Ellyse Perry: ಡಬ್ಲ್ಯುಪಿಎಲ್‌ನಲ್ಲಿ ದಾಖಲೆ ಬರೆದ ಆರ್‌ಸಿಬಿಯ ಎಲ್ಲಿಸ್ ಪೆರ್ರಿ
ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ನಡೆಸಿದ ಆರ್‌ಸಿಬಿ 6 ವಿಕೆಟ್ಗೆ 180 ರನ್ ಕಲೆಹಾಕಿತು. ಪ್ರತಿಯಾಗಿ ಯುಪಿ ಕೊನೇ ಎಸೆತದಲ್ಲಿ 180 ರನ್ಗಳಿಗೆ ಸರ್ವಪತನ ಕಂಡು ಟೈ ಸಾಧಿಸಿತು. ಸೂಪರ್ ಓವರ್ನಲ್ಲಿ ಯುಪಿ 1 ವಿಕೆಟ್ಗೆ 7 ರನ್ ಗಳಿಸಿದರೆ, ಆರ್‌ಸಿಬಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಲಷ್ಟೇ ಶಕ್ತವಾಯಿತು.


ಬೆಂಗಳೂರು: ಸೋಮವಾರ ರಾತ್ರಿ ನಡೆದಿದ್ದ ಡಬ್ಲ್ಯುಪಿಎಲ್(WPL 2025) ಸೂಪರ್ ಓವರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ಯುಪಿ ವಾರಿಯರ್ಸ್ ವಿರುದ್ಧ ಸೋಲು ಕಂಡರೂ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ತೋರಿದ ಎಲ್ಲಿಸ್ ಪೆರ್ರಿ(Ellyse Perry) ಡಬ್ಲ್ಯುಪಿಎಲ್ ಇತಿಹಾಸದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಹಾದಿಯಲ್ಲಿ ಅವರು ತಮ್ಮದೇ ದೇಶದ, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಮೆಗ್ ಲ್ಯಾನಿಂಗ್ ಅವರನ್ನು ಹಿಂದಿಕ್ಕಿದರು.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಪರ ಆಸೀಸ್ ತಾರೆ ಎಲ್ಲಿಸ್ ಪೆರ್ರಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 56 ಎಸೆತಗಳಿಂದ ಅಜೇಯ 90ರನ್ ಬಾರಿಸಿದರು. ಸಿಡಿದದ್ದು 9 ಬೌಂಡರಿ ಮತ್ತು 3 ಸಿಕ್ಸರ್. 90 ರನ್‌ಗಳ ಇನಿಂಗ್ಸ್ ಮೂಲಕ ಎಲ್ಲಿಸ್ ಪೆರ್ರಿ ಡಬ್ಲ್ಯುಪಿಎಲ್‌ನಲ್ಲಿ 800 ರನ್ ಪೂರೈಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಸದ್ಯ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದವರ ಪಟ್ಟಿಯಲ್ಲಿ ಪೆರ್ರಿ ಅಗ್ರಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ ಮೆಗ್ ಲ್ಯಾನಿಂಗ್ ಅಗ್ರಸ್ಥಾನದಲ್ಲಿದ್ದರು.
ಅತ್ಯಧಿಕ ರನ್ ಬಾರಿಸಿದ 5 ಆಟಗಾರ್ತಿಯರು
ಎಲ್ಲಿಸ್ ಪೆರ್ರಿ- 21 ಇನಿಂಗ್ಸ್, 800 ರನ್
ಮೆಗ್ ಲ್ಯಾನಿಂಗ್-22 ಇನಿಂಗ್ಸ್, 782 ರನ್
ನ್ಯಾಟ್ ಸ್ಕಿವರ್ ಬ್ರಂಟ್-22 ಇನಿಂಗ್ಸ್, 683ರನ್
ಶಫಾಲಿ ವರ್ಮಾ--22 ಇನಿಂಗ್ಸ್, 654 ರನ್
ಹರ್ಮನ್‌ಪ್ರೀತ್ ಕೌರ್-20 ಇನಿಂಗ್ಸ್, 645 ರನ್
ಯುಪಿಗೆ ಸೂಪರ್ ಗೆಲುವು
ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ನಡೆಸಿದ ಆರ್‌ಸಿಬಿ 6 ವಿಕೆಟ್ಗೆ 180 ರನ್ ಕಲೆಹಾಕಿತು. ಪ್ರತಿಯಾಗಿ ಯುಪಿ ಕೊನೇ ಎಸೆತದಲ್ಲಿ 180 ರನ್ಗಳಿಗೆ ಸರ್ವಪತನ ಕಂಡು ಟೈ ಸಾಧಿಸಿತು. ಸೂಪರ್ ಓವರ್ನಲ್ಲಿ ಯುಪಿ 1 ವಿಕೆಟ್ಗೆ 7 ರನ್ ಗಳಿಸಿದರೆ, ಆರ್‌ಸಿಬಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೇಯ ಓವರ್ನಲ್ಲಿ ಯುಪಿ ಗೆಲುವಿಗೆ 18 ರನ್ ಬೇಕಿತ್ತು. ಇದು ಅಸಾಧ್ಯ ಎಂದು ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ಶುರು ಮಾಡಿದ್ದರು. ಆದರೆ, ಸ್ಪಿನ್ ಆಲ್‌ರೌಂಡರ್ ಎಕ್ಲೆಸ್ಟೋನ್, ವೇಗಿ ರೇಣುಕಾ ಸಿಂಗ್ ಎಸೆದ 2 ಮತ್ತು 3ನೇ ಎಸೆತಗಳಲ್ಲಿ ಸತತ ಸಿಕ್ಸರ್ ಸಿಡಿಸಿದರು. ಬಳಿಕ 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕೊನೇಯ 2 ಎಸೆತಗಳಲ್ಲಿ 2 ರನ್ ಬೇಕಿದ್ದಾಗ, 5ನೇ ಎಸೆತದಲ್ಲಿ ಸಿಂಗಲ್ಸ್ ಕಸಿದರು. ಅಂತಿಮ ಎಸೆತದಲ್ಲಿ ಎಸೆತದಲ್ಲಿ ಚೆಂಡು ಕ್ರಾಂತಿ ಗೌಡ್ ಬ್ಯಾಟ್ಗೆ ಸಿಗಲಿಲ್ಲ. ಎಕ್ಲೆಸ್ಟೋನ್ ಬೈಸ್ ರನ್ ಕದಿಯಲು ಯತ್ನಿಸಿದಾಗ ಕೀಪರ್ ರಿಚಾ ಘೋಷ್ ರನೌಟ್ ಮಾಡಿದ್ದರಿಂದ ಪಂದ್ಯ ಟೈ ಆಯಿತು.