Compensation: ಪಾಕಿಸ್ತಾನದ ದಾಳಿಯಲ್ಲಿ ನಾಶವಾದ ಮನೆ, ವಾಹನಗಳಿಗೆ ಪರಿಹಾರ ಸಿಗುತ್ತಾ?
ಸಂಘರ್ಷದ ವೇಳೆ ಹಾನಿಗೊಳಗುವ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಪರಿಹಾರ ನೀಡಲಾಗುತ್ತದೆ. ಈ ಮೊತ್ತವು ಹಾನಿಯನ್ನು ಅವಲಂಭಿಸಿ ನಿರ್ಧರಿಸಲಾಗುತ್ತದೆ. ಮನೆ ಕಳೆದುಕೊಂಡವರಿಗೆ ವಿವಿಧ ಯೋಜನೆಗಳ ಮೂಲಕ ಮನೆ ನಿರ್ಮಿಸಲು ಸಹಾಯ ಮಾಡಲಾಗುತ್ತದೆ. ಇನ್ನು ಉಳಿದಂತೆ ಸ್ವತ್ತುಗಳ ಹಾನಿಗೆ 5- 10 ಲಕ್ಷ ರೂ. ಗಳ ವರೆಗೆ ಪರಿಹಾರವನ್ನು ನೀಡಲಾಗುತ್ತದೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam) ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ (Terror Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಸಂಘರ್ಷದ ವೇಳೆ ಪಾಕಿಸ್ತಾನದ (Pakistan) ಶೆಲ್, ಡ್ರೋನ್ (Drone Strikes) ಮತ್ತು ಕ್ಷಿಪಣಿ ದಾಳಿಗಳಿಂದ (Missile Strikes) ದೇಶದ ಗಡಿ ಭಾಗದ ಗ್ರಾಮಗಳು ಸೇರಿದಂತೆ ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಮನೆ, ವಾಹನ, ಆಸ್ತಿಗಳಿಗೆ ಹಾನಿಯಾಗಿವೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದನ್ನು ಸರಿಪಡಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ಸರ್ಕಾರ ವಿವಿಧ ಯೋಜನೆಗಳ ಅಡಿಯಲ್ಲಿ ಪರಿಹಾರ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಗಡಿಯಾಚೆಗಿನ ಸಂಘರ್ಷ, ಭಯೋತ್ಪಾದನೆಯಿಂದ ಉಂಟಾಗುವ ಹಾನಿಗಳಿಗೆ ಕೇಂದ್ರ ಸರ್ಕಾರವು ಆರ್ಥಿಕ ಪರಿಹಾರವನ್ನು ನೀಡುತ್ತದೆ. ಇದನ್ನು ವಿಪತ್ತು ನಿರ್ವಹಣೆ ಮತ್ತು ಪರಿಹಾರ ಇಲಾಖೆಗಳ ಮೂಲಕ ಒದಗಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಸಮನ್ವಯತೆಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಕಾಲಿಕವಾಗಿ ಪರಿಹಾರ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಹಾಗೂ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ನಷ್ಟ ಅನುಭವಿಸಿರುವವರಿಗೆ ಸರ್ಕಾರವು ಪರಿಹಾರವನ್ನು ಘೋಷಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDMA) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ಇದನ್ನು ಕಾರ್ಯಗತಗೊಳಿಸುತ್ತಿದೆ.
ಈ ಪರಿಹಾರವನ್ನು ಪಡೆಯಲು ಕೆಲವೊಂದು ಷರತ್ತುಗಳಿವೆ. ಅವುಗಳೆಂದರೆ ತೊಂದರೆಗೊಳಗಾದ ವ್ಯಕ್ತಿಯು ಭಾರತೀಯನಾಗಿರಬೇಕು ಮತ್ತು ಸಂಘರ್ಷ ಪೀಡಿತ ಪ್ರದೇಶದ ನಿವಾಸಿಯಾಗಿರಬೇಕು. ಮನೆ ಅಥವಾ ವಾಹನ ಹಾನಿಯಾದರೆ ಅದರ ಮಾಲೀಕತ್ವವನ್ನು ಹಕ್ಕುದಾರರು ಹೊಂದಿರಬೇಕು. ಆಸ್ತಿ ದಾಖಲೆಗಳು ಅಥವಾ ನೋಂದಣಿ ಪ್ರಮಾಣಪತ್ರಗಳು ಮಾನ್ಯವಾಗಿರಬೇಕು.
ಸ್ಥಳೀಯ ಆಡಳಿತ ಅಥವಾ ಸರ್ಕಾರಿ ಅಧಿಕಾರಿಗಳು ಆಗಿರುವ ಹಾನಿಯ ಪ್ರಮಾಣವನ್ನು ನಿರ್ಧರಿಸಿ ಛಾಯಾಚಿತ್ರ, ಎಫ್ ಐಆರ್ ಪ್ರತಿ ಸೇರಿದಂತೆ ಹಲವು ದಾಖಲೆಗಳನ್ನು ಪಡೆದು ಪರಿಹಾರಕ್ಕೆ ಸಂಬಂಧಿಸಿ ಅಹವಾಲು ಸ್ವೀಕರಿಸುತ್ತಾರೆ. ಭಾರತ ಮತ್ತು ಪಾಕಿಸ್ತಾನದ ಗಡಿ ಸಂಘರ್ಷ ಅಥವಾ ಭಯೋತ್ಪಾದಕ ಚಟುವಟಿಕೆಗಳಿಂದ ನೇರ ಪರಿಣಾಮ ಬಿದ್ದಿದ್ದರೆ ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪರಿಹಾರ ಮೊತ್ತ ಎಷ್ಟು ?
ನಷ್ಟದ ಪ್ರಮಾಣದ ಮೇಲೆ ಪರಿಹಾರ ಮೊತ್ತವು ಬದಲಾಗುತ್ತದೆ. ಸಂಪೂರ್ಣವಾಗಿ ನಾಶವಾಗಿರುವ ಮನೆಗಳಿಗೆ 5-10 ಲಕ್ಷ ರೂ. ವರೆಗೆ ಪರಿಹಾರ ಪಡೆಯಬಹುದು. ಇದನ್ನು ಹೆಚ್ಚಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ವಿತರಿಸಲಾಗುತ್ತದೆ. ಭಾಗಶಃ ಹಾನಿಗೊಳಗಾದ ಮನೆಗಳ ದುರಸ್ತಿಗಾಗಿ 50,000 ರೂ.ಯಿಂದ 2 ಲಕ್ಷ ರೂ. ವರೆಗೆ ಪರಿಹಾರ ಪಡೆಯಬಹುದು. ಸ್ಥಳಾಂತರಗೊಂಡ ಕುಟುಂಬಗಳಿಗೆ ತಾತ್ಕಾಲಿಕ ವಸತಿ ವೆಚ್ಚಗಳನ್ನು ಭರಿಸಲು ತಿಂಗಳಿಗೆ 10,000 ರಿಂದ 20,000 ರೂ. ವರೆಗೆ ಪರಿಹಾರ ನೀಡಲಾಗುತ್ತದೆ.
ವಾಹನಗಳಿಗೆ ಆಗುವ ನಷ್ಟಕ್ಕೆ ನೀಡುವ ಪರಿಹಾರವು ಮಾರುಕಟ್ಟೆ ಮೌಲ್ಯವನ್ನು ಅವಲಂಬಿಸಿರುತ್ತದೆ. ಒಟ್ಟು ನಷ್ಟಗಳಿಗೆ 50,000ರಿಂದ 5 ಲಕ್ಷ ರೂ. ಮತ್ತು ದುರಸ್ತಿಗೆ 10,000ರಿಂದ 1 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತದೆ. ಟ್ಯಾಕ್ಸಿ, ಆಟೋ-ರಿಕ್ಷಾಗಳಂತಹ ವಾಣಿಜ್ಯ ವಾಹನಗಳಿಗೆ ಹೆಚ್ಚುವರಿ ಪರಿಹಾರ ಸಿಗುತ್ತದೆ.
ಕೃಷಿ ಭೂಮಿ ಮತ್ತು ಜಾನುವಾರು ಹಾನಿಗೆ 30,000ರಿಂದ 50,000 ರೂ. ವರೆಗೆ ಪರಿಹಾರ ಪಡೆಯಬಹುದು. ಸಂತ್ರಸ್ತರು ತಮಗೆ ಆಗಿರುವ ನಷ್ಟವನ್ನು ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಪರಿಹಾರ ಪಡೆಯುವ ವಿಧಾನ
ಸಂತ್ರಸ್ತರು ದಾಖಲೆಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆ, ತಹಸಿಲ್ ಕಚೇರಿ ಅಥವಾ ಜಿಲ್ಲಾಡಳಿತಕ್ಕೆ ವರದಿ ಮಾಡಬೇಕು. ಇದರೊಂದಿಗೆ ಹಾನಿಗೆ ಕಾರಣ ಮತ್ತು ಸಮಯವನ್ನು ನಿರ್ಧರಿಸಲು ಎಫ್‌ಐಆರ್ ದಾಖಲಿಸಬೇಕು. ಹಾನಿಯ ಪ್ರಮಾಣವನ್ನು ಸ್ಥಳೀಯ ಆಡಳಿತ, ಕಂದಾಯ ಇಲಾಖೆ ಅಥವಾ ವಿಪತ್ತು ನಿರ್ವಹಣಾ ತಂಡವುನಿರ್ಧರಿಸುತ್ತದೆ. ಪರಿಹಾರಕ್ಕಾಗಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Viral Video: ಚಲಿಸುತ್ತಿದ್ದ ಕಾರಿನಲ್ಲಿ ಯುವಕರ ಡೇಂಜರಸ್ ಸ್ಟಂಟ್; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ
ಇದು ತಿಳಿದಿರಲಿ
ಈ ಪ್ರಕ್ರಿಯೆ ಸುದೀರ್ಘವಾಗಿರುವುದರಿಂದ ತಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ. ಪರಿಹಾರದ ಮೊತ್ತವು ಸಾಮಾನ್ಯವಾಗಿ ಹಾನಿಯ ಸಂಪೂರ್ಣ ವೆಚ್ಚವನ್ನು ಭರಿಸುವುದಿಲ್ಲ. ಸರಿಯಾದ ದಾಖಲೆಗಳು ಇಲ್ಲದೇ ಇದ್ದರೆ ಪರಿಹಾರ ಪಡೆಯುವುದು ಕಷ್ಟವಾಗುತ್ತದೆ. ಕೆಲವೊಂದು ವಿಮಾ ಯೋಜನೆಗಳು ಯುದ್ಧ, ಭಯೋತ್ಪಾದನೆ ಅಥವಾ ಮಿಲಿಟರಿ ಕಾರ್ಯಾಚರಣೆಯಿಂದ ಉಂಟಾಗುವ ಹಾನಿಗೆ ಪರಿಹಾರವನ್ನು ನೀಡುವುದಿಲ್ಲ.
ಈ ಹಿಂದೆ ನೀಡಲಾಗಿದೆಯೇ?
2014, 2016, 2019ರಲ್ಲಿ ನಡೆದ ದಾಳಿಯ ಸಂದರ್ಭಗಳಲ್ಲಿ ಅರ್ಹರಿಗೆ 50,000 ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಪರಿಹಾರವನ್ನು ನೀಡಲಾಗಿತ್ತು.