DC vs RR: ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಸಂಜು, ಕುಲ್ದೀಪ್, ನಿತೀಶ್ ರಾಣಾ
ಸತತವಾಗಿ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಟಕೀಯ ಕುಸಿತಕ್ಕೆ ಸಿಲುಕಿ ಸೋಲನುಭವಿಸಿತ್ತು. ಇದೀಗ ಮತ್ತೆ ಗೆಲುವಿನ ಹಳಿಗೆ ಮರಳಲು ಬುಧವಾರ ತವರಿನ ಕೋಟ್ಲಾ ಮೈದಾನದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.



ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಆಡಿದ ಆರು ಪಂದ್ಯಗಳ ಪೈಕಿ ಕೇವಲ ಎರಡನ್ನಷ್ಟೇ ಗೆದ್ದು 8ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ಬುಧವಾರ(ಎ.16) ನಡೆಯುವ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಡೆಲ್ಲಿ ವಿರುದ್ಧ ಗೆಲುವಿನ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್, ನಿತೀಶ್ ರಾಣಾ ಮತ್ತು ಕುಲ್ದೀಪ್ ಯಾದವ್ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 65 ರನ್ ಬಾರಿಸಿದರೆ, ರಾಜಸ್ಥಾನ್ ರಾಯಲ್ಸ್ ಪರ 4 ಸಾವಿರ ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ವರೆಗೆ ಸಂಜು ರಾಜಸ್ಥಾನ್ ಪರ 168 ಪಂದ್ಯಗಳನ್ನಾಡಿ 3,935* ರನ್ ಬಾರಿಸಿದ್ದಾರೆ. ಒಟ್ಟಾರೆಯಾಗಿ 173 ಐಪಿಎಲ್ ಪಂದ್ಯ ಆಡಿದ್ದಾರೆ.

ಎಡಗೈ ಬ್ಯಾಟರ್ ನಿತೀಶ್ ರಾಣಾ ಅವರು ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ 200ನೇ ಟಿ20 ಪಂದ್ಯವನ್ನಾಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಿತೀಶ್ ರಾಣಾ ಈ ವರೆಗೆ ಐಪಿಎಲ್ನಲ್ಲಿ 2753 ರನ್ ಮತ್ತು 10 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.

ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರು ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಉರುಳಿಸಿದರೆ, ಐಪಿಎಲ್ನಲ್ಲಿ 100 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಜತೆಗೆ ಈ ಸಾಧನೆಗೈದ 27ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಸದ್ಯ 89* ಪಂದ್ಯಗಳಿಂದ 97* ವಿಕೆಟ್ ಪಡೆದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದುವರೆಗಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 29 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಡೆಲ್ಲಿ 14 ಪಂದ್ಯ ಗೆದ್ದರೆ, ರಾಜಸ್ಥಾನ್ 15 ಪಂದ್ಯ ಗೆದ್ದಿದೆ. ಇಂದು ಡೆಲ್ಲಿ ಗೆದ್ದರೆ ಗೆಲುವಿನ ದಾಖಲೆ ಸಮಾನವಾಗಲಿದೆ.
ಇದನ್ನೂ ಓದಿ IPL 2025: ಭುವನೇಶ್ವರ್ ಕುಮಾರ್ ದಾಖಲೆ ಸರಿಗಟ್ಟಿದ ನರೈನ್