದಲೂ ಕೂಡಿದ್ದು ಹೆಚ್ಚಿನವರು ಇದರಿಂದ ಕಿರಿಕಿರಿ ಒಳಗಾಗುತ್ತಾರೆ (Summer Skin Care). ಇದಕ್ಕಾಗಿ ನೀವು ಕೆಲವೊಂದು ಮನೆ ಮದ್ದುಗಳನ್ನು ಪ್ರಯತ್ನಿಸಿ.
ಅಲೋವೆರ
ಬೆವರುಸಾಲೆಗೆ ಅಲೋವೆರ ಕೂಡ ಬಹಳಷ್ಟು ಪ್ರಯೋಜನಕಾರಿ. ಇದು ಬೆವರಿನಿಂದ ಉಂಟಾಗುವ ತುರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಉರಿಯೂತದ ಮತ್ತು ನಂಜುನಿರೋಧಕ ಗುಣವನ್ನು ಹೊಂದಿದೆ. ಆದ್ದರಿಂದ ಗುಳ್ಳೆ ಬಾಧಿತ ಕಡೆ ನೀವು ಅಲೋವೆರಾ ಜೆಲ್ ಅನ್ನು ಉಜ್ಜಬೇಕು. ಅಲೋವೆರ ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಹಾಗೇ ಬೆವರುಗುಳ್ಳೆಗಳ ಮೇಲೆ ಮಸಾಜ್ ಮಾಡಿ ಮೂವತ್ತು ನಿಮಿಷದಿಂದ ನಂತರ ಮಸಾಜ್ ಮಾಡಿದ ಜಾಗವನ್ನು ತಣ್ಣೀರಿನಿಂದ ಮೆಲುವಾಗಿ ತೊಳೆಯಿರಿ.
ತೆಂಗಿನ ಎಣ್ಣೆ
ಬೆವರಿನ ಗುಳ್ಳೆಯನ್ನು ಕಡಿಮೆ ಮಾಡಲು ತೆಂಗಿನಎಣ್ಣೆಯನ್ನು ಬಳಸಬಹುದು. ತೆಂಗಿನಎಣ್ಣೆಯು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡಲಿದ್ದು, ಇದು ಚರ್ಮದ ಉರಿಯನ್ನು ಶಮನಗೊಳಿಸುತ್ತದೆ ಮತ್ತು ಬೆವರುಸಾಲೆ ಉಂಟಾದಾಗ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬೆವರು ಗುಳ್ಳೆ ಇದ್ದಲ್ಲಿ ತೆಂಗಿನ ಎಣ್ಣೆ ಹಚ್ಚಿ ಮಸಾಜ್ ಮಾಡಿ.
ಹಾಲಿನೊಂದಿಗೆ ಅರಶಿನ ಹಚ್ಚಿ
ಅರಿಶಿನ ಉತ್ಕರ್ಷಣ ನಿರೋಧಕ ಶಕ್ತಿ ಹೊಂದಿದ್ದು ಇದು ಬೆವರುವಿಕೆಗೆ ಅತ್ಯುತ್ತಮವಾದ ನಂಜು ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಸ್ವಲ್ಪ ಹಾಲಿಗೆ ಒಂದು ಚಮಚ ಅರಿಶಿನ ಬೆರಸಿ ನೇರವಾಗಿ ಗುಳ್ಳೆಯ ಮೇಲೆ ಹಚ್ಚಬಹುದು. ನೀವು ಇದನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು, ಪೇಸ್ಟ್ ಮಾಡಿ, ಬೆವರು ಗುಳ್ಳೆ ಇರುವ ಪ್ರದೇಶಗಳಿಗೆ ದಿನಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದರಿಂದ ಬೆವರು ಗುಳ್ಳೆಗಳಿಗೆ ಪರಿಹಾರ ಸಿಗುತ್ತದೆ.
