ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಸುದ್ದಿ ಹರಡುವ ಮುಂಚೆ, ಸ್ವಲ್ಪ ಯೋಚಿಸಿ !

Roopa Gururaj Column: ಸುದ್ದಿ ಹರಡುವ ಮುಂಚೆ, ಸ್ವಲ್ಪ ಯೋಚಿಸಿ !

ಒಂದೊಳ್ಳೆ ಮಾತು

ರೂಪಾ ಗುರುರಾಜ್

ಒಮ್ಮೆ ಬುದ್ಧ ಒಂದು ಕಾಡಿನಲ್ಲಿ ಒಬ್ಬರೇ ಕುಳಿತ್ತಿದ್ದರು.‌ ಇದ್ದಕ್ಕಿದ್ದಂತೆ ಕಾಡಿನ ಎಲ್ಲ ಪ್ರಾಣಿ ಪಕ್ಷಿಗಳೂ ಏನೋ ಅಪಾಯ ಘಟಿಸಿದಂತೆ ಎಲ್ಲವೂ ಒಂದೇ ಕಡೆಗೆ ಓಡತೊಡಗಿದವು. ಇವೆಲ್ಲ ಹೀಗೆ ಓಡುತ್ತಿರುವುದನ್ನು ಕಂಡು,ಇವಕ್ಕೆ ಏನಾಗಿರಬಹುದು ಎಂಬ ಆತಂಕ ಬುದ್ಧರಿಗೆ ಉಂಟಾಯಿತು.

ಓಡುತ್ತಿದ್ದ ಒಂದು ಜಿಂಕೆಯನ್ನು ತಡೆದು ನಿಲ್ಲಿಸಿ ‘ಏನಾಯ್ತು? ಎಲ್ಲರೂ ಎಲ್ಲಿಗೆ ಹೀಗೆ ಓಡುತ್ತಿರುವಿರಿ?’ ಎಂದುಕೇಳಿದರು. ಆಗ ಜಿಂಕೆ ‘ನನ್ನನ್ನು ಬಿಟ್ಟುಬಿಡಿ ನನಗೆ ನಿಲ್ಲುವಷ್ಟು ಸಮಯವಿಲ್ಲ ನಿಮಗೆ ತಿಳಿದಿಲ್ಲವೇ? ಇಡೀ ಪ್ರಪಂಚದ ಕಟ್ಟಕಡೆಯ ದಿನ ಬಂದುಬಿಟ್ಟಿದೆಯಂತೆ ಇಡೀ ಸೃಷ್ಟಿಯೇ ನಾಶವಾಗಲಿದೆಯಂತೆ ಮಹಾಪ್ರಳಯ ಬರುತ್ತಿದೆಯಂತೆ’ ಎಂದು ಹೇಳಿತು.

ಆಗ ಬುದ್ಧ, ‘ಇದನ್ನು ನಿನಗೆ ಯಾರು ಹೇಳಿದರು?’ ಎಂದು ಕೇಳಿದರು. ಆಗ ಜಿಂಕೆ ‘ಅದೊ ಅಲ್ಲಿ ನೋಡಿ ಅಲ್ಲಿ ಮುಂದೆ ಓಡುತ್ತಿzರಲ್ಲ ಅವರು ಹೇಳಿದರು’ ಎಂದಿತು. ಬುದ್ಧ, ಮುಂದೆ ಓಡುತ್ತಿದ್ದ ಪ್ರಾಣಿಗಳ ಬಳಿಗೆ ಹೋಗಿ ಒಂದು ಪ್ರಾಣಿ ಯನ್ನು ಹಿಡಿದು ನಿಲ್ಲಿಸಿ ‘ಏತಕ್ಕಾಗಿ ಹೀಗೆ ಓಡಿ ಹೋಗುತ್ತಿರುವೆ’ ಎಂದು ಕೇಳಿದರು.

‘ಅದೆಲ್ಲ ನನಗೆ ಗೊತ್ತಿಲ್ಲ, ಹುಲಿಯೂ ಓಡುತ್ತಿದೆ ಆನೆಯೂ ಓಡುತ್ತಿದೆ ಅದಕ್ಕೆ ನಾನೂ ಓಡುತ್ತಿದ್ದೇನೆ’ ಎಂದಿತು.ಕೊನೆಗೆ ಎಲ್ಲರಿಗಿಂತ ಮುಂದೆ, ಒಂದು ಮೊಲಗಳ ಹಿಂಡಿಗೆ ಅದೇ ಪ್ರಶ್ನೆ ಕೇಳಿದಾಗ ಆ ಮೊಲಗಳಿಗೆ ನಿಲ್ಲುವಷ್ಟು ಸಹಧೈರ್ಯವಿರಲಿಲ್ಲ, ತ್ರಾಣವಿರಲಿಲ್ಲ, ಅವು ಓಡಿ, ಓಡಿ ಬಹಳ ಸುಸ್ತಾಗಿದ್ದವು. ಆದರೂ, ಅವು ಓಡುತ್ತಲೇ, ಕೂಗಿ ಹೇಳಿದವು,

‘ಮುಂದೆ ಓಡುತ್ತಿದ್ದಾನಲ್ಲ, ನಮ್ಮ ನಾಯಕ, ಅವನು ಹೇಳಿದ್ದು’ ಎಂದವು. ಅಂತೂ ಮೊಲಗಳ ನಾಯಕನನ್ನು ನಿಲ್ಲಿಸಿ ಬುದ್ಧ ‘ಎಲ್ಲಿ ಓಡುತ್ತಿರುವೆ ಮಿತ್ರಾ?’ ಎಂದು ಕೇಳಿದರು. ಆಗ ನಾಯಕ ಮೊಲ, ‘ಮುಂದೆ ಇನ್ಯಾರು ಇಲ್ಲದಿದ್ದಕಾರಣ ಅದು ಮಹಾಪ್ರಳಯ ಬಂದಿದೆ ಅದಕ್ಕೆ ಓಡುತ್ತಿದ್ದೇನೆ’ ಎಂದು ಹೇಳಿತು. ‘ಅದನ್ನು ನಿನಗೆ ಯಾರು ಹೇಳಿ ದರು?’ ಎಂದರು ಬುದ್ಧ. ‘ಯಾರೂ ಹೇಳಲಿಲ್ಲ ನನಗೆ ಹಾಗೆಂದು ಅನಿಸಿತು’ ಎಂದಿತು.

‘ನಿನಗೆ ಏಕೆ ಹಾಗೆ ಅನಿಸಿತು?’ ಎಂದಾಗ ‘ನಾನೊಂದು ಮರದ ಕೆಳಗೆ ಮಲಗಿz, ಮಟ ಮಟ ಮಧ್ಯಾಹ್ನದ ಸಮಯ, ಬಿಸಿಲಿನ ತಾಪ ಬಹಳವಾಗಿತ್ತು. ಆಗ ತಣ್ಣಗೆ ಗಾಳಿ ಬೀಸುತ್ತಿತ್ತು, ಮರದ ನೆರಳಿನಲ್ಲಿ ಆರಾಮವಾಗಿ ಮಲಗಿದ್ದೆ, ಇದ್ದಕ್ಕಿದ್ದಂತೆ ಭಯಂಕರ ಶಬ್ದ ಕೇಳಿಸಿತು ನನ್ನ ಅಮ್ಮ ಚಿಕ್ಕ ವಯಸ್ಸಿನಲ್ಲಿ ನನಗೆ ಹೇಳಿದ್ದಳು, “ಈ ರೀತಿ ಭಯಂಕರಶಬ್ದವಾದರೆ, ಮಹಾಪ್ರಳಯವಾಗಿ ಬಿಡುತ್ತದೆ" ಎಂದು. ಅದಕ್ಕೆ ಪ್ರಳಯವಾಗುತ್ತಿರಬೇಕೆಂದುಕೊಂಡು ನಾನು ಓಡತೊಡಗಿದೆ’ ಎಂದಿತು ನಾಯಕ ಮೊಲ. ಆಗ ಬುದ್ಧ ‘ಅಯ್ಯೋ, ಹುಚ್ಚು ಮೊಲವೇ, ನೀನ್ಯಾವ ಮರದ ಕೆಳಗೆ ಮಲಗಿದ್ದೆ?’ ಎಂದರು.

‘ಮಾವಿನ ಮರದ ಕೆಳಗೆ ಮಲಗಿದ್ದೆ’ ಎಂದಿತು ಮೊಲ. ‘ಮೇಲಿಂದ ಮಾವಿನ ಹಣ್ಣೇನಾದರೂ ಬಿದ್ದಿತೇನು?’ ಎಂದುಕೇಳಿದರು ಬುದ್ಧ. ಆಗ ಮೊಲ ‘ಓಹೋ, ಹಾಗೂ ಇರಬಹುದು’ ಎಂದಿತು. ಒಂದು ಪುಟ್ಟ ಮೊಲದ ಹೇಳಿಕೆಯನ್ನುಕೇಳಿಕೊಂಡು, ಕಾಡಿನ ಎಲ್ಲ ಪ್ರಾಣಿಗಳೂ ಹಿಂದೂ ಮುಂದೂ ನೋಡದೇ ಓಡುತ್ತಿದ್ದವು.

ಪ್ರಾಣಿಗಳಿರಲಿ ನಾವು ಮನುಷ್ಯರು ಕೂಡ ಹೇಳಿಕೆ ಮಾತುಗಳನ್ನ ಕೇಳಿ ಇದೇ ರೀತಿ ಹೊಂಬತನದಿಂದ ನಡೆದು ಕೊಂಡು ಬಿಡುತ್ತೇವೆ. ಯಾರದ್ದು ಸಾವು ಎಂದು ತಿಳಿದು ಕೂಡಲೇ ಅದನ್ನು ನಾವೇ ಮೊದಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಎಲ್ಲರಿಗೂ ತಲುಪಿಸಿ ಬಿಡುವ ಹಂಬಲ. ದುಃಖವನ್ನು ಕೂಡ ವೈಭವೀಕರಿಸುವ ಒಂದು ಮನಸ್ಥಿತಿಗೆ ನಾವು ತಲುಪಿಬಿಟ್ಟಿದ್ದೇವೆ. ಎಲ್ಲರೂ ಕೂಡ ಕೆಲವು ಸುದ್ದಿಗಳು ನಿಜವೇ ಸುಳ್ಳೇ ಎಂದು ಪರೀಕ್ಷಿಸುವ ಗೋಜಿಗೆ ಕೂಡ ನಾವು ಹೋಗುವುದಿಲ್ಲ.

ಯಾರೋ ಕಳೆದು ಹೋಗಿದ್ದ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಂಡು ವರ್ಷವಾದ ಮೇಲೆ ಇನ್ನೂ ವಾಟ್ಸಪ್ನಲ್ಲಿ ಹರಿದಾಡುತ್ತಿರುತ್ತದೆ. ಅಲ್ಲಿ ಇರುವ ನಂಬರ್‌ಗೆ ಕರೆ ಮಾಡಿ ಇದು ನಿಜವಾದ ಸುದ್ದಿಯೇ ಎಂದು ತಿಳಿದು ಕೊಳ್ಳುವ ತಾಳ್ಮೆ ಕೂಡ ಯಾರಿಗೂ ಇರುವುದಿಲ್ಲ. ಇನ್ನಾದರೂ ಜವಾಬ್ದಾರಿಯುತವಾಗಿ ವರ್ತಿಸೋಣ. ಸುದ್ದಿ ಹಂಚಿಕೊಳ್ಳುವ ಮುಂಚೆ ಅದರ ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳಿ.

ಇದನ್ನೂ ಓದಿ: #RoopaGururaj