Pavithra Gowda: ಕಾಣದ ಕೈಗಳಿಂದ ಸಾವಿರಾರು ಕುತಂತ್ರ; ಪವಿತ್ರಾ ಗೌಡ ಹೀಗೆ ಪೋಸ್ಟ್ ಮಾಡಿದ್ಯಾಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬರೋಬ್ಬರಿ 6 ತಿಂಗಳು ಜೈಲಿನಲ್ಲಿದ್ದ ಪವಿತ್ರಾ ಗೌಡ ಇದೀಗ ಹೊರ ಬಂದು ಹೊಸ ಜೀವನ ನಡೆಸಲು ಸಿದ್ಧತೆ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ಈಗ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ.

ಪವಿತ್ರಾ ಗೌಡ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಬರೋಬ್ಬರಿ 6 ತಿಂಗಳ ಕಾಲ ಜೈಲಿನಲ್ಲಿದ್ದ ನಟ ದರ್ಶನ್ (Darshan) ಅವರ ಗೆಳತಿ ಪವಿತ್ರಾ ಗೌಡ (Pavithra Gowda) ಜಾಮೀನು ಪಡೆದು ಹೊರ ಬಂದಿದ್ದಾರೆ. ಇದೀಗ ಅವರು ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀಲಾಂಚ್ ಬಗ್ಗೆ ಸೂಚನೆ ನೀಡಿದ್ದ ಅವರು ಇದೀಗ ಸ್ಟೋರಿಯಲ್ಲಿ ಭಗವದ್ಗೀತೆ ಸಂದೇಶ ಹಂಚಿಕೊಂಡು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಅವರು ವಿಡಿಯೊ ಶೇರ್ ಮಾಡಿದ್ದರು. ಇದೀಗ ಭಗವದ್ಗೀತೆ ಸಂದೇಶ ಹಂಚಿಕೊಂಡು ಕುತೂಹಲ ಮೂಡಿಸಿದ್ದಾರೆ. ತಮ್ಮ ವಿರೋಧಿಗಳಿಗೆ ನೀಡಿರುವ ಎಚ್ಚರಿಕೆ ಇದು ಎಂದೇ ಇದನ್ನು ವಿಶ್ಲೇಷಿಸಲಾಗುತ್ತಿದೆ.
ಪವಿತ್ರಾ ಗೌಡ ಹಂಚಿಕೊಂಡ ಸಂದೇಶದಲ್ಲಿ ಏನಿದೆ?
"ಕಾಣದ ಕೈಗಳಿಂದ ಸಾವಿರಾರು ಕುತಂತ್ರಗಳು ನಡೆದರೇನಂತೆ ಮೇಲೊಬ್ಬ ಎಲ್ಲವನ್ನು ವೀಕ್ಷಿಸುತ್ತಿರುವನು. ನಿಮ್ಮ ಕಣ್ಣೀರಿನ ಎಲ್ಲ ಹನಿಗಳಿಗೆ ನ್ಯಾಯ ನೀಡುವನು" ಎಂದು ಬರೆದಿರುವ ಸಂದೇಶವನ್ನು ಒಳಗೊಂಡ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ತಮ್ಮ ವಿರುದ್ಧ ಕುತಂತ್ರ ನಡೆಸುತ್ತಿರುವ ಹಲವು ಮಂದಿಯನ್ನು ಗುರಿಯಾಗಿಸಿಕೊಂಡು ಅವರು ಇದನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಣದ ಕೈ ಯಾವುದು ಎನ್ನುವ ಚರ್ಚೆ ಕೂಡ ಈಗ ಆರಂಭವಾಗಿದೆ. ಇದು ವಿರೋಧಿಗಳಿಗೆ ನೀಡಿದ ಎಚ್ಚರಿಕೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟ್ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಹೊಸ ಅಧ್ಯಾಯ ಆರಂಭಿಸಲು ಸಜ್ಜು
ಹೊಸ ವರ್ಷದಿಂದ ಹೊಸ ಬದುಕು ಕಟ್ಟಿಕೊಳ್ಳಲು ಪವಿತ್ರಾ ಗೌಡ ಸಜ್ಜಾಗಿದ್ದಾರೆ. ತಮ್ಮ ಒಡೆತನದ ಫ್ಯಾಷನ್ ಡಿಸೈನ್ ಶೋರೂಂ ಆಗಿರುವ ರೆಡ್ ಕಾರ್ಪೆಟ್ ಶಾಪ್ ರೀ ಓಪನ್ ಮಾಡಲು ಸಿದ್ದತೆ ನಡೆಸಿದ್ದಾರೆ. ಬೆಂಗಳೂರಿನ ಅರ್.ಅರ್. ನಗರದಲ್ಲಿ ರೆಡ್ ಕಾರ್ಪೆಟ್ ಶೋರೂಂ ಇದ್ದು, ಪವಿತ್ರಾ ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಾತ್ರವಲ್ಲ ಹೊಸ ವರ್ಷದ ಮೊದಲ ದಿನ ಅರ್.ಅರ್. ನಗರದ ತಮ್ಮ ಮನೆಯಲ್ಲಿ ಅವರು ಪೂಜೆ ಮಾಡಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಪವಿತ್ರಾ ಅವರು ಜೈಲು ಸೇರಿದ ನಂತರ ಅವರ ಗೆಳತಿ ಸಮತಾ ಕೆಲವು ತಿಂಗಳ ಕಾಲ ರೆಡ್ ಕಾರ್ಪೆಟ್ ಶೋರೂಂ ಮುನ್ನಡೆಸುತ್ತಿದ್ದರು. ಆದರೆ ಕಳೆದ ಅಕ್ಟೋಬರ್‌ನಿಂದ ಶೋರೋಂ ಕಂಪ್ಲೀಟ್ ಮುಚ್ಚಿದೆ. ಇದೀಗ ಜಾಮೀನು ಮೂಲಕ ಹೊರಗೆ ಬಂದಿರುವ ಪವಿತ್ರ ಗೌಡ ರೆಡ್ ಕಾರ್ಪೆಟ್ ಶಾಪ್ ಪುನರಾರಂಭಿಸುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಬಹು ದಿನಗಳ ಕನಸಾದ ರೆಡ್ ಕಾರ್ಪೆಟ್ ಶಾಪ್ ಅನ್ನು ಪವಿತ್ರಾ ಗೌಡ 2022ರಲ್ಲಿ ಆರಂಭಿಸಿದ್ದರು. ಇದಕ್ಕಾಗಿ 50 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Pavithra Gowda: ಸೋಶಿಯಲ್ ಮೀಡಿಯಾಗೆ ಪವಿತ್ರಾ ಗೌಡ ಕಮ್ ಬ್ಯಾಕ್, ಜೈಲಿನಿಂದ ಬಂದ ನಂತರ ಮೊದಲ ಪೋಸ್ಟ್
ಪವಿತ್ರಾ ಗೌಡ ಮತ್ತು ಇತರರಿಗೆ ಡಿ. 16ರಂದು ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಅವರು ಡಿ. 17ರಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದರು. ದರ್ಶನ್ ಪರಿಚಯವಾಗುವ ಮುನ್ನ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್ ಪವಿತ್ರಾ ಜತೆಗಿಲ್ಲ.