Narendra Modi: ಏಕರೂಪ ನಾಗರಿಕ ಸಂಹಿತೆ ಪ್ರಜಾಪ್ರಭುತ್ವವವನ್ನು ಬಲಪಡಿಸುತ್ತದೆ; ಪ್ರಧಾನಿ ಮೋದಿ!
ಏಕರೂಪ ನಾಗರಿಕ ಸಂಹಿತೆಯು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ(ಜ.28) ಹೇಳಿದ್ದಾರೆ. ಯುಸಿಸಿಯನ್ನು ಮೋದಿ ಸೆಕ್ಯುಲರ್ ಸಿವಿಲ್ ಕೋಡ್ ಎಂದು ಶ್ಲಾಘಿಸಿದ್ದಾರೆ. ನಿನ್ನೆ ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೆ ತಂದಿದೆ. ಈ ಕುರಿತು ಮೋದಿ ಅವರು ಸುದೀರ್ಘವಾಗಿ ಮಾತನಾಡಿದ್ದಾರೆ.

Narendra Modi

ನವದೆಹಲಿ: ಏಕರೂಪ ನಾಗರಿಕ ಸಂಹಿತೆಯು(Uniform Civil Code) ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಕುರಿತಾಗಿ ಪರ, ವಿರೋಧಗಳು ಚರ್ಚೆ ಜಾರಿಯಲ್ಲಿರುವಂತೆ ಉತ್ತರಾಖಂಡ್ನ(UttarKhand) ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ನಿನ್ನೆಯಿಂದ(ಜ.27) ಉತ್ತರಾಖಂಡ್ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಿದೆ. ಆ ಮೂಲಕ ಯುಸಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಖಾಂಡ್ ಪಾತ್ರವಾಗಿದೆ. ಇದೀಗ ಮೋದಿ ಉತ್ತರಖಾಂಡ್ ರಾಜ್ಯವನ್ನು ಶ್ಲಾಘಿಸಿದ್ದು, ಏಕರೂಪ ನಾಗರಿಕ ಸಂಹಿತೆಯ ಕುರಿತು ಸುದೀರ್ಘವಾಗಿ ಮಾತನಾಡಿದ್ದಾರೆ.
"ನಿನ್ನೆ ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ. ಇದಕ್ಕಾಗಿ ನಾನು ಉತ್ತರಾಖಂಡ ಸರ್ಕಾರವನ್ನು ಅಭಿನಂದಿಸುತ್ತೇನೆ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದವನ್ನು ಬಲಪಡಿಸುತ್ತದೆ" ಎಂದು ಡೆಹ್ರಾಡೂನ್‌ನಲ್ಲಿ 38 ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಮಾತನಾಡಿದರು.
ಯುಸಿಸಿ ಕೂಡ ಕ್ರೀಡೆಯಂತೆಯೇ ತಂಡದ ಮನೋಭಾವವನ್ನು ಹೊಂದಿದೆ, ಯಾವುದಕ್ಕೂ ತಾರತಮ್ಯವಿಲ್ಲ" ಎಂದು ಪ್ರಧಾನಿ ಹೇಳಿದರು. ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ಕಾನೂನುಗಳನ್ನು ಬದಲಿಸಲು ಏಕರೂಪ ನಾಗರಿಕ ಸಂಹಿತೆಯನ್ನು ಪರಿಚಯಿಸುವುದು ನರೇಂದ್ರ ಮೋದಿ ಮತ್ತು ಬಿಜೆಪಿಯ ದೀರ್ಘಕಾಲದ ಗುರಿಯಾಗಿದೆ. ಮುಸ್ಲಿಂ ನಾಯಕರು ಮತ್ತು ಪ್ರಗತಿಪರರು UCC ವಿಚ್ಛೇದನ, ಮದುವೆ ಮತ್ತು ಉತ್ತರಾಧಿಕಾರದ ಮೇಲೆ ಇಸ್ಲಾಮಿಕ್ ಕಾನೂನುಗಳಿಗೆ ಸರಿ ಹೊಂದುವುದಿಲ್ಲ ಎಂದು ವಿರೋಧಿಸುತ್ತಾ ಬಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ಪ್ರಧಾನಿ ಮೋದಿಯನ್ನೂ ಸೆಳೆದ ಕೋಲ್ಡ್ ಪ್ಲೇ ಮ್ಯೂಸಿಕ್ ಕಾನ್ಸರ್ಟ್!
ಸೋಮವಾರ(ಜ.27) ಉಪ ರಾಷ್ಟ್ರಪತಿಗಳಾದ ಜಗದೀಪ್ ಧನ್‌ಕರ್ ಅವರು ಮಾತನಾಡಿ "ಒಂದು ರಾಜ್ಯವು ಏಕರೂಪ ನಾಗರಿಕ ಸಂಹಿತೆಯನ್ನುಜಾರಿಗೊಳಿಸಿದೆ. ಇಡೀ ದೇಶದಲ್ಲಿ ಈ ಕಾನೂನು ಜಾರಿಯಾಗಬೇಕು. ಇದು ಪ್ರಸಕ್ತ ಸಮಯ" ಎಂದರು. ಕೆಲವರು ಅಜ್ಞಾನದಿಂದ ಏಕರೂಪ ನಾಗರಿಕ ಸಂಹಿತೆಯನ್ನು ಟೀಕಿಸುತ್ತಿದ್ದಾರೆ. ಆದರೆ ಭಾರತೀಯ ಸಂವಿಧಾನದ ಆಶಯವೂ ಇದೇ ಆಗಿದೆ. ಕಟ್ಟುಪಾಡು, ಲಿಂಗ ಸಮಾನತೆಯನ್ನು ತರುವಲ್ಲಿ ಯುಸಿಸಿ ಸಹಕಾರಿಯಾಗಿದೆ ಅದನ್ನು ಟೀಕಿಸುವುದು ಎಷ್ಟು ಸರಿ? ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಬಿಜೆಪಿ ಸರ್ಕಾರವಿರುವ ಪ್ರತಿಯೊಂದು ರಾಜ್ಯದಲ್ಲೂ ಯುಸಿಸಿ ಜಾರಿಯಾಗಲಿದೆ ಎಂದಿದ್ದರು. 2024 ರ ಲೋಕಸಭಾ ಚುನಾವಣೆಯ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿಯೂ ಯುಸಿಸಿ ಜಾರಿಗೊಳಿಸುವ ಭರವಸೆಯನ್ನು ನೀಡಿದೆ.