Puri Jagannath Rath Yatra: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಜಗನ್ನಾಥನ ರಥಯಾತ್ರೆ
ಒಡಿಶಾದ ಕಡಲ ತೀರದ ದೇವಾಲಯ ಪಟ್ಟಣ ಪುರಿಯಲ್ಲಿ ಲಕ್ಷಾಂತರ ಜನರು ಸೇರಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಈಗಾಗಲೇ ಜಗನ್ನಾಥನ ರಥಯಾತ್ರೆ ಪ್ರಾರಂಭವಾಗಿದೆ. ಇದರ ಸುಂದರ ದೃಶ್ಯಾವಳಿಗಳು ಇಲ್ಲಿವೆ. ಬೆಳಗ್ಗೆ ಆರು ಗಂಟೆಗೆ ಪ್ರಾರಂಭವಾದ ರಥಯಾತ್ರೆಯು ಅಪರಾಹ್ನ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಇದರ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳುವಾಗ ಸ್ವರ್ಗವೇ ಧರೆಗೆ ಇಳಿದಂತೆ ಭಾಸವಾಗುತ್ತದೆ.



ಒಡಿಶಾದ ಪುರಿಯಲ್ಲಿ ಶುಕ್ರವಾರ ಬೆಳಗ್ಗೆ ಜಗನ್ನಾಥ ರಥಯಾತ್ರೆ ಆರಂಭವಾಗಿದೆ. ಬಿಗಿ ಭದ್ರತೆಯ ನಡುವೆಯೂ ಲಕ್ಷಾಂತರ ಭಕ್ತರು ಸೇರಿ ಜಗನ್ನಾಥನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಪುರಿಯಲ್ಲಿ ನಡೆಯುವ ಈ ಭವ್ಯ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶಗಳ ಭಕ್ತರು ಸೇರಿದ್ದಾರೆ. ಸುಮಾರು 3 ಕಿ.ಮೀ. ದೂರದವರೆಗೆ ಈ ರಥಯಾತ್ರೆ ನಡೆಯಲಿದೆ.

ಒಡಿಶಾದ ಪುರಿಯ ಜಗನ್ನಾಥನ ಪವಿತ್ರ ರಥಯಾತ್ರೆಯು ಬೆಳಗ್ಗೆ 6 ಗಂಟೆಗೆ ಮಂಗಳ ಆರತಿಯೊಂದಿಗೆ ಪ್ರಾರಂಭವಾಗುತ್ತದೆ. ಅನಂತರ ಸೂರ್ಯ ಪೂಜೆ ಮತ್ತು ಅಪರಾಹ್ನ 3.30ಕ್ಕೆ ವಿದ್ಯುಕ್ತ ಛೇರಾ ಪನ್ಹಾರ ಸೇರಿದಂತೆ ವಿವಿಧ ಪ್ರಮುಖ ಆಚರಣೆಗಳು ನಡೆಯಲಿವೆ.

ಪುರಿಯ ಜಗನ್ನಾಥ ದೇವಾಲಯದಲ್ಲಿನ ದೇವರು ಹದಿನೈದು ದಿನಗಳ ಅನಂತರ ಭಕ್ತರ ಮುಂದೆ ಶುಕ್ರವಾರ ಕಾಣಿಸಿಕೊಂಡರು. ಜೂನ್ 11ರಂದು ದೇವರಿಗೆ ಸ್ನಾನ ಮಾಡಿಸಿ ಸಾರ್ವಜನಿಕ ದರ್ಶನವನ್ನು ನಿಲ್ಲಿಸಲಾಗಿತ್ತು. ಈ ವೇಳೆ ಭಕ್ತರಿಗೆ ದೇವರು ಕಾಣಿಸುವುದಿಲ್ಲ. ಯಾಕೆಂದರೆ ಅವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ರಥಯಾತ್ರೆಗೆ ಹದಿನೈದು ದಿನಗಳ ಮೊದಲು ಅವರು ಪ್ರತ್ಯೇಕ ಕೊಠಡಿಯಲ್ಲಿ ಏಕಾಂತದಲ್ಲಿರುತ್ತಾರೆ ಎನ್ನುವ ನಂಬಿಕೆ ಇದೆ.

ರಥಯಾತ್ರೆಯ ವಿವಿಧ ಆಚರಣೆಗಳು ಪೂರ್ಣಗೊಂಡ ಅನಂತರ ಸಹೋದರ ದೇವತೆಗಳಾದ ಬಲಭದ್ರ, ದೇವಿ ಸುಭದ್ರ ಮತ್ತು ಜಗನ್ನಾಥ ದೇವರ ರಥಗಳನ್ನು ಎಳೆಯುವ ಕಾರ್ಯ ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ. ಪುರಿಯ ರಥಯಾತ್ರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಪುರಿಯಾದ್ಯಂತ 35 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು 13ನೇ ಶತಮಾನದ ಸೂರ್ಯ ದೇವಾಲಯಕ್ಕೆ ಹೆಸರುವಾಸಿಯಾದ ಕೋನಾರ್ಕ್ನ ರಸ್ತೆಗಳಲ್ಲಿ 275ಕ್ಕೂ ಹೆಚ್ಚು ಎಐ ಸಕ್ರಿಯಗೊಳಿಸಿದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಪೊಲೀಸ್ ಡ್ರೋನ್ಗಳು, ಬಾಂಬ್ ಸ್ಕ್ವಾಡ್ಗಳು ಮತ್ತು ಶ್ವಾನ ದಳಗಳನ್ನು ಕೂಡ ನಿಯೋಜಿಸಲಾಗಿದೆ. ಮೆರೈನ್ ಪೊಲೀಸ್, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯಿಂದ ರಕ್ಷಣೆಯನ್ನು ಒದಗಿಸಲಾಗಿದೆ.