ಹಸಿ ವೀಳ್ಯದ ಎಲೆ
ಹಸಿ ವೀಳ್ಯದ ಎಲೆಯನ್ನು ಬಳಸಬಹುದು. ವೀಳ್ಯದ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಅದರ ಮೇಲೆ ಹರಳೆಣ್ಣೆ ಹಾಕಿ ಬಿಸಿ ಗುಳ್ಳೆಗಳು ಉಂಟಾಗಿರುವ ಜಾಗದಲ್ಲಿ ಇದನ್ನು ಸ್ವಲ್ಪ ಹೊತ್ತು ಇಡಬೇಕು. ಇದರಿಂದ ಗುಳ್ಳೆಗಳಲ್ಲಿ ಕಂಡುಬರುವ ಕೀವು ಹೊರಬರುತ್ತದೆ. ಇಲ್ಲದಿದ್ದಲ್ಲಿ ವೀಳ್ಯದ ಎಲೆಗಳ ರಸವನ್ನು ಈ ಗುಳ್ಳೆಗಳು ಉಂಟಾಗಿರುವ ಜಾಗದ ಮೇಲೆ ಹಚ್ಚಿ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.
ಈ ತರಕಾರಿಯನ್ನು ಬಳಸಿ
ಮುಳ್ಳುಸೌತೆ , ಸೌತೆಕಾಯಿಯನ್ನು ವೃತ್ತಾಕಾರವಾಗಿ ಕತ್ತರಿಸಿ, ಬೆವರು ಗುಳ್ಳೆಯಿರುವ ಜಾಗವನ್ನು ಮಸಾಜ್ ಮಾಡಿ. ಇಲ್ಲವೇ ಹಸಿ ಆಲೂಗಡ್ಡೆಯನ್ನು ಕತ್ತರಿಸಿ ಬೆವರುಗುಳ್ಳೆಗಳ ಮೇಲೆ ಸುಮಾರು ನಿಮಿಷಗಳ ಕಾಲ ಇಟ್ಟಾಗಲೂ ಈ ಸಮಸ್ಯೆ ನಿವಾರಣೆಯಾಗುತ್ತದೆ.
ಜೋಳದ ಹಿಟ್ಟು
ಕುದಿಯುವ ಬಿಸಿನೀರಿಗೆ ಜೋಳದ ಹಿಟ್ಟು ಹಾಕಿ ಪೇಸ್ಟ್ ಸಿದ್ಧಪಡಿಸಿ. ಈ ಪೇಸ್ಟ್ ಅನ್ನು ಬೆವರು ಗುಳ್ಳೆ ಇದ್ದ ಕಡೆ ಸವರಿ ಒಣಗುವವರೆಗೆ ಇಟ್ಟುಕೊಳ್ಳಿ. ಈ ರೀತಿ ಮಾಡುತ್ತಾ ಬಂದರೆ ಪರಿಹಾರ ಸಿಗುತ್ತದೆ.
ಇದನ್ನು ಓದಿ: Summer Health Tips: ಏರುತ್ತಿರುವ ತಾಪಮಾನದಲ್ಲಿ ತಂಪಾಗಿರುವುದು ಹೇಗೆ?
ಹೀಗೆ ಮಾಡಬಹುದು
*ಬೆವರುಗುಳ್ಳೆಗಳಿಗೆ ಅಕ್ಕಿ ತೊಳೆದ ನೀರನ್ನು ಬಳಬಹುದು.
*ಬೇವಿನ ಎಲೆಯ ರಸ ತೆಗೆದು ಗುಳ್ಳೆಯ ಮೇಲೆ ಹಚ್ಚಿದರೆ ಸಮಸ್ಯೆ ನಿವಾರಣೆಯಾಗುತ್ತದೆ.
*ಪ್ರತಿ ದಿನವೂ ತಣ್ಣೀರು ಸ್ನಾನ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
*ತುಳಸಿ ರಸ ಮತ್ತು ಶುಂಠಿಯನ್ನು ಬಳಸಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಇದನ್ನು ಪ್ರತಿ ದಿನ ಹಚ್ಚಿದರೆ ಬೇವರು ಗುಳ್ಳೆ ಕಡಿಮೆಯಾಗುತ್ತದೆ.