ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಬೆನ್ ಸೀರ್ಸ್ ಔಟ್, ನ್ಯೂಜಿಲೆಂಡ್‌ಗೆ ಆಘಾತ!
Ben Sears Ruled out of the Champions Trophy: ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಬೆನ್ ಸೀರ್ಸ್ ಅವರು ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಆ ಮೂಲಕ 50 ಓವರ್‌ಗಳ ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.

Ben Sears ruled out of the ICC Champions Trophy

ನವದೆಹಲಿ: ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿರುವ ನ್ಯೂಜಿಲೆಂಡ್ ತಂಡದ ಯುವ ವೇಗಿ ಬೆನ್ ಸೀರ್ಸ್ ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈಗಾಗಲೇ ಲಾಕಿ ಫರ್ಗ್ಯೂಸನ್ ಮತ್ತು ರಚಿನ್ ರವೀಂದ್ರ ಗಾಯದಿಂದ ಗುಣಮುಖರಾಗುತ್ತಿದ್ದಾರೆ. ಇದರ ನಡುವೆ ವೇಗಿ ಬೆನ್ ಸೀರ್ಸ್ ಟೂರ್ನಿಯಿಂದ ಹೊರ ನಡೆದಿರುವುದು ನ್ಯೂಜಿಲೆಂಡ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಫೆಬ್ರವರಿ 19 ರಂದು ಪಾಕಿಸ್ತಾನದ ಆತಿಥ್ಯದಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭವಾಗಲಿದೆ. 50 ಓವರ್‌ಗಳ ಐಸಿಸಿ ಟೂರ್ನಿ ಗೆಲ್ಲಲು ಎದುರು ನೋಡುತ್ತಿರುವ ನ್ಯೂಜಿಲೆಂಡ್ ತಂಡಕ್ಕೆ ಗಾಯದ ಭೀತಿ ಶುರುವಾಗಿದೆ.
ಲಾಕಿ ಫರ್ಗ್ಯೂಸನ್ ಮತ್ತು ರಚಿನ್ ರವೀಂದ್ರ ಅವರು ಇನ್ನೂ ಟೂರ್ನಿಯಿಂದ ಹೊರಬಿದ್ದಿಲ್ಲ ಹಾಗೂ ಅವರು ಗಾಯದ ಹೊರತಾಗಿಯೂ ತಂಡದಲ್ಲಿದ್ದಾರೆ. ಇಂಟರ್ ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಆಡುವಾಗ ಲಾಕಿ ಫರ್ಗ್ಯೂಸನ್ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ರಚಿನ್ ರವೀಂದ್ರ ಅವರು ಪಾಕಿಸ್ತಾನ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಕ್ಯಾಚ್ ಪಡೆಯುವ ವೇಳೆ ಚೆಂಡನ್ನು ಮುಖದ ಮೇಲೆ ಹಾಕಿಕೊಂಡು ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ಅವರ ಮುಖದಲ್ಲಿ ರಕ್ತ ಸುರಿದಿತ್ತು.
ಚಾಂಪಿಯನ್ಸ್ ಟ್ರೋಫಿಗೆ ಭಾರತದ ಪ್ಲೇಯಿಂಗ್ XI ಆರಿಸಿದ ಸುರೇಶ್ ರೈನಾ!
ತ್ರಿಕೋನ ಏಕದಿನ ಸರಣಿಯ ಫೈನಲ್‌ಗೂ ಮುನ್ನ ಬೆನ್ ಸೀರ್ಸ್ ಅವರ ಎಡಗಾಲಿನಲ್ಲಿ ಹ್ಯಾಮ್‌ಸ್ಟ್ರಿಂಗ್ ಕಾಣಿಸಿಕೊಂಡಿತ್ತು ಹಾಗೂ ಇವರ ಗಾಯ ಅಷ್ಟೊಂದು ಗಂಭೀರವಾಗಿಲ್ಲವಾದರೂ ಅವರು ಸಂಪೂರ್ಣ ಗುಣಮುಖರಾಗಲು ಕನಿಷ್ಠ ಎರಡು ವಾರಗಳ ಕಾಲ ಪುನಶ್ಚೇತನ ಕಾರ್ಯದಲ್ಲಿ ತೊಡಗಬೇಕಾದ ಅಗತ್ಯವಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಟೂರ್ನಿಯ ಆರಂಭಿಕ ಎರಡು ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ನ್ಯೂಜಿಲೆಂಡ್ ಕ್ರಿಕೆಟ್ ಅವರನ್ನು ಟೂರ್ನಿಯಿಂದಲೇ ಹೊರ ಕಳುಹಿಸಿದೆ.
ಬೆನ್ ಸೀರ್ಸ್ ಸ್ಥಾನ ತುಂಬಿದ ಜಾಕೋಬ್ ಡಫಿ
ಈಗಾಗಲೇ ಪಾಕಿಸ್ತಾನದಲ್ಲಿ ತ್ರಿಕೋನ ಸರಣಿಯಲ್ಲಿ ಆಡುತ್ತಿರುವ ಜಾಕೋಬ್ ಡಫಿ ಅವರು ಚಾಂಪಿಯನ್ಸ್ ಟ್ರೋಫಿ ನ್ಯೂಜಿಲೆಂಡ್ ತಂಡದಲ್ಲಿ ಬೆನ್ ಸೀರ್ಸ್ ಅವರ ಸ್ಥಾನವನ್ನು ತುಂಬಿದ್ದಾರೆ. ವೇಗದ ಬೌಲರ್ ಬೆನ್ ಸೀರ್ಸ್ ಅವರು ಗಾಯಕ್ಕೆ ತುತ್ತಾಗಿರುವುದು ಅನಿರೀಕ್ಷಿತ ಎಂದು ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೀಡ್ ಅಭಿಪ್ರಾಯ ಪಟ್ಟಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
"ಗಾಯಾಳು ಬೆನ್ ಪರ ನಾವು ಭಾವನೆಗಳನ್ನು ಹೊಂದಿದ್ದೇವೆ. ಮಹತ್ವದ ಟೂರ್ನಿಯ ಆರಂಭಕ್ಕೂ ಮುನ್ನ ನಿರ್ಣಾಯಕ ಹಂತದಲ್ಲಿ ತಂಡದಿಂದ ಹೊರಬೀಳುವುದು ನಿಜಕ್ಕೂ ಕಷ್ಟಕರ ಸಂಗತಿಯಾಗಿದೆ. ಅದರಲ್ಲಿಯೂ ಅವರ ಮೊದಲ ಐಸಿಸಿ ಟೂರ್ನಿಯಾಗಿತ್ತು. ಅಂದ ಹಾಗೆ ಅವರು ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿಯಬಹುದು.ಆದರೆ, ಅವರು ಗುಣಮುಖರಾದ ಬಳಿಕ ತಕ್ಷಣ ಟೂರ್ನಿಯಲ್ಲಿ ಆಡಿಸಿ ಅಪಾಯವನ್ನು ಎಳೆದುಕೊಳ್ಳುವುದು ಬೇಡ," ಎಂದು ಕಿವೀಸ್ ಹೆಡ್ ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನ್ಯೂಜಿಲೆಂಡ್ ತಂಡ
ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಂಪ್ಮನ್, ಡೆವೋನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ವಿಲ್ ಒ ರೌರ್ಕಿ, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಜಾಕೀಬ್ ಡಫಿ, ನೇಥನ್ ಸ್ಮಿತ್, ಕೇನ್ ವಿಲಿಯಮ್ಸನ್, ವಿಲ್ ಯಂಗ್