Road Accident: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ, ಮೂವರ ದುರ್ಮರಣ
Road Accident: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ ಹಾಕಿ ಫಲಕಗಳನ್ನು ಹಾಕಿದ್ದರೂ ಅಪಘಾತಗಳು ಸಂಭವಿಸುವುದು ತಪ್ಪಿಲ್ಲ. ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ರಾಮನಗರದ ಹತ್ತಿರ ಜಯಪುರ ಗೇಟ್ ಬಳಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.


ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bangaluru-Mysuru Expressway) ಇಂದು ಮುಂಜಾನೆಯೇ ಭೀಕರ ಅಪಘಾತ (Road Accident) ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬದುಕುಳಿದ ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ರಾಮನಗರ (Ramanagara) ತಾಲೂಕಿನ ಜಯಪುರ ಗೇಟ್ ಬಳಿ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ.
ಮೃತರನ್ನು ಚಿಕ್ಕನಾಯಕಹಳ್ಳಿಯ ತಮ್ಮಣ್ಣಗೌಡ (56), ಪುತ್ರ ಮುತ್ತುರಾಜ್ (28) ಮತ್ತು ಹಾಸನ ಮೂಲದ ಚಾಲಕ ಸಚಿನ್ (27) ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸಂಜು ಎಂಬವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ಬೆಂಗಳೂರಿನಲ್ಲಿ ವಾಸವಾಗಿದ್ದರು. ಮಡವಿನಕೊಡಿ ಗ್ರಾಮದಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬೆಂಗಳೂರಿಗೆ ತೆರಳುವಾಗ ದುರಂತ ಸಂಭವಿಸಿದೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ ಹಾಕಿದ್ದರೂ ಅಪಘಾತಗಳು ಸಂಭವಿಸುವುದು ತಪ್ಪಿಲ್ಲ. ಕಾರು ಅತಿವೇಗದ ಪರಿಣಾಮ ನಿಯಂತ್ರಣ ಕಳೆದುಕೊಂಡಿದೆ ಎಂದು ಊಹಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನ ಎಂಆರ್‌ಪಿಎಲ್ ತೈಲ ಶುದ್ಧೀಕರಣ ಘಟಕದಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರ ಸಾವು
ಮಂಗಳೂರು: ವಿಷಾನಿಲ ಸೋರಿಕೆಯಾಗಿ ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ಘಟನೆ (MRPL Tragedy) ಮಂಗಳೂರು ಹೊರವಲಯದ ಸೂರತ್ಕಲ್‌ನ ಎಂಆರ್‌ಪಿಎಲ್ ತೈಲ ಶುದ್ಧಿಕರಣ ಘಟಕದಲ್ಲಿ ನಡೆದಿದೆ. ದೀಪಚಂದ್ರ ಭಾರ್ತೀಯಾ, ಬಿಜಿಲ್ ಪ್ರಸಾದ್ ಮೃತರು ಎಂದು ತಿಳಿದುಬಂದಿದೆ.
ತೈಲ ಶುದ್ಧೀಕರಣ ಘಟಕದ ಮೂವ್ಮೆಂಟ್ ವಿಭಾಗದಲ್ಲಿ ಈ ಅವಘಡ ನಡೆದಿದೆ. ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಎಂಆರ್‌ಪಿಎಲ್‌ನ ಒಎಂಎಸ್ (ಆಯಿಲ್ ಮೂಮೆಂಟ್ ಸರ್ವೀಸ್) ನಲ್ಲಿ ಘಟನೆ ನಡೆದಿದೆ. ಎಂಎಂಎಸ್ ವಿಭಾಗದ ಟ್ಯಾಂಕ್ ಮೇಲ್ಚಾವಣಿಗೆ ತೆರಳಿದ್ದಾಗ ಇಬ್ಬರು ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ.
ಸಣ್ಣ ಪ್ರಮಾಣದ ಎಚ್2ಎಸ್ (ಹೈಡ್ರೋಜನ್ ಸಲ್ಫೈಡ್) ಅನಿಲ ಸೋರಿಕೆಯಾಗಿದೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕೆಲಸದ ಭಾಗವಾಗಿ ಮಾಸ್ಕ್ ಧರಿಸಿ ಅನಿಲವನ್ನು ಪರೀಕ್ಷಿಸುವಾಗ ಈ ದುರ್ಘಟನೆ ಸಂಭವಿಸಿದೆ. ಬಳಿಕ ಎಂಆರ್‌ಪಿಎಲ್ ಅಗ್ನಿಶಾಮಕ ಮತ್ತು ಸುರಕ್ಷತಾ ತಂಡ ಸೋರಿಕೆಯನ್ನು ಸರಿಪಡಿಸಿದೆ.
ಅಸ್ವಸ್ಥರಾದ ಇಬ್ಬರನ್ನು ತಕ್ಷಣ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಅಸ್ವಸ್ಥರ ರಕ್ಷಣೆಗೆ ಮುಂದಾಗಿದ್ದ ವಿನಾಯಕ ಮೈಗೇರಿ ಎನ್ನುವವರ ಸ್ಥಿತಿ ಕೂಡ ಗಂಭೀರವಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ವಿನಾಯಕಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ತನಿಖೆಗೆ ಎಂಆರ್‌ಪಿಎಲ್ ಆಡಳಿತ ಮಂಡಳಿ ಸಮಿತಿ ರಚನೆ ಮಾಡಿದೆ. ಗ್ರೂಪ್ ಜನರಲ್ ಮ್ಯಾನೇಜರ್ ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದೆ.
ಇದನ್ನೂ ಓದಿ: Tigers Death: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮೂರು ಹುಲಿಗಳ ಸಾವು