Nayanthara: ನಯನತಾರಾ ಡಾಕ್ಯುಮೆಂಟರಿ ಮೇಲಿನ ಕಾಪಿ ರೈಟ್ ಪ್ರಕರಣ ಕೈಬಿಡಲು ಮದ್ರಾಸ್ ಹೈಕೋರ್ಟ್ ನಕಾರ
ತಮಿಳು ಸಿನಿ ಇಂಡಸ್ಟ್ರಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಕಾಪಿ ರೈಟ್ ಪ್ರಕರಣವೊಂದು ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ನಟ ಧನುಷ್ ಮತ್ತು ನಟಿ ನಯನತಾರಾ ಅವರ ನಡುವಿನ ಈ ಕಾಪಿರೈಟ್ ವಿವಾದದಲ್ಲಿ ಏನೇನಾಯ್ತು?


ಚೆನ್ನೈ: ನಟಿ ನಯನತಾರಾ (Nayanthara) ಅವರ ಡಾಕ್ಯುಮೆಂಟರಿ (Documentary) 'ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ಗೆ (Nayanthara: Beyond the Fairytale) ಸಂಬಂಧಿಸಿದಂತೆ ಧನುಷ್ (Dhanush) ಅವರ ಕಾಪಿ ರೈಟ್ ಆರೋಪವನ್ನು ವಜಾಗೊಳಿಸುವಂತೆ ಕೋರಿ ನೆಟ್ ಫ್ಲಿಕ್ಸ್ ಇಂಡಿಯಾ (Netflix India) ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ (Madras High Court) ಜ. 28ರಂದು ನಿರಾಕರಿಸಿದೆ. ಈ ಕಾಪಿ ರೈಟ್ (Copy Right) ಪ್ರಕರಣದ ವಿಚಾರಣೆಯು ಕಳೆದ ವಾರ ಹೈಕೋರ್ಟ್ ನಲ್ಲಿ ಪ್ರಾರಂಭಗೊಂಡಿತ್ತು. ಈ ಸುದ್ದಿಯನ್ನು ಲೈವ್ ಲಾ (Live Law) ವೆಬ್ ಸೈಟ್ ಖಚಿತಪಡಿಸಿದೆ.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ‘ಎಕ್ಸ್’ (X) ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಧನುಷ್ ಅವರಿಂದ ಎನ್.ಒ.ಸಿ. (NOC) ಪಡೆದುಕೊಳ್ಳದೇ ನಯನತಾರಾ ಅವರು ತಮ್ಮ ಡಾಕ್ಯುಮೆಂಟರಿಯಲ್ಲಿ ಧನುಷ್ ನಟನೆಯ ‘ನಾನುಮ್ ರೌಡಿ ಧಾನ್’ (Naanum Rowdy Dhaan) ಚಿತ್ರದ ಕೆಲ ದೃಶ್ಯಗಳನ್ನು ಅಳವಡಿಸಿಕೊಂಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಧನುಷ್ ಅವರು ಸಲ್ಲಸಿದ್ದ ಕಾಪಿ ರೈಟ್ ಕೇಸನ್ನು ವಜಾಗೊಳಿಸುವಂತೆ ಕೋರಿ ನೆಟ್ ಫ್ಲಿಕ್ಸ್ ಇಂಡಿಯಾ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ಮಾನ್ಯ ಮಾಡಿಲ್ಲ ಎಂದು ವರದಿ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನುಷ್ ಅವರು ನೆಟ್ ಫ್ಲಿಕ್ಸ್ ಇಂಡಿಯಾ, ನಯನತಾರಾ, ವಿಘ್ನೇಶ್ ಶಿವನ್ (Vignesh Sivan) ಮತ್ತು ಅವರ ಪ್ರೊಡಕ್ಷನ್ ಸಂಸ್ಥೆಯ ವಿರುದ್ಧ ಕಾಪಿರೈಟ್ ಪ್ರಕರಣ ದಾಖಲಿಸಿದ್ದರು.
ಇದೇ ಸಂದರ್ಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನೆಟ್ ಫ್ಲಿಕ್ಸ್ ಇಂಡಿಯಾ ಒಟಿಟಿ ಫ್ಲ್ಯಾಟ್ ಫಾರಂನ ಲಾಸ್ ಗಾಟೋಸ್‌ಗೆ, ಧನುಷ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ಫೆ. 5ರಂದು ವಿಚಾರಣೆ ನಡೆಸುವುದಾಗಿ ಸೂಚಿಸಿದ್ದಾರೆ.
ನೆಟ್ ಫ್ಲಿಕ್ಸ್ ಪರ ವಕೀಲರು ವಾದವನ್ನು ಮಂಡಿಸಿ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ಫೊಟೋಗಳನ್ನು ಈ ಚಿತ್ರದಿಂದ ಪಡೆದು ಅದನ್ನು ಅಪ್‌ಲೋಡ್ ಮಾಡಿ ಆ ಬಳಿಕ 2020ರಲ್ಲಿ ಅದನ್ನು ತೆಗೆದು ಹಾಕಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು ಮತ್ತು ಈ ಡಾಕ್ಯುಮೆಂಟರಿ ಬಿಡುಗಡೆಗೊಂಡ ಒಂದು ವಾರದ ಬಳಿಕ ಈ ಕಾಪಿರೈಟ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು. ಹೀಗೆ ತಡವಾಗಿ ಪ್ರಕರಣ ದಾಖಲಿಸಿದ ಔಚಿತ್ಯವೇನು ಎಂಬುದನ್ನು ವಕೀಲರು ತಮ್ಮ ವಾದ ಮಂಡನೆಯ ಸಂದರ್ಭದಲ್ಲಿ ಪ್ರಶ್ನಿಸಿದರು.
ಇದನ್ನೂ ಓದಿ: Viral Video: ರೈಲು ಹತ್ತಲು ಮುಗಿಬಿದ್ದ ಪ್ರಯಾಣಿಕರು; ಕಾಲ್ತುಳಿತ ಸ್ಥಿತಿ ನಿರ್ಮಾಣ; ಅಷ್ಟಕ್ಕೂ ಆಗಿದ್ದೇನು?
ಇದಕ್ಕೆ ಪ್ರತಿಯಾಗಿ ಧನುಷ್ ಪರ ವಕೀಲರು ತಮ್ಮ ವಾದ ಮಂಡಿಸಿ, ಈ ರೀತಿಯಾಗಿ ಚಿತ್ರದ ದೃಶ್ಯಗಳನ್ನು ಬಳಸಿಕೊಂಡಿರುವುದಕ್ಕೆ ಸಂಬಂಧಿಸಿ ನಮ್ಮ ಕಡೆಯಿಂದ ಒಂದು ಇ-ಮೇಲ್ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ ಎಂದು ಗಮನ ಸೆಳೆದರು. ಮಾತ್ರವಲ್ಲದೇ ಕಾಸ್ಟ್ಯೂಮ್ ಹಾಗೂ ಹೇರ್ ಸ್ಟೈಲ್‌ಗಳೂ ಸಹ ಪ್ರೊಡಕ್ಷನ್ ಹೌಸ್‌ಗೆ ಕಾನೂನುಬದ್ಧವಾಗಿ ಸಂಬಂಧಿಸಿದ್ದಾಗಿದೆ ಎಂದು ಅವರು ವಾದ ಮಂಡಿಸಿದರು.
ಏನಿದು ಪ್ರಕರಣ?
ಕಳೆದ ವರ್ಷದ ನವೆಂಬರ್‌ನಲ್ಲಿ ನಟ ಧನುಷ್ ಅವರ ವೂಂಡರ್‌ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್, ನಟಿ ನಯನತಾರಾ, ವಿಘ್ನೇಶ್ ಮತ್ತು ಅವರ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಉಲ್ಲೇಖಿಸಿದಂತೆ, ʼನಾನುಮ್ ರೌಡಿ ಧಾನ್ʼ ಚಿತ್ರದಲ್ಲಿನ ಕೆಲವೊಂದು ದೃಶ್ಯಗಳನ್ನು ನೆಟ್ ಫ್ಲಿಕ್ಸ್‌ನ ಡಾಕ್ಯಮೆಂಟರಿ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ನಲ್ಲಿ ಬಳಸಲಾಗಿದೆ ಎಂದು ಆರೋಪಿಸಲಾಗಿತ್ತು.
ಮಾತ್ರವಲ್ಲದೇ ಈ ಪ್ರಕರಣದಲ್ಲಿ, ನೆಟ್‌ಫ್ಲಿಕ್ಸ್ ಭಾರತದ ಹೂಡಿಕೆದಾರರಾಗಿರುವ ಲಾಸ್ ಗಾಟೋಸ್ ಪ್ರೊಡಕ್ಷನ್ ಸರ್ವಿಸಸ್ ಇಂಡಿಯಾ ಎಲ್.ಎಲ್.ಪಿ. ಮೇಲೆ ಪ್ರಕರಣವನ್ನು ದಾಖಲಿಸಲು ಹೈಕೋರ್ಟ್ ಅನುಮತಿ ನೀಡಬೇಕೆಂದೂ ಸಹ ಧನುಷ್ ಅವರ ಸಂಸ್ಥೆ ಅರ್ಜಿಯೊಂದನ್ನು ಸಲ್ಲಿಸಿತ್ತು.