Open Fire: ಅಜ್ಮೀರ್; ಹಿಂದೂ ಸೇನಾ ಅಧ್ಯಕ್ಷನ ಕಾರಿನ ಮೇಲೆ ಗುಂಡು ಹಾರಿಸಿದ ಕಿಡಿಗೇಡಿಗಳು!
ಅಜ್ಮೀರ್ ಷರೀಫ್ ದರ್ಗಾವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಗೆ ಒತ್ತಾಯಿಸಿ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರ ಕಾರಿನ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಷ್ಣು ಗುಪ್ತಾ ಇಂದು(ಜ.25) ಮುಂಜಾನೆ ಅಜ್ಮೀರ್‌ನಿಂದ ದೆಹಲಿಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೂ ಬೆದರಿಕೆ ಬಂದಿತ್ತು ಎಂದು ಆರೋಪಿಸಿ ಗುಪ್ತಾ ದೂರು ದಾಖಲಿಸಿದ್ದಾರೆ.


ಜೈಪುರ: ಅಜ್ಮೀರ್ ಷರೀಫ್ ದರ್ಗಾವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಸಮೀಕ್ಷೆಗೆ ಒತ್ತಾಯಿಸಿ ಕಳೆದ ವರ್ಷ ಅರ್ಜಿ ಸಲ್ಲಿಸಿದ್ದ ಹಿಂದೂ ಸೇನೆಯ ಅಧ್ಯಕ್ಷ(Hindu Sena President) ವಿಷ್ಣು ಗುಪ್ತಾ(Vishnu Gupta) ಅವರ ಕಾರಿನ ಮೇಲೆ ಇಬ್ಬರು ಗುಂಡು ಹಾರಿಸಿದ್ದಾರೆ(Open Fire) ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಷ್ಣು ಗುಪ್ತಾ ಇಂದು(ಜ.25) ಮುಂಜಾನೆ ಅಜ್ಮೀರ್‌ನಿಂದ ದೆಹಲಿಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.ಈ ಹಿಂದೆಯೂ ಬೆದರಿಕೆಗಳು ಬಂದಿದ್ದವು ಎಂದು ಆರೋಪಿಸಿರುವ ಗುಪ್ತಾ ತಮಗೆ ಜೀವ ಭಯವಿದೆ ಎಂದು ಹೇಳಿ ದೂರು ದಾಖಲಿಸಿದ್ದಾರೆ.
ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ರಾಣಾ ಅವರು ಈ ಸಂಬಂಧ ಮಾತನಾಡಿದ್ದು“ಘಟನೆಯು ಗಂಗ್ವಾನಾ ಗ್ರಾಮದ ಬಳಿ ಅಜ್ಮೀರ್-ದೆಹಲಿ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಮೇಲ್ನೋಟಕ್ಕೆ ಕಾರಿನ ಮೇಲೆ ಗುಂಡಿನ ರಂಧ್ರ ಪತ್ತೆಯಾಗಿದೆ. ಕಾರು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪರೀಕ್ಷಿಸಲು ನಾವು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡವನ್ನು ಕರೆಸಿದ್ದೇವೆ. ನಾವು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದೇವೆ. ವಿಷ್ಣು ಗುಪ್ತಾ ಸುರಕ್ಷಿತವಾಗಿದ್ದಾರೆ. ನಾವು ಅವರ ವಿಚಾರಣೆ ನಡೆಸುತ್ತಿದ್ದೇವೆ. ಅಪರಾಧಿಗಳಿಗಾಗಿ ಹುಡುಕುತ್ತಿದ್ದೇವೆ" ಎಂದಿದ್ದಾರೆ.
#WATCH | Ajmer, Rajasthan: Hindu Sena national president Vishnu Gupta, who claimed that there is a temple in Ajmer Dargah, has alleged that two unidentified miscreants fired at his car pic.twitter.com/3QME0k8Sjm
— ANI (@ANI) January 25, 2025
ಅಜ್ಮೀರ್ ದರ್ಗಾ ಸಂಬಂಧಿತ ಅರ್ಜಿಯ ವಿಚಾರಣೆಗೆ ಹಾಜರಾಗಲು ಗುಪ್ತಾ ನಿನ್ನೆ(ಜ.24) ನಗರಕ್ಕೆ ಆಗಮಿಸಿದ್ದರು. ಅಜ್ಮೀರ್ ಷರೀಫ್ ದರ್ಗಾದಲ್ಲಿರುವ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯ ಕೆಳಗೆ ಶಿವ ದೇವಾಲಯವಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಗುಪ್ತಾ ಅವರು ಅಜ್ಮೀರ್ ಸೆಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು, ಇದನ್ನು ಎಎಸ್‌ಐ ದಾಖಲೆಗಳ ಪ್ರಕಾರ 1236 ರಲ್ಲಿ ಸ್ಥಾಪಿಸಲಾಗಿದೆ ಎಂಬ ಮಾಹಿತಿಯಿದೆ.
ಈ ಸುದ್ದಿಯನ್ನೂ ಓದಿ:ಭದ್ರತಾ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಘಟನೆಯ ಕುರಿತು ಸ್ವತಃ ಮಾತನಾಡಿರುವ ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ "ಇಂದು ಬೆಳಗ್ಗೆ ನನ್ನ ಕಾರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ದ್ವಿಚಕ್ರ ವಾಹನವೊಂದು ಕಾಣಿಸಿಕೊಂಡಿತು. ಅಪರಿಚಿತ ವ್ಯಕ್ತಿಗಳು ನನ್ನ ಕಾರಿನ ಮೇಲೆ ಏಕಾಏಕಿ ಗುಂಡು ಹಾರಿಸಲು ಪ್ರಾರಂಭಿಸಿದರು. ನಾನು ನನ್ನ ಡ್ರೈವರ್ ಬಳಿ ಕಾರನ್ನು ವೇಗಗೊಳಿಸಲು ಹೇಳಿದೆ. ನಾನು ಕಿಟಕಿಯಿಂದ ನೋಡಿದಾಗ, ಇಬ್ಬರು ಓಡಿ ಹೋಗುತ್ತಿರುವುದನ್ನು ಗಮನಿಸಿದೆ. ತಕ್ಷಣವೇ ಪೊಲೀಸರಿಗೆ ಕರೆ ಮಾಡಿದೆ.ನನಗೆ ಜೀವ ಭಯವಿದೆ" ಎಂದರು. ಪೊಲೀಸರು ತನಿಖೆ ಪ್ರಾರಂಭಿಸಿದ್ದು,ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಿದ್ದಾರೆ.