ಬುಮ್ರಾ ಒಬ್ಬರೇ ಅಲ್ಲ ಕೊಹ್ಲಿ, ರೋಹಿತ್ ಇಲ್ಲದೆ ಭಾರತಕ್ಕೆ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯವಿದೆ: ಸುನೀಲ್ ಗವಾಸ್ಕರ್!
Sunil Gavaskar on Jasprit Bumrah: ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲುವನ್ನು ಸುನಿಲ್ ಗವಾಸ್ಕರ್ ಶ್ಲಾಘಿಸಿದರು ಮತ್ತು ಇದು ತಂಡದ ಡೆಪ್ತ್ ಮತ್ತು ಬೆಂಚ್ ಬೆಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

ಸುನೀಲ್ ಗವಾಸ್ಕರ್

ನವದೆಹಲಿ: ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ (ICC Champions Trophy) ಗೆಲುವಿನ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಅದ್ಭುತ ಗೆಲುವು ತಂಡದ ಡೆಪ್ತ್ ಮತ್ತು ಸಾಟಿಯಿಲ್ಲದ ಬೆಂಚ್ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ. ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಸತತ ಎರಡನೇ ವರ್ಷ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ಕಳೆದ ಭಾನುವಾರ (ಮಾರ್ಚ್ 9) ಭಾರತ ತಂಡ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಕಳೆದ ವರ್ಷ ಟಿ20 ವಿಶ್ವಕಪ್ ಟೂರ್ನಿಯಂತೆ ಭಾರತ ತಂಡ, ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿಯಿತು. ಲೀಗ್ ಹಂತದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಸೋಲಿಸಿತ್ತು ಮತ್ತು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿತ್ತು.
ಫೈನಲ್‌ನಲ್ಲಿ ಭಾರತ ಮತ್ತೊಮ್ಮೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ 25 ವರ್ಷಗಳ ಹಿಂದೆ ನೈರೋಬಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಚಾಂಪಿಯನ್ಸ್ ಟ್ರೋಫಿಯ ನಂತರ, ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಒಂದು ದೊಡ್ಡ ಹೇಳಿಕೆ ನೀಡಿದ್ದಾರೆ. ಭಾರತ ಯಾರ ಸಹಾಯವಿಲ್ಲದೆ ಗೆಲ್ಲಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
IPL 2025: ತಾನು ಎದುರಿಸಿದ ಅತ್ಯಂತ ಕಠಿಣ ವೇಗಿಯನ್ನು ಹೆಸರಿಸಿದ ವಿರಾಟ್ ಕೊಹ್ಲಿ!
ದೊಡ್ಡ ಹೇಳಿಕೆ ಏನು?
ಸ್ಟಾರ್ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಸಾಧ್ಯವಾಗಲಿಲ್ಲ ಎಂಬುದು ಗೊತ್ತಿದೆ. ಆದಾಗ್ಯೂ, ಅವರಿಲ್ಲದಿದ್ದರೂ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಈ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. 'ಮಿಡ್ ಡೇ' ಪತ್ರಿಕೆಯ ತಮ್ಮ ಅಂಕಣದಲ್ಲಿ ಅವರು ಹೀಗೆ ಬರೆದಿದ್ದಾರೆ. "ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಳನ್ನು ಗೆದ್ದ ರೀತಿ ಭಾರತೀಯ ಕ್ರಿಕೆಟ್‌ನಲ್ಲಿರುವ ಪ್ರತಿಭೆಗೆ ದೊಡ್ಡ ಸಾಕ್ಷಿಯಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿನ ಗೆಲುವು, ಅದರಲ್ಲಿಯೂ ಬುಮ್ರಾ ಇಲ್ಲದೆ, ಈ ಪಂದ್ಯದಲ್ಲಿ ಯಾರೂ ಅನಿವಾರ್ಯವಲ್ಲ ಎಂಬುದನ್ನು ತೋರಿಸುತ್ತದೆ," ಎಂದು ಹೇಳಿದ್ದಾರೆ.
IPL 2025: ʻರಜತ್ ಪಾಟಿದಾರ್‌ಗೆ ಬೆಂಬಲ ನೀಡಿʼ-ಆರ್‌ಸಿಬಿ ಫ್ಯಾನ್ಸ್‌ಗೆ ವಿರಾಟ್ ಕೊಹ್ಲಿ ಮನವಿ!
"ಹಿಂದೆಯೂ ಸಹ, ಭಾರತ ತಂಡ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಗೆದ್ದಿದೆ, ಆದರೆ ತಂಡದಲ್ಲಿ ಅವರ ಉಪಸ್ಥಿತಿಯು ಅದನ್ನು ಇನ್ನಷ್ಟು ಅಜೇಯವಾಗಿ ಕಾಣುವಂತೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ," ಎಂದು ಅವರು ತಿಳಿಸಿದ್ದಾರೆ. ಇದೀಗ ಅನೇಕ ವಿದೇಶಿ ಕ್ರಿಕೆಟಿಗರು, ಭಾರತ ತಂಡ ದುಬೈನಲ್ಲಿ ಮಾತ್ರವಲ್ಲ, ಬೇರೆ ಯಾವುದೇ ದೇಶವಾಗಿದ್ದರೂ ಗೆಲ್ಲುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